ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರಸಿಂಹರಾಜಪುರ: ಕೈಬೀಸಿ ಕರೆಯುತ್ತಿದೆ ತಡಸ ಸೇತುವೆ

Published 26 ಮೇ 2024, 5:31 IST
Last Updated 26 ಮೇ 2024, 5:31 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಸದ್ಯ ಭದ್ರಾ ಹಿನ್ನೀರು ಕಡಿಮೆಯಾಗಿರುವುದರಿಂದ ಪುರಾತನ ತಡಸ ಸೇತುವೆ ಕಾಣಿಸುತ್ತಿದೆ. ನರಸಿಂಹರಾಜಪುರ ಪಟ್ಟಣದಿಂದ ಜೈಲ್ ರಸ್ತೆ ಮೂಲಕ 5 ರಿಂದ 6 ಕಿ.ಮೀ ಸಾಗಿದರೆ ಭದ್ರಾ ಹಿನ್ನೀರಿನ ವಿಶಾಲವಾದ ಪ್ರದೇಶ ಸಿಗುತ್ತದೆ. ಮುಂದೆ ಸಾಗಿದರೆ ಸಿಗುವುದೇ ಪುರಾತನ ತಡಸ ಸೇತುವೆ.

ಭದ್ರಾ ಅಣೆಕಟ್ಟೆಯನ್ನು ನಿರ್ಮಾಣ ಮಾಡುವ ಮೊದಲು ತಡಸ ಗ್ರಾಮ ಸಂಪೂರ್ಣ ಜನವಸತಿಯಿಂದ ಕೂಡಿತ್ತು. ಇಲ್ಲಿ ಭತ್ತವನ್ನು ಯಥೇಚ್ಛ ಪ್ರಮಾಣದಲ್ಲಿ ಬೆಳೆಯುತ್ತಿದ್ದುದರಿಂದ ಭತ್ತದ ಕಣಜ ಎಂದು ಹೆಸರು ಪಡೆದಿತ್ತು. ಈ ಸೇತುವೆ ಯಾವಾಗ ನಿರ್ಮಾಣವಾಯಿತು ಎಂಬುದರ ಬಗ್ಗೆ ನಿಖರಮಾಹಿತಿ ಇಲ್ಲ. ಸರ್.ಎಂ.ವಿಶ್ವೇಶ್ವರಯ್ಯ ದಿವಾನರಾಗಿದ್ದ ಕಾಲದಲ್ಲಿ ನಿರ್ಮಿಸಿರುವ ಸಾಧ್ಯತೆಯಿದೆ.

ತಡಸ ಸೇತುವೆಯನ್ನು ಸಂಪೂರ್ಣವಾಗಿ ದೇಶಿಯ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ. ಹಿಂದೆ ಸಿಮೆಂಟ್‌ ಅನ್ನು ವಿದೇಶಗಳಿಂದ ತರಿಸಬೇಕಾದ ಸ್ಥಿತಿಯಿತ್ತು. ಹಾಗಾಗಿ ದೇಶಿಯ ಎಂಜಿನಿಯರ್‌ಗಳು ಸುಣ್ಣ, ಇಟ್ಟಿಗೆ, ಮರಳು ಇದನ್ನು ನಿರ್ದಿಷ್ಟ ಪ್ರಮಾಣದಲ್ಲಿ ಬೆರೆಸಿ ನುಣ್ಣಗೆ ಅರೆದು ‘ಸುರ್ಕಿ’ ಗಾರೆ ತಯಾರಿಸುವ ವಿಧಾನ ಕಂಡುಕೊಂಡಿದ್ದರು. ಈ ಸೇತುವೆಯನ್ನು  ‘ಸುರ್ಕಿ’ ಗಾರೆ ಬಳಸಿ ನಿರ್ಮಿಸಲಾಗಿದೆ. ಭದ್ರಾ ಹಿನ್ನೀರಿನಲ್ಲಿ ಸುಮಾರು 70 ವರ್ಷ ನೀರಿನಲ್ಲಿ ಮುಳುಗಿದ್ದರೂ, ಇಂದಿಗೂ ಗಟ್ಟಿಮುಟ್ಟಾಗಿದ್ದು ಆಧುನಿಕ ತಂತ್ರಜ್ಞಾನ ಬಳಸಿ ನಿರ್ಮಿಸುವ ಸೇತುವೆಯನ್ನು ನಾಚಿಸುವಂತಿದೆ.

ತಡಸ ಸೇತುವೆಯ ಮೇಲೆ ಏಕಕಾಲದಲ್ಲಿ ಬಸ್ ಮತ್ತು ರೈಲು ಸಂಚರಿಸಲು (ರಸ್ತೆ ಮತ್ತು ರೈಲ್ವೆ ಟ್ರ್ಯಾಕ್) ಅವಕಾಶ ಕಲ್ಪಿಸಿರುವುದು ಆಗಿನ ಕಾಲದಲ್ಲಿಯೇ ಜನರಿಗೆ ಅತ್ಯುನ್ನತ ತಂತ್ರಜ್ಞಾನ ತಿಳಿದಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ಈ  ಸೇತುವೆ 9 ಕಮಾನಿನಿಂದ ಕೂಡಿರುವುದು ವೈಶಿಷ್ಟ್ಯವಾಗಿದೆ.

ತಡಸ ಸೇತುವೆಯ ಮೂಲಕ ತರೀಕೆರೆಗೆ ಕೇವಲ 42.18 ಕಿ.ಮೀ (26.6ಮೈಲು) ಆಗಿತ್ತು. ಈ ಮಾರ್ಗದ ಮೂಲಕ ತರೀಕೆರೆಯಿಂದ ನರಸಿಂಹರಾಜಪುರಕ್ಕೆ ಜನರನ್ನು ಮತ್ತು ಸರಕುಗಳನ್ನು ಸಾಗಿಸುವ ಟ್ರಾಂಬೆರೈಲು (2.0ಗೇಜ್) 1915, ಮೇ15ರಂದು ಪ್ರಾರಂಭಿಸಲಾಗಿತ್ತು. ಅಲ್ಲದೇ 1921 ಫೆಬ್ರುವರಿ 5ರಂದು ತಡಸದಿಂದ ಹೆಬ್ಬೆಯವರೆಗೆ 15.45 ಕಿ.ಮೀ (9.6ಮೈಲಿ) ಮಾರ್ಗದ ರೈಲ್ವೆ ಸಂಚಾರ ಆರಂಭಿಸಲಾಗಿತ್ತು. ಸರ್.ಎಂ.ವಿಶ್ವೇಶ್ವರಯ್ಯ ಅವರು ಆಗಿನ ಕಾಲದಲ್ಲಿಯೇ ತಡಸ ಮಾರ್ಗವಾಗಿ ಹೆಬ್ಬೆಯಿಂದ ಶೃಂಗೇರಿವರೆಗೆ ರೈಲ್ವೆ ಮಾರ್ಗ ನಿರ್ಮಿಸುವ ಉದ್ದೇಶ ಹೊಂದಿದ್ದರು ಎಂಬ ವಿಚಾರ 1970ರ ದಶಕದಲ್ಲಿ ಎಸ್‌ಎಸ್‌ಎಲ್‌ಸಿಗೆ  ಕನ್ನಡ ಪಠ್ಯವಾಗಿದ್ದ ‘ಭಾಗ್ಯ ಶಿಲ್ಪಿ’ ಎಂಬ ಸರ್.ಎಂ.ವಿಶ್ವೇಶ್ವರಯ್ಯ ಅವರ ಜೀವನ ಚರಿತ್ರೆ ಪಠ್ಯದಲ್ಲಿ ಪ್ರಸ್ತಾವಿತ್ತು ಎಂದು ಹೊನ್ನೆಕೂಡಿಗೆ ಗ್ರಾಮದ ಬಿ.ಎಂ.ಕೃಷ್ಣಯ್ಯ ತಾವು ಶಾಲಾ ದಿನದಲ್ಲಿ ಓದಿದ ವಿಚಾರವನ್ನು ನೆನಪು ಮಾಡಿಕೊಳ್ಳುತ್ತಾರೆ.

ಸಾಹಿತಿ ಎಸ್.ಎಲ್.ಬೈರಪ್ಪ ಅವರು ಬಾಲಕನಾಗಿದ್ದಾಗ ತಡಸದವರೆಗೆ ರೈಲಿನಲ್ಲಿ ಬಂದು ಇಲ್ಲಿಂದ ಶೃಂಗೇರಿಗೆ ನಡೆದು ಕೊಂಡು ಹೋದ ಬಗ್ಗೆ ಹಾಗೂ ಇಲ್ಲಿನ ಪರಿಸರದ ಬಗ್ಗೆರ ‘ಗೃಹಭಂಗ ’ ಕಾದಂಬರಿಯಲ್ಲಿ ಪ್ರಸ್ತಾಪವಿದೆ.1949ರಲ್ಲಿ ಭದ್ರಾ ಅಣೆಕಟ್ಟೆಯ ಹಿನ್ನೀರ ಪ್ರದೇಶಕ್ಕೆ ಇಲ್ಲಿನ ಪ್ರದೇಶ ಸೇರ್ಪಡೆಯಾಗಿದ್ದರಿಂದ ರೈಲು ಹಾಗೂ ರಸ್ತೆ ಸಂಚಾರ ಸ್ಥಗಿತಗೊಂಡಿತು.

ತಡಸ ಸೇತುವೆಯ ಎರಡು ಬದಿ ಅಗಲವಾದ ಕೈಪಿಡಿ ನಿರ್ಮಿಸಲಾಗಿತ್ತು. ಅದರ ಮೇಲೆ ಕೆಲವರು ಸೈಕಲ್ ಹೊಡೆಯುತ್ತಿದ್ದರು ಎಂದು ಗತ ಇತಿಹಾಸದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಹಿರಿಯರು. ಈ ಹಿಂದೆ ಭದ್ರಾಹಿನ್ನೀರು ಕಡಿಮೆಯಾದಾಗ ಇದನ್ನು ವೀಕ್ಷಿಸಲು ಹೋದ ಕೆಲವು ವಿಕೃತ ಮನಸ್ಸಿನವರು ಇದರ ಕೈಪಿಡಿಯನ್ನು ನೀರಿಗೆ ತಳ್ಳಿದ ಪರಿಣಾಮ ಕೈಪಿಡಿಯ ನೈಜ ಸ್ಥಿತಿ ಮಾಯವಾಗಿದೆ. ಅಭಯಾರಣ್ಯದ ವ್ಯಾಪ್ತಿಯಲ್ಲಿ ಈ ಸೇತುವೆ ಇರುವುದರಿಂದ ಅರಣ್ಯದಲ್ಲಿ ಕಳ್ಳಸಾಗಣೆ ನಡೆಯುತ್ತದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆಯವರು ಈ ಸೇತುವೆ ತುಂಡು ಮಾಡಲು ಪ್ರಯತ್ನ ನಡೆಸಿದ್ದು ಅದು ವಿಫಲವಾಗಿದೆ.

ಈ ಸೇತುವೆಯ ಮೂಲಕ 2–3 ಕಿಲೋಮೀಟರ್ ದುರ್ಗಮ ಅರಣ್ಯ ಪ್ರದೇಶದಲ್ಲಿ ಸಾಗಿದರೆ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಆಧುನಿಕ ಕಾಲದ ಸುಸಜ್ಜಿತ ಸೌಲಭ್ಯ ಹೊಂದಿದ್ದ ‘ಕವಲಾಪುರ’ ಬಂಗಲೆ ಇತ್ತು. ಸುಮಾರು 30ವರ್ಷಗಳ ಹಿಂದೆ ನೀರುಬಿಟ್ಟಾಗ ಅಲ್ಲಿಗೆ ಭೇಟಿ ನೀಡಿದಾಗ ಸುಸ್ಥಿಯಲ್ಲಿತ್ತು. ನಂತರದ ದಿನಗಳಲ್ಲಿ ವೀಕ್ಷಣೆಗೆ ಬಂದವರು ಅದರ ಒಂದೊಂದೆ ವಸ್ತುಗಳನ್ನು ಕಿತ್ತುಹಾಕಿರದರು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.

ಮಳೆ ಕಡಿಮೆಯಾದಾಗ ಪ್ರತಿ 10ವರ್ಷದಲ್ಲಿ ಎರಡು, ಮೂರು ಬಾರಿ ನೀರು ಕಡಿಮೆಯಾದಾಗ ನೀರಿನಲ್ಲಿ ಮುಳುಗಿರುವ ಪುರಾತನ ಸೇತುವೆ ತನ್ನ ಗತವೈಭವನ್ನು ತೋರಿಸುತ್ತದೆ. ಭದ್ರಾ ಅಣೆಕಟ್ಟನ್ನು ಬಿ.ಆರ್.ಪಿಯಲ್ಲಿ ನಿರ್ಮಿಸದೆ ಅದರ ಮೂಲ ಸ್ಥಳವಾದ ಮಾಗುಂಡಿಯಲ್ಲಿಯೇ ನಿರ್ಮಿಸಿದ್ದರೆ ಈ ಭಾಗದ ಜನವಸತಿ, ಕೃಷಿ, ಅತ್ಯಮೂಲಕ್ಯ ಔಷಧಿ ಗುಣಗಳುಳ್ಳ ಗಿಡಮೂಲಿಕೆಗಳು, ಖನಿಜದ ನಿಕ್ಷೇಪ, ಹತ್ತಿರದ ಸಂಪರ್ಕ ಮಾರ್ಗ, ರೈಲ್ವೆ ಮಾರ್ಗ ಎಲ್ಲವೂ ಉಳಿಯುತ್ತಿತ್ತು ಎನ್ನುತ್ತಾರೆ ಸಮೀಪದ ನಿವಾಸಿಗಳು.

ನರಸಿಂಹರಾಜಪುರ ತಾಲ್ಲೂಕು ಭದ್ರಾಹಿನ್ನೀರಿನಲ್ಲಿ ಮುಳುಗಿರುವ ಈ ಸೇತುವೆ ಮೇಲೆ ಏಕಕಾಲದಲ್ಲಿ ಬಸ್ ಮತ್ತು ರೈಲ್ವೆ ಸಂಚರಿಸುತ್ತಿದ್ದವು
ನರಸಿಂಹರಾಜಪುರ ತಾಲ್ಲೂಕು ಭದ್ರಾಹಿನ್ನೀರಿನಲ್ಲಿ ಮುಳುಗಿರುವ ಈ ಸೇತುವೆ ಮೇಲೆ ಏಕಕಾಲದಲ್ಲಿ ಬಸ್ ಮತ್ತು ರೈಲ್ವೆ ಸಂಚರಿಸುತ್ತಿದ್ದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT