ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಗೆ ದುರುಗಮ್ಮಗೆ ಜಾನಪದಶ್ರೀ ಪ್ರಶಸ್ತಿ

ಜ. 31ರಂದು ಪ್ರಶಸ್ತಿ ಪ್ರದಾನ
ಸಾಂತೇನಹಳ್ಳಿ ಸಂದೇಶ್ ಗೌಡ
Published 28 ಜನವರಿ 2024, 7:36 IST
Last Updated 28 ಜನವರಿ 2024, 7:36 IST
ಅಕ್ಷರ ಗಾತ್ರ

ಹೊಳಲ್ಕೆರೆ: ತಾಲ್ಲೂಕಿನ ಕಾಲ್ಕೆರೆ ಗ್ರಾಮದ 70 ವರ್ಷದ ಹಲಗೆ ದುರುಗಮ್ಮ ಅವರು ಜಾನಪದಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅನಕ್ಷರಸ್ಥರಾಗಿರುವ ದುರುಗಮ್ಮ ಚಿಕ್ಕಂದಿನಿಂದಲೂ ಹಲಗೆ ಬಡಿಯುವ ಕಾಯಕ ಮಾಡಿಕೊಂಡು ಬಂದಿದ್ದಾರೆ. ಗ್ರಾಮೀಣ ಭಾಗದಲ್ಲಿ ಜಾತ್ರೆ, ದೇವರ ಮೆರವಣಿಗೆ ಸಂದರ್ಭದಲ್ಲಿ ಹಲಗೆ ಬಡಿಯುವುದು ಪ್ರಮುಖ ಕಲೆಯಾಗಿದೆ. ಅಗಲವಾದ ದುಂಡನೆಯ ಚರ್ಮವಾದ್ಯವಾದ ಹಲಗೆಯನ್ನು ಕೊರಳಿಗೆ ನೇತು ಹಾಕಿಕೊಂಡು ಎರಡೂ ಕೈಗಳಿಂದ ಬಾರಿಸುವುದು ಈ ವಿಶಿಷ್ಟ ಕಲೆ. ಸಾಮಾನ್ಯವಾಗಿ ಈ ಹಲಗೆಯನ್ನು ಪುರುಷರು ಬಾರಿಸುತ್ತಾರೆ. ಆದರೆ, ದುರುಗಮ್ಮ ಮಹಿಳೆಯಾಗಿ ಇಂತಹ ಗಂಡುಕಲೆ ಕರಗತ ಮಾಡಿಕೊಂಡಿರುವುದು ವಿಶೇಷ.

‘ಗುಂಡಿಮಡು ನನ್ನ ಹುಟ್ಟೂರು. ನಾನು ಶಾಲೆಯ ಬಾಗಿಲು ತುಳಿದೇ ಇಲ್ಲ. 13 ವರ್ಷದವಳಾಗಿದ್ದಾಗಲೇ ಕಾಲ್ಕೆರೆಗೆ ಕೊಟ್ಟು ಮದುವೆ ಮಾಡಿದರು. ಆಗ ದೇವಸ್ಥಾನದ ಮುಂದೆ ಹಲಗೆ ಬಡಿಯುತ್ತಿರುವುದನ್ನು ಗಮನಿಸುತ್ತಿದ್ದೆ. ನಾನೂ ಬಡಿಯುವ ಆಸೆ ವ್ಯಕ್ತಪಡಿಸಿದಾಗ ಹಲಗೆ ಕೊಟ್ಟರು. ಅಂದಿನಿಂದ ಹಲಗೆ ಬಡಿಯುವ ಕಲೆ ರೂಢಿಸಿಕೊಂಡೆ’ ಎನ್ನುತ್ತಾರೆ ದುರುಗಮ್ಮ.

‘ಹಲಗೆ ಕಲೆ ಕಲಿತ ನಂತರ ನಮ್ಮ ಗ್ರಾಮವಲ್ಲದೆ ಅನೇಕ ಗ್ರಾಮಗಳ ಜಾತ್ರೆಗಳಲ್ಲಿ ಹಲಗೆ ಬಾರಿಸಿದ್ದೇನೆ. ಇದರೊಂದಿಗೆ ಸೋಬಾನೆ ಪದ, ಭಜನೆ, ಕೋಲಾಟದ ಪದಗಳನ್ನು ಹಾಡುತ್ತೇನೆ. ನಾನು ಪ್ರಶಸ್ತಿ ನಿರೀಕ್ಷಿಸಿರಲಿಲ್ಲ. ಈಗಲೂ ನಾನು ಹಲಗೆ ಬಾರಿಸುವ ಕಾಯಕ ಮುಂದುವರಿಸಿದ್ದೇನೆ’ ಎನ್ನುತ್ತಾರೆ ದುರುಗಮ್ಮ.

ಅವರಿಗೆ ಮೂವರು ಪುತ್ರರು, ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಪತಿ ತೀರಿಕೊಂಡಿದ್ದಾರೆ. ಜ. 31ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT