ಗುರುವಾರ, 29 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಡಿಗೆರೆ | ಆನೆ ದಾಳಿ: ಕಾಡಾನೆ ನಿಗ್ರಹ ದಳದ ಸಿಬ್ಬಂದಿ ಸಾವು

Published 22 ನವೆಂಬರ್ 2023, 15:48 IST
Last Updated 22 ನವೆಂಬರ್ 2023, 15:48 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಊರುಬಗೆ ಗ್ರಾಮ‌ ಪಂಚಾಯಿತಿ ವ್ಯಾಪ್ತಿಯ ಹೊಸ್ಕೆರೆ ಗ್ರಾಮದ ಬಳಿ ಕಾಣಿಸಿಕೊಂಡ ಆನೆಯನ್ನು ಅರಣ್ಯಕ್ಕೆ ಓಡಿಸುವ ವೇಳೆ ಅದು ದಾಳಿ ನಡೆಸಿದ್ದು, ಕಾಡಾನೆ‌ ನಿಗ್ರಹ ದಳದ ಸಿಬ್ಬಂದಿ ಕಾರ್ತಿಕ್ (26) ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಹೊಸ್ಕೆರೆ ಗ್ರಾಮಕ್ಕೆ ಕಾಡಾನೆ ‌ಬಂದಿರುವ ಮಾಹಿತಿ‌ ತಿಳಿಯುತ್ತಿದ್ದಂತೆ ಸಂಜೆ ವೇಳೆಗೆ ತಂಡದೊಂದಿಗೆ ಇವರು ಸ್ಥಳಕ್ಕೆ ತೆರಳಿದ್ದರು. ಆ ಆನೆಯನ್ನು ಓಡಿಸುವ ವೇಳೆ ಅದು ಏಕಾಏಕಿ ಎರಗಿದೆ. ಸಮೀಪದಲ್ಲಿದ್ದ ಕಾರ್ತಿಕ್ ಮೇಲೆ ದಾಳಿ‌ ನಡೆಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟರು. ಇವರೊಂದಿಗೆ ಇದ್ದ ಇನ್ನೂ ನಾಲ್ಕು ಸಿಬ್ಬಂದಿಗೆ ಗಾಯಗಳಾಗಿದ್ದು, ಪಟ್ಟಣದ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೌಡಳ್ಳಿ ಗ್ರಾಮದ ಈರಪ್ಪಗೌಡ ಹಾಗೂ ಸರೋಜಮ‌್ಮ ದಂಪತಿಯ ಏಕೈಕ ಪುತ್ರ ಕಾರ್ತಿಕ್ ಅವರು ಕಾಡಾನೆ ನಿಗ್ರಹ ದಳದ‌ಲ್ಲಿ ಹೊರಗುತ್ತಿಗೆ ನೌಕರನಾಗಿ ಕೆಲಸ ಮಾಡುತ್ತಿದ್ದರು. ಒಂದೂವರೆ ವರ್ಷಗಳ ಹಿಂದೆ ಈರಪ್ಪಗೌಡ ಅವರು ನಿಧನರಾಗಿದ್ದು, ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಹೆತ್ತಮ್ಮನ ಆಕ್ರಂದನ‌ ಮುಗಿಲು ಮುಟ್ಟಿದೆ.

Cut-off box - ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವರ್ಷದ ಹಿಂದೆ ಇದೇ ಪ್ರದೇಶದಲ್ಲಿ ಕಾಡಾನೆ ದಾಳಿ ನಡೆಸಿ ಅರ್ಜುನ್ ಎಂಬ ವ್ಯಕ್ತಿ ಮೃತಪಟ್ಟಿದ್ದರು. ನಾಲ್ಕು ವರ್ಷಗಳಲ್ಲಿ ‌ಆರಕ್ಕೂ‌ ಅಧಿಕ‌ ಮಂದಿ ಕಾಡಾನೆ‌ ದಾಳಿಯಿಂದ ಸಾವನ್ನಪ್ಪಿದ್ದು ಕಾಡಾನೆ‌ ದಾಳಿಗೆ ಶಾಶ್ವತ ಪರಿಹಾರ ರೂಪಿಸುವವರೆಗೂ ಶವ ತೆಗೆಯಲು ಬಿಡುವುದಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ‌ದರು. ಪ್ರತಿಭಟಿಸಿದ್ದರಿಂದ ತಡ ರಾತ್ರಿ ತನಕ ಮೃತ ದೇಹ ಸ್ಥಳದಲ್ಲಿಯೇ ಇತ್ತು.

₹25 ಲಕ್ಷ ಪರಿಹಾರಕ್ಕೆ ಒತ್ತಾಯ ಕಾಡಾನೆ ದಾಳಿಗೆ ಒಳಗಾದ ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಕಾಡಾನೆ ದಾಳಿಯಿಂದ ಹಾನಿಯಾದ ಬೆಳೆಗೆ ನೀಡುವ ಬೆಳೆ ಪರಿಹಾರವನ್ನು ನಾಲ್ಕು ಪಟ್ಟು ಹೆಚ್ಚಿಸಬೇಕು ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್ ಒತ್ತಾಯಿಸಿದರು. ಆನೆಗಳನ್ನು ಹಿಡಿಯುವ ಬದಲು ಮುಖ್ಯಮಂತ್ರಿಗಳ ಆದೇಶವನ್ನೇ ಧಿಕ್ಕರಿಸಿ ಬೇರೆ ಆನೆಗಳನ್ನು ಹಿಡಿದಿದ್ದು ಬೈರಾಪುರ ಹಾಗೂ ಆಲ್ದೂರು ಸುತ್ತಮುತ್ತ ಸಾವುಗಳು ಸಂಭವಿಸಲು ಕಾರಣವಾಗಿದೆ. ಈ ಹಿಂದೆ ನಮ್ಮ ಭಾಗದಲ್ಲಿ ಆನೆಗಳೇ ಇರಲಿಲ್ಲ. ಮುತ್ತೋಡಿ ಹಾಗೂ ಸಕಲೇಶಪುರ ಭಾಗಗಳಿಂದ ಕಾಡಾನೆಗಳು ಇಲ್ಲಿಗೆ ಬಂದು ನೆಲೆಸಿವೆ. ಈ ಭಾಗದಲ್ಲಿ ಅಂದಾಜು ಮೂವತ್ತಾರು ಕಾಡಾನೆಗಳು ಇರುವ ಮಾಹಿತಿ ಇದ್ದು ಎಲ್ಲವನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.  ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ರೈತರೊಂದಿಗೆ ಸೇರಿ ಹೋರಾಟದಲ್ಲಿ ಭಾಗವಹಿಸ ಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಮೂರು ತಿಂಗಳಲ್ಲಿ ಮೂವರ ಸಾವು ಕಾಡಾನೆ ದಾಳಿಗೆ ಮೂರು ತಿಂಗಳಲ್ಲಿ ಮೂವರು ಬಲಿಯಾಗಿದ್ದಾರೆ. ಸೆಪ್ಟೆಂಬರ್ 3ರಂದು ಆಲ್ದೂರು ಸಮೀಪದ ಕಂಚಿಕಲ್ ದುರ್ಗದ ಬಳಿ ಕಿನ್ನಿ(60) ಕಾಡಾನೆ ದಾಳಿಗೆ ಬಲಿಯಾಗಿದ್ದರು. ನ.8ರಂದು ಗಾಳಿಗುಂಡಿ ಗ್ರಾಮದ ಮೀನಾ(32) ಅವರನ್ನು ಆನೆ ತುಳಿದು ಸಾಯಿಸಿತ್ತು. ಈಗ ಕಾಡಾನೆ ನಿಗ್ರಹ ದಳದ ಕಾರ್ತಿಕ್ ಬಲಿಯಾಗಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT