ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಿಗೆರೆ: ಶ್ರೀನಿವಾಸ ತಿರುಕಲ್ಯಾಣೋತ್ಸವ 23ರಿಂದ

Published 19 ಡಿಸೆಂಬರ್ 2023, 14:17 IST
Last Updated 19 ಡಿಸೆಂಬರ್ 2023, 14:17 IST
ಅಕ್ಷರ ಗಾತ್ರ

ಮೂಡಿಗೆರೆ: ಪಟ್ಟಣದ ವೇಣುಗೋಪಾಲ ದೇವಾಲಯದಲ್ಲಿ ಡಿ. 23, 24ರಂದು ವೈಕುಂಠ ಏಕಾದಶಿ ಹಾಗೂ ಶ್ರೀನಿವಾಸ ತಿರುಕಲ್ಯಾಣೋತ್ಸವ ಏರ್ಪಡಿಸಲಾಗಿದೆ ಎಂದು ದೇವಾಲಯ ಸಮಿತಿ ಉಪಾಧ್ಯಕ್ಷ ಕೆ. ವೆಂಕಟೇಶ್ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಕುಂಠ ಏಕಾದಶಿ ಪ್ರಯುಕ್ತ ಡಿ. 23ರಂದು ಬೆಳಿಗ್ಗೆ ಶ್ರೀಕೃಷ್ಣ ಮೂರ್ತಿಗೆ ಶಂಖಧಾರ, ಚಕ್ರಧಾರ ಅಭಿಷೇಕ ನೆರವೇರಿದ ಬಳಿಕ ಸರ್ವಾಲಂಕಾರದೊಂದಿಗೆ ಬೆಳಿಗ್ಗೆ 5 ಗಂಟೆಗೆ ವೈಕುಂಠದ್ವಾರ ಪ್ರವೇಶ ನಡೆಸಲಾಗುವುದು. ಸಂಜೆ 6 ಗಂಟೆಗೆ ವೇಣುಗೋಪಾಲಸ್ವಾಮಿ, ಮಹಾಲಕ್ಷ್ಮಿ, ಮಹಾಗಣಪತಿ ದೇವರಿಗೆ ರಂಗಪೂಜೆಯೊಂದಿಗೆ ಸಹಸ್ರನಾಮ ಪೂರ್ವಕ ತುಳಸಿ ಅರ್ಚನೆ, ಅಷ್ಟಾವಧಾನ ಸೇವೆ, ಸರ್ವವಾದ್ಯದೊಂದಿಗೆ ಮಹಾ ಮಂಗಳಾರತಿ ನಂತರ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಹೇಳಿದರು.

24ರಂದು ಬೆಳಿಗ್ಗೆ ಆಂಜನೇಯ ಜಯಂತಿ ಹಾಗೂ ಶ್ರೀನಿವಾಸ ತಿರುಕಲ್ಯಾಣೋತ್ಸವ, ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಕಲಾಸಾನ್ನಿಧ್ಯ ಹೋಮ, ಮಧ್ಯಾಹ್ನ 12 ಗಂಟೆಗೆ ಕಲಶಾಭಿಷೇಕ, ನಂತರ ಮಹಾ ಮಂಗಳಾರತಿ, ಅನ್ನಸಂತರ್ಪಣೆ, ಸಂಜೆ ಮಂಗಳದ್ರವ್ಯ ಹಾಗೂ ಸರ್ವವಾದ್ಯದೊಂದಿಗೆ ಉತ್ಸವ ನೆರವೇರಲಿದೆ. ನಂತರ ಅಷ್ಟಾವಧಾನ ಸೇವೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವೇಣುಗೋಪಾಲಸ್ವಾಮಿ ದೇವಾಲಯವು ಮುಜರಾಯಿಗೆ ಸೇರಿದ್ದರೂ ಸರ್ಕಾರದಿಂದ ದೇವಾಲಯಕ್ಕೆ ಯಾವುದೇ ಅನುದಾನ ಲಭ್ಯವಾಗುತ್ತಿಲ್ಲ. ದೇವಸ್ಥಾನದ ಅಭಿವೃದ್ಧಿಗೆ ಹಿಂದಿನ ಶಾಸಕ ಎಂ.ಪಿ.ಕುಮಾರಸ್ವಾಮಿ ₹5 ಲಕ್ಷ, ಉಪಸಭಾಪತಿ ಎಂ.ಕೆ.ಪ್ರಾಣೇಶ್ ₹2 ಲಕ್ಷ, ಹಿಂದಿನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಧರ್ಮಪಾಲ್ ಅವರು ₹2 ಲಕ್ಷ ಅನುದಾನವನ್ನು ತಮ್ಮ ಅನುದಾನದಿಂದ ನೀಡಿದ್ದರು.

ದಾನಿಗಳ ಸಹಕಾರದಿಂದ ದೇವಾಲಯದಲ್ಲಿ ಇಂಟರ್‌ಲಾಕ್‌, ಬೋರ್‌ವೆಲ್‌, ಅಡುಗೆ ಮನೆ, ಕೇರಳ ಮಾದರಿಯ ಕಲ್ಯಾಣ ಮಂಟಪ ನಿರ್ಮಿಸಲಾಗಿದೆ. ಇಲ್ಲಿ ಕೃಷ್ಣಾಷ್ಟಮಿ, ಸತ್ಯನಾರಾಯಣ ಪೂಜೆ, ಆಂಜನೇಯ ಜಯಂತಿ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ದೇವಾಲಯ ಸಮಿತಿ ಕಾರ್ಯದರ್ಶಿ ಕುಮಾರ್, ವೆಂಕಟೇಶ್ ಉದುಸೆ, ಕೆ.ಎಸ್.ನಾಗರಾಜ್ ಕಂಠಿ, ಉಮಾಶಂಕರ್, ರಂಗನಾಥ್, ಅರ್ಚಕ ಮಹಾಬಲ ಕಾರಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT