ಕೈಬೀಸಿ ಕರೆಯುತ್ತಿದೆ ಸರ್ಕಾರಿ ಶಾಲೆ

ಪರಶುರಾಂಪುರ: ಒಂದೊಂದು ಗೋಡೆಯ ಮೇಲೂ ಒಂದೊಂದು ಪಠ್ಯದ ವಿಷಯಗಳನ್ನು ಸೂಚಿಸುವ ಚಿತ್ರಗಳು. ಅಂತರಿಕ್ಷಯಾನ, ಸಾಗರಯಾನ, ಗ್ರಹಗಳ ಚಿತ್ರಗಳು, ಆಕಾಶ, ಭೂಮಿ, ಮಾನವನ ವಿಕಾಸ ಸಿದ್ಧಾಂತ ಬಿಂಬಿಸುವ ಕಲಾಕೃತಿಗಳ ಮಧ್ಯೆ ಮಕ್ಕಳ ಕಲಿಕೆ.
ಇದು ಹೋಬಳಿಯ ಗೋಸಿಕೆರೆ ಹೊಸಕಪಿಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೋಡೆಗಳ ಮೇಲೆ ಕಾಣಸಿಗುವ ದೃಶ್ಯಗಳು. ಇಲ್ಲಿ ಮೂಡಿರುವ ಸುಂದರ ಮತ್ತು ಆಕರ್ಷಕ ದೃಶ್ಯಗಳು ವಿದ್ಯಾರ್ಥಿಗಳನ್ನು ತಮ್ಮತ್ತ ಕೈ ಬಿಸಿ ಕರೆಯುತ್ತಿವೆ.
2002–03ನೇ ಸಾಲಿನಲ್ಲಿ ಆರಂಭವಾದ ಶಾಲೆಯಲ್ಲಿ ಮೊದಲು ಹೇಳಿಕೊಳ್ಳುವಂಥ ಪ್ರಗತಿ ಇರಲಿಲ್ಲ. 2012–13ನೇ ಸಾಲಿನಲ್ಲಿ ಶಿಕ್ಷಕ ದಿನೇಶ್ ಬಂದ ಮೇಲೆ ಇಲ್ಲಿಯ ಪರಿಸ್ಥಿತಿ ಬದಲಾಯಿತು. ಕೇವಲ 6 ವಿದ್ಯಾರ್ಥಿಗಳು ಇದ್ದ ಶಾಲೆಯಲ್ಲಿ ಇಂದು 30ಕ್ಕೂ ಹೆಚ್ಚು ವಿದ್ಯಾರ್ಥಿಗಳ ದಾಖಲಾಗಿದ್ದಾರೆ. ‘ಆಕರ್ಷಣೆಯ ಜೊತೆಗೆ ಉತ್ತಮ ಶಿಕ್ಷಣ ನೀಡುತ್ತ ಸುತ್ತ–ಮುತ್ತ ಇರುವ ಕಪಿಲೆಗಳಲ್ಲಿ ಮಕ್ಕಳನ್ನು ಇಲ್ಲಿಗೆ ದಾಖಲು ಮಾಡಿಸುವ ಮಟ್ಟಕ್ಕೆ ಬದಲಾಗಿದೆ ನಮ್ಮೂರಿನ ಶಾಲೆ’ ಎನ್ನುತ್ತಾರೆ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ರಾಜಣ್ಣ.
ಶಿಕ್ಷಕ ದಿನೇಶ್ ಬಂದ ಮೇಲೆ ಆವರಣದಲ್ಲಿ 30ಕ್ಕೂ ಹೆಚ್ಚು ತೆಂಗಿನ ಮರಗಳು, ವಿವಿಧ ರೀತಿಯ ಹೂವಿನ ಗಿಡಗಳನ್ನು ನೆಡ
ಲಾಗಿದೆ. ದಾನಿಗಳಿಂದ ಆಟಿಕೆ ಸಾಮಗ್ರಿಗಳನ್ನು ತರಿಸಿ ಮೈದಾನದಲ್ಲಿ ಅಳವಡಿಸಲಾಗಿದ್ದು, ಖಾಸಗಿ ಶಾಲೆಯನ್ನು ಮೀರಿಸುವಂತಾಗಿದೆ.
ಅತ್ಯಾಕರ್ಷಕ ನಲಿಕಲಿ ಕೊಠಡಿ: ನಲಿಕಲಿ ಕೊಠಡಿಯ ನಾಲ್ಕು ಗೋಡೆಗಳ ಮೇಲೂ 1ರಿಂದ 3ನೇ ತರಗತಿ ವಿದ್ಯಾರ್ಥಿಗಳ ಕನ್ನಡ, ಗಣಿತ, ಇಂಗ್ಲಿಷ್ , ಪರಿಸರ ಅಧ್ಯಯನಕ್ಕೆ ಸಂಬಂಧಿಸಿದ ಚಿತ್ರಗಳನ್ನು ರಚಿಸಲಾಗಿದೆ. ಇತರ ಶಾಲೆಗಳಿಗೆ ಮಾದರಿಯಾಗಿದೆ. ಕೊಠಡಿ ಚಾವಣಿಯ ಮೇಲೆ ಬರೆದಿರುವ 9 ಗ್ರಹಗಳನ್ನು ಬಿಂಬಿಸುವ ಚಿತ್ರಗಳೂ ಕಣ್ಮನ ಸೆಳೆಯುತ್ತಿವೆ.
ದಾನಿಗಳ ಕೊಡುಗೆ ಸಮರ್ಪಕವಾಗಿ ಬಳಸಿಕೊಂಡ ಶಿಕ್ಷಕ: ಶಾಲೆಗೆ ಬೇಕಾಗುವ ಅನೇಕ ಅವಶ್ಯಕ ವಸ್ತುಗಳನ್ನು ದಾನಿಗಳ ಸಹಾಯದಿಂದ ಪಡೆಯಲು ಶಿಕ್ಷಕ ದಿನೇಶ್ ಯಶಸ್ವಿಯಾಗಿದ್ದಾರೆ.
‘ಆರಿಸ್ ಕಂಪನಿ ಯಿಂದ ವಿದ್ಯಾರ್ಥಿ ಗಳಿಗೆ ಬ್ಯಾಗ್, ಲೇಖನ ಸಾಮಗ್ರಿಗಳು, ಲೌಡೇಲ್ ಕಂಪನಿ ಕಡೆಯಿಂದ ಕಂಪ್ಯೂಟರ್, ಮೇಲುಕೋಟೆಯ ಮೂಡಲಗಿರಿಯಪ್ಪ ಅವರಿಂದ ಪ್ರಾಜೆಕ್ಟರ್ ಹೀಗೆ ದಾನಿಗಳಿಂದ ಶಾಲೆಯಲ್ಲಿ ಅನೇಕ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಗ್ರಾಮಸ್ಥರ ಮತ್ತು ಶಿಕ್ಷಣ ಇಲಾಖೆಯ ಆಧಿಕಾರಿಗಳ ಪ್ರೋತ್ಸಹವೂ ಇದೆ’ ಎನ್ನುತ್ತಾರೆ ಶಿಕ್ಷಕ ದಿನೇಶ್ .
.....
ಸರ್ಕಾರಿ ಶಾಲೆಯಲ್ಲಿ ಇಂತಹ ಪ್ರಯತ್ನ ಮಾಡುವ ಶಿಕ್ಷಕರ ಪಾತ್ರ ಶ್ಲಾಘನೀಯ. ಇದು ಇತರರಿಗೆ ಮಾದರಿಯಾಗಬೇಕು.
-ಕೆ.ಎಸ್. ಸುರೇಶ, ಕ್ಷೇತ್ರ ಶಿಕ್ಷಣಾಧಿಕಾರಿ, ಚಳ್ಳಕೆರೆ
....
ಈ ಶಿಕ್ಷಕರು ಶಾಲೆಗೆ ಬಂದಾಗಿನಿಂದ ಉತ್ತಮ ಶಿಕ್ಷಣ ನೀಡುವ ಜೊತೆಗೆ ಉತ್ತಮ ಪರಿಸರ ನಿರ್ಮಿಸಲು ಕಾಳಜಿ ವಹಿಸಿದ್ದಾರೆ.
- ರಂಗನಾಥಪ್ಪ, ಗೋಸಿಕೆರೆ ಹೊಸಕಪಿಲೆ ಗ್ರಾಮಸ್ಥ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.