ಗುರುವಾರ , ನವೆಂಬರ್ 21, 2019
21 °C

ಭಾಷಾಭಿಮಾನ ಆಚರಣೆಗೆ ಸೀಮಿತವಾಗದಿರಲಿ: ಭೋಜೇಗೌಡ

Published:
Updated:
Prajavani

ಚಿಕ್ಕಮಗಳೂರು: ಕನ್ನಡದ ಮೇಲಿನ ಪ್ರೀತಿ, ಅಭಿಮಾನ ರಾಜ್ಯೋತ್ಸವ ದಿನಕ್ಕೆ ಮಾತ್ರ ಸೀಮಿತವಾಗಬಾರದು ಎಂದು ವಿಧಾನಪರಿಷತ್ತಿನ ಸದಸ್ಯ ಎಸ್.ಎಲ್.ಭೋಜೇಗೌಡ ಸಲಹೆ ನೀಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವ ನಿಮಿತ್ತ ಜಿಲ್ಲಾಧ್ಯಂತ ಒಂದು ತಿಂಗಳ ಕಾಲ ಹಮ್ಮಿಕೊಂಡಿರುವ ‘ಪರಿಷತ್ತಿನ ನಡಿಗೆ ಹಿರಿಯರ ಕಡೆಗೆ’ ಕಾರ್ಯಕ್ರಮಕ್ಕೆ ನಗರದ ಸುವರ್ಣ ಕನ್ನಡ ಭವನದಲ್ಲಿ ಶುಕ್ರವಾರ ಅವರು ಚಾಲನೆ ನೀಡಿ ಮಾತನಾಡಿದರು.

ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ದಿನ ಕನ್ನಡಿಗರ ಉತ್ಸಾಹ ಗರಿಗೆದರುತ್ತದೆ. ಮಾತೃಭಾಷೆ ಮೇಲಿನ ಪ್ರೀತಿ ಹೊರಹೊಮ್ಮುತ್ತದೆ. ಆದರೆ ಅದು ಮರುದಿನದಿಂದಲೇ ಮಾಯವಾಗುತ್ತದೆ. ಈ ಪ್ರೌವೃತ್ತಿ ನಿಲ್ಲಬೇಕು. ಭಾಷಾಭಿಮಾನ ನಿತ್ಯ ಝೇಂಕರಿಸಬೇಕು ಎಂದರು.

ಪತ್ರಕರ್ತ ಜಿ.ವಿ.ಚೂಡಾನಾಥ ಅಯ್ಯರ್ ಮಾತನಾಡಿ, ಕನ್ನಡದ ಹಿರಿಯ ಕವಿಗಳು ಮತ್ತು ಸಾಹಿತಿಗಳ ಹುಟ್ಟೂರಿನಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಘಟಕದ ಅಧ್ಯಕ್ಷ ಕುಂದೂರು ಅಶೋಕ್ ಮಾತನಾಡಿ,
ಎಲೆಮರೆಯ ಕಾಯಿಯಂತೆ ಸಮಾಜ ಸೇವೆಯಲ್ಲಿ ನಿರತರಾಗಿರುವವರನ್ನು ಗುರುತಿಸಿ, ಸನ್ಮಾನಿಸುವ ಉದ್ದೇಶದಿಂದ ಜಿಲ್ಲಾಧ್ಯಂತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಗವನಹಳ್ಳಿ ಶಾಖೆಯ ವ್ಯವಸ್ಥಾಪಕ ಮಹೇಶ್, ಲೇಖಕ ರವೀಶ್ ಕ್ಯಾತನಬೀಡು, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಘಟಕದ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ ಇದ್ದರು.

ಪ್ರತಿಕ್ರಿಯಿಸಿ (+)