ಶನಿವಾರ, ಜುಲೈ 24, 2021
22 °C
ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ ವಿ.ಎಸ್‌. ಉಗ್ರಪ್ಪ

ಬೆಲೆ ಏರಿಕೆ ಏಕೆ ಎಂದು ಉತ್ತರಿಸಲಿ: ವಿ.ಎಸ್‌. ಉಗ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ‘ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಖಚಿತ’ ಎಂದು ಕಾಂಗ್ರೆಸ್‌ ಜಿಲ್ಲಾ ಉಸ್ತುವಾರಿ ವಿ.ಎಸ್‌. ಉಗ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಶನಿವಾರ ಇಂಧನ ಮತ್ತು ಅಗತ್ಯ ವಸ್ತುಗಳ ಮಿತಿ ಮೀರಿದ ಬೆಲೆ ಏರಿಕೆ ವಿರೋಧಿಸಿ, ಕೋವಿಡ್‌ ಸಹಾಯಹಸ್ತ ಅಭಿಯಾನ, ಸೈಕಲ್‌ ಜಾಥಾ ಹಾಗೂ ಎತ್ತಿನಗಾಡಿಗಳ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್‌ ಆಡಳಿತದಲ್ಲಿ ಇದ್ದ ಜನಪರ ಯೋಜನೆ ಹಾಗೂ ಕಾರ್ಯಕ್ರಮಗಳು ಈಗ ಕಣ್ಮರೆಯಾಗಿವೆ. ಪೆಟ್ರೋಲ್‌, ಡೀಸೆಲ್‌, ಅಡುಗೆ ಎಣ್ಣೆ, ಸಿಲಿಂಡರ್‌ ಬೆಲೆ ಏರಿಕೆಯಿಂದಾಗಿ ದೇಶದ ಜನರ ಬದುಕು ದುಸ್ತರವಾಗಿದೆ. ಪ್ರಧಾನಿ ನರೇಂದ್ರ ಮೋದಿ ಆಧುನಿಕ ದುರಹಂಕಾರಿಯಾಗಿ ಮೆರೆಯುತ್ತಿದ್ದಾರೆ. ಇಷ್ಟೊಂದು ಬೆಲೆ ಏರಿಕೆ ಏಕೆ ಮಾಡಿದ್ದಾರೆ ಎಂಬುದಕ್ಕೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಕ್ಷೇತ್ರದ ಶಾಸಕ ಗೂಳಿಹಟ್ಟಿ ಶೇಖರ್‌, ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉತ್ತರಿಸಬೇಕು’ ಎಂದು ವಾಗ್ದಾಳಿ ಮಾಡಿದರು.

‘ನಮಗೆ ಅಧಿಕಾರ ಕೊಡಿ ಅಂತ ಜನರನ್ನು ಮೋಡಿ ಮಾಡಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಜನರ ಹಿತ ಮರೆತಿದೆ. ಉದ್ಯೋಗ ಸೃಷ್ಟಿಸುವ ಬದಲು ಇರುವ ಉದ್ಯೋಗವನ್ನು ಕಸಿದುಕೊಂಡಿದ್ದಾರೆ. ತೆರಿಗೆ ಏರಿಕೆ ಮಾಡುವ ಮೂಲಕ ಜನರನ್ನು ಶೋಷಿಸುತ್ತಿದ್ದಾರೆ. ಇಂತಹ ಸರ್ಕಾರಕ್ಕೆ ಹೆಣ್ಣುಮಕ್ಕಳು, ಯುವಕರು ಹಿಡಿಶಾಪ ಹಾಕುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ತಕ್ಷಣವೇ ಪೆಟ್ರೋಲ್‌, ಡಿಸೇಲ್‌, ಅಡುಗೆ ಅನಿಲ ದರವನ್ನು ಮನಮೋಹನ್‌ ಸಿಂಗ್‌ ಅಧಿಕಾರದಲ್ಲಿದ್ದಾಗ ಇದ್ದ ದರಕ್ಕೆ ಇಳಿಸಲಾಗುವುದು. ಪ್ರತಿಯೊಬ್ಬರಿಗೂ 10 ಕೆ.ಜಿ. ಪಡಿತರ ಅಕ್ಕಿ ಉಚಿತವಾಗಿ ಕೊಡುತ್ತೇವೆ’ ಎಂದು ಭರವಸೆ ನೀಡಿದರು.

ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಮಾತನಾಡಿ, ‘ಕಾಂಗ್ರೆಸ್‌ ಸಂಘಟನೆಯ ಮೂಲಕ ಪಕ್ಷವವನ್ನು ಬಲಪಡಿಸಬೇಕು. ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಅನ್ಯಾಯ, ವೈಫಲ್ಯ ಹಾಗೂ ಎಲ್ಲ ವರ್ಗದವರ ಪರವಾಗಿದ್ದ ಕಾಂಗ್ರೆಸ್‌ ಕಾರ್ಯಕ್ರಮಗಳನ್ನು ಪ್ರತಿ ಮತದಾರನಿಗೂ ತಿಳಿಸುವ ಮೂಲಕ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಬೇಕು. ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರ್ಯಕರ್ತರು ಕಂಕಣಬದ್ಧರಾಗಬೇಕು’ ಎಂದು ಮನವಿ ಮಾಡಿದರು.

ರಾಜ್ಯ ಅಸಂಘಟಿತ ಕಾರ್ಮಿಕರ ವಿಭಾಗದ ಅಧ್ಯಕ್ಷ ಜಿ.ಎಸ್‌. ಮಂಜುನಾಥ್‌, ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ, ಮಾಜಿ ಸಚಿವ ನಜೀರ್‌ ಅಹಮ್ಮದ್‌ ಮಾತನಾಡಿದರು.

ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ತಾಜ್‌ಪೀರ್‌, ಯೂತ್‌ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್‌, ಹೈಕೋರ್ಟ್‌ ವಕೀಲ ಡಿ. ಮಂಜುನಾಥ್‌ ನೀರಗುಂದ, ಡಿ.ಕೆ.ಮೋಹನ್‌ಬಾಬು, ಆಡಿಟರ್‌ ನಾಗರಾಜು, ಸ್ಥಳೀಯ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರು ಇದ್ದರು.

ಪಟ್ಟಣದ ಹೊರವಲಯದ ಯಲ್ಲಕಪ್ಪನಹಟ್ಟಿಯಿಂದ ಹೊರಟ ಸೈಕಲ್‌ ಜಾಥಾ ಹಾಗೂ ಅಲಂಕೃತ ಎತ್ತಿನಗಾಡಿ ಮೆರವಣಿಗೆ ಮುಖ್ಯರಸ್ತೆಯ ಮಾರ್ಗವಾಗಿ ಹಿರಿಯೂರು ರಸ್ತೆಯ ಶ್ರೀದೇವಿ ಕಲ್ಯಾಣ ಮಂಟಪದವರೆಗೂ ಸಾಗಿತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.