ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮಪುರ: ಕೆರೆ ಕೋಡಿ ಬಳಿ ಸ್ವಚ್ಛತೆ ಮರೀಚಿಕೆ

10,000 ಜನಸಂಖ್ಯೆಯ ಗ್ರಾಮ; ಬಾರ್, ಹೋಟೆಲ್‌ನವರ ಕಾರುಬಾರು
Published 3 ಏಪ್ರಿಲ್ 2024, 5:50 IST
Last Updated 3 ಏಪ್ರಿಲ್ 2024, 5:50 IST
ಅಕ್ಷರ ಗಾತ್ರ

ಧರ್ಮಪುರ: ಪಟ್ಟಣಗಳಂತೆಯೇ ಬೆಳೆದು, ಪಟ್ಟಣದ ಸ್ಥಾನಮಾನ ಹೊಂದಲು ಅಣಿಯಾಗುತ್ತಿರುವ ಧರ್ಮಪುರ ಗ್ರಾಮ 10,000ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಆದರೆ, ಗ್ರಾಮದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ರಾಶಿಗಟ್ಟಲೆ ಪ್ಲಾಸ್ಟಿಕ್‌ನ ತ್ಯಾಜ್ಯ ಸಂಗ್ರಹವಾಗಿ ಸ್ವಚ್ಛತೆಯೇ ಸಮಸ್ಯೆಯಾಗಿದೆ. ಇದರಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುವಂತಾಗಿದೆ. ವಾಂತಿ, ಭೇದಿಯಂತಹ ಪ್ರಕರಣಗಳೂ ವರದಿಯಾಗುತ್ತಿವೆ.

ಇಲ್ಲಿನ ಕೆಲವು ವಾರ್ಡ್‌ಗಳಲ್ಲಿ ಬೀಡಿ ಎಲೆ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಾಗರಿಕರು ಚರಂಡಿಗೆ ಹಾಕುವುದರಿಂದ ಚರಂಡಿಗಳು ಮುಚ್ಚಿಕೊಂಡು ಕೊಳಚೆ ನೀರು ಕೆಲವೊಮ್ಮೆ ರಸ್ತೆ ಮೇಲೆಯೇ ಹರಿಯುತ್ತದೆ. ಇದೂ ಸ್ವಚ್ಛತೆ ಮಾಯವಾಗಲು ಕಾರಣವಾಗಿದೆ.

ಗ್ರಾಮದಲ್ಲಿರುವ ಶನೇಶ್ವರ ದೇವಸ್ಥಾನದ ಬಸ್ ನಿಲ್ದಾಣದ ಪಕ್ಕದಲ್ಲಿ ಕೆರೆಯ ಕೋಡಿ ನೀರು ಹರಿಯುವ ಪ್ರದೇಶವಿದೆ. ಇದಕ್ಕೆ ಹೊಂದಿಕೊಂಡು, ಅಂಗಡಿ, ಮುಂಗಟ್ಟು, ಐದಾರು ಹೋಟೆಲ್, ಬಾರ್, ಚಹದ ಅಂಗಡಿ ಹಾಗೂ ನಾಲ್ಕೈದು ಕೋಳಿ ಮಾಂಸದ ಅಂಗಡಿಗಳಿವೆ. ಇಲ್ಲಿ ಬಳಸುವ ಪ್ಲಾಸ್ಟಿಕ್ ಮತ್ತು ಕೋಳಿ ಮಾಂಸದ ತ್ಯಾಜ್ಯ ಇಲ್ಲಿ ಸಂಗ್ರಹವಾಗುತ್ತಿದ್ದು, ಹಂದಿ, ನಾಯಿಗಳ ಆಡುಂಬೋಲವಾಗಿದೆ. 

ಕೋಳಿ ತ್ಯಾಜ್ಯ:

ಕೋಳಿ ಮಾಂಸದ ಅಂಗಡಿಯವರು ತ್ಯಾಜ್ಯವನ್ನು ಅಲ್ಲಿಯೇ ಬಿಸಾಡುತ್ತಾರೆ. ಕೋಳಿ ಮಾಂಸದ ತ್ಯಾಜ್ಯದ ರುಚಿ ಹೊಂದಿರುವ ನಾಯಿಗಳು ಒಮ್ಮೊಮ್ಮೆ ಪಾದಚಾರಿ ಮತ್ತು ಬೈಕ್ ಸವಾರರ ಮೇಲೆ ದಾಳಿ ಮಾಡಿರುವ ಉದಾಹರಣೆಗಳಿವೆ.

ನಿರ್ಮಾಣವಾಗದ ಶೌಚಾಲಯ:

ಪಟ್ಟಣ ಪಂಚಾಯಿತಿ ಸ್ಥಾನಮಾನ ಹೊಂದಲಿರುವ ಎಲ್ಲ ಲಕ್ಷಣಗಳನ್ನು ಒಳಗೊಂಡಿರುವ ಧರ್ಮಪುರದಲ್ಲಿ ಒಂದೇ ಒಂದು ಸಾರ್ವಜನಿಕ ಸಾಮೂಹಿಕ ಶೌಚಾಲಯ ಇಲ್ಲ. ಬೆಳಿಗ್ಗೆ ಎಂದಿನಂತೆ ಚಂಬು ಹಿಡಿದು ಬಯಲು ಬಹಿರ್ದೆಸೆಗೆ ಬರುವ ನಾಗರಿಕರಿಗೆ ಕೆರೆಯ ಕೋಡಿ ಜಾಗವೇ ನೆಚ್ಚಿನದ್ದಾಗಿದೆ. ಇದು ಇಲ್ಲಿನ ಸ್ವಚ್ಛತೆಗೆ ಮಾರಕವಾಗಿದೆ.

ಸ್ಥಳೀಯ ಗ್ರಾಮ ಪಂಚಾಯಿತಿಯವರು 25 ವರ್ಷಗಳಿಂದ ಸಾಮೂಹಿಕ ಶೌಚಾಲಯ ನಿರ್ಮಿಸುವ ಸುಳ್ಳು ಭರವಸೆ  ನೀಡುತ್ತಲೇ ಬಂದಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸಮಸ್ಯೆ ಬಗೆಹರಿಸಿ

ಕೋಡಿ ಹರಿಯುವ ಜಾಗದ ಸುತ್ತಲೂ ಹೋಟೆಲ್ ಅಂಗಡಿ ಮುಂಗಟ್ಟು ಬಾರ್ ಹಾಗೂ ಟೀ ಅಂಗಡಿ ತಲೆ ಎತ್ತಿವೆ. ಅದರಿಂದ ಗ್ರಾಮ ಪಂಚಾಯಿತಿಗೆ ಯಾವುದೇ ಆದಾಯ ಇಲ್ಲ. ಆದರೆ ಅಲ್ಲಿನ ತ್ಯಾಜ್ಯ ಮಾತ್ರ ಇಲ್ಲಿ ರಾಶಿ ರಾಶಿ ಸಂಗ್ರಹವಾಗಿ ಸಾಂಕ್ರಾಮಿಕ ರೋಗಕ್ಕೆ ಎಡೆ ಮಾಡಿ ಕೊಟ್ಟಂತಾಗುತ್ತದೆ. ಗ್ರಾಮ ಪಂಚಾಯಿತಿಯವರು ಸೂಕ್ತ ಕ್ರಮ ಕೈಗೊಳ್ಳಬೇಕು. – ಟಿ.ರಂಗಸ್ವಾಮಿ ಧರ್ಮಪುರದ ನಿವಾಸಿ

ಅಂಗಡಿವರಿಗೆ ನೋಟಿಸ್ ಕಳೆದ ವರ್ಷ ಹೋಟೆಲ್ ಬಾರ್ ಮತ್ತು ಟೀ ಅಂಗಡಿಯವರಿಗೆ ನೋಟಿಸ್‌ ನೀಡಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಗಿತ್ತು. ಮತ್ತೆ ಅದೇ ಸ್ಥಳದಲ್ಲಿ ರಾಶಿಗಟ್ಟಲೆ ತ್ಯಾಜ್ಯ ಸಂಗ್ರಹವಾಗಿದ್ದು ತಕ್ಷಣವೇ ಸ್ವಚ್ಛತೆ ಕಾರ್ಯ ಕೈಗೊಳ್ಳಲಾಗುವುದು. ಅಂಗಡಿಯವರಿಗೆ ಈಗ ಮತ್ತೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುವುದು. – ಲಕ್ಷ್ಮಿಕಾಂತ್ ಪಿಡಿಒ ಧರ್ಮಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT