ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂದರ್ಶನ | ಶಿಕ್ಷಕರಿಗೆ ಭರವಸೆಯ ಬೆಳಕಾಗುವೆ: ಡಿ.ಟಿ. ಶ್ರೀನಿವಾಸ್‌

ಡಿ.ಟಿ.ಶ್ರೀನಿವಾಸ್‌, ಕಾಂಗ್ರೆಸ್‌ ಅಭ್ಯರ್ಥಿ, ಆಗ್ನೇಯ ಶಿಕ್ಷಕರ ಕ್ಷೇತ್ರ
ಜಿ.ಬಿ.ನಾಗರಾಜ್‌
Published 26 ಮೇ 2024, 0:39 IST
Last Updated 26 ಮೇ 2024, 2:08 IST
ಅಕ್ಷರ ಗಾತ್ರ

ವಿಧಾನ ಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಟಿ. ಶ್ರೀನಿವಾಸ್‌, 2020ರಲ್ಲಿ ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದರು.

ಪ್ರಸಕ್ತ ಚುನಾವಣೆಯ ಸ್ಪರ್ಧೆಯ ಕುರಿತು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಶಿಕ್ಷಕರ ಕ್ಷೇತ್ರಕ್ಕೆ ನೀವು ಹೊಸಬರು, ಯಾವ ಭರವಸೆಯ ಮೇಲೆ ಸ್ಪರ್ಧೆ ಮಾಡಿದ್ದೀರಿ?

2020ರಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ ಅನುಭವ ಇದೆ. ಈ ಚುನಾವಣೆಯಲ್ಲಿ ಶಿಕ್ಷಕರು ಕೂಡ ಭಾಗಶಃ ಮತದಾರರು. ಹೊಸದಾಗಿ ಮುಖಪರಿಚಯ ಮಾಡಿಕೊಳ್ಳುವ ಅಗತ್ಯವಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಪರಾಭವಗೊಂಡ ಅನುಭವ ‘ಕೈ’ ಹಿಡಿದಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇದೇ ಮತದಾರರ ಎದುರು ಮತ್ತೆ ಬಂದಿದ್ದೇನೆ.

* ಶಿಕ್ಷಕರು ನಿಮಗೇ ಏಕೆ ಮತ ಹಾಕಬೇಕು?

ಶಿಕ್ಷಕರ ಕೊರತೆಯಿಂದ ನಲುಗುತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ಭರವಸೆಯ ಬೆಳಕಿನ ಅಗತ್ಯವಿದೆ. 7ನೇ ವೇತನ ಆಯೋಗ ಶೀಘ್ರದಲ್ಲಿ ಜಾರಿಗೆ ಬರಲಿದೆ. ಶಿಕ್ಷಣ ಕ್ಷೇತ್ರ ಹಾಗೂ ಸರ್ಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ನನ್ನ ಅನುಭವ ಶಿಕ್ಷಕರ ಸೇವೆ ಮಾಡಲು ನೆರವಾಗಲಿದೆ.

* ಬಿಜೆಪಿಯಲ್ಲಿ ಅಧಿಕಾರ ಅನುಭವಿಸಿದ ನೀವು, ಕಾಂಗ್ರೆಸ್‌ ಟಿಕೆಟ್‌ಗಾಗಿ ಪಕ್ಷಾಂತರ ಮಾಡಿದ್ದೀರಿ ಎಂಬ ಆರೋಪ ಇದೆಯಲ್ಲ?

ರಾಜ್ಯದ ಹಲವು ಜಿಲ್ಲೆಗಳಲ್ಲಿ ಗೊಲ್ಲ ಸಮುದಾಯ ಪ್ರಭಾವಿಯಾಗಿದೆ. ಮಾಜಿ ಸಚಿವ ಎ.ಕೃಷ್ಣಪ್ಪ ಅವರ ಬಳಿಕ ಸಮಾಜ ಸಂಘಟನೆಯಲ್ಲಿ ಸಕ್ರಿಯರಾಗಿದ್ದೇವೆ. ಪತ್ನಿ, ಮಾಜಿ ಶಾಸಕಿ ಕೆ.ಪೂರ್ಣಿಮಾ ಮತ್ತು ನಾನು ಬಿಜೆಪಿ ಸೇರಿದ್ದು ಹಲವು ಕ್ಷೇತ್ರಗಳಲ್ಲಿ ಅನುಕೂಲವಾಗಿತ್ತು. ಆದರೆ, ಮಾರ್ಗ ಮಧ್ಯೆ ನಮ್ಮನ್ನು ಕೈಬಿಟ್ಟ ಬಿಜೆಪಿ ದ್ರೋಹ ಎಸಗಿದೆ.

* ಹಳೆ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಜಾರಿಗೊಳಿಸುವ ಆಶ್ವಾಸನೆ ನೀಡುತ್ತಿದ್ದೀರಿ, ಇದರ ಅನುಷ್ಠಾನ ಹೇಗೆ ಸಾಧ್ಯ?

ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್‌) ಬಿಜೆಪಿಯ ಕೂಸು. ಬಿಜೆಪಿ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಇದು ಜಾರಿಗೆ ಬಂದಿದೆ. ಹಳೆ ಪಿಂಚಣಿ ವ್ಯವಸ್ಥೆ ಜಾರಿಗೊಳಿಸುತ್ತೇವೆ ಎಂಬ ವಾಗ್ದಾನವನ್ನು ಪ್ರಣಾಳಿಕೆಯಲ್ಲೇ ನೀಡಿದ್ದೇವೆ. 2006ರ ಮಾರ್ಚ್‌ನಲ್ಲಿ ನೇಮಕಗೊಂಡಿದ್ದ 11,320 ನೌಕರರಿಗೆ ರಾಜ್ಯ ಸರ್ಕಾರ ಒಪಿಎಸ್‌ ಸೌಲಭ್ಯ ಕಲ್ಪಿಸಿದೆ. ಒಪಿಎಸ್‌ ಅನುಷ್ಠಾನದ ಮೊದಲ ಹಂತವಿದು.

* ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ 18 ವರ್ಷಗಳಿಂದ ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ. ಅವರನ್ನು ಹೇಗೆ ಎದುರಿಸುತ್ತೀರಿ?

ಶಿಕ್ಷಕರ ಕ್ಷೇತ್ರ ಪ್ರತಿನಿಧಿಸಿದವರು ಕಷ್ಟಗಳಿಗೆ ಸ್ಪಂದಿಸಿಲ್ಲ. ಚುನಾವಣೆ ಸಂದರ್ಭ ಪ್ರತ್ಯಕ್ಷವಾಗಿ ನಂತರ ಕಣ್ಮರೆಯಾಗುತ್ತಾರೆ. ಕಳೆದ ಚುನಾವಣೆಯಲ್ಲಿ ದ್ವಿತೀಯ ಪ್ರಾಶಸ್ತ್ಯದ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಒಪಿಎಸ್‌ ಮರು ಜಾರಿಗೆ ಒತ್ತಾಯಿಸಿ ನಡೆದ ಹೋರಾಟಕ್ಕೆ ಅವರು ಸ್ಪಂದಿಸಲಿಲ್ಲ. ಬಿಜೆಪಿ ಅಭ್ಯರ್ಥಿ ಎದುರಿಸಲು ಮತದಾರರು ಸಜ್ಜಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT