ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕಮಗಳೂರು | ಅಯ್ಯನಕೆರೆಯಲ್ಲಿ ಬೋಟಿಂಗ್: ಪ್ರವಾಸಿಗರ ದಂಡು

ರಘು ಕೆ.ಜಿ.
Published 19 ಜನವರಿ 2024, 7:10 IST
Last Updated 19 ಜನವರಿ 2024, 7:10 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಸುತ್ತಲೂ ಬೆಟ್ಟ–ಗುಡ್ಡಗಳ ಹಸಿರಿನ ಸಾಲು, ನಡುವೆ ವಿಶಾಲವಾದ ಕೆರೆ, ಅದರಲ್ಲಿ ಆಟವಾಡಲು ಪ್ರವಾಸಿಗರ ತವಕ.. ಈ ದೃಶ್ಯ ಕಂಡು ಬಂದಿದ್ದು ಸಖರಾಯಪಟ್ಟಣ ಸಮೀಪ ಇರುವ ಐತಿಹಾಸಿಕ ಅಯ್ಯನಕೆರೆಯಲ್ಲಿ.

ಇಲ್ಲಿನ ಪ್ರಸಿದ್ಧ ಶಕುನ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ ಬೆಂಗಳೂರು ಹಾಗೂ ದೇವಾಲಯ ವ್ಯವಸ್ಥಾಪನಾ ಮತ್ತು ಅಭಿವೃದ್ಧಿ ಸಮಿತಿ ಸಂಯುಕ್ತಾಶ್ರಯದಲ್ಲಿ ಆರು ದಿನಗಳವರೆಗೆ ಪ್ರವಾಸಿಗರು, ಸಾರ್ವಜನಿಕರಿಗಾಗಿ ಜಲ ಸಾಹಸ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಮನರಂಜನೆಗಾಗಿ ಪಾಲ್ಗೊಳ್ಳಲು ವಿವಿಧ ಕಡೆಗಳಿಂದ ನಿತ್ಯ ಸಾವಿರಕ್ಕೂ ಅಧಿಕ ಮಂದಿ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.

ವಿಶಾಲವಾದ ಅಯ್ಯನಕೆರೆಯಲ್ಲಿ ಸ್ಪೀಡ್ ಬೋಟ್‌, ಕಯಾಕಿಂಗ್‌, ರಾಫ್ಟಿಂಗ್‌, ಜೆಟ್‌ಸ್ಕಿ ಹಾಗೂ ಬನಾನ ಬೋಟ್‌ ಒಳಗೊಂಡ ವಿವಿಧ ಬಗೆಯ ಜಲ ಸಾಹಸ ಕ್ರೀಡೆಗಳು ಬೆಳಿಗ್ಗೆ 10ಗಂಟೆಯಿಂದ ಆರಂಭವಾಗಿ ಸಂಜೆ 5ರ ವರೆಗೆ ನಡೆಯಲಿದೆ.

ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿಯ ಪರಿಣಿತ ಈಜು ತರಬೇತುದಾರರು, ಸ್ವಯಂ ಸೇವಕ ಸಿಬ್ಬಂದಿ ಇಲ್ಲಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ. ಬರುವ ಪ್ರವಾಸಿಗರಿಗೆ ನೀರಿಗೆ ಇಳಿಯುವ ಮುನ್ನಾ ಸುರಕ್ಷತಾ ಕವಚ ತೊಡಿಸಿ ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ. ಜಾತ್ರಾ ಮಹೋತ್ಸವಕ್ಕೆ ಚಿಕ್ಕಮಗಳೂರು ಸುತ್ತಮುತ್ತಲಿನ ವಿವಿಧ ಜಿಲ್ಲೆಗಳಿಂದ ಬರುವ ಸಾವಿರಾರು ಭಕ್ತರು, ಪ್ರವಾಸಿಗರು, ಮಹಿಳೆಯರು, ಮಕ್ಕಳು ಒಳಗೊಂಡಂತೆ ಕುಟುಂಬ ಸಮೇತ ಅಯ್ಯನಕೆರೆಗೆ ಭೇಟಿ ನೀಡಿ ಇಲ್ಲಿನ ರಮ್ಯತಾಣವನ್ನು ಆನಂದಿಸಿ ಜಲಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿ ಮೈಮನವನ್ನು ತಣಿಸಿಕೊಳ್ಳುತ್ತಿದ್ದಾರೆ.

ಇದೇ 15ರಿಂದ ಜಲಸಾಹಸ ವಿವಿಧ ಕ್ರೀಡೆಗಳು ಆರಂಭವಾಗಿವೆ. ಜೆಟ್‌ಸ್ಕಿ ₹150, ಬನಾನ ಬೋಟ್‌ ₹100, ರಾಫ್ಟಿಂಗ್, ಕಯಾಕಿಂಗ್‌ ಹಾಗೂ ಸ್ಪೀಡ್‌ ಬೋಟ್‌ ರೈಟ್‌ಗೆ ಒಬ್ಬರಿಗೆ ₹50 ಶುಲ್ಕ ನಿಗದಿಪಡಿಸಲಾಗಿದೆ. ಈವರೆಗೆ 2 ಸಾವಿರಕ್ಕೂ ಅಧಿಕ ಮಂದಿ ಕ್ರೀಡೆಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಸ್ವಯಂ ಸೇವಕ ನಿರ್ವಾಹಕ ಎಚ್‌.ಎಸ್‌. ಶಿವಕುಮಾರ್ ತಿಳಿಸಿದರು.

‘ಪ್ರವಾಸಿಗರಿಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಕಡಿಮೆ ಶುಲ್ಕ ನಿಗದಿಪಡಿಸಿದೆ. ಈಗಾಗಲೇ ಐದು ದಿನಗಳು ಕಳೆದಿದ್ದು, ಪ್ರವಾಸಿಗರ ಸಂಖ್ಯೆ ಅಧಿಕವಾಗುತ್ತಿದೆ. ಭಾನುವಾರದವರೆಗೂ ವಿಸ್ತರಣೆ ಮಾಡುವಂತೆ ಬೇಡಿಕೆ ಹೆಚ್ಚುತ್ತಿದೆ’ ಎಂದು ಅವರು ಹೇಳಿದರು.

‘ಕುಟುಂಬ ಸಮೇತರಾಗಿ ಜಾತ್ರಾ ಮಹೋತ್ಸವಕ್ಕೆ ಬಂದಿದ್ದೇವೆ. ಮಕ್ಕಳು, ಮನೆಮಂದಿಯೆಲ್ಲ ಅಯ್ಯನಕೆರೆಯ ಜಲಸಾಹಸ ಕ್ರೀಡೆಗಳಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ. ದೇವಾಲಯದ ಜತೆಗೆ ಉತ್ತಮ ಪರಿಸರ ಇದೆ. ಆನಂದವಾಗಿ ಕಾಲ ಕಳೆಯಲು ಉತ್ತಮ ಜಾಗ’ ಎಂದು ಪ್ರವಾಸಿಗರೊಬ್ಬರು ಅನುಭವ ಹಂಚಿಕೊಂಡರು.

ಅಯ್ಯನಕೆರೆಯಲ್ಲಿ ಪ್ರವಾಸಿಗರು ಬೋಟಿಂಗ್‌ ಮಾಡಿ ಸಂತಸಪಟ್ಟರು
ಅಯ್ಯನಕೆರೆಯಲ್ಲಿ ಪ್ರವಾಸಿಗರು ಬೋಟಿಂಗ್‌ ಮಾಡಿ ಸಂತಸಪಟ್ಟರು
ಅಯ್ಯನಕೆರೆಯ ಜಲಸಾಹಸ ಕ್ರೀಡೆಗಳಿಗೆ ಪ್ರವಾಸಿಗರಿಂದ ಉತ್ತಮ ಸ್ಪಂದನೆ ದೊರೆತಿದೆ. ಈವರೆಗೂ 2 ಸಾವಿರ ಮಂದಿ ಭಾಗವಹಿಸಿದ್ದಾರೆ. ಜಿಲ್ಲಾಡಳಿತದ ಅನುಮತಿ ಮೇರೆಗೆ ಭಾನುವಾರದವರೆಗೂ ಜಲಸಾಹಸ ಕ್ರೀಡೆ ವಿಸ್ತರಣೆ ಮಾಡಲಾಗುವುದು
ಎಚ್.ಪಿ. ಮಂಜುಳಾ ಹುಲ್ಲಹಳ್ಳಿ ಉಪನಿರ್ದೇಶಕಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ
ಶಕುನ ರಂಗನಾಥ ಸ್ವಾಮಿ ಜಾತ್ರೆಗೆ ಪ್ರತಿ ವರ್ಷ ಸಖರಾಯಪಟ್ಟಣಕ್ಕೆ ಬರುತ್ತೇನೆ. ಅಯ್ಯನಕೆರೆಯಲ್ಲಿ ಜಲಸಾಹಸ ಕ್ರೀಡೆಗಳಲ್ಲಿ ಕುಟುಂಬ ಸ್ನೇಹಿತರೆಲ್ಲ ಸೇರಿ ಆಟವಾಡಿದ್ದು ಖುಷಿ ತಂದಿದೆ
ಲೋಹಿತ್ ಪ್ರವಾಸಿಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT