ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಜಲ ಜೀವನ: ಮನೆ–ಮನೆಗೆ ನೀರು ತಲುಪಿಸುವ ಯೋಜನೆಗೆ ಸವಾಲು ಹಲವು

Published 20 ನವೆಂಬರ್ 2023, 7:49 IST
Last Updated 20 ನವೆಂಬರ್ 2023, 7:49 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮನೆ–ಮನೆಗೆ ನಳ ನೀರು ಸಂಪರ್ಕ ಕಲ್ಪಿಸುವ ಜಲ ಜೀವನ್ ಮಿಷನ್ ಯೋಜನೆ ಜಿಲ್ಲೆಯಲ್ಲಿ ನಾಲ್ಕು ಹಂತಗಳಲ್ಲಿ ನಡೆಯುತ್ತಿದ್ದು, ಕಾಮಗಾರಿಗಳ ಸ್ಥಿತಿ ನೋಡಿದರೆ ಅಂದುಕೊಂಡಂತೆ 2024ರ ಮಾರ್ಚ್ ವೇಳೆಗೆ ಪೂರ್ಣಗೊಳಿಸುವ ಸಾಧ್ಯತೆ ಕಡಿಮೆ.

ಜಿಲ್ಲೆಯಲ್ಲಿ ಒಟ್ಟು 1013 ಗ್ರಾಮಗಳಿದ್ದು, ಮನೆಗಳು ಚದುರಿದಂತೆ ಇರುವುದರಿಂದ 3,719 ಜನವಸತಿ ಎಂದು ಗುರುತಿಸಲಾಗಿದೆ. ಒಟ್ಟು 2,41,262 ಮನೆಗಳಿದ್ದು, ಪ್ರತಿ ಮನೆಗೆ ನಳ ಸಂ‍ಪರ್ಕದ ಮೂಲಕ 55 ಲೀಟರ್ ನೀರು ಪೂರೈಸುವ ಉದ್ದೇಶವನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹೊಂದಿದೆ.

ನದಿಗಳಿಂದ ನೀರು ತಂದು ಪೂರೈಸಲು ಸಾಧ್ಯವಿರುವ ಕಡೆಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಸಾಧ್ಯತೆ ಇಲ್ಲದ ಕಡೆಗಳಲ್ಲಿ ಝರಿಗಳು ಸೇರಿ ಬೇರೆ ಜಲ ಮೂಲಗಳಿಂದ ನೀರು ಸಂಗ್ರಹಿಸಿ ಮನೆ–ಮನೆಗೆ ಸರಬರಾಜು ಮಾಡುವ ಯೋಜನೆಯನ್ನೂ ಅಧಿಕಾರಿಗಳು ರೂಪಿಸಿದ್ದಾರೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹1,265 ಕೋಟಿ ಖರ್ಚಾಗುವ ಅಂದಾಜಿದ್ದು, ಅದಲ್ಲದೇ ಮನೆ–ಮನೆಗೆ ನೀರು ಪೂರೈಸಲು ಆರಂಭಿಸಿರುವ ನಾಲ್ಕು ಪ್ಯಾಕೇಜ್‌ ಕಾಮಗಾರಿಗೆ ₹964 ಕೋಟಿ ವೆಚ್ಚವಾಗುವ ಅಂದಾಜಿದೆ. 

ಮನೆ ಮನೆಗೆ ಗಂಗೆ ಯೋಜನೆಯಲ್ಲಿ ನಾಲ್ಕು ಬ್ಯಾಚ್‌ಗಳಲ್ಲಿ ಒಟ್ಟು 1,776 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಾಲ್ಕನೇ ಬ್ಯಾಚ್ ಕಾಮಗಾರಿ ಆರಂಭವಾಗಿದೆ. ಆದರೆ, ಕೆಲವೆಡೆ ಮೊದಲ ಬ್ಯಾಚ್‌ ಕಾಮಗಾರಿಗಳು ಪೂರ್ಣಗೊಂಡಿಲ್ಲ. 

ಅಧಿಕಾರಿಗಳು ನೀಡುವ ಅಂಕಿ–ಅಂಶದ ಪ್ರಕಾರ ಇನ್ನೂ 94,003 ಮನೆಗಳಿಗೆ ನಳ ನೀರು ಸಂಪರ್ಕ ದೊರಕಿಲ್ಲ. ಈ ಕಾಮಗಾರಿ ಬಹುತೇಕ 2024ರ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರ.

ಝರಿಗಳಿಂದಲೂ ಜಲಧಾರೆ
ಬಹುಗ್ರಾಮ ಯೋಜನೆಯಲ್ಲದೆ ಮಲೆನಾಡಿನಲ್ಲಿ ಹರಿಯುವ ಝರಿಗಳಿಂದಲೂ ನೀರು ಸಂಗ್ರಹಿಸಿ 114 ಹಳ್ಳಿಗಳಿಗೆ ಜನವಸತಿಗೆ ಪೂರೈಸುವ ಯೋಜನೆಯೂ ಮತ್ತೊಂದೆಡೆ ಪ್ರಗತಿಯಲ್ಲಿದೆ. ಚಿಕ್ಕಮಗಳೂರು ತಾಲ್ಲೂಕಿನ ದೇವರಹಳ್ಳಿ ಮಲ್ಲೇನಹಳ್ಳಿ ಶಿರವಾಸೆ ಮೇಲಿನಹುಲವತ್ತಿ ಸುತ್ತಮುತ್ತಲ ಹಳ್ಳಿಗಳಿಗೆ ಝರಿ ನೀರನ್ನು ಗುರುತ್ವಾಕರ್ಷಣೆ ಶಕ್ತಿ ಮೂಲಕ ಹರಿಸಲು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಮೂಡಿಗೆರೆ ತಾಲ್ಲೂಕಿನಲ್ಲಿ ಗುರುತ್ವಾಕರ್ಷಣೆ ಶಕ್ತಿಯಿಂದ ನೀರು ಹರಿಸಲು ಸಾಧ್ಯವಿಲ್ಲದ ಕಾರಣ ಎರಡು ಕಡೆ ನೀರು ಪಂಪ್ ಮಾಡಿ ಸಂಗ್ರಹಿಸಿ ಪೂರೈಸಲು ಉದ್ದೇಶಿಸಿದೆ. ಒಟ್ಟು ₹151 ಕೋಟಿ ಮೊತ್ತದ ಯೋಜನೆ ಇದಾಗಿದೆ.
ಬಹುಗ್ರಾಮ ಯೋಜನೆ: ಇನ್ನೂ ಕಾಯಬೇಕು
ತರೀಕೆರೆ ಅಜ್ಜಂಪುರ ಕಡೂರು ಮತ್ತು ಚಕ್ಕಮಗಳೂರು ತಾಲ್ಲೂಕಿನಲ್ಲಿ ಜಲ ಜೀವನ್‌ ಮಿಷನ್ ಯೋಜನೆಯಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಆಡಳಿತಾತ್ಮಕ ಅನುಮೋದನೆ ದೊರಕಿದ್ದು ವಿನ್ಯಾಸ ನಿರ್ಮಾಣ ನಿರ್ವಹಣೆ ವರ್ಗಾವಣೆ (ಡಿಬಿಒಟಿ) ಮಾದರಿಯಲ್ಲಿ ₹1265 ಕೋಟಿ ಮೊತ್ತದ ಕಾಮಗಾರಿಗೆ ಟೆಂಡರ್ ಕರೆದು ಕೆಲಸ ಆರಂಭಿಸಲಾಗಿದೆ.  ಈ ಯೋಜನೆಯಡಿ ಚಿಕ್ಕಮಗಳೂರು ತಾಲ್ಲೂಕಿನ 146 ಗ್ರಾಮೀಣ ಜನವಸತಿ ಕಡೂರು ತಾಲ್ಲೂಕಿನ 434 ಗ್ರಾಮೀಣ ಜನವಸತಿ ತರೀಕೆರೆ ತಾಲ್ಲೂಕಿನ 156 ಜನವಸತಿ ಮತ್ತು ತರೀಕೆರೆ ನಗರಕ್ಕೆ ನೀರು ಪೂರೈಸುಲು ಉದ್ದೇಶಿಸಲಾಗಿದೆ. ಸರ್ವೆ ಕಾರ್ಯ ಸಂಪೂರ್ಣಗೊಂಡಿದ್ದು ವಿನ್ಯಾಸ ಮತ್ತು ನಕ್ಷೆ ಅನುಮೋದನೆ ಆಗಬೇಕಿದೆ.  ಇದಲ್ಲದೇ ತರೀಕೆರೆ ತಾಲ್ಲೂಕಿನ 172 ಜನವಸತಿ ಮತ್ತು ಅಜ್ಜಂಪುರ ಪಟ್ಟಣಕ್ಕೂ ನಬಾರ್ಡ್‌ ನೆರವಿನೊಂದಿಗೆ ನೀರು ಪೂರೈಸುವ ₹249 ಕೋಟಿ ಮೊತ್ತದ ಮತ್ತೊಂದು ಯೋಜನೆಯೂ ಇದೆ. ಈ ಯೋಜನೆಯಡಿ ಈಗಾಗಲೇ 60 ಕಿಲೋ ಮೀಟರ್‌ನಷ್ಟು ಪೈಪ್‌ಲೈನ್ ಅಳವಡಿಕೆ ಕೂಡ ಆಗಿದೆ. ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಜಾಕ್‌ವೆಲ್ ಇರಿಸಿ 1.5 ಟಿಎಂಸಿ ಅಡಿ ನೀರು ಮೇಲೆತ್ತಿ ಪೈಪ್‌ಲೈನ್ ಮೂಲಕ ಈ ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವುದು ಈ ಎರಡೂ ಯೋಜನೆಗಳ ಉದ್ದೇಶ.  ಎರಡೂ ಯೋಜನೆಗಳಿಂದ ಒಟ್ಟು 908 ಹಳ್ಳಿಗಳ 93833 ಮನೆಗಳಿಗೆ ನೀರಿನ ಸಂಪರ್ಕ ದೊರೆಯಲಿದೆ. 27 ಕಡೆ ರೈಲ್ವೆ ಮಾರ್ಗ 45 ಕಡೆ ರಾಷ್ಟ್ರೀಯ ಹೆದ್ದಾರಿ 78 ಕಡೆ ರಾಜ್ಯ ಹೆದ್ದಾರಿ 42 ಕಡೆಗಳಲ್ಲಿ ಕಾಲುವೆಗಳನ್ನು ದಾಟಬೇಕಿದೆ. 60 ಎಕರೆಯಷ್ಟು ಅರಣ್ಯ ಇಲಾಖೆ ಜಾಗ ಬಳಸಿಕೊಳ್ಳಲು ಅನುಮತಿ ದೊರೆಯಬೇಕಿದೆ. ಇದನ್ನು ಪಡೆಯುವ ನಿಟ್ಟಿನಲ್ಲೂ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ತುಂಗಾ–ಭದ್ರಾ ನದಿಯಿಂದಲೂ ಮನೆ–ಮನೆಗೆ ನೀರು
ಎನ್.ಆರ್‌.ಪುರ ಪಟ್ಟಣ ತಾಲ್ಲೂಕಿನ 175 ಜನವಸತಿ ಭದ್ರಾ ಜಲಾಶಯದ ಹಿನ್ನೀರಿನಲ್ಲಿ ಜಾಕ್‌ವೆಲ್‌ ಇರಿಸಿ ನೀರು ಪೂರೈಸಲು ಉದ್ದೇಶಿಸಲಾಗಿದೆ. ‌ಕೊಪ್ಪ ಮತ್ತು ಶೃಂಗೇರಿ ತಾಲ್ಲೂಕಿನ 1208 ಹಳ್ಳಿಗಳಿಗೆ ತುಂಗಾ ನದಿಯಿಂದ ನೀರು ಮೇಲೆತ್ತಿ ಹಳ್ಳಿ ಮತ್ತು ಪಟ್ಟಣ ಪ್ರದೇಶಕ್ಕೆ ನೀರು ಪೂರೈಸುವುದೂ ಯೋಜನೆಯಲ್ಲಿ ಸೇರ್ಪಡೆಯಾಗಿದೆ. ಒಟ್ಟು ₹656 ಕೋಟಿ ಮೊತ್ತದ ಯೋಜನೆ ಇದಾಗಿದೆ.  ಇದಲ್ಲದೇ ‌ಆಲ್ದೂರು ಸುತ್ತಮುತ್ತಲ 18 ಹಳ್ಳಿಗಳಿಗೂ ಕುಡಿಯುವ ನೀರು ಪೂರೈಸಲು ₹30 ಕೋಟಿ ಮೊತ್ತದ ಯೋಜನೆಯೂ ಪ್ರತ್ಯೇಕವಾಗಿ ಕೈಗೆತ್ತಿಕೊಳ್ಳಲಾಗಿದೆ.
ಇನ್ನೂ ಪೂರ್ಣಗೊಳ್ಳದ ಕಾಮಗಾರಿ
ಕೊಪ್ಪ: ಪ್ರತಿಯೊಂದು ಮನೆ ಮನೆಗೆ ಸಮರ್ಪಕ ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಆರಂಭಿಸಿದ ಜಲ ಜೀವನ್ ಮಿಷನ್ ಯೋಜನೆಯ ಉದ್ಧೇಶ ತಾಲ್ಲೂಕಿನಲ್ಲಿ ಇನ್ನೂ ಪೂರ್ಣಗೊಂಡಿಲ್ಲ. ತಾಲ್ಲೂಕಿನಲ್ಲಿ 22 ಗ್ರಾಮ ಪಂಚಾಯಿತಿಗಳಿದ್ದು ವಿವಿಧ ಹಂತಗಳಲ್ಲಿ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ. ಯೋಜನೆಯ ಅನುಷ್ಠಾನ ಹಂತದಲ್ಲಿ ಸ್ಥಳೀಯ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಕಡೆಗಣಿಸಲಾಗಿದೆ ಎಂಬ ಆರೋಪವಿದೆ. ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೆಲವು ಗ್ರಾಮಗಳಿಗೆ ನೀರು ಪೂರೈಸಲು ಪೈಪ್ ಅಳವಡಿಸಿದರೆ ಅದೇ ಪಂಚಾಯಿತಿ ವ್ಯಾಪ್ತಿಯ ಇನ್ನೊಂದು ಗ್ರಾಮದಲ್ಲಿ ಪೈಪ್ ಅಳವಡಿಸಲು ಕ್ರಮ ವಹಿಸಿಲ್ಲ. ನೀರಿನ ಮೂಲ ಸರಿಯಾಗಿ ಕಂಡುಕೊಳ್ಳದೇ ಹಳೇ ಮಾರ್ಗವನ್ನೇ ಅನುಸರಿಸಲಾಗಿದೆ. ಈ ಸಂದರ್ಭದಲ್ಲಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳಿಂದ ಮಾಹಿತಿ ಪಡೆಯುತ್ತಿಲ್ಲ ಎಂಬ ದೂರುಗಳಿವೆ. ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ 30 ಕಾಮಗಾರಿ ಮಂಜೂರಾತಿ ದೊರಕಿದ್ದು 12 ಪೂರ್ಣಗೊಂಡಿದೆ. ಎರಡನೇ ಹಂತದಲ್ಲಿ 59ಕ್ಕೆ ಮಂಜೂರಾತಿ ಸಿಕ್ಕಿದ್ದು 23 ಪೂರ್ಣಗೊಂಡಿದೆ. ಮೂರನೇ ಹಂತದಲ್ಲಿ 35ಕ್ಕೆ ಮಂಜೂರಾತಿ ದೊರಕಿದ್ದು 8 ಪೂರ್ಣಗೊಂಡಿದೆ. ನಾಲ್ಕನೇ ಹಂತದಲ್ಲಿ ಸಿಕ್ಕಿರುವ 3 ಮಂಜೂರಾತಿ ಕಾಮಗಾರಿ ಪೈಕಿ 1 ಪೂರ್ಣಗೊಂಡಿದೆ. ಯೋಜನೆ ಅನುಷ್ಠಾನ ಕಾಮಗಾರಿ ಪಟ್ಟಿಗೆ ಮಂಜೂರಾತಿ ಸಿಗಬೇಕಿದೆ ಎಂದು ಅಧಿಕಾರಿಗಳು ವಿವರಿಸುತ್ತಾರೆ.
ಕುಂಟುತ್ತಾ ಸಾಗಿದ ಕಾಮಗಾರಿ
ತರೀಕೆರೆ: ತಾಲ್ಲೂಕಿನಲ್ಲಿ ಜಲ ಜೀವನ್ ಕಾಮಗಾರಿ 3 ಹಂತದಲ್ಲಿ ನಿರ್ವಹಿಸಲಾಗಿದೆ. 49 ಗ್ರಾಮಗಳಲ್ಲಿ ಕಾಮಗಾರಿ ಮುಗಿದಿದ್ದು ಜನ ಬಳಕೆ ಮಾಡುತ್ತಿದ್ದಾರೆ.  ಕರಕುಚ್ಚಿ ಸುಣ್ಣದಹಳ್ಳಿ ನಂದಿ ಸೇರಿದಂತೆ 13 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ನಾಲ್ಕನೇ ಹಂತದ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದಲ್ಲಿ ಆರಂಬಿಸಲಾಗುವುದು ಎಂದು ಇಲಾಖೆಯ ಸಹಾಯಕ ನಿರ್ದೇಶಕರಾದ ಚಿದಾನಂದಪ್ಪ ತಿಳಿಸಿದರು. ಬರಗಾಲದಲ್ಲಿ ನೀರು ಅಭಾವ ಹೆಚ್ಚಾಗುತ್ತದೆ. ಕುಂಟುತ್ತಾ ಸಾಗುತ್ತಿರುವ ಕಾಮಗಾರಿಗೆ ಚುರುಕು ನೀಡಬೇಕು ಎಂದು ಸುಣ್ಣದಹಳ್ಳಿ ಗ್ರಾಮಸ್ಥ ವಿಜಯಕುಮಾರ್ ಒತ್ತಾಯಿಸಿದರು.
ಮನೆಮನೆಗೆ ಗಂಗೆ: ಹಲವು ಅಡೆತಡೆ
ಮೂಡಿಗೆರೆ: ಮಹತ್ವಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆಯು ತಾಲ್ಲೂಕಿನಲ್ಲಿ ಹಳ್ಳ ಹಿಡಿದಿದ್ದು 2024 ರೊಳಗೆ ಪ್ರತಿ ಮನೆಗೂ ನೀರು ನೀಡಬೇಕು ಎಂಬ ಕನಸು ಸಾಕಾರವಾಗುವ ಸಾಧ್ಯತೆ ಕಡಿಮೆ.  2020ರಲ್ಲಿ ಯೋಜನೆ ಪ್ರಾರಂಭವಾಗಿದ್ದರೂ ಈವರೆಗೆ ಸುಮಾರು ₹5.7 ಕೋಟಿ ಅಂದಾಜು ಮೊತ್ತದ ಕಾಮಗಾರಿಯೂ ಪ್ರಾರಂಭವಾಗಿಲ್ಲ. ಈಗಾಗಲೇ ಪ್ರಾರಂಭವಾಗಿರುವ ಯೋಜನೆಗಳಲ್ಲಿ ಶೇ70ಕ್ಕೂ ಅಧಿಕ ಕಾಮಗಾರಿಗಳು ಅಪೂರ್ಣವಾಗಿದ್ದು ಹಲವೆಡೆ ಕಾಮಗಾರಿಗಳನ್ನು ಕಳಪೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಾಲ್ಲೂಕಿನ ಹೆಸ್ಗಲ್ ಮಾಕೋನಹಳ್ಳಿ ಊರುಬಗೆ ಕಿರುಗುಂದ ಬಣಕಲ್ ತರುವೆ ಕುಂದೂರು ಬಿ. ಹೊಸಳ್ಳಿ ಸೇರಿದಂತೆ ಹಲವು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಈ ಯೋಜನೆಯಡಿಯಲ್ಲಿ ಕಾಮಗಾರಿಗಳು ಪ್ರಾರಂಭವಾಗಿ ಮೂರು ವರ್ಷಗಳು ಕಳೆದರೂ ಇದುವರೆಗೂ ಪೂರ್ಣಗೊಂಡಿಲ್ಲ. ಕೆಲವೆಡೆ ಕೊಳವೆ ಬಾವಿ ತೆಗೆದು ಟ್ಯಾಂಕ್ ನಿರ್ಮಿಸಿ ಪೈಪ್ ಲೈನ್ ಹಾಕಿದ್ದರೂ ನೀರಿನ ಸಂಪರ್ಕ ನೀಡದೇ ಬಾಕಿ ಉಳಿಸಿಕೊಳ್ಳಲಾಗಿದೆ. ಕಾಮಗಾರಿ ಅಪೂರ್ಣವಾಗಿದ್ದರೂ ಬಿಲ್ ಪಾವತಿಸಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಈ ಬಾರಿ ಮಳೆ ಕುಂಠಿತವಾಗಿದ್ದು ಕುಡಿಯುವ ನೀರಿಗೆ ಅಭಾವ ತಲೆದೋರುವ ಸ್ಥಿತಿ ನಿರ್ಮಾಣವಾಗುತ್ತಿದೆ. ಆದರೂ ಕಾಮಗಾರಿಗಳನ್ನು ಪೂರ್ಣಗೊಳಿಸದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ‘ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಬಾಕಿ ಉಳಿದಿದೆ. ವಿದ್ಯುತ್ ಸಂಪರ್ಕಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು ವಿದ್ಯುತ್ ಸಂಪರ್ಕವಾದರೆ ಯೋಜನೆ ಪೂರ್ಣವಾಗಲಿದೆ. ಪ್ರತಿ ಮನೆಗೂ ನೀರು ಒದಗಿಸಲಾಗುತ್ತದೆ. ತಾಲ್ಲೂಕಿನಲ್ಲಿ ಎಲ್ಲಿಯೂ ಕುಡಿಯುವ ನೀರಿಗೆ ಸಮಸ್ಯೆಯಾಗಿಲ್ಲ. ಇರುವ ನೀರಿನ ಮೂಲಗಳಿಂದಲೇ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ’ ಎನ್ನುತ್ತಾರೆ ಕುಡಿಯುವ ನೀರು ಮತ್ತು ಗ್ರಾಮೀಣ ನೈರ್ಮಲ್ಯ ಇಲಾಖೆಯ ಎಂಜಿನಿಯರ್ ನಾಗರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT