ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೊಳಲ್ಕೆರೆ: ಅಡಿಕೆ ತೋಟ ಉಳಿಸಿಕೊಳ್ಳುವುದೇ ಸವಾಲು

ಸಾಂತೇನಹಳ್ಳಿ ಸಂದೇಶ್ ಗೌಡ
Published 6 ಮಾರ್ಚ್ 2024, 5:51 IST
Last Updated 6 ಮಾರ್ಚ್ 2024, 5:51 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ತುಂಬ ಬರ ಆವರಿಸಿದ್ದು, ಅಡಿಕೆ ತೋಟ ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ.

ಚಿತ್ರದುರ್ಗ ಜಿಲ್ಲೆಯ ಇತರೆಡೆಗೆ ಹೋಲಿಸಿದರೆ ತಾಲ್ಲೂಕಿನ ರೈತರು ಹೆಚ್ಚು ಬರಗಾಲದ ಹೊಡೆತಕ್ಕೆ ಸಿಲುಕಿದ್ದಾರೆ. ಜೂನ್‌ನಲ್ಲಿ ಒಂದಿಷ್ಟು ಮಳೆ ಸುರಿಸುವ ‘ನಾಟಕ’ ಆಡಿದ ವರುಣ, ರೈತರ ಮೂಗಿಗೆ ತುಪ್ಪ ಸವರಿ ಹೆಚ್ಚು ನಷ್ಟ ಆಗುವಂತೆ ಮಾಡಿದ್ದಾನೆ! ಜೂನ್ ಮೊದಲ ವಾರದಲ್ಲಿ ಬಂದ ಸೋನೆ ಮಳೆಯಿಂದ ಹೊಲಗಳು ಒಂದಿಷ್ಟು ಹಸಿಯಾಗಿದ್ದವು. ಮುಂದೆಯೂ ಇದೇ ರೀತಿ ಮಳೆ ಬರಬಹುದು ಎಂಬ ನಿರೀಕ್ಷೆಯಿಂದ ರೈತರು ಮೆಕ್ಕೆಜೋಳ ಬಿತ್ತನೆ ಮಾಡಿದ್ದರು.

ಮೇ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ‘ತಾಪರು–ತೂಪರು’ ಮಳೆಯಿಂದ ತೆನೆಯೊಡೆಯುವ ಹಂತಕ್ಕೂ ಬಂತು. ಈ ಹಂತದಲ್ಲಿ ಮಳೆ ಕಣ್ಮರೆಯಾಗಿ ಫಸಲಿಗೆ ಬಂದಿದ್ದ ಮೆಕ್ಕೆಜೋಳದ ಹೊಲಗಳು ಒಣಗಿ ನಿಂತವು. ತಡವಾಗಿ ಬಿತ್ತನೆ ಮಾಡಿದ ಮೆಕ್ಕೆಜೋಳ, ಹತ್ತಿ, ರಾಗಿ ಬಿಸಿಲಿಗೆ ಬಾಡಿ ಹೋದವು.

ರಾಮಗಿರಿ ಭಾಗದ ರಾಮಗಿರಿ, ಆರ್.ಡಿ.ಕಾವಲು, ತಾಳಿಕಟ್ಟೆ, ಹನುಮಲಿ, ತುಪ್ಪದ ಹಳ್ಳಿ, ಸಿಂಗೇನಹಳ್ಳಿ ಸುತ್ತಮುತ್ತ ಕಪ್ಪು ಮಣ್ಣಿನ ಎರೆಹೊಲಗಳು ಇರುವುದರಿಂದ ಈರುಳ್ಳಿ, ಮೆಣಸಿನ ಕಾಯಿ ಗಿಡ ಹೆಚ್ಚಾಗಿ ಬೆಳೆಯುತ್ತಾರೆ. ಈ ಬಾರಿ ಮಳೆಯಿಲ್ಲದೆ ಎಲ್ಲಾ ಬೆಳೆ ನಾಶವಾಗಿದೆ.

ತಾಲ್ಲೂಕಿನ ರೈತರ ಪ್ರಮುಖ ವಾಣಿಜ್ಯ ಬೆಳೆ ಅಡಿಕೆ. ಜೋಳ, ರಾಗಿ ಒಣಗಿ ಹೋಗಿರುವ ದುಃಖಕ್ಕಿಂತ ಹೆಚ್ಚಾಗಿ ಅಡಿಕೆ ತೋಟಗಳನ್ನು ಉಳಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಕಳೆದ ವರ್ಷ ಹೆಚ್ಚು ಮಳೆ ಬಂದು ಎಲ್ಲಾ ಕೆರೆಗಳು ತುಂಬಿದ್ದವು. ಇದರಿಂದ ಕೊಳವೆ ಬಾವಿಗಳಲ್ಲಿ ಸೆಪ್ಟೆಂಬರ್‌ವರೆಗೆ ಸಾಕಷ್ಟು ನೀರು ಬರುತ್ತಿತ್ತು. ಆದರೆ ಕಳೆದ ಒಂದೆರಡು ವಾರದಿಂದ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗುತ್ತಿದೆ. ಕೆಲವು ಕಡೆ ಬಿಟ್ಟು ಬಿಟ್ಟು ನೀರು ಬರುತ್ತಿದೆ. ಎರಡು ಇಂಚು ನೀರು ಬರುತ್ತಿದ್ದ ಕೊಳವೆ ಬಾವಿಗಳಲ್ಲಿ ಒಂದೂವರೆ ಇಂಚು ನೀರು ಬರುತ್ತಿದೆ.

ತಾಳ್ಯ, ಬಿ.ದುರ್ಗ, ರಾಮಗಿರಿ ಹೋಬಳಿಯ ಕೆಲವು ಹಳ್ಳಿಗಳ ಕೊಳವೆ ಬಾವಿಗಳಲ್ಲಿ ಒಂದು ಗಂಟೆ ನೀರು ಬಂದ ನಂತರ ಅದು ಸ್ಥಗಿತವಾಗುತ್ತಿದೆ. ಅಡಿಕೆ ತೋಟಗಳಿಗೆ ನಿತ್ಯವೂ ನೀರು ಅಗತ್ಯವಾಗಿದ್ದು, ಇನ್ನೂ 15 ದಿನಗಳಲ್ಲಿ ಕೊಳವೆ ಬಾವಿಗಳು ಬತ್ತಿ ಹೋಗುವ ಆತಂಕ ರೈತರದು. ನಾಲ್ಕು ವರ್ಷಗಳ ಹಿಂದೆ ಇದೇ ಪರಿಸ್ಥಿತಿ ಎದುರಾಗಿದ್ದು, ಫಸಲಿಗೆ ಬಂದಿದ್ದ ನೂರಾರು ಎಕರೆ ಅಡಿಕೆ ತೋಟಗಳು ಒಣಗಿದ್ದವು. ಸಾಲದ ಸುಳಿಗೆ ಸಿಲುಕಿದ ಕೆಲವು ರೈತರು ಆತ್ಮಹತ್ಯೆಗೂ ಶರಣಾಗಿದ್ದರು. 

ಶೇ.80ರಷ್ಟು ಕೊಳವೆ ಬಾವಿಗಳು ಫೇಲ್

ಈಗಿರುವ ಕೊಳವೆ ಬಾವಿಗಳಲ್ಲಿ ನೀರು ಕಡಿಮೆ ಆಗುತ್ತಿರುವುದರಿಂದ ರೈತರು ಹೊಸ ಕೊಳವೆ ಬಾವಿಗಳನ್ನು ಕೊರೆಸಲು ಮುಂದಾಗಿದ್ದಾರೆ. ಈಗಾಗಲೇ ತಾಲ್ಲೂಕಿನ ತುಂಬ ಬೋರ್ ವೆಲ್ ಲಾರಿಗಳು ಸದ್ದುಮಾಡುತ್ತಿವೆ. ‘ಹದಿನೈದು ದಿನಗಳಿಂದ ಕೊರೆಯುತ್ತಿರುವ ಕೊಳವೆ ಬಾವಿಗಳ ಪೈಕಿ ಶೇ 80ರಷ್ಟು ‘ಫೇಲ್’ ಆಗುತ್ತವೆ. 500 600 ಅಡಿ ಕೊರೆದರೂ ಕೆಲವು ಕಡೆ ನೀರು ಸಿಗುತ್ತಿಲ್ಲ’ ಎನ್ನುತ್ತಾರೆ ಬೋರ್ ವೆಲ್ ಲಾರಿ ಮಾಲೀಕ ಚಿತ್ರಹಳ್ಳಿ ದೇವರಾಜು.

ನಾವು ಹಿಂದೆಂದೂ ಇಂತಹ ಬರಗಾಲ ನೋಡಿಲ್ಲ. ಅಕ್ಟೋಬರ್ ತಿಂಗಳಿಗೇ ಕೊಳವೆ ಬಾವಿಗಳು ಬತ್ತಿದರೆ ಇನ್ನೂ ಆರೇಳು ತಿಂಗಳು ಹೇಗೆ ಬದುಕುವುದು? ಬೇಸಿಗೆಯಲ್ಲಿ ತೋಟ ಉಳಿಸಿಕೊಳ್ಳುವುದು ಹೇಗೆ?
ತಿಮ್ಮೇಶ್ ಲೋಕದೊಳಲು, ರೈತ
ಹಿಂದೆ ಬರಗಾಲ ಬಂದಿದ್ದಾಗ ಅಡಿಕೆ ತೋಟಗಳು ಕಡಿಮೆ ಇದ್ದವು. ಆಗ ಟ್ಯಾಂಕರ್ ಮೂಲಕ ನೀರು ತಂದು ತೋಟ ಉಳಿಸಿಕೊಂಡಿದ್ದರು. ಈಗ ಅಡಿಕೆ ವಿಸ್ತೀರ್ಣ ಹತ್ತು ಪಟ್ಟು ಹೆಚ್ಚಾಗಿದ್ದು ಟ್ಯಾಂಕರ್ ನೀರು ಸಾಲುವುದಿಲ್ಲ.
ಕೃಷ್ಣಮೂರ್ತಿ ಪಾಡಿಗಟ್ಟೆ, ರೈತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT