ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ಬೆಳಕಿಗೆ ಬಾರದೆ ಕತ್ತಲಲ್ಲೇ ಸರಿಯಿತೇ ಕುಟುಂಬ..

Published 31 ಡಿಸೆಂಬರ್ 2023, 7:21 IST
Last Updated 31 ಡಿಸೆಂಬರ್ 2023, 7:21 IST
ಅಕ್ಷರ ಗಾತ್ರ

ಚಿತ್ರದುರ್ಗ: ರಾಜ್ಯದಲ್ಲೇ ತಲ್ಲಣ ಸೃಷ್ಟಿಸಿರುವ ಐವರು ವ್ಯಕ್ತಿಗಳ ಅಸ್ಥಿಪಂಜರ ಪತ್ತೆ ಪ್ರಕರಣದ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. ಘಟನೆ ಬೆಳಕಿಗೆ ಬಂದ ಕ್ಷಣದಿಂದ ಜನರು ಚರ್ಚೆಯಲ್ಲಿ ಮುಳುಗಿದ್ದರೆ, ಇತ್ತ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ತೀವ್ರಗೊಳಿಸಿದ್ದಾರೆ.

ಅಸ್ಥಿಪಂಜರ ಪತ್ತೆಯಾದ ಸುದ್ದಿ ಶುಕ್ರವಾರ ಬೆಳಿಗ್ಗೆ ಕಾಡ್ಗಿಚ್ಚಿನಂತೆ ವ್ಯಾಪಿಸಿತು. ಮುಂಜಾನೆ ಚಳಿಯನ್ನು ಲೆಕ್ಕಿಸದೆ ಜನರು ನಗರದ ಕಾರಾಗೃಹ ರಸ್ತೆಯ ಮನೆಯ ಮುಂದೆ ಜಮಾಯಿಸಿದ್ದರು. ಇದೇ ವಾತಾವರಣ ಶನಿವಾರ ಸಹ ಕಂಡುಬಂತು. 

ನಿವೃತ್ತ ಸಿವಿಲ್ ಎಂಜಿನಿಯರ್ ಎನ್‌.ಕೆ.ಜಗನ್ನಾಥ ರೆಡ್ಡಿ (85), ಅವರ ಪತ್ನಿ ಪ್ರೇಮಲೀಲಾ (74), ಪುತ್ರಿ ಎನ್‌.ಜೆ.ತ್ರಿವೇಣಿ (56), ಪುತ್ರರಾದ ಎನ್‌.ಜೆ. ಕೃಷ್ಣ (53), ಎನ್‌.ಜೆ.ನರೇಂದ್ರ (51) ಅವರು ಕಳೆದ ಎಂಟತ್ತು ವರ್ಷಗಳಿಂದ ಸಂಬಂಧಿಕರು, ಸಾರ್ವಜನಿಕರ ಸಂಪರ್ಕದಿಂದ ಉದ್ದೇಶ ಪೂರ್ವಕವಾಗಿ ದೂರ ಉಳಿದಿದ್ದರು. ಯಾರೇ ಬಂದರೂ, ಈ ಮನೆಯಲ್ಲಿ ಯಾರೂ ಇಲ್ಲವೆಂದು ಹೊರಟುಹೋಗಲಿ ಎಂಬ ಉದ್ದೇಶದಿಂದ ಅಂಗಳದ ಕಸ ಹಾಗೂ ಕಾಂಪೌಂಡ್‌ ಸ್ವಚ್ಛತೆಯನ್ನೇ ಮಾಡುತ್ತಿರಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

‘ಅನಾರೋಗ್ಯ, ಮಕ್ಕಳ ಮದುವೆ ವಿಳಂಬ, ದರೋಡೆ ಕೃತ್ಯದಲ್ಲಿ ಭಾಗಿಯಾಗಿದ್ದ ಮಗ, ಅಪಘಾತದಲ್ಲಿ ಮೃತಪಟ್ಟಿದ್ದ ಪುತ್ರನ ನೋವಿನಲ್ಲಿದ್ದ ಕುಟುಂಬ ಸಾರ್ವಜನಿಕವಾಗಿ ಕಾಣಿಸದೆ ವರ್ಷಗಳೇ ಉರುಳಿದ್ದವು. ಸ್ವಯಂ ಗೃಹ ಬಂಧನ ವಿಧಿಸಿಕೊಂಡಿದ್ದ ಅವರು, ಮನೆಗೆ ಬೇಕಾದ ಸಾಮಗ್ರಿ ಖರೀದಿ ಮಾಡಲು ಸದಸ್ಯರು ಕತ್ತಲನ್ನೇ ಕಾಯುತ್ತಿದ್ದರು. ತರಕಾರಿ, ದಿನಸಿಯನ್ನು ವಾರಕೊಮ್ಮೆ, ರಾತ್ರಿ 9ರ ಬಳಿಕ ಇಲ್ಲವೇ ಮುಂಜಾನೆ 5 ಗಂಟೆ ವೇಳೆಗೆ ಮಾರುಕಟ್ಟೆಗೆ ತೆರಳಿ ಖರೀದಿಸಿ ಪುನಃ ಮನೆ ಸೇರುತ್ತಿದ್ದರು’ ಎನ್ನುತ್ತಾರೆ ಸ್ಥಳೀಯರು.

ಈ ವಿಚಾರವಾಗಿ ಸುದ್ದಿಗಾರರ ಜತೆ ಮಾತನಾಡಿದ ಸೊಸೆ ಕೊಲ್ಲಿ ಲಕ್ಷ್ಮಿ, ‘ತುಮಕೂರಿನಲ್ಲಿ ವೃತ್ತಿ ಬದುಕು ಪ್ರಾರಂಭಿಸಿದ ಬಳಿಕ ಊರಿನ ಮನೆಯನ್ನು ಜಗನ್ನಾಥ ರೆಡ್ಡಿ ಮಾರಾಟ ಮಾಡಿದ್ದರು. ನಿವೃತ್ತಿ ಬಳಿಕ ಜೈಲು ರಸ್ತೆಯ ಈ ಮನೆಯನ್ನು ಕಟ್ಟಿಸಿದ್ದರು. 20 ವರ್ಷದ ಹಿಂದೆ ಸಮಾರಂಭಗಳಿಗೆ ಅತ್ತೆ, ಮಾವ ಬರುತ್ತಿದ್ದರು. ಮಗಳ ಮದುವೆ ಮಾಡಲಾಗುತ್ತಿಲ್ಲ ಎಂಬ ದುಃಖದಲ್ಲಿದ್ದರು. ತ್ರಿವೇಣಿ, ಕೃಷ್ಣನನ್ನು ಮಾತ್ರ ನೋಡಿದ್ದೆ. ಇನ್ನಿಬ್ಬರು ಮಕ್ಕಳನ್ನು ನಾನು ನೋಡಿಲ್ಲ. ಎಲ್ಲರೂ ಉತ್ತಮ ವಿದ್ಯಾಭ್ಯಾಸ ಮಾಡಿದ್ದರು. ಆದರೆ ವಿಧಿ ಇಂತಹ ಸ್ಥಿತಿಗೆ ತಂದು ನಿಲ್ಲಿಸಿದೆ’ ಎನ್ನುತ್ತಲೇ ಉಮ್ಮಳಿಸಿ ಬರುತ್ತಿದ್ದ ದುಃಖವನ್ನು ನುಂಗಿಕೊಂಡರು.

ಮರಣೋತ್ತರ ಪರೀಕ್ಷೆ ಬಳಿಕ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿ ಅಂತ್ಯಕ್ರಿಯೆ ನಡೆಸಲಾಯಿತು. ದಾವಣಗೆರೆ ವಿಧಿವಿಜ್ಞಾನ ಪ್ರಯೋಗಲಾಯದಿಂದ ವರದಿ ಬಂದ ಬಳಿಕ ಎಲ್ಲ ಪ್ರಶ್ನೆ, ಅನುಮಾನಕ್ಕೆ ತೆರೆ ಬೀಳುವ ನಿರೀಕ್ಷೆಯಿದೆ. 

‘ಮರಣಪತ್ರ ಅಲ್ಲ ಕಾಗದ!’

ಈ ಎಲ್ಲದರ ನಡುವೆ ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಅನುಮಾನ ವ್ಯಕ್ತವಾಗಿದೆ. 2019ರಲ್ಲಿ ಬರೆದಿಟ್ಟಿದ್ದು ಎನ್ನಲಾದ ಮರಣಪತ್ರವೊಂದು ಸಿಕ್ಕಿದ್ದು ಅದರಲ್ಲಿ ಇಬ್ಬರ ಹೆಸರುಗಳನ್ನು ಬರೆಯಲಾಗಿದೆ ಎನ್ನಲಾಗಿದೆ. ಊರಿನ ಸಮೀಪದ ಜಮೀನಿನ ವಿಚಾರದಲ್ಲಿ ಇವರಿಗೆ ಮೋಸವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಮರಣಪತ್ರ ಸಿಕ್ಕಿದೆ ಎಂಬುದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಅಸ್ಥಿಪಂಜರಗಳು ಇದ್ದ ಸ್ಥಳದಲ್ಲಿ ಸಿಕ್ಕ ಕಾಗದವನ್ನು ಮರಣಪತ್ರ ಎನ್ನಲು ಸಾಧ್ಯವಿಲ್ಲ. ತನಿಖಾ ತಂಡ ಪ್ರಕರಣದ ತನಿಖೆ ಚುರುಕುಗೊಳಿಸಿದ್ದು ಸಾಕ್ಷ್ಯಗಳ ಸಂಗ್ರಹದಲ್ಲಿ ನಿರತವಾಗಿದೆ ಎಂದು ಅವರು ತಿಳಿಸಿದರು.

ದೇಹ ಸಂಪೂರ್ಣ ಕೊಳೆತ ಕಾರಣ ಸಾವಿನ ಕಾರಣ ತಿಳಿದಿಲ್ಲ. ದೇಹದ ಕೆಲ ಭಾಗಗಳನ್ನು ಸಂಗ್ರಹಿಸಿ ಎಫ್‌ಎಸ್‌ಎಲ್‌ಗೆ ಕಳಿಸಿದ್ದೇವೆ. ಕೆಮಿಕಲ್ ಮತ್ತು ಡಿಎನ್ಎ ಪರೀಕ್ಷೆ ನಡೆಸಿದ ಬಳಿಕ ನಿಖರ ಮಾಹಿತಿ ತಿಳಿಯಲಿದೆ.
ಡಾ.ವೇಣು, ವೈದ್ಯ
ಸರ್ಕಾರಿ ಎಂಜಿನಿಯರ್‌ ಆಗಿದ್ದ ಜಗನ್ನಾಥ ರೆಡ್ಡಿ ಮಕ್ಕಳನ್ನು ಚೆನ್ನಾಗಿ ಓದಿಸಿದ್ದನು. ಬಹಳ ಸೂಕ್ಷ್ಮ ಮನಸ್ಸಿನ ವ್ಯಕ್ತಿತ್ವದವರು. ಮಕ್ಕಳ ವಿವಾಹ ವಿಚಾರದಲ್ಲಿ ಗಂಡ–ಹೆಂಡತಿ ಬಹಳ ನೊಂದಿದ್ದರು. ಸಂಬಂಧಿಕರಿಂದ ದೂರವಾಗಿ ವರ್ಷಗಳೇ ಕಳೆದಿದ್ದವು.
ತಿಮ್ಮಾರೆಡ್ಡಿ, ಸಹೋದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT