ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಂದಿರ: ಶಂಕರ ಪರಂಪರೆ ಮಠಗಳಿಗೆ ಅಸಮಾಧಾನ ಇಲ್ಲ– ಸಚ್ಚಿದಾನಂದ ಸ್ವಾಮೀಜಿ

Published 12 ಜನವರಿ 2024, 12:31 IST
Last Updated 12 ಜನವರಿ 2024, 12:31 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ವಿಷಯದಲ್ಲಿ ಶಂಕರ ಗುರು ಪರಂಪರೆ ಮಠಗಳಿಗೆ ಕಿಂಚಿತ್ತೂ ಭಿನ್ನಾಭಿಪ್ರಾಯ ಇಲ್ಲ. ವದಂತಿಗಳಿಗೆ ಯಾರೂ ಕಿವಿಗೊಡಬಾರದು’ ಎಂದು ಹರಿಹರಪುರ ಮಠದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.

ಈ ಸಂಬಂಧ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಈ ವಿಷಯದಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಯಾರಾದರೂ ಅಸಮಾಧಾನಗೊಂಡಿದ್ದರೆ ಅದು ಅವರ ವೈಯಕ್ತಿಕ ವಿಷಯ’ ಎಂದು ಸ್ಪಷ್ಟಪಡಿಸಿದ್ದಾರೆ.

’ಶ್ರೀರಾಮನಿಗೂ, ಶಂಕರ ಪರಂಪರೆಗೂ ಏನು ಸಂಬಂಧ ಎಂಬುದನ್ನು ತಿಳಿದುಕೊಳ್ಳಬೇಕು. ಶಂಕರ ಪರಂಪರೆಯ ಮೂಲ ಪುರುಷರಾದ ಆದಿ ಶಂಕರರು ತಮ್ಮ ಅದ್ವೈತ ಸಿದ್ಧಾಂತದ ಮೂಲಕ ಪರಮಾತ್ಮನನ್ನು ತತ್ವ ಸ್ವರೂಪದಲ್ಲಿ ಆರಾಧಿಸುವ ಪದ್ಧತಿಯನ್ನು ಜಗತ್ತಿಗೆ ಕೊಟ್ಟಿದ್ದಾರೆ. ಹರಿ–ಹರ ಇಬ್ಬರು ಸಮಾನವಾದ ರೂಪಗಳು ಎಂದು ತಿಳಿಸಿದ್ದಾರೆ. ಈ ಇಬ್ಬರನ್ನು ಸಮಾನವಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸುವ ಏಕೈಕ ಪರಂಪರೆ ಎಂದರೆ ಶಂಕರ ಪರಂಪರೆ’.

ಹರಿ ಎಂದರೆ ಮಹಾವಿಷ್ಣುವಿನ ದಶಾತವಾರದಲ್ಲಿ ಏಳನೇ ಆವತಾರವೇ ಶ್ರೀರಾಮ. ಆದಿ ಶಂಕರರು ಶ್ರೀರಾಮಚಂದ್ರನ ಪರಮ ಭಕ್ತರಾಗಿದ್ದರು. ಭಜನೆ ಸೇರಿ ಅನೇಕ ಸ್ತೋತ್ರಗಳನ್ನ ರಚಿಸಿ ಶ್ರೀರಾಮನಿಗೆ ಅರ್ಪಣೆ ಮಾಡಿದ್ದಾರೆ. ಮಠಗಳಲ್ಲಿ ರಾಮಚಂದ್ರನ ಭಜನೆ ನಿರಂತರವಾಗಿ ನಡೆಸಿಕೊಂಡು ಹೋಗುವಂತೆ ಆದೇಶ ಕೊಟ್ಟಿದ್ದಾರೆ. ಆದ್ದರಿಂದ ಶಂಕರ ಪರಂಪರೆಯ ಮಠಗಳು ಶ್ರೀರಾಮನನ್ನು ಆರಾಧನೆ ಮಾಡಿಕೊಂಡು ಬರುತ್ತಿವೆ ಎಂದು ವಿವರಿಸಿದ್ದಾರೆ.

‘ಅಯೋಧ್ಯ ಶ್ರೀರಾಮಚಂದ್ರ ಎಂದರೆ ಭಾರತೀಯ ಸಂಸ್ಕೃತಿಗೆ ಸೇರಿದ ದೇವರು. ಈ ದೇಶದ ಹೆಮ್ಮೆಯ ಹೆಗ್ಗುರುತು ಮತ್ತು ದೇಶದ ಅಸ್ಮಿತೆ,  ಅಂತಹ ಶ್ರೀರಾಮ ಹುಟ್ಟಿದ್ದು ಅಯೋಧ್ಯೆಯಲ್ಲಿ ಪುರಾತನ ದೇವಾಲಯ ಇತ್ತು. ವಿದೇಶಿಗರ ಆಕ್ರಮಣದಿಂದ ಅದು ನಾಶವಾಗಿತ್ತು. ರಾಮಚಂದ್ರನ ಕೃಪೆಯಿಂದ 500 ವರ್ಷಗಳ ನಮ್ಮವರ ತ್ಯಾಗ, ಸಮರ್ಪಣಾ ಮನೋಭಾವದಿಂದ ಅದೇ ಸ್ಥಳದಲ್ಲಿ ಶ್ರೀರಾಮಚಂದ್ರ ನೆಲೆಸುತ್ತಿದ್ದಾನೆ. ಇದು ಸಮಸ್ತ ಭಾರತೀಯರಿಗೆ ಹೆಮ್ಮೆಯ ವಿಷಯ’ ಎಂದಿದ್ದಾರೆ.

ರಾಮಮಂದಿರ ಲೋಕಾರ್ಪಣೆ ಎಂಬುದು ಎಲ್ಲರ ಸ್ವಾಭಿಮಾನಕ್ಕೆ ಪ್ರತೀಕವಾಗಿರುವ ಅವಿಸ್ಮರಣೀಯ ಸಂದರ್ಭ. ಇದು ಎಲ್ಲರಿಗೂ ಸಂತೋಷ ಉಂಟು ಮಾಡುವ ವಿಷಯವಾಗಿದೆ. ಈ ವಿಷಯದಲ್ಲಿ ಶಂಕರ ಗುರು ಪರಂಪರೆಯ ಮಠಗಳಲ್ಲಿ ಯಾವುದೇ ಅಸಮಾಧಾನ ಇಲ್ಲ. ಎಲ್ಲರೂ ಪರಿಪೂರ್ಣವಾಗಿ ಆಶೀರ್ವಾದ ತಿಳಿಸಿದ್ದಾರೆ ಎಂದ್ದಾರೆ. 

‘ರಾಮಮಂದಿರ ಲೋಕಾರ್ಪಣೆಗೊಳ್ಳುವ ದಿನ ಎಲ್ಲಾ ಮಠಗಳಲ್ಲೂ ಶ್ರೀರಾಮಚಂದ್ರನ ಆರಾಧನೆ ಮಾಡಲು ಸಂಕಲ್ಪ ಮಾಡಿದ್ದೇವೆ. ಸನಾತನ ಹಿಂದೂ ಧರ್ಮದ ಎಲ್ಲರೂ ಸೇರಿ ಒಟ್ಟಾಗಿ ಪೂಜಿಸಬೇಕು. ಇದರಲ್ಲಿ ಜಾತಿ ಮತ್ತು ಪಕ್ಷವನ್ನು ಯಾವುದೇ ಕಾರಣಕ್ಕೂ ತರಬಾರದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT