ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್ದೂರು: ಮಲೆನಾಡ ಮಡಿಲಲ್ಲಿ ಕುಡಿವ ನೀರಿಗೆ ಹಾಹಾಕಾರ

ಹಲವು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ
Published 2 ಏಪ್ರಿಲ್ 2024, 5:16 IST
Last Updated 2 ಏಪ್ರಿಲ್ 2024, 5:16 IST
ಅಕ್ಷರ ಗಾತ್ರ

ಆಲ್ದೂರು: ಪಟ್ಟಣವೂ ಸೇರಿದಂತೆ ಕೂದುವಳ್ಳಿ, ವಸ್ತಾರೆ, ಕೆಳಗೂರು, ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಕಾಣಿಸಿಕೊಂಡಿದ್ದು,  ಇಲ್ಲಿ ಪಂಚಾಯಿತಿ ವತಿಯಿಂದ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ. ಬ್ಯಾರವಳ್ಳಿ, ಬಸರವಳ್ಳಿ, ಆಣೂರು, ದೊಡ್ಡಮಾಗರವಳ್ಳಿ, ಬಸ್ಕಲ್ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಗಂಭೀರವಾಗಿಲ್ಲ.

ಆಲ್ದೂರು ಪಂಚಾಯಿತಿ ವ್ಯಾಪ್ತಿಯ ಬಿಕೆರೆ, ಕುಂಬಾರಹಳ್ಳಿ, ಕಾವಲು ಹೊಲ ಸುತ್ತಲಿನ ಪ್ರದೇಶಗಳಲ್ಲಿ ಕೊಳವೆಬಾವಿಯೇ ಪ್ರಮುಖ ಜಲ ಮೂಲವಾಗಿದೆ. 15ನೇ ಹಣಕಾಸು ಯೋಜನೆಯಡಿ ಕೊಳವೆಬಾವಿಗಳನ್ನು ದುರಸ್ತಿಪಡಿಸಿ ಮೋಟರ್‌ ಅಳವಡಿಸಲಾಗಿದ್ದು, ಜನರಿಗೆ ಕುಡಿಯಲು ನೀರು ಪೂರೈಸಲಾಗುತ್ತಿದೆ.  ತುಡುಕೂರು ಗ್ರಾಮಕ್ಕೆ ಹಳ್ಳದ ಮೂಲದಿಂದ ಕುಡಿಯುವ ನೀರು ಪೂರೈಕೆ ಆಗುತ್ತಿತ್ತು. ಇಲ್ಲಿ  ಸ್ಥಳೀಯರೊಬ್ಬರಿಗೆ ಸೇರಿದ ಬೋರ್‌ವೆಲ್‌ನಿಂದ ತಿಂಗಳಿಗೆ ₹10 ಸಾವಿರ ಬಾಡಿಗೆಯಂತೆ ಟ್ಯಾಂಕರ್‌ ಮೂಲಕ ನೀರು ಪೂರೈಸಲಾಗುತ್ತಿದೆ’ ಎಂದು ಪಿಡಿಒ ಶಂಶೂನ್ ನಹರ್ ಹೇಳಿದರು.

‘ಹೊಸಪೇಟೆ, ಕೃಷ್ಣಪ್ಪ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಅಲ್ಲಿ ತಾತ್ಕಾಲಿಕವಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ’ ಎಂದು ಕೆಳಗೂರು ಪಂಚಾಯಿತಿ ಪಿಡಿಒ ವಿ.ಎಸ್. ಕುಮಾರ್‌ ಹೇಳಿದರು.

‘ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಲಮೂಲಗಳಿಂದ ಪಂಚಾಯಿತಿ ನೀರು ಖರೀದಿ ಮಾಡುತ್ತಿದ್ದು, ನೀರಿನ ಶುಲ್ಕ  ಹೊರೆಯಾಗುತ್ತಿದೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಪಂಚಾಯಿತಿಗೆ ಸೇರಿದ ಜಲಮೂಲವನ್ನೇ ಬಳಸಿಕೊಂಡು, ನೀರಿನ ಸಮಸ್ಯೆ ಇರುವಲ್ಲಿ ಮನೆಗಳಿಗೆ 1 ಸಾವಿರ ಲಿಟರ್‌ ಸಾಮರ್ಥ್ಯದ ನೀರಿನ ಟ್ಯಾಂಕ್‌ ಒದಗಿಸಿ, ಒಬ್ಬ ಸಿಬ್ಬಂದಿಯನ್ನು ನೇಮಿಸಿ ನೀರು ಸರಬರಾಜು ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಕುಮಾರ್‌ ಮಾಹಿತಿ ನೀಡಿದರು.

‘ಕೂದುವಳ್ಳಿ ಗ್ರಾಮದ ಹೃದಯ ಭಾಗದಲ್ಲಿರುವ ಮನೆಗಳಿಗೆ ಮಾತ್ರ ನೀರಿನ ಸಮಸ್ಯೆ ಉಂಟಾಗಿದ್ದು, ಟ್ಯಾಂಕರ್ ಮೂಲಕ ಮನೆಗಳಿಗೆ ನೀರು ತಲುಪಿಸಲಾಗುತ್ತಿದೆ’ ಎಂದು ಅಲ್ಲಿನ ಪಂಚಾಯಿತಿ ಸಿಬ್ಬಂದಿ ಚೇತನ್ ಹೇಳಿದರು.

ವಸ್ತಾರೆ ಪಂಚಾಯಿತಿಯಿಂದ ಕಳೆದ ಒಂದು ವರ್ಷದಲ್ಲಿ ಮೂರು ಕಡೆ ಬೋರ್‌ವೆಲ್‌ ಕೊರೆಯಿಸಲಾಗಿದೆ. ಆದರೆ, ಯಾವುದರಲ್ಲೂ ನೀರು ಸಿಕ್ಕಿಲ್ಲ. ಸದ್ಯ ಸ್ಥಳೀಯ ವ್ಯಕ್ತಿಯೊಬ್ಬರ ಮನೆಯ ಕೊಳವೆಬಾವಿಯಿಂದ ಗ್ರಾಮಗಳಿಗೆ ನೀರನ್ನು ಒದಗಿಸಲಾಗುತ್ತಿದೆ. ಈ ಬೋರ್‌ವೆಲ್‌ನಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಅದರಲ್ಲಿ ನೀರು ಬರಿದಾದರೆ ಜನರು ನೀರಿನ ಬವಣೆಯನ್ನು ಎದುರಿಸಬೇಕಾಗುತ್ತದೆ ಎಂದು ಸ್ಥಳೀಯರಾದ ನವೀನ್ ಆತಂಕ ವ್ಯಕ್ತಪಡಿಸಿದರು.

ಬಸರವಳ್ಳಿ, ದೊಡ್ಡಮಾಗರವಳ್ಳಿ, ಆಣೂರು, ಆವತಿ ಪಂಚಾಯಿತಿಗಳಲ್ಲಿ  ಸ್ಥಳೀಯ ಜಲಮೂಲಗಳಿಂದಲೇ ನೀರು ಪೂರೈಕೆ ಮಾಡಲಾಗುತ್ತಿದೆ. ಮಳೆ ವಿಳಂಬವಾದರೆ ನೀರಿನ ಸಮಸ್ಯೆ ಉಲ್ಬಣಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಾರೆ ಪಂಚಾಯಿತಿ ಸಿಬ್ಬಂದಿ.

ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಬ್ಯಾರೆಲ್‌ನಲ್ಲಿ ನೀರು ತುಂಬಿಕೊಳ್ಳುತ್ತಿರುವುದು
ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಬ್ಯಾರೆಲ್‌ನಲ್ಲಿ ನೀರು ತುಂಬಿಕೊಳ್ಳುತ್ತಿರುವುದು
ಚಂದ್ರಶೇಖರ್ ತುಡುಕೂರು
ಚಂದ್ರಶೇಖರ್ ತುಡುಕೂರು

ಬಿರಂಜಿ ಹಳ್ಳ ಬತ್ತಿರುವುದರಿಂದ ಅಲ್ಲಿಂದ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. 15 ದಿನಗಳಿಗೊಮ್ಮೆ ನಲ್ಲಿ ನೀರು ಪೂರೈಕೆಯಾಗುತ್ತಿದೆ. ಮಳೆ ತಡವಾದರೆ ಸಮಸ್ಯೆ ಉಲ್ಭಣಿಸಲಿದೆ -ಚಂದ್ರಶೇಖರ್ ಸ್ಥಳೀಯ ನಿವಾಸಿ

ವಾರಕ್ಕೊಮ್ಮೆ ನೀರು ಪೂರೈಕೆ

ಸತ್ತಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಮಾಚಗೊಂಡನಹಳ್ಳಿ ಇಂದಿರಾನಗರ ಭದ್ರಾ ನಗರ ಬೂತನ ಕಾಡು ಗ್ರಾಮಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು ವಾರಕ್ಕೆ ಒಂದು ಬಾರಿ ಮಾತ್ರ ಟ್ಯಾಂಕರ್ ಮೂಲಕ ಈ ಗ್ರಾಮಗಳಿಗೆ ಪಂಚಾಯಿತಿ ವತಿಯಿಂದ ನೀರು ಪೂರೈಕೆಯಾಗುತ್ತಿದೆ. ಕಂದಾಯ ಇಲಾಖೆ ವತಿಯಿಂದ ಕುಡಿಯುವ ನೀರಿಗಾಗಿ ತಿಂಗಳಿಗೆ ₹10 ಸಾವಿರ ಸಹಾಯಧನ ಒದಗಿಸುವ ಕುರಿತು ತಹಶೀಲ್ದಾರ್ ಆದೇಶವಿದ್ದು ಅದಕ್ಕಾಗಿ ಮನವಿ ಮಾಡಲಾಗಿದೆ’ ಎಂದು ಪಿಡಿಒ ದೇವರಾಜ್ ಮಾಹಿತಿ ನೀಡಿದರು. ಬಸ್ಕಲ್ ಪಂಚಾಯಿತಿಯ ವ್ಯಾಪ್ತಿಯಲ್ಲಿ ಮೂರು ಬೋರ್ ಒಂದು ತೆರೆದ ಬಾವಿ ಇದ್ದು ಜಲಜೀವನ್ ಮಿಷನ್ ಯೋಜನೆ ಸಂಪೂರ್ಣವಾಗಿ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಪಿಡಿಒ ಅಶೋಕ್  ಹೇಳಿದರು.

ವಲಸೆ ಕಾರ್ಮಿಕರು; ನೀರಿಗೆ ಹೆಚ್ಚುವರಿ ಬೇಡಿಕೆ

ಹೋಬಳಿ ವ್ಯಾಪ್ತಿಯ ಹಲವು ಪಂಚಾಯಿತಿಗಳ ವ್ಯಾಪ್ತಿಗಳಲ್ಲಿ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ತೋಟದ ಕೆಲಸ ಗಾರೆ ಕೆಲಸಕ್ಕೆ ಬೇರೆ ರಾಜ್ಯಗಳಿಂದ ಬಂದು ಬಾಡಿಗೆ ಮನೆಗಳಲ್ಲಿ ವಾಸವಿದ್ದಾರೆ. ಹೀಗಾಗಿ ನೀರಿನ ಬೇಡಿಕೆ ಹೆಚ್ಚಿದ್ದು ಅವರಿಗೂ ಹೆಚ್ಚುವರಿಯಾಗಿ ನೀರು ಒದಗಿಸಬೇಕಾದ ಪರಿಸ್ಥಿತಿ ಎದುರಾಗಿದೆ.  ನೀರಿನ ಅಭಾವ ಉಂಟಾಗಲು ಈ ಅಂಶ ಕೂಡ ಕಾರಣವಾಗಿದ್ದು ಪಿಡಿಒಗಳಿಗೆ ಸವಾಲಾಗಿ ಪರಿಣಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT