ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯಪುರ | ಆತ್ಮಹತ್ಯೆ ಪ್ರಕರಣ: ವಿಡಿಯೊ ಬಿಡುಗಡೆ

Published 15 ಏಪ್ರಿಲ್ 2024, 14:10 IST
Last Updated 15 ಏಪ್ರಿಲ್ 2024, 14:10 IST
ಅಕ್ಷರ ಗಾತ್ರ

ಜಯಪುರ(ಬಾಳೆಹೊನ್ನೂರು): ಬಸ್ತಿ ಬಾಳಕ್ಕಿ ತೋಟದ ಸುರೇಶ್ ಅವರು ಆತ್ಮಹತ್ಯೆಗೂ ಮುನ್ನ ಮಾಡಿರುವ ವಿಡಿಯೊ ಬಹಿರಂಗವಾಗಿದ್ದು, ಅವರನ್ನು ಹೆದರಿಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸುರೇಶ್ ಅವರ ಸಹೋದರ ಸದಾನಂದ ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಸುರೇಶ್ ಅವರು ತಾಲ್ಲೂಕು ಬುಡಕಟ್ಟು ಕೃಷಿಕರ ಸಮಾಜದ ಅಧ್ಯಕ್ಷರಾಗಿದ್ದರು. ಕುಟುಂಬದ ಆಧಾರವಾಗಿದ್ದ  ಜಮೀನು, ದೇವಸ್ಥಾನ ಸೇರಿದಂತೆ ಎಲ್ಲಾ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಜಮೀನಿನ ಮಧ್ಯ ಭಾಗದಲ್ಲಿ ಹಾದು ಹೋಗಿರುವ ರಸ್ತೆ ವಿಚಾರವಾಗಿ ಕಾಂಗ್ರೆಸ್ ಮುಖಂಡ ಹಾಗೂ ಗುಡ್ಡೇತೋಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೀರ್ತಿ ಸುಂದರರಾಜ್, ಜಾಳ್ಮಾರ ಪ್ರಶಾಂತ್, ಮೃತರ ಸಹೋದರ ಕೃಷ್ಣ, ಆತನ ಪತ್ನಿ ಸುನೀತ, ಚಿಕ್ಕಪ್ಪ ಸುಬ್ರಾಯ, ಚಿಕ್ಕಮ್ಮ ಗುಲಾಬಿ ಅವರು ನೀಡಿದ ಕಿರುಕುಳದಿಂದಾಗಿ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ವಿಡಿಯೊದಲ್ಲಿ  ಸುರೇಶ್ ತಿಳಿಸಿದ್ದಾರೆ’ ಎಂದರು.

ಮೃತರಿಗೆ ಇಬ್ಬರು ಪುತ್ರಿಯರು, ಪತ್ನಿ ಇದ್ದು, ಸರ್ಕಾರ ಪರಿಹಾರ ನೀಡಬೇಕು. ಸಾವಿಗೆ ಕಾರಣರಾದ ಆರೋಪಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ನ್ಯಾಯ ಸಿಗದಿದ್ದರೆ ನಾವು ಕೂಡ ಸುರೇಶನ ಹಾದಿ ಹಿಡಿಯುವುದು ಅನಿವಾರ್ಯವಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತಿಲಿಕೆ ರಾಘವೇಂದ್ರ ಮಾತನಾಡಿ, ‘ಗಾರೆ ಕೆಲಸ ಮಾಡುತ್ತಿದ್ದ ಸುರೇಶ್ ನಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದರು. 2023ರ ಮೇ 12ರಂದು ರಸ್ತೆ ವಿಚಾರವಾಗಿ ಬಸ್ತಿ ಬಾಳಕ್ಕಿಯಲ್ಲಿ ಕಾಂಗ್ರೆಸ್ ಮುಖಂಡ ಕೀರ್ತಿ ಸುಂದರರಾಜ್ ಅವರು ಸುರೇಶ್ ಮೇಲೆ ಹಲ್ಲೇ ನಡೆಸಿದ್ದರು. ಇದರ ವಿರುದ್ದ ಜಯಪುರ ಠಾಣೆಯಲ್ಲಿ ಎಸ್‌ಸಿಎಸ್‌ಟಿ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಹಲ್ಲೆಗೆ ಪ್ರತ್ಯಕ್ಷ ಸಾಕ್ಷಿ ಕೂಡ ನಾನಾಗಿದ್ದೇನೆ. ಹಲ್ಲೆಯಿಂದ ತೀವ್ರ ಮನನೊಂದಿದ್ದ ಸುರೇಶ್ ಎರಡೇ ದಿನದಲ್ಲಿ ಜೀವಭಯದಿಂದ ಮನೆ ತೊರೆದು ಬೇರೆ ಕಡೆಗೆ ತೆರಳಿದ್ದರು. ಮಾನಸಿಕವಾಗಿ ಕಿರುಕುಳ ನೀಡಿ ಸಾವಿಗೆ ಕಾರಣರಾದವರ ವಿರುದ್ದ ಜಯಪುರ ಪೊಲೀಸರನ್ನು ಹೊರತುಪಡಿಸಿ ಬೇರೆ ಪೊಲೀಸರಿಂದ ತನಿಖೆಯಾಗಬೇಕು. ಇಲ್ಲದಿದ್ದಲ್ಲಿ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದು’ ಎಂದು ಎಚ್ಚರಿಸಿದರು.

‘ಸಾವಿಗೆ ನ್ಯಾಯ ಒದಗಿಸುವಂತೆ ಕೋರಿ ಶಾಸಕ ಟಿ.ಡಿ.ರಾಜೇಗೌಡರಿಗೂ 2023ರ ನ.25ರಂದು ಅಂಚೆ ಮೂಲಕ ಮನವಿ ಸಲ್ಲಿಸಿದ್ದೆವು. ಈವರೆಗೂ ಅವರಿಂದ ಯಾವುದೇ ಪ್ರತಿಕ್ರೀಯೆ ಬಂದಿಲ್ಲ ಎಂದು ಮೃತರ ಸಹೋದರ ನಾರಾಯಣ ಹೇಳಿದರು.

ಸುರೇಶ್ ಸಾವಿಗೂ ಮುನ್ನ ಚಿತ್ರೀಕರಣ ಮಾಡಿದ್ದ ವಿಡಿಯೊಗಳನ್ನು ಬಿಡುಗಡೆ ಮಾಡಿದರು. ಮೃತರ ಸಹೋದರ ನಾರಾಯಣ, ಅಚ್ಯುತ, ಶ್ರೀಧರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT