ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಮಗಳೂರು: ಸೂಕ್ಷ್ಮ ಮತಗಟ್ಟೆಗಳಲ್ಲಿ ಹೆಚ್ಚಿನ ಭದ್ರತೆ

Published 25 ಏಪ್ರಿಲ್ 2024, 13:53 IST
Last Updated 25 ಏಪ್ರಿಲ್ 2024, 13:53 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನ ಎಲ್ಲಾ ಮತಗಟ್ಟೆಗಳಿಗೆ ಗುರುವಾರ ಸಂಜೆ ವೇಳೆಗೆ ಮತಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ಸಾಗಿಸಲಾಗಿದೆ.  ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9 ಹೋಬಳಿಗಳಿದ್ದು, 231 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.

23 ಮತಗಟ್ಟೆಗಳನ್ನು ಸೂಕ್ಷ್ಮ ಹಾಗೂ 4 ಮತಗಟ್ಟೆಗಳನ್ನು ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ.  ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ  ಹೆಚ್ಚುವರಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ವಿಧಾನಸಭಾ ಕ್ಷೇತ್ರ ವ್ಯಾಪ್ತಿಯನ್ನು 25 ಸೆಕ್ಟರ್‌ಗಳಾಗಿ ವಿಭಾಗಿಸಲಾಗಿದ್ದು, ಪ್ರತಿಯೊಂದು ಮತಗಟ್ಟೆಯನ್ನು ಸೆಕ್ಟರ್ ಅಧಿಕಾರಿಗಳು ನಿರ್ವಹಿಸಲಿದ್ದಾರೆ.

ಮತದಾನದ ಶೇಕಡವಾರು ಮಾಹಿತಿಯನ್ನು ಕಲೆ ಹಾಕಲು ತಾಲ್ಲೂಕು ಕಚೇರಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮತಗಟ್ಟೆಗೆ ತೆರಳಿರುವ ಚುನಾವಣಾ ಸಿಬ್ಬಂದಿಗೆ ಯಾವುದೇ ಸಮಸ್ಯೆಗಳಾದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಳ್ಳಲು ಅಗತ್ಯ ಪ್ರಮಾಣದ ಸಿಬ್ಬಂದಿಯನ್ನು ಮೀಸಲು ಇರಿಸಿ ಕ್ರಮ ವಹಿಸಲಾಗಿದೆ. ಈ ಬಾರಿ ತಾಲ್ಲೂಕಿನ ಸಿಬ್ಬಂದಿಯಲ್ಲಿ ಪುರುಷರನ್ನು ಬೇರೆ ತಾಲ್ಲೂಕಿಗೆ ಕಳುಹಿಸಲಾಗಿದ್ದು, ಬೇರೆ ತಾಲ್ಲೂಕಿನ ಪುರುಷ ಸಿಬ್ಬಂದಿಯನ್ನು ತಾಲ್ಲೂಕಿಗೆ ಬಳಸಿಕೊಳ್ಳಲಾಗಿದೆ.

ಚುನಾವಣೆಯ ಅಂಗವಾಗಿ ಪಟ್ಟಣದ ಡಿ.ಎಸ್ ಬಿಳೀಗೌಡ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಸ್ಟರಿಂಗ್ ಹಾಗೂ ಡಿ ಮಸ್ಟರಿಂಗ್ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಪ್ರತಿ ಮತಗಟ್ಟೆಗೂ ಒಬ್ಬ ಮತಗಟ್ಟೆ ಅಧಿಕಾರಿ, ಒಬ್ಬ ಸಹಾಯಕ ಮತಗಟ್ಟೆ ಅಧಿಕಾರಿ ಹಾಗೂ ಇಬ್ಬರು ಮತದಾನದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ತಂಡವೂ ಗುರುವಾರ ಸಂಜೆಯೇ  ಮತಗಟ್ಟೆಯನ್ನು ಸುಗಮವಾಗಿ ತಲುಪಿವೆ. ಮತದಾನದ ಬಳಿಕ ಇದೇ ಕೇಂದ್ರದಲ್ಲಿ ಮತಯಂತ್ರಗಳನ್ನು ಸಂಗ್ರಹಿಸಿ ಉಡುಪಿಗೆ ಕೊಂಡೊಯ್ಯಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಈ ಬಾರಿ ಚುನಾವಣಾ ಸಿಬ್ಬಂದಿಗೆ ಊಟದ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆಗೆ ವಹಿಸಲಾಗಿದ್ದು, ಬಿಸಿಯೂಟ ಕಾರ್ಯಕರ್ತರೇ ಸಿಬ್ಬಂದಿಗಳಿಗೆ ಊಟದ ವ್ಯವಸ್ಥೆ ಮಾಡಲಿದ್ದಾರೆ.

‘ಮಸ್ಟರಿಂಗ್ ವ್ಯವಸ್ಥೆಯು ಸುಗಮವಾಗಿ ನಡೆದಿದ್ದು, ಎಲ್ಲಾ ಮತಯಂತ್ರಗಳು ಆಯಾ ಮತಗಟ್ಟೆಗಳನ್ನು ತಲುಪಿವೆ. ಮತಗಟ್ಟೆಗಳಲ್ಲಿ ಅಶಕ್ತರು, ಅಂಗವಿಕಲರು, ವೃದ್ಧರು ಸೇರಿದಂತೆ ಮತಗಟ್ಟೆಗೆ ಬರಲು ಸಮಸ್ಯೆಯಿರುವವರನ್ನು ಮತಗಟ್ಟೆಗೆ ಕರೆತರಲು ವಾಹನ ಸೌಲಭ್ಯವನ್ನು ಕಲ್ಪಿಸಲಾಗಿದೆ. 26 ರಂದು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಲಿದ್ದು, ಮತದಾರರು ಮತಗಟ್ಟೆಗೆ ಬಂದು ಮತದಾನವನ್ನು ಮಾಡಬೇಕು. ಪ್ರತಿಯೊಂದು ಮತವೂ ಅಮೂಲ್ಯವಾಗಿರುವುದರಿಂದ ಎಲ್ಲರೂ ಕಡ್ಡಾಯವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕು’ ಎಂದು ಸಹಾಯಕ ಚುನಾವಣಾಧಿಕಾರಿ ದಲ್ಜಿತ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT