ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಒತ್ತುವರಿ ಭೂಮಿ ಗುತ್ತಿಗೆ: ರಾಜಕೀಯ ಲಾಭಕ್ಕೆ ಪೈಪೋಟಿ

Published 18 ಮಾರ್ಚ್ 2024, 7:15 IST
Last Updated 18 ಮಾರ್ಚ್ 2024, 7:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿ ರಾಜ್ಯ ಸರ್ಕಾರ ಕಾಫಿ ಬೆಳೆಗಾರರ ಬಹುದಿನಗಳ ಬೇಡಿಕೆ ಈಡೇರಿಸಿದೆ. ಬೆಳೆಗಾರರು ಒತ್ತುವರಿ ಮಾಡಿರುವ ಸರ್ಕಾರಿ ಜಾಗದಲ್ಲಿ 25 ಎಕರೆ ತನಕ ಗುತ್ತಿಗೆ ಆಧಾರದಲ್ಲಿ ಅವರಿಗೇ ಬಿಟ್ಟುಕೊಡಲು ನಿರ್ಧಾರ ಮಾಡಿದೆ. ಇದರ ರಾಜಕೀಯ ಲಾಭ ಪಡೆದುಕೊಳ್ಳಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದ್ದರೆ, ಗುತ್ತಿಗೆ ನೀಡಲು ದಲಿತ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.

ಕಾಫಿ, ಏಲಕ್ಕಿ, ಮೆಣಸು, ರಬ್ಬರ್, ಟೀ ಬೆಳೆಯನ್ನು ಸರ್ಕಾರ ಪ್ಲಾಂಟೇಷನ್ ಬೆಳೆ ಎಂದು ಗುರುತಿಸಿದೆ. ಅನಧಿಕೃತವಾಗಿ ಸರ್ಕಾರಿ ಭೂಮಿಯಲ್ಲಿ ಈ ಬೆಳೆಗಳನ್ನು ಬೆಳೆದಿರುವ ಬೆಳೆಗಾರರಿಗೇ ಗುತ್ತಿಗೆ ಆಧಾರದಲ್ಲಿ 30 ವರ್ಷ ಬಿಟ್ಟುಕೊಡಲು ಮುಂದಾಗಿದೆ. ಹಲವು ವರ್ಷಗಳ ಬೇಡಿಕೆ ಕೊನೆಗೂ ಈಡೇರಿದೆ ಎಂಬ ಸಂತಸದಲ್ಲಿ ಬೆಳೆಗಾರರಿದ್ದಾರೆ. ಇದು ರಾಜಕೀಯ ಲಾಭ ಪಡೆದುಕೊಳ್ಳಲು ಎರಡೂ ಪಕ್ಷಗಳು ಪ್ರಯತ್ನಿಸುತ್ತಿವೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಹಿಂದಿನ ಅವಧಿಯಲ್ಲಿ ಪ್ರಕ್ರಿಯೆಗಳು ಆರಂಭವಾದವು. ಬಿಜೆಪಿ ಸರ್ಕಾರದಲ್ಲಿ 25 ಎಕರೆ ತನಕ ಗುತ್ತಿಗೆಗೆ ಕೊಡುವ ನಿರ್ಧಾರ ಆಗಿತ್ತು. ನಿಯಮಾವಳಿ ರೂಪಿಸುವಷ್ಟರಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿತ್ತು. ಮತ್ತೆ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಆದೇಶ ಹೊರಬಿದ್ದಿದೆ ಎಂದು ಬೆಳೆಗಾರರು ಹೇಳುತ್ತಾರೆ.

ಬಿಜೆಪಿ ಸರ್ಕಾರ ನಾಲ್ಕು ವರ್ಷಗಳ ಕಾಲ ಮಾತಿನಲ್ಲೇ ಕಾಲ ಕಳೆಯಿತು. ಕಾಂಗ್ರೆಸ್‌ ಮುಖಂಡರು ಬೆಳೆಗಾರರೊಂದಿಗೆ ನಿಯೋಗ ಬಂದು ಸಮಸ್ಯೆ ಹೇಳಿಕೊಂಡ ಬಳಿಕ ಕಾಂಗ್ರೆಸ್ ಸರ್ಕಾರದ ನಿರ್ಧಾರ ಕೈಗೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದರು. ಅದಾದ ಕೆಲವೇ ದಿನಗಳಲ್ಲಿ ಸುತ್ತೋಲೆ ಹೊರ ಬಿದ್ದಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದ್ದವು. ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರು ಈ ವಿಷಯದಲ್ಲಿ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದರು. ಅಷ್ಟರಲ್ಲಿ ಚುನಾವಣೆ ಘೋಷಣೆ ಆಗಿದ್ದರಿಂದ ಆದೇಶ ಹೊರ ಬಿದ್ದಿರಲಿಲ್ಲ. ಕಾಂಗ್ರೆಸ್ ಆದೇಶವನ್ನಷ್ಟೆ ಹೊರಡಿಸಿದೆ. ಈ ಮಹತ್ವದ ನಿರ್ಧಾರದ ಕೀರ್ತಿಗೆ ಬಿಜೆಪಿಗೆ ಸಲ್ಲಬೇಕು ಎಂಬುದು ಜಿಲ್ಲೆಯ ಬಿಜೆಪಿ ಮುಖಂಡರ ಅಭಿಪ್ರಾಯ.

ಒಂದೆಡೆ ರಾಜಕೀಯ ಲಾಭ ಪಡೆಯುವ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದೆ ಸರ್ಕಾರಿ ಭೂಮಿ ಗುತ್ತಿಗೆ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದೆ. ಶಾಲೆ, ಕಾಲೇಜು, ಆಟದ ಮೈದಾನ, ಸ್ಮಶಾನಕ್ಕೆ ಜಾಗ ಇಲ್ಲ. ಸರ್ಕಾರಿ ಭೂಮಿಯನ್ನು ಹೀಗೆ ಹಂಚುವುದು ಸರಿಯಲ್ಲ ಎಂಬುದು ದಲಿತ ಸಂಘಟನೆಗಳ ವಾದ.

ಜಿಲ್ಲೆಯಲ್ಲಿ ಭೂರಹಿತರೂ ಇದ್ದಾರೆ. ಅತಿವೃಷ್ಟಿಯಲ್ಲಿ ನೆಲೆ ಕಳೆದುಕೊಂಡವರು ಪುನರ್ವಸತಿಗೆ ತಲಾ 4 ಎಕರೆ ಸರ್ಕಾರಿ ಜಾಗ ಗುರುತಿಸುವುದೂ ಕಷ್ಟವಾಗಿದೆ. ಒತ್ತುವರಿದಾರರಿಗೆ 25 ಎಕರೆ ತನಕ ಸರ್ಕಾರಿ ಭೂಮಿ ಬಿಟ್ಟುಕೊಡುವುದು ಎಷ್ಟು ಸರಿ ಎಂಬುದು ಅವರ ಪ್ರಶ್ನೆ.

ಕಂದಾಯ ಭೂಮಿ ಒತ್ತುವರಿ 76,844 ಎಕರೆಯಷ್ಟಿದೆ ಎಂಬುದನ್ನು ಸರ್ಕಾರ ಗುರುತಿಸಿದೆ. ಅಷ್ಟೂ ಜಾಗವನ್ನು 30 ವರ್ಷ ಗುತ್ತಿಗೆ ನೀಡಿದರೆ ಒಂದು ತಲೆಮಾರೇ ಮುಗಿದು ಹೋಗಿರುತ್ತದೆ. ಮತ್ತೆ ಅವರಿಂದ ಸರ್ಕಾರಿ ಜಾಗ ಬಿಡಿಸಿಕೊಳ್ಳಲು ಸಾಧ್ಯವಿದೆಯೇ, ಗುತ್ತಿಗೆ ಹೆಸರಿನಲ್ಲಿ ಉಳ್ಳುವರಿಗೆ ಸರ್ಕಾರಿ ಜಮೀನು ಬಿಟ್ಟುಕೊಡುವ ಹುನ್ನಾರ ಎಂಬುದು ಅವರ ವಾದ.

ಸಿ.ಟಿ.ರವಿ
ಸಿ.ಟಿ.ರವಿ
ಟಿ.ಡಿ.ರಾಜೇಗೌಡ
ಟಿ.ಡಿ.ರಾಜೇಗೌಡ
ದೀಪಕ್ ದೊಡ್ಡಯ್ಯ
ದೀಪಕ್ ದೊಡ್ಡಯ್ಯ
ಮರ್ಲೆ ಅಣ್ಣಯ್ಯ 
ಮರ್ಲೆ ಅಣ್ಣಯ್ಯ 

Cut-off box - ‘ಗುತ್ತಿಗೆ ವಿರೋಧಿಸಿ ಹೋರಾಟ’ ಬೆಳೆಗಾರರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವ ಭೂಮಿಯನ್ನು ಅಧಿಕೃತಗೊಳಿಸಲು ಸರ್ಕಾರ ಹೊರಟಿದ್ದು ಇದರ ವಿರುದ್ಧ ಹೋರಾಟ ತೀವ್ರಗೊಳಿಸಲಾಗುವುದು ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಎಚ್ಚರಿಸಿದೆ. ‘ಒತ್ತುವರಿ ಮಾಡಿಕೊಂಡಿರುವ ಅಷ್ಟೂ ಭೂಮಿಯನ್ನು ಮೊದಲು ಸರ್ಕಾರ ಬಿಡಿಸಿಕೊಂಡು ತನ್ನ ವಶಕ್ಕೆ ಪಡೆದುಕೊಳ್ಳಬೇಕು. ಶಾಲೆ ರಸ್ತೆ ಸ್ಮಶಾನ ಸೇರಿ ಮೂಲಸೌಕರ್ಯಗಳಿಗೆ ಮೀಸಲಿಡಬೇಕು. ಭೂರಹಿತರಿಗೆ ಭೂಮಿ ಹಂಚಿಕೆ ಮಾಡಬೇಕು’ ಎಂದು  ದಸಂಸ ಜಿಲ್ಲಾ ಸಂಚಾಲಕ ಮರ್ಲೆ ಅಣ್ಣಯ್ಯ ಒತ್ತಾಯಿಸಿದರು. ‘ಈ ವಿಷಯನ್ನು ನಮ್ಮ ಸಂಘಟನೆ ಗಂಭೀರವಾಗಿ ಪರಿಗಣಿಸಿದೆ. ಹಳ್ಳಿ–ಹಳ್ಳಿಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಮಾ.22ರಂದು ದೊಡ್ಡ ಮಟ್ಟದ ಜಾಥಾ ನಡೆಸಲಾಗವುದು. ನಮ್ಮ ಸಂಘಟನೆಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಕೂಡ ಭಾಗವಹಿಸಲಿದ್ದಾರೆ’ ಎಂದರು.

Cut-off box - ‘ಅಧಿಸೂಚನೆಯಷ್ಟೇ ಈಗಿನ ಸರ್ಕಾರದ್ದು’ ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲಾ ಪ್ರಕ್ರಿಯೆ ನಡೆದಿತ್ತು. ಅಂತಿಮ ಅಧಿಸೂಚನೆಯನ್ನಷ್ಟೇ ಈಗಿನ ಸರ್ಕಾರ ಹೊರಡಿಸಿದೆ’ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಹೇಳಿದರು. ‘ನಮ್ಮ ಸರ್ಕಾರದಲ್ಲೇ ನಿಯಮಾವಳಿ ರೂಪಿಸಲು ಆದೇಶಿಸಲಾಗಿತ್ತು. ಅಷ್ಟರಲ್ಲಿ ಚುನಾವಣೆ ಘೋಷಣೆಯಾಗಿದ್ದರಿಂದ ಈಗಿನ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕಾಂಗ್ರೆಸ್‌ನವರು ಇದರ ರಾಜಕೀಯ ಲಾಭ ಪಡೆಯಲು ಆಗುವುದಿಲ್ಲ. ಬೆಳೆಗಾರರಿಗೆ ಎಲ್ಲವೂ ಗೊತ್ತಿದೆ. ಆದ್ದರಿಂದಲೇ ಬೆಳೆಗಾರರು ನನ್ನನ್ನು ಭೇಟಿಯಾಗಿ ಶಾಲು ಹೊದಿಸಿ ಧನ್ಯವಾದ ಹೇಳಿದರು’ ಎಂದು ತಿಳಿಸಿದರು. ಗುತ್ತಿಗೆ ನೀಡಲು ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ‘ಹೊಸದಾಗಿ ಸರ್ಕಾರಿ ಜಾಗವನ್ನು ಬೆಳೆಗಾರರಿಗೆ ಬಿಟ್ಟುಕೊಡುತ್ತಿಲ್ಲ. 40 ವರ್ಷ 50 ವರ್ಷ ಕೆಲವರು 100 ವರ್ಷಗಳಿಂದಲೂ ಕಾಫಿ ಬೆಳೆಯುತ್ತಿದ್ದಾರೆ. ಗುತ್ತಿಗೆಗೆ ನೀಡುವುದರಿಂದ ಸರ್ಕಾರಕ್ಕೆ ಹಲವು ಲಾಭಗಳಿವೆ. ಎಷ್ಟು ಜಾಗ ಒತ್ತುವರಿಯಾಗಲಿದೆ ಎಂಬುದು ಗೊತ್ತಾಗಲಿದೆ. ಸರ್ಕಾರಕ್ಕೂ ವರಮಾನ ಬರಲಿದೆ’ ಎಂದರು. ಕಾಫಿ ಬೆಳೆ ಜತೆಗೆ ಬೆಳೆಗಾರರು ಪರಿಸರವನ್ನೂ ಉಳಿಸಿಕೊಂಡು ಬಂದಿದ್ದಾರೆ. ವಿದೇಶಿ ವಿನಿಮಯ ಹೆಚ್ಚಳಕ್ಕೆ ಕಾರಣರಾಗಿದ್ದಾರೆ. ಈ ಎಲ್ಲಾ ಅಂಶಗಳನ್ನು ಮನಗಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

Cut-off box - ‘ಬೊಮ್ಮಾಯಿ ಆರ್.ಅಶೋಕ್‌ಗೆ ಸಲ್ಲಬೇಕು’ ಬೆಳೆಗಾರರಿಗೆ 25 ಎಕರೆ ಗುತ್ತಿಗೆಗೆ ನೀಡುವ ನಿರ್ಧಾರದ ಕೀರ್ತಿ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಅಂದಿನ ಕಂದಾಯ ಸಚಿವ ಆರ್.ಅಶೋಕ್ ಅವರಿಗೆ ಸಲ್ಲಬೇಕು ಎಂದು ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಹೇಳಿದರು. ‘ಹಲವು ಭಾರಿ ಮನವಿ ಸಲ್ಲಿಸಲಾಗಿತ್ತು. ಆರ್.ಅಶೋಕ್‌ ಅವರು ಜನರ ಬಳಿಗೇ ಬಂದು ಕಷ್ಟ–ಸುಖಗಳನ್ನು ಆಲಿಸಿ ತೀರ್ಮಾನ ಕೈಗೊಂಡಿದ್ದರು. ಈಗಿನ ಸರ್ಕಾರ ಆದೇಶ ಹೊರಡಿಸಿದೆ ಎಷ್ಟೇ’ ಎಂದರು.

Cut-off box - ಬಿಜೆಪಿ ಆಡಳಿತದಲ್ಲಿ ಏಕೆ ಆಗಲಿಲ್ಲ: ಮೋಟಮ್ಮ ಸಿದ್ದರಾಮಯ್ಯ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಪ್ರಕ್ರಿಯೆ ಆರಂಭವಾಗಿತ್ತು. ಬಿಜೆಪಿಗೆ ನಾಲ್ಕು ವರ್ಷ ಅವಕಾಶ ಇತ್ತು. ಆಗ ಏಕೆ ಅಧಿಸೂಚನೆ ಹೊರಡಿಸಲಿಲ್ಲ ಎಂದು ಕಾಂಗ್ರೆಸ್ ಮುಖಂಡರಾದ ಮೋಟಮ್ಮ ಪ್ರಶ್ನಿಸಿದರು. ‘ಬೆಳೆಗಾರರು ಬೆಳಗಾವಿ ಬೆಂಗಳೂರು ಸುತ್ತಿ ಸಾಕಾಗಿದ್ದರು. ಬಿಜೆಪಿಯವರಿಗೆ ಮನಸಿರಲಿಲ್ಲ ನಮ್ಮ ಸರ್ಕಾರ ಬಂದ ಕೂಡಲೇ ಬೆಳೆಗಾರರೊಂದಿಗೆ ನಿಯೋಗ ತೆರಳಿ ಮನವರಿಕೆ ಮಾಡಿಸಿದೆವು’ ಎಂದರು. ‘ಮೂಲಸೌಕರ್ಯಕ್ಕೆ ಜಾಗ ಮೀಸಲಿಡಬೇಕು ಭೂ ರಹಿತರಿಗೆ ಜಮೀನು ನೀಡಬೇಕು ಎಂಬ ದಲಿತ ಸಂಘಟನೆಗಳ ಹೋರಾಟದಲ್ಲೂ ಅರ್ಥ ಇದೆ. ಆದರೆ ಬೆಳೆಗಾರರು ಒತ್ತುವರಿ ಮಾಡಿರುವ ಜಾಗ ಊರಿನ ಪಕ್ಕದಲ್ಲಿ ಇಲ್ಲ ಕಾಡಿನ ಅಂಚಿನಲ್ಲಿದೆ. ಅದನ್ನು ಶಾಲೆ ಸ್ಮಶಾನ ಆಟದ ಮೈದಾನಕ್ಕೆ ಮೀಸಲಿಡಲು ಆಗುವುದಿಲ್ಲ’ ಎಂದು ಹೇಳಿದರು. ‘ಈ ರೀತಿ ಗುತ್ತಿಗೆ ನೀಡುವುದು ಹೊಸದೇನು ಅಲ್ಲ. ಚೀನಾ ದೇಶದಲ್ಲೂ ಇದೆ. ನಮ್ಮ ದೇಶದಲ್ಲಿ ಕೇರಳ ಮತ್ತು ಮಧ್ಯ ಪ್ರದೇಶದಲ್ಲಿ ಈಗಾಗಲೇ ಈ ಪದ್ಧತಿ ಜಾರಿಯಲ್ಲಿದೆ. ಇದರಿಂದ ಸರ್ಕಾರಕ್ಕೂ ವರಮಾನ ಬರಲಿದೆ’ ಎಂದರು.

Cut-off box - ‘ಗುತ್ತಿಗೆ ಮೊತ್ತ ಮೊದಲೇ ಪಾವತಿಸಬೇಕು’ ಒತ್ತುವರಿ ಜಾಗ ಗುತ್ತಿಗೆ ಪಡೆಯಬೇಕೆಂದರೆ ವರ್ಷಕ್ಕೆ ಎಕರೆಗೆ ₹3500ರಂತೆ 30 ವರ್ಷದ ಮೊತ್ತವನ್ನು ಒಮ್ಮೆಲೇ ಪಾವತಿಸಬೇಕಿದೆ.  ಚಿಕ್ಕಮಗಳೂರು ಹಾಸನ ಕೊಡಗು ಮತ್ತು ಉಡುಪಿ ಜಿಲ್ಲೆಗಳ ಪ್ಲಾಂಟೇಷನ್ ಜಮೀನು ಗುತ್ತಿಗೆಗೆ ನೀಡಲು ಉದ್ದೇಶಿಸಲಾಗಿದೆ. ಎಕರೆಗೆ ಕನಿಷ್ಠ ₹1 ಸಾವಿರದಿಂದ ಗರಿಷ್ಠ ₹3500 ತನಕ ಗುತ್ತಿಗೆ ಮೊತ್ತ ನಿಗದಿ ಮಾಡಲಾಗಿದೆ. 1ರಿಂದ 5 ಎಕರೆ ತನಕ ಒತ್ತುವರಿ ಮಾಡಿರುವ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಮ್ಮೆಲೆ 30 ವರ್ಷದ ಗುತ್ತಿಗೆ ಮೊತ್ತ ಪಾವತಿಸುವುದು ಸಣ್ಣ ಬೆಳೆಗಾರರಿಗೆ ಕಷ್ಟವಾಗಲಿದೆ ಎಂಬ ಅಭಿಪ್ರಾಯವೂ ಬೆಳೆಗಾರರಲ್ಲಿ ಇದೆ. ಇನ್ನು ಅರಣ್ಯ ಭೂಮಿ ಒತ್ತುವರಿ ಮಾಡಿದರೆ ಯಾವುದೇ ಕಾರಣಕ್ಕೂ ಗುತ್ತಿಗೆ ನೀಡಲು ಅವಕಾಶ ಇಲ್ಲ. ಆದರೆ ಬಹುತೇಕ ರೈತರಿಗೆ ಅರಣ್ಯ ಭೂಮಿಯೊ ಕಂದಾಯ ಭೂಮಿಯೋ ಎಂಬ ಅರಿವಿಲ್ಲ. ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡರೆ ಗೊಂದಲ ಪರಿಹಾರವಾಗಲಿದೆ.

Cut-off box - ‘ಕಾಂಗ್ರೆಸ್ ಸರ್ಕಾರದಲ್ಲೇ ಘೋಷಣೆಯಾಗಿತ್ತು’ 2017–18ನೇ ಸಾಲಿನ ಬಜೆಟ್‌ನಲ್ಲಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದರು. ಮೇಲ್ಮನೆ ಮತ್ತು ಕೆಳಮನೆಯಲ್ಲೂ ಅನುಮೋದನೆ ದೊರೆತಿತ್ತು ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ‘10 ಎಕರೆ ತನಕ ಮಾತ್ರವಲ್ಲ 25 ಎಕರೆ ತನಕ ಗುತ್ತಿಗೆಗೆ ನೀಡಬಹುದು ಎಂಬುದನ್ನು ಬಿಜೆಪಿ ಸರ್ಕಾರ ನಿರ್ಧರಿಸಿತ್ತು. ಆದರೆ ಯಾವುದೇ ಸರ್ಕಾರಿ ಆದೇಶ ಹೊರಡಿಸಿರಲಿಲ್ಲ. ಭೂಮಿ ಎಲ್ಲಿದೆ ಎಂಬುದನ್ನು ಗುರುತಿಸಲೂ ಆಗಿರಲಿಲ್ಲ. ಈಗ ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಗೊಂದಲ ಪರಿಹಾರವಾಗಲಿದ್ದು ನಮ್ಮ ಸರ್ಕಾರದ ಅವಧಿಯಲ್ಲಿ ಕೈಗೊಂಡ ಮಹತ್ವದ ನಿರ್ಧಾರ’ ಎಂದರು. ‘ಗ್ರಾಮದ ಅಭಿವೃದ್ಧಿಗೆ ಜಾಗ ಮೀಸಲಿರಿಸಿಯೇ ಉಳಿದ ಜಾಗವನ್ನು ಬೆಳೆಗಾರರಿಗೆ ಗುತ್ತಿಗೆ ನೀಡಲಾಗುತ್ತದೆ. ಈಗ ಸರ್ಕಾರದ ಭೂಮಿ ಎಷ್ಟಿದೆ ಎಂಬುದೂ ಗೊತ್ತಾಗಲಿದೆ. ಇದೊಂದು ಒಳ್ಳೆಯ ತೀರ್ಮಾನ’ ಎಂದು ಹೇಳಿದರು.

Cut-off box - ಅಂಕಿ–ಅಂಶ ಜಿಲ್ಲೆ; ಗುತ್ತಿಗೆಗೆ ನೀಡಲು ಗುರುತಿಸಿರುವ ಜಾಗ(ಎಕರೆಗಳಲ್ಲಿ) ಹಾಸನ; 29348 ಉಡುಪಿ; 398 ಚಿಕ್ಕಮಗಳೂರು; 20844 ಕೊಡಗು; 26250 ಒಟ್ಟು; 76844

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT