ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ | ನಿರ್ವಹಣೆ ಸಮಸ್ಯೆ ಸುಳಿಗೆ ಮಿನಿ ಟ್ಯಾಂಕ್‌ಗಳು

ಕುಡಿಯುವ ನೀರಿಗೆ ಸ್ವಚ್ಛತೆ ಸವಾಲು; ಹಾಳಾಗಿವೆ ನಲ್ಲಿಗಳು
Published 3 ಜೂನ್ 2024, 7:47 IST
Last Updated 3 ಜೂನ್ 2024, 7:47 IST
ಅಕ್ಷರ ಗಾತ್ರ

ಚಿತ್ರದುರ್ಗ: ಕಿತ್ತು ಹೋದ ನಲ್ಲಿಗಳು, ಸಮೀಪದ ಗುಂಡಿಯಲ್ಲಿ ನಿಂತ ಮಲಿನ ನೀರು, ನಲ್ಲಿ ಸ್ಥಾನ ಆವರಿಸಿರುವ ತೆಂಗಿನ ನಾರು, ಕಳೆ ಬಟ್ಟೆ, ಮರದ ತುಂಡು, ಸದಾ ಪೋಲಾಗುವ ನೀರು..

ಇದು ಜಿಲ್ಲೆಯ ನೀರಿನ ಮಿನಿ ಟ್ಯಾಂಕ್‌ಗಳ ದುಃಸ್ಥಿತಿ.

ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಿನಿ ಟ್ಯಾಂಕ್‌ಗಳು ಸಂಪೂರ್ಣ ಹಾಳಾಗಿವೆ. ನಗರದ ದೊಡ್ಡಪೇಟೆ, ಕಬೀರಾನಂದ ಆಶ್ರಮ, ಕಾಮನಬಾವಿ ಬಡಾವಣೆ, ಬಡಾಮಕಾನ್‌, ಜೆಜೆ ಹಟ್ಟಿ, ಜೆಸಿಆರ್‌, ಜೋಗಿಮಟ್ಟಿ ರಸ್ತೆ, ಐಯುಡಿಪಿ ಲೇಔಟ್‌ ಸೇರಿದಂತೆ ಬಹುತೇಕ ಭಾಗಗಳಲ್ಲಿ ನೀರಿನ ಟ್ಯಾಂಕ್‌ಗಳ ನಳಗಳು ಹಾಳಾಗಿವೆ. ಇದರಿಂದ ನೀರು ವ್ಯರ್ಥವಾಗುತ್ತಿದೆ.

ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಸ್ಥಳೀಯ ಆಡಳಿತ, ಜಿಲ್ಲಾ ಪಂಚಾಯಿತಿಯಿಂದ ನಿರ್ಮಿಸಲಾಗಿದೆ. ನಿತ್ಯ ಟ್ಯಾಂಕ್‌ಗಳಿಗೆ ಬೋರ್‌ವೆಲ್‌ನಿಂದ ನೀರು ಪೂರೈಸಲಾಗುತ್ತದೆ. ಆದರೆ, ಟ್ಯಾಂಕ್‌ನ ನಳಗಳು ಹಾಳಾಗಿರುವುದರಿಂದ ನೀರು ಪೋಲಾಗುತ್ತಿದೆ. ನೀರು ವ್ಯರ್ಥವಾಗುವುದನ್ನು ತಡೆಯಲು ತೆಂಗಿನ ನಾರು, ಮೆಕ್ಕೆಜೋಳದ ದಂಟನ್ನು ಪೈಪ್‌ಗೆ ಡ್ಡಲಾಗಿ ಇರಿಸಲಾಗುತ್ತಿದೆ. ಆದರೂ ನೀರು ವ್ಯರ್ಥವಾಗುತ್ತಿದೆ.

ಬರದ ಕಾರಣಕ್ಕೆ ಮಿನಿ ಟ್ಯಾಂಕ್‌ಗಳಿಗೆ ನೀರನ್ನು ಭರ್ತಿ ಮಾಡಿ ಪೂರೈಸಲಾಗುತ್ತಿತ್ತು. ಆದರೆ ನೀರಿನ ಹಂಚಿಕೆ, ಪೂರೈಕೆ ವ್ಯವಸ್ಥೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲು ನಗರ ಸ್ಥಳೀಯ ಸಂಸ್ಥೆಗಳು ಉತ್ಸುಕತೆ ತೋರದ ಕಾರಣ ಸಾರ್ವಜನಿಕರು ಸಮಸ್ಯೆ ಎದುರಿಸುವಂತಾಗಿದೆ.

ಒಂದು ಬಿಂದಿಗೆ ನೀರಿಗೂ ಜನರು ಪರದಾಡುವ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಮಿನಿ ಟ್ಯಾಂಕ್‌ಗಳು ಕೊಳವೆ ಬಾವಿ ನೀರನ್ನು ಆವಲಂಬಿಸಿವೆ. ಲೆಕ್ಕದಲ್ಲಿ ಎರಡು ದಿನಕ್ಕೊಮ್ಮೆ ಇದ್ದರೂ ನಾಲ್ಕು ದಿನ, ಆರು ದಿನ, ಎಂಟು ದಿನಕ್ಕೊಮ್ಮೆ ಸರದಿಯ ಪ್ರಕಾರ ಬಡಾವಣೆಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೆ, ನಿರ್ವಹಣೆ ಇಲ್ಲದೆ ನೀರು ಪೋಲಾಗುತ್ತಿದೆ.

ನಗರದ ಕೊಳಚೆ ಪ್ರದೇಶಗಳ ಟ್ಯಾಂಕ್‌ಗಳ ಸ್ಥಿತಿ ಹೇಳತೀರದಾಗಿದೆ. ಬಹುತೇಕ ಕಡೆ ನಲ್ಲಿಗಳು, ಸಿಮೆಂಟ್‌ ಮುಚ್ಚಳಿಕೆಗಳೇ ಕಾಣೆಯಾಗಿವೆ. ಇನ್ನೂ ಕೆಲವೆಡೆ ಟ್ಯಾಂಕ್‌ಗೆ ಆಳವಡಿಸಿದ ಕಬ್ಬಿಣದ ಪೈಪ್‌ಗಳನ್ನು ಕಿತ್ತು ಹಾಕಲಾಗಿದೆ.

ಕೊಳವೆ ಬಾವಿಯಿಂದ ನೀರು ಪೂರೈಸುತ್ತಿದ್ದಂತೆಯೇ ನೀರು ಚರಂಡಿಗೆ ಹರಿಯುತ್ತಿದೆ. ಕವಾಡಿಗರ ಹಟ್ಟಿ ದುರ್ಘಟನೆ ಬಳಿಕ ಜಿಲ್ಲೆಯ ಎಲ್ಲ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಜಿಲ್ಲಾಡಳಿತ ಆದೇಶಿಸಿತ್ತು. ಆದರೆ ಕೆಲ ದಿನದ ಬಳಿಕ ಪುನಃ ನಿರ್ವಹಣೆ ಸಮಸ್ಯೆ ಎದುರಿಸುವಂತಾಗಿದೆ.

ಚಿತ್ರದುರ್ಗ ನಗರದ ಕಬೀರಾನಂದ ಬಡಾವಣೆಯಲ್ಲಿ ಸಂಪೂರ್ಣ ಹಾಳಾಗಿರುವ ಮಿನಿ ಟ್ಯಾಂಕ್‌
ಚಿತ್ರದುರ್ಗ ನಗರದ ಕಬೀರಾನಂದ ಬಡಾವಣೆಯಲ್ಲಿ ಸಂಪೂರ್ಣ ಹಾಳಾಗಿರುವ ಮಿನಿ ಟ್ಯಾಂಕ್‌
ನಾಯಕನಹಟ್ಟಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಚರಂಡಿ ಪಕ್ಕದಲ್ಲಿರುವ ಕುಡಿಯುವ ನೀರಿನ ಮಿನಿ ಟ್ಯಾಂಕ್‌ ದುಃಸ್ಥಿತಿ
ನಾಯಕನಹಟ್ಟಿ ಪಟ್ಟಣದ ಅಂಬೇಡ್ಕರ್ ನಗರದಲ್ಲಿ ಚರಂಡಿ ಪಕ್ಕದಲ್ಲಿರುವ ಕುಡಿಯುವ ನೀರಿನ ಮಿನಿ ಟ್ಯಾಂಕ್‌ ದುಃಸ್ಥಿತಿ
ಹಿರಿಯೂರು ತಾಲ್ಲೂಕಿನ ಬುರುನರೊಪ್ಪ ಗ್ರಾಮದಿಂದ ಭರಂಪುರ ಕಡೆ ಹೋಗುವ ರಸ್ತೆ ಬದಿಯಲ್ಲಿ ಕೊಳಚೆ ನೀರು ನಿಂತಿರುವುದು
ಹಿರಿಯೂರು ತಾಲ್ಲೂಕಿನ ಬುರುನರೊಪ್ಪ ಗ್ರಾಮದಿಂದ ಭರಂಪುರ ಕಡೆ ಹೋಗುವ ರಸ್ತೆ ಬದಿಯಲ್ಲಿ ಕೊಳಚೆ ನೀರು ನಿಂತಿರುವುದು
ಎಸ್‌.ಜೆ.ಸೋಮಶೇಖರ್‌
ಎಸ್‌.ಜೆ.ಸೋಮಶೇಖರ್‌
ಎಂ.ರೇಣುಕಾ
ಎಂ.ರೇಣುಕಾ
ಸರೋಜಮ್ಮ
ಸರೋಜಮ್ಮ

ಜಿಲ್ಲೆಯ ಮಿನಿ ಟ್ಯಾಂಕ್‌ಗಳ ಸ್ವಚ್ಛತೆ ನಿರ್ವಹಣೆ ಬಗ್ಗೆ ಶೀಘ್ರ ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಪೈಪ್‌ಲೈನ್‌ ನಲ್ಲಿ ನೀರು ಹರಿಯುವ ಸ್ಥಳದಲ್ಲಿ ತೊಂದರೆಯಿದ್ದರೆ ಶೀಘ್ರ ಸರಿಪಡಿಸಲಾಗುತ್ತದೆ

- ಎಸ್‌.ಜೆ.ಸೋಮಶೇಖರ್‌ ಜಿಲ್ಲಾ ಪಂಚಾಯಿತಿ ಸಿಇಒ

ನಗರದಲ್ಲಿರುವ ನೀರಿನ ಮಿನಿ ಟ್ಯಾಂಕ್‌ಗಳ ಸಮೀಕ್ಷೆ ನಡೆಸಿ ಸೂಕ್ತ ರೀತಿಯ ನಿರ್ವಹಣೆಗೆ ಕ್ರಮ ವಹಿಸಲಾಗುತ್ತದೆ. ನಲ್ಲಿಗಳು ಕಿತ್ತು ಹೋಗಿದ್ದರೆ ಕೂಡಲೇ ಹೊಸ ನಲ್ಲಿ ಹಾಕಿಸಿ ನೀರು ಪೋಲಾಗುವುದನ್ನು ತಡೆಯಲಾಗುತ್ತದೆ

-ಎಂ.ರೇಣುಕಾ ಪೌರಾಯುಕ್ತೆ ಚಿತ್ರದುರ್ಗ

ಕುಡಿಯುವ ನೀರಿನ ಟ್ಯಾಂಕ್‌ಗಳ ಬಳಿ ಸ್ವಚ್ಛತೆ ಇಲ್ಲದೆ ಪಾಚಿ ಬೆಳೆದಿದೆ. ಗಿಡಗಳು ಬೆಳೆದು ಸೊಳ್ಳೆಗಳ ತಾಣವಾಗಿದೆ. ವರ್ಷಕ್ಕೆ ಮೂರು ಬಾರಿಯಾದರೂ ಸ್ವಚ್ಚಗೊಳಿಸಬೇಕು. ಜತೆಗೆ ವಾರಕೊಮ್ಮೆ ಚರಂಡಿ ಕಸ ತೆಗೆಯಬೇಕು

-ಸರೋಜಮ್ಮ ಅಬ್ಬೇನಹಳ್ಳಿ

ಹೊಸ ನಲ್ಲಿಗಳನ್ನು ಆಳವಡಿಸಿ ವಿ.ಧನಂಜಯ ನಾಯಕನಹಟ್ಟಿ: ಕುಡಿಯುವ ನೀರಿನ ಮಿನಿ ಟ್ಯಾಂಕ್‌ಗಳು ಸ್ವಚ್ಛತೆ ಕೊರತೆಯಿಂದ ಸಾಂಕ್ರಾಮಿಕ ರೋಗದ ತಾಣಗಳಾಗಿವೆ. ಹೋಬಳಿಯ ಅಬ್ಬೇನಹಳ್ಳಿ ರೇಖಲಗೆರೆ ನೇರಲಗುಂಟೆ ಮಲ್ಲೂರಹಳ್ಳಿ ಸೇರಿದಂತೆ ನಾಯಕನಹಟ್ಟಿ ಪಟ್ಟಣದಲ್ಲಿರುವ ಟ್ಯಾಂಕ್‌ಗಳು ನೈರ್ಮಲ್ಯದ ಕೊರತೆ ಎದುರಿಸುತ್ತಿವೆ. ಹೋಬಳಿಯಲ್ಲಿ ಕಳೆದ 20 ದಿನಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಇದರಿಂದ ಎಲ್ಲೆಲ್ಲೂ ಅನವಶ್ಯಕ ಗಿಡಗಂಟಿಗಳು ಬೆಳೆದು ಹಸಿರಿನ ವಾತಾವರಣ ಸೃಷ್ಟಿಯಾಗಿದೆ. ಜತೆಗೆ ಕುಡಿಯುವ ನೀರಿನ ನಲ್ಲಿ ಟ್ಯಾಂಕ್‌ಗಳ ಬಳಿ ಚರಂಡಿಗಳು ಕಸದಿಂದ ತುಂಬಿವೆ. ಟ್ಯಾಂಕ್‌ಗಳ ಸುತ್ತ ಪಾಚಿ ಬೆಳೆದು ಸ್ವಚ್ಛತೆ ಮರೀಚಿಕೆಯಾಗಿದೆ. ಸೂಕ್ತ ವ್ಯವಸ್ಥೆಯಿಲ್ಲದೆ ಜನರು ಗಲೀಜು ನೀರಿನಲ್ಲಿಯೇ ಕೊಡಗಳನ್ನು ತುಂಬಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಹಲವು ಟ್ಯಾಂಕ್‌ಗಳ ನಲ್ಲಿಗಳು ಕಿತ್ತುಹೋಗಿವೆ. ಅವುಗಳಿಗೆ ಕಟ್ಟಿಗೆ ತುಂಡು ಬಟ್ಟೆ ಸುತ್ತಿ ನೀರು ಪ‍ಓಲಾಗದಂತೆ ತಡೆಯುತ್ತಿದ್ದಾರೆ. ಹೊಸ ನಲ್ಲಿಗಳನ್ನು ಆಳವಡಿಸುವ ಕಾರ್ಯ ನಡೆದಿಲ್ಲ. ಹೀಗೆ ಹಳೆಯ ಬಟ್ಟೆ ಕಟ್ಟಿಗೆ ತುಂಡುಗಳನ್ನು ಟ್ಯಾಂಕ್‌ ಪೈಪ್‌ಗಳಿಗೆ ಹಾಕಿರುವುದರಿಂದ ನೀರು ಕಲುಷಿತವಾಗುತ್ತಿದೆ. ಜನರು ಅನಿವಾರ್ಯವಾಗಿ ಬೇರೆದಾರಿಯಿಲ್ಲದೆ ಇದೇ ನೀರನ್ನು ಬಳಸುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ವಿಪರೀತ ಬಿಸಿಲಿನಿಂದ ಹೋಬಳಿಯ ಹಲವು ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿತ್ತು. ಇರುವ ಅಲ್ಪಸ್ವಲ್ಪ ನೀರಿನಲ್ಲೇ ಟ್ಯಾಂಕ್‌ಗಳನ್ನು ತುಂಬಿಸುವ ವ್ಯವಸ್ಥೆಯನ್ನು ಸ್ಥಳೀಯ ಆಡಳಿತ ಮಾಡಿತ್ತು. ನಿರ್ವಹಣೆಯಿಲ್ಲದೆ ನಲ್ಲಿಗಳ ಬಳಿ ನಿಂತ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುತ್ತಿವೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲಿ 4ರಿಂದ 6 ಟ್ಯಾಂಕ್‌ಗಳಿದ್ದು ಅವುಗಳ ನಿರ್ವಹಣೆ ದುರಸ್ತಿ ಸ್ವಚ್ಛತೆ ಕಾರ್ಯವನ್ನು ಸಿಬ್ಬಂದಿ ಮರೆತಿದ್ದಾರೆ. ಇದರಿಂದ ಹುಳು ತುಂಬಿದ ನೀರಿನಿಂದಾಗಿ ವಾಸನೆ ಸಾಮಾನ್ಯವಾಗಿದೆ. ಈ ಕಾರಣಕ್ಕೆ ಬಹುತೇಕರು ಟ್ಯಾಂಕ್‌ ನೀರನ್ನು ನಿತ್ಯ ಬಳಕೆಗೆ ಮಾತ್ರ ಬಳಸುತ್ತಿದ್ದಾರೆ. ಸಾಂಕ್ರಾಮಿಕ ರೋಗ ಹರಡುವ ಮುನ್ನ ಸ್ಥಳೀಯ ಆಡಳಿತ ಎಚ್ಚೆತ್ತು ವಾರಕ್ಕೊಮ್ಮೆಯಾದರೂ ಟ್ಯಾಂಕ್‌ಗಳ ಸ್ವಚ್ಚತೆಗೆ ಆದ್ಯತೆ ನೀಡಬೇಕು. ಅನವಶ್ಯಕ ಗಿಡಗಂಟಿಗಳನ್ನು ತೆರವುಗೊಳಿಸಿ ಕಿತ್ತುಹೋಗಿರುವ ನಲ್ಲಿಗಳನ್ನು ದುರಸ್ತಿಗೊಳಿಸಿ ಹೊಸ ನಲ್ಲಿಗಳನ್ನು ಅಳವಡಿಸಬೇಕು. ಚರಂಡಿಗಳಲ್ಲಿ ನಿಂತ ನೀರು ಸರಾಗವಾಗಿ ಹರಿಯುವಂತೆ ಕ್ರಮಕೈಗೊಳ್ಳಬೇಕು ಎನ್ನುತ್ತಾರೆ ಅಬ್ಬೇನಹಳ್ಳಿ ಮಲ್ಲೂರಹಳ್ಳಿ ರೇಖಲಗರೆ ಗ್ರಾಮಸ್ಥರು.

ಅನಾಥವಾದ ನೀರಿನ ಟ್ಯಾಂಕ್‌ಗಳು ವಿ.ರವಿಕುಮಾರ ಶ್ರೀರಾಂಪುರ: ಸಮರ್ಪಕ ನೀರಿನ ಪೂರೈಕೆ ಇಲ್ಲದೆ ಹಾಗೂ ಅಗತ್ಯವಿಲ್ಲದೆಡೆ ಅಳವಡಿಸಿರುವ ಮಿನಿ ಟ್ಯಾಂಕ್‌ಗಳು ಅನಾಥವಾಗಿವೆ. ಹೋಬಳಿಯ ಹಲವು ಗ್ರಾಮಗಳಲ್ಲಿ ಓವರ್‌ ಹೆಡ್ ಟ್ಯಾಂಕ್‌ನಿಂದ ಮನೆ ನಲ್ಲಿ ಹಾಗೂ ಬೀದಿ ನಲ್ಲಿಗಳ ಮೂಲಕ ನೀರು ಪೂರೈಸಲಾಗುತ್ತಿದ್ದು ಮಿನಿ ಟ್ಯಾಂಗಳು ಉಪಯೋಗಕ್ಕೆ ಬರುತ್ತಿಲ್ಲ. ಶ್ರೀರಾಂಪುರ ಗ್ರಾಮದ ಪೊಲೀಸ್ ಠಾಣೆ ಮುಂಭಾಗ ಕಿರು ನೀರು ಸರಬರಾಜು ಯೋಜನೆಯಡಿ ಟ್ಯಾಂಕ್‌ ನಿರ್ಮಿಸಲಾಗಿತ್ತು. ಆರಂಭದಲ್ಲಿ ನೀರು ಪೂರೈಸಲಾಗಿತ್ತು. ಆದರೆ ಹತ್ತಿರದಲ್ಲಿ ಯಾವುದೇ ಮನೆಗಳು ಇಲ್ಲದಿರುವುದರಿಂದ ಜನರಿಂದ ದೂರವಾಗಿದೆ. ಸುತ್ತಲೂ ಹುಲ್ಲು ಬೆಳೆದಿದೆ. ಬೆಸ್ಕಾಂ ಕಚೇರಿ ಹಿಂಭಾಗದ ತೆಂಗಿನ ಕಾಯಿ ಗೋದಾಮಿನ ಸಮೀಪ ಅಳವಡಿಸಿರುವ ಮಿನಿ ಟ್ಯಾಂಕ್‌ ಸಹ ಉಪಯೋಗಕ್ಕೆ ಬರುತ್ತಿಲ್ಲ. ಹೀಗೆ ಗ್ರಾಮದ ಕೆಲವು ಬೀದಿಗಳಲ್ಲಿ ಟ್ಯಾಂಕ್‌ಗಳು ಅನಾಥವಾಗಿವೆ. ಪೂರೈಸಲಾಗುತ್ತಿರುವ ನೀರು ಮಿನಿ ಟ್ಯಾಂಕ್‌ಗೆ ಬಾರದಿರುವುದೇ ಈ ಎಲ್ಲದಕ್ಕೂ ಮುಖ್ಯ ಕಾರಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು. ‘ಶ್ರೀರಾಂಪುರ ಗ್ರಾಮದಲ್ಲಿ ಕೆಲವೆಡೆ ನಿಷ್ಪ್ರಯೋಜಕವಾಗಿರುವ ಮಿನಿ ಟ್ಯಾಂಕ್‌ಗಳನ್ನು ಈಗಾಗಲೇ ಗುರುತಿಸಲಾಗಿದೆ. ಅವುಗಳನ್ನು ಅವಶ್ಯವಿರುವ ಕಡೆ ಸ್ಥಳಾಂತರಿಸಲು ಕ್ರಮ ವಹಿಸಲಾಗುತ್ತದೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಫಾಲಾಕ್ಷಪ್ಪ ತಿಳಿಸುತ್ತಾರೆ. ಕೆಲವೆಡೆ ಟ್ಯಾಂಕ್‌ನ ನಲ್ಲಿಗಳನ್ನು ಮುರಿದು ಹಾಕಲಾಗಿದೆ. ಅವುಗಳನ್ನು ದುರಸ್ತಿ ಮಾಡಿಸಿಲ್ಲ. ಹೋಬಳಿಯ ಹಲವು ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ನಲ್ಲಿ ಸಂಪರ್ಕ ಕಲ್ಪಿಸಲು ಈಗಾಗಲೇ ಪೈಪ್‌ಲೈನ್ ಮಾಡಲಾಗಿದೆ. ಈ ಯೋಜನೆ ಚಾಲನೆಗೊಂಡರೆ ಇನ್ನಷ್ಟು ಮಿನಿಟ್ಯಾಂಕ್‌ಗಳು ಖಾಲಿ ಬೀಳಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT