ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ | ಮತಬೇಟೆಗೆ ಕಾರಜೋಳ ಮಿಂಚಿನ ಸಂಚಾರ

ಬಹಿರಂಗ ಸಭೆ, ರೋಡ್‌ ಶೋ ನಡೆಸಿ ಮತಯಾಚಿಸಿದ ಬಿಜೆಪಿ ಅಭ್ಯರ್ಥಿ
ಜಿ.ಬಿ.ನಾಗರಾಜ್‌
Published 21 ಏಪ್ರಿಲ್ 2024, 7:19 IST
Last Updated 21 ಏಪ್ರಿಲ್ 2024, 7:19 IST
ಅಕ್ಷರ ಗಾತ್ರ

ಚಿತ್ರದುರ್ಗ: ಬಿರುಬಿಸಿಲಿಗೆ ಕಾದ ಹೆಂಚಿನಂತಾಗಿದ್ದ ಭೂಮಿ ಮಳೆಯ ಸಿಂಚನದಿಂದ ಕೊಂಚ ತಂಪಾಗಿತ್ತು. ಮೂಡಣದಲ್ಲಿ ಉದಯಿಸಿದ ಸೂರ್ಯ ಮೋಡದ ಮರೆಯಲ್ಲಿ ಆಗಾಗ ದರ್ಶನ ನೀಡುತ್ತಿರುವಾಗಲೇ ಚಿಕ್ಕಗೊಂಡನಹಳ್ಳಿಯ ಬೀದಿಗಳಲ್ಲಿ ಜನ ನೆರೆದಿದ್ದರು. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಕಾರಿನಲ್ಲಿ ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಭರ್ಜರಿ ಸ್ವಾಗತ ಕೋರಲಾಯಿತು.

ಕೇಸರಿ ಬಣ್ಣ, ಕಮಲದ ಚಿಹ್ನೆ ಹೊಂದಿದ್ದ ತೆರದ ವಾಹನವನ್ನು ಅಭ್ಯರ್ಥಿ ಲಗುಬಗೆಯಿಂದ ಏರಿದರು. ಚೀಟಿಯೊಂದನ್ನು ಜೇಬಿನಿಂದ ಹೊರತೆಗೆದು ಕನ್ನಡಕ ಸರಿಪಡಿಸಿಕೊಂಡು ದಿಟ್ಟಿಸಿದರು. ಕೆಲ ದಿನಗಳ ಹಿಂದೆಯಷ್ಟೇ ಬಿಜೆಪಿಗೆ ಮರಳಿದ ಕೆ.ಟಿ.ಕುಮಾರಸ್ವಾಮಿ ಜೊತೆಯಾದರು. ಬಿಜೆಪಿಯ ಕೇಸರಿ ಹಾಗೂ ಜೆಡಿಎಸ್‌ನ ಹಸಿರು ಶಾಲುಗಳು ಅಭ್ಯರ್ಥಿ ಕೊರಳು ಅಲಂಕರಿಸಿದವು. ತಮಟೆ, ಡೊಳ್ಳಿನ ಸದ್ದು ರೋಡ್‌ ಶೋ ಮೆರುಗು ಹೆಚ್ಚಿಸಿದವು.

ಚಿತ್ರದುರ್ಗ ತಾಲ್ಲೂಕಿನ ಚಿಕ್ಕಗೊಂಡನಹಳ್ಳಿ ಗ್ರಾಮ ಪಂಚಾಯಿತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿದೆ. ಗ್ರಾಮದ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಕಾರಜೋಳ ರೋಡ್‌ ಶೋ ಆರಂಭಿಸಿದರು. ಕೈ ಮುಗಿದು ಮತಯಾಚನೆ ಮಾಡುತ್ತಿದ್ದರೆ ಬಿಜೆಪಿ ಹೊಗಳುವ ಹಾಡುಗಳು ಹಿನ್ನೆಲೆಯಲ್ಲಿ ಮೊಳಗುತ್ತಿದ್ದವು. ಗ್ರಾಮದ ಮತ್ತೊಂದು ವೃತ್ತದಲ್ಲಿ ಪಟಾಕಿ ಸಿಡಿಸಿದ ಬಳಿಕ ಧ್ವನಿವರ್ಧಕದಿಂದ ಮಾತು ಕೇಳಲಾರಂಭಿಸಿತು.

ಬಾಗಲಕೋಟೆ ಜಿಲ್ಲೆಯ ಮುಧೋಳ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದ ಗೋವಿಂದ ಕಾರಜೋಳ ಇದೇ ಮೊದಲ ಬಾರಿಗೆ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿದ್ದಾರೆ. ರಾಷ್ಟ್ರ ರಾಜಕಾರಣದತ್ತ ಹೊರಳಿದ ಅವರ ಸಾಧನೆಗಳನ್ನು ಬಿಜೆಪಿ ನಾಯಕರು ಜನರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದರು. ಉಪಮುಖ್ಯಮಂತ್ರಿ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿ ಮಾಡಿದ ಕೆಲಸಗಳನ್ನು ಉಲ್ಲೇಖಿಸಿ ಗುಣಗಾನ ಮಾಡುತ್ತಿದ್ದರು. ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಶ್ರಮಿಸಿದ ಪರಿಯನ್ನು ಒತ್ತಿ ಹೇಳಿದರು.

73 ವರ್ಷದ ಗೋವಿಂದ ಕಾರಜೋಳ ಅವರು ಶನಿವಾರ ಬೆಳಿಗ್ಗೆ ಯೋಗಾಸನ ಮುಗಿಸಿ ಚುನಾವಣಾ ಪ್ರಚಾರಕ್ಕೆ ಸಜ್ಜಾದರು. ಅದಾಗಲೇ ಮನೆಯ ಎದುರು ಜಮಾಯಿಸಿದ್ದ ಕಾರ್ಯಕರ್ತರಿಗೆ ಜವಾಬ್ದಾರಿ ಹಂಚಿಕೆ ಮಾಡಿದರು. ವಿಧಾನಪರಿಷತ್‌ ಸದಸ್ಯ ಕೆ.ಎಸ್‌.ನವೀನ್‌ ಹಾಗೂ ಎನ್‌.ರವಿಕುಮಾರ್‌ ಜೊತೆ ಗಹನ ಚರ್ಚೆ ನಡೆಸಿ ಕಾರ್ಯತಂತ್ರ ರೂಪಿಸಿದರು. ಬೆಳಗಿನ ಉಪಾಹಾರಕ್ಕೆ ಜೋಳದ ರೊಟ್ಟಿ, ಪಲ್ಯ ಸೇವಿಸಿ ಮನೆಯಿಂದ ಹೊರಬಿದ್ದರು.

ಪೂರ್ವನಿಗದಿಯಂತೆ ಚಿಕ್ಕಕೊಂಡನಹಳ್ಳಿಗೆ ಪ್ರಯಾಣಿಸುತ್ತಿದ್ದ ಅವರು ಮಾಡನಾಯಕನಹಳ್ಳಿಯಲ್ಲಿಯೂ ಪ್ರಚಾರ ನಡೆಸಿದರು. ಚಿತ್ರದುರ್ಗ ನಗರದ ಕಾರ್ಯಕರ್ತರೊಬ್ಬರ ಮನೆಗೆ ಭೇಟಿ ನೀಡಿ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರ ಪ್ರವೇಶಿಸಿದರು.

ಪುತ್ರ ಎಂ.ಸಿ.ರಘುಚಂದನ್‌ಗೆ ಚುನಾವಣಾ ಟಿಕೆಟ್‌ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಶಾಸಕ ಎಂ.ಚಂದ್ರಪ್ಪ ಸಾರಥ್ಯದಲ್ಲಿ ಹೊಳಲ್ಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಿದರು. ಹೊರಕೆರೆದೇವರಪುರದಲ್ಲಿ ಬಹಿರಂಗ ಸಭೆ ನಡೆಸಿದರು.

ಹೊಳಲ್ಕೆರೆ ತಾಲ್ಲೂಕಿನ ಗುಂಡೇರಿ ಗ್ರಾಮಕ್ಕೆ ಬಿಜೆಪಿ ಅಭ್ಯರ್ಥಿ ಕಾಲಿಟ್ಟಾಗ ಈಶ್ವರಿ ಕಲ್ಯಾಣ ಮಂಟಪ ಭರ್ತಿಯಾಗಿತ್ತು. ಕೆರೆಯ ಪಕ್ಕದ ಕಲ್ಲು ಹಾಸಿನ ಮೇಲೆಯೂ ಕುಳಿತಿದ್ದ ಜನರು ಕುತೂಹಲದಿಂದ ಸಭೆಯನ್ನು ಗಮನಿಸುತ್ತಿದ್ದರು. ತಾಳ್ಯ, ಶಿವಗಂಗಾ, ಎನ್‌.ಜಿ.ಹಳ್ಳಿ ಹಾಗೂ ಗುಂಡೇರಿ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ 48 ಹಳ್ಳಿಯ ಬಿಜೆಪಿ–ಜೆಡಿಎಸ್‌ ಕಾರ್ಯಕರ್ತರು ಇಲ್ಲಿ ಸೇರಿದ್ದರು. ದಾಸಯ್ಯನಹಟ್ಟಿಯಲ್ಲಿ ಮಧ್ಯಾಹ್ನ ಊಟ ಮುಗಿಸಿ ಮತ್ತೆ ಪ್ರಚಾರಕ್ಕೆ ಹೊರಟರು. ರಾಮಗಿರಿ ಹಾಗೂ ಮಲ್ಲಾಡಿಹಳ್ಳಿಯಲ್ಲಿ ಸಾರ್ವಜನಿಕ ಸಭೆ ನಡೆಸಿ ಮತಯಾಚಿಸಿದರು.

ಬಿಜೆಪಿಗೆ ದೇಶ ಮುಖ್ಯ’ ‘ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಪಾಕಿಸ್ತಾನದ ಭಯೋತ್ಪಾದಕರು ಬಾಲ ಮುದುರಿಕೊಂಡಿದ್ದಾರೆ. ಚೀನಾ ಗಡಿ ವಿವಾದ ತಣ್ಣಗಾಗಿದೆ. ಬಿಜೆಪಿಗೆ ದೇಶ ಮುಖ್ಯವೇ ಹೊರತು ಅಧಿಕಾರವಲ್ಲ’ ಎಂದು ಗೋವಿಂದ ಕಾರಜೋಳ ತಿಳಿಸಿದರು. ಚಿಕ್ಕಗೊಂಡನಹಳ್ಳಿಯಲ್ಲಿ ರೋಡ್‌ ಶೋ ನಡೆಸಿ ಮಾತನಾಡಿದ ಅವರು ‘ಕಾಂಗ್ರೆಸ್‌ 56 ವರ್ಷ ದೇಶದ ಅಧಿಕಾರ ಚುಕ್ಕಾಣಿ ಹಿಡಿದಿದೆ. ಈ ಅವಧಿಯಲ್ಲಿ ಉಗ್ರರ ಚಟುವಟಿಕೆ ಮಿತಿ ಮೀರಿತ್ತು. ಮಾಜಿ ಪ್ರಧಾನಿ ಇಂದಿರಾಗಾಂಧಿ ರಾಜೀವ್‌ ಗಾಂಧಿ ಭಯೋತ್ಪಾದಕರಿಂದಲೇ ಹತ್ಯೆಯಾದರು. ಮೋದಿ ಪ್ರಧಾನಿಯಾದ ಬಳಿಕ ದೇಶದಲ್ಲಿ ಶಾಂತಿ ನೆಲೆಸಿದೆ’ ಎಂದು ಹೇಳಿದರು. ‘ಮೋದಿ ಅವರು ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಜಾಗತಿಕವಾಗಿ ಭಾರತದ ವರ್ಚಸ್ಸು ಹೆಚ್ಚಿಸಿದ್ದಾರೆ. ಮೋದಿ ಅವರಂತಹ ಪ್ರಭಾವಿ ನಾಯಕ ದೇಶದಲ್ಲಿಲ್ಲ. ಮೋದಿ ಅವರಿಗೆ ಪ್ರತಿಸ್ಪರ್ಧಿಯಾಗಬಲ್ಲ ಪ್ರಧಾನಿ ಅಭ್ಯರ್ಥಿ ಕಾಂಗ್ರೆಸ್‌ನಲ್ಲಿ ಯಾರಿದ್ದಾರೆ’ ಎಂದು ಮತದಾರರನ್ನು ಪ್ರಶ್ನಿಸಿದರು.

‘ಗ್ಯಾರಂಟಿ’ ಯೋಜನೆಗಳ ಟೀಕೆ ‘ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿ ಕಾರಜೋಳ ಅವರಿಗೆ ಮತ ಹಾಕಿದರೇ ನನಗೆ ಮತಹಾಕಿದಂತೆ’ ಎಂದು ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್‌.ಯಡಿಯೂರಪ್ಪ ಈಚೆಗೆ ನೀಡಿದ ಹೇಳಿಕೆಯನ್ನು ಬಿಜೆಪಿ ನಾಯಕರು ಪ್ರಚಾರ ಸಭೆಯಲ್ಲಿ ಉಲ್ಲೇಖಿಸುತ್ತಿದ್ದರು. ‘ಯಡಿಯೂರಪ್ಪ ಮತ್ತು ಕಾರಜೋಳ ಅವರ ಒಡನಾಟದ ಬಗ್ಗೆ ಮಾತನಾಡುತ್ತಿದ್ದರು. ಜೆಡಿಎಸ್‌ ವರಿಷ್ಠರಾದ ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರು ಮೋದಿ ಗೆಲುವಿಗೆ ಶ್ರಮಿಸುತ್ತಿರುವ ರೀತಿಯನ್ನು ತಿಳಿಸಿಕೊಡುತ್ತಿದ್ದರು. ರಾಜ್ಯ ಸರ್ಕಾರದ ‘ಗ್ಯಾರಂಟಿ’ ಯೋಜನೆಗಳನ್ನು ಟೀಕಿಸುತ್ತ ಕಾನೂನು ಸುವ್ಯವಸ್ಥೆ ಹಾಳಾಗಿದೆ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT