ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಬೆಳಕು ನೀಡದ ಬೀದಿ ದೀಪಗಳು..!

ಇದ್ದೂ ಇಲ್ಲದಂತಹ ಸ್ಥಿತಿ; ಎದುರಾಗಿದೆ ನಿರ್ವಹಣೆ ಕೊರತೆ: ನಾಗರಿಕರಲ್ಲಿ ಮನೆ ಮಾಡಿದ ಆತಂಕ
Published 13 ಮೇ 2024, 5:32 IST
Last Updated 13 ಮೇ 2024, 5:32 IST
ಅಕ್ಷರ ಗಾತ್ರ

ಚಿತ್ರದುರ್ಗ: ಸಂಜೆಯಾದರೆ ಸಾಕು ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಎಂಬ ಆತಂಕ ನಗರದ ನಿವಾಸಿಗಳಿಗೆ ಇನ್ನಿಲ್ಲದಂತೆ ಆವರಿಸುತ್ತಿದೆ. ನೆಮ್ಮದಿಯಾಗಿ ವಾಯುವಿಹಾರಕ್ಕೆ ಹೋಗಲು ಸಹ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಎಲ್ಲದಕ್ಕೂ ಕಾರಣ ಬೀದಿ ದೀಪ !

ನಗರದಲ್ಲಿ ಬೀದಿ ದೀಪಗಳ ನಿರ್ವಹಣೆ ಕೊರತೆ ಕಾಡುತ್ತಿದೆ. ಇದರ ಜತೆಗೆ ಬೀದಿ ದೀಪಗಳೇ ಇಲ್ಲದ ರಸ್ತೆಗಳೂ ಸಾಕಷ್ಟಿವೆ. ನಾಮ್ಕಲ್‌ ಗ್ಯಾರೇಜ್‌ನಿಂದ ಭೋವಿ ಗುರುಪೀಠದವರೆಗಿನ ಸರ್ವೀಸ್‌ ರಸ್ತೆ ಬೀದಿ ದೀಪದಿಂದ ಮುಕ್ತವಾಗಿದೆ.

ಕತ್ತಲು ಕವಿಯುತ್ತಿದ್ದಂತೆ ಬೆಳಕು ಚೆಲ್ಲಬೇಕಿದ್ದ ಬೀದಿದೀಪಗಳು ಹಾಳಾಗಿದ್ದು, ಅವು ಇದ್ದೂ ಇಲ್ಲದಂತಾಗಿವೆ. ದುರಸ್ತಿ ಕಾರ್ಯ  ಸರಿಯಾಗಿ ನಡೆಯದಿರುವುದು ಸಮಸ್ಯೆಗೆ ಮುಖ್ಯ ಕಾರಣ. ನಗರಸಭೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲೂ ಇದೇ ಪರಿಸ್ಥಿತಿ ಇದೆ. ಯಾವ ಬಡಾವಣೆ ಪ್ರವೇಶಿಸಿದರೂ ಬೆಳಕು ನೀಡದ ದೀಪಗಳು ಕಣ್ಣಿಗೆ ಕಾಣುತ್ತವೆ.

ನಗರದಲ್ಲಿ 11,550 ಬೀದಿ ದೀಪಗಳಿದ್ದು, ನಿತ್ಯ 100 ರಿಂದ 150 ಹಾಳಾಗುವುದು ಸಾಮಾನ್ಯವಾಗಿದೆ. ನಗರಸಭೆಗೆ ದೂರು ನೀಡಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂಬ ಭರವಸೆಯನ್ನೇ ನಾಗರಿಕರು ಕಳೆದುಕೊಂಡಿದ್ದಾರೆ.

ಜೋಗಿಮಟ್ಟಿ ರಸ್ತೆ, ಕೆಳಗೋಟೆ, ಸಿಕೆ ಪುರ, ಲಕ್ಷ್ಮಿ ಬಜಾರ್‌, ಬ್ಯಾಂಕ್‌ ಕಾಲೊನಿ, ಕೋಟೆ ಮುಂಭಾಗ, ಕಾಮನಬಾವಿ ಬಡಾವಣೆ, ಸಂತೆಪೇಟೆ, ಬಸವೇಶ್ವರ, ಪ್ರಸನ್ನ ಟಾಕೀಸ್‌, ಧರ್ಮಶಾಲಾ ರಸ್ತೆ, ಜಿಲ್ಲಾ ಪಂಚಾಯಿತಿ ಮುಂಭಾಗ, ಗಾರೇಹಟ್ಟಿ, ಜಯಲಕ್ಷ್ಮೀ ಬಡಾವಣೆ, ಕಲಾ ಕಾಲೇಜು ರಸ್ತೆ, ಕೆಎಸ್‌ಆರ್‌ಟಿಸಿ, ಮಾಸ್ತಮ್ಮ ಬಡಾವಣೆ, ಐಯುಡಿಪಿ ಬಡಾವಣೆ, ತುರವನೂರು ರಸ್ತೆ ಸೇರಿದಂತೆ ಹಲವೆಡೆ ದೀಪಗಳು ಬೆಳಗುತ್ತಿಲ್ಲ.

ಬ್ಯಾಂಕ್‌ ಕಾಲೊನಿಯಿಂದ ಆರ್‌ಟಿಒ ರಸ್ತೆ ಮೂಲಕ ನಗರ ಪ್ರವೇಶಿಸಿದರೆ ಕತ್ತಲು ಸ್ವಾಗತಿಸುತ್ತಿದೆ. ಇನ್ನೂ ಚಳ್ಳಕೆರೆ ಗೇಟ್‌, ತುರುವನೂರು ಗೇಟ್‌, ಹೊಸಪೇಟೆ ರಸ್ತೆ, ಮೆದೇಹಳ್ಳಿ ಸಮೀಪದ ಸರ್ವಿಸ್‌ ರಸ್ತೆಯಲ್ಲಿ ಅತಿ ಹೆಚ್ಚು ವಾಹನಗಳು ಸಂಚರಿಸುತ್ತವೆ. ಅಕ್ಕಪಕ್ಕದಲ್ಲಿ ಬಡಾವಣೆಗಳು ಇರುವುದರಿಂದ ಸಾರ್ವಜನಿಕರೂ ಓಡಾಡುತ್ತಾರೆ. ಸಂಜೆಯ ಬಳಿಕ ಕತ್ತಲು ಆವರಿಸುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ಎಸ್‌ಜೆಎಂಐಟಿ ವೃತ್ತ, ಮದಕರಿ ನಾಯಕ ವೃತ್ತದಲ್ಲಿ ಅಳವಡಿಸಿರುವ ಹೈಮಾಸ್ಟ್‌ ದೀಪ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಇದರಿಂದಾಗಿ ಸರ್ವೀಸ್‌ ರಸ್ತೆಯಲ್ಲಿ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ನಗರದಲ್ಲಿ ಒಂದು ಕಡೆ ಉಜ್ವಲ ಬೆಳಕಿದ್ದರೆ ಮತ್ತೊಂದು ಕಡೆ ಕತ್ತಲು ಎಂಬ ಸ್ಥಿತಿ ನಿರ್ಮಾಣವಾಗಿದೆ.

ಬೀದಿ ದೀಪಗಳ ಅಸಮರ್ಪಕ ನಿರ್ವಹಣೆಯಿಂದಾಗಿ ನಿತ್ಯ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಸಂಪೂರ್ಣ ಕತ್ತಲು ಆವರಿಸಿರುವ ನಗರದ ತುರುವನೂರು ರಸ್ತೆ, ಬಸವೇಶ್ವರ ಆಸ್ಪತ್ರೆ ರಸ್ತೆಯಲ್ಲಿ ಸಂಜೆಯಾದರೆ ಸಾಕು ಅಪಘಾತಗಳು ಸಾಮಾನ್ಯವಾಗಿವೆ.

ನಗರದಲ್ಲಿ ಹಾದು ಹೋಗಿರುವ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವಿಸ್‌ ರಸ್ತೆಗಳಿಗೆ ಬೀದಿ ದೀಪದ ವ್ಯವಸ್ಥೆ ಕಲ್ಪಿಸಿಲ್ಲ. ನಗರಸಭೆ ಹಾಗೂ ಲೋಕೋಪಯೋಗಿ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಿಕ್ಕಾಟದಲ್ಲಿ ಸಾರ್ವಜನಿಕರು ಹೈರಾಣಾಗುತ್ತಿದ್ದಾರೆ. ಸಂಜೆಯ ಬಳಿಕ ಸರ್ವಿಸ್‌ ರಸ್ತೆಯ ಸಂಚಾರಕ್ಕೆ ಬಹುತೇಕರು ಹಿಂದೇಟು ಹಾಕುತ್ತಿದ್ದಾರೆ.

ವಿದ್ಯುತ್‌ ದೀಪಗಳ ಬದಲಾಗಿ ಎಲ್‌ಇಡಿ ದೀಪ ಅಳವಡಿಸಲಾಗುತ್ತದೆ ಎಂದು ನಗರಸಭೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಸೋಡಿಯಂ ದೀಪಗಳ ನಡುವೆ ಎಲ್‌ಇಡಿ ದೀಪಗಳು ಅಸ್ತಿತ್ವಕ್ಕೆ ಹೋರಾಟ ನಡೆಸುತ್ತಿವೆ. ರಸ್ತೆ ವಿಸ್ತರಣೆಯಾದ ಬಳಿಕ ದಾವಣಗೆರೆ ಮಾದರಿಯಲ್ಲಿ ಆಧುನಿಕ ಬೀದಿ ದೀಪಗಳನ್ನು ಅಳವಡಿಸುವ ಕಾರ್ಯ ಇನ್ನೂ ನಡೆಯುತ್ತಿದೆ.

ಗಾಂಧಿ ವೃತ್ತ, ಬಿ.ಡಿ ರಸ್ತೆ, ಡಿಸಿಸಿ ಬ್ಯಾಂಕ್‌ ರಸ್ತೆ, ತುರವನೂರು ರಸ್ತೆ, ಜೋಗಿಮಟ್ಟಿ ರಸ್ತೆ, ಚಳ್ಳಕೆರೆ ರಸ್ತೆ, ಹೊಳಲ್ಕೆರೆ ರಸ್ತೆಯಲ್ಲಿ ಅಳವಡಿಸಿರುವ ಆಧುನಿಕ ಬೀದಿ ದೀಪಗಳು ಇದ್ದೂ ಇಲ್ಲದಂತಾಗಿವೆ. ಮಳೆಗಾಲ ಪ್ರಾರಂಭವಾಗಿದ್ದು ಬೀದಿ ದೀಪದ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ನಗರಸಭೆ ಅಧಿಕಾರಿಗಳು ಇನ್ನಾದರೂ ಸಮಸ್ಯೆ ಬಗೆಹರಿಸಿ ಕತ್ತಲ ರಸ್ತೆಗೆ ಬೆಳಕು ನೀಡಬೇಕಿದೆ ಎನ್ನುತ್ತಾರೆ ಸಾರ್ವಜನಿಕರು.

ಚಿತ್ರದುರ್ಗ ನಗರದಲ್ಲಿ ಬೀದಿ ಬದಿ ಅಳವಡಿಸಿರುವ ವಿದ್ಯುತ್‌ ದೀಪಗಳ ಸಮಸ್ಯೆ ಗಮನಕ್ಕೆ ಬಂದಿದೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ದೂರುಗಳು ಹೆಚ್ಚಾಗುತ್ತಿವೆ. ಸರ್ವೀಸ್‌ ರಸ್ತೆಗೆ ಬೀದಿ ದೀಪ ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಗೆ ತಿಳಿಸಲಾಗಿದೆ.

-ಎಂ.ರೇಣುಕಾ ಪೌರಾಯುಕ್ತೆ ಚಿತ್ರದುರ್ಗ

ಬೀದಿದೀಪಗಳ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ ಎಂಬುದಕ್ಕೆ ಕತ್ತಲು ಆವರಿಸಿದ ರಸ್ತೆಗಳೇ ಸಾಕ್ಷಿಯಾಗಿವೆ. ಕೆಲ ಭಾಗಗಳಲ್ಲಿ ರಸ್ತೆ ವಿಸ್ತರಣೆಗೆಂದು ಬೀದಿದೀಪ ತೆರವುಗೊಳಿಸಿದವರು ಪುನಃ ಅಳವಡಿಕೆಗೆ ಮುಂದಾಗಿಲ್ಲ. ಸರ್ವೀಸ್‌ ರಸ್ತೆಯಲ್ಲಿ ಕತ್ತಲ ನಡುವೆ ಸಂಚಾರ ಮಾಮೂಲಿಯಾಗಿದೆ. -ಎಂ.ಜೆ.ರುದ್ರಮೂರ್ತಿ ನಿವಾಸಿ ಜಯಲಕ್ಷ್ಮೀ ಬಡಾವಣೆ

ನಗರಸಭೆ ವಿದ್ಯುತ್ ಬಿಲ್ ಪಾವತಿಸದ ಕಾರಣ 7 ತಿಂಗಳಿಂದ ಜಾಫರ್‌ ಶರೀಫ್‌ ಲೇಔಟ್‌ಗೆ ಕತ್ತಲು ಆವರಿಸಿದೆ. ಬಾಕಿ ಬಿಲ್ ಪಾವತಿಸಿದ ನಂತರ ಬೀದಿ ದೀಪಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತೇವೆ ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು.

-ರಮೇಶ್‌ ನಿವಾಸಿ ಚಳ್ಳಕೆರೆ

ಬೀದಿ ದೀಪಗಳ ನಿರ್ವಹಣೆಯಲ್ಲಿ ನಗರಸಭೆ ಸಿಬ್ಬಂದಿ ಉದಾಸೀನತೆ ಮಾಡುವುದರಿಂದ ನಗರದ ರಸ್ತೆಯಲ್ಲಿ ಅಪಘಾತ ಸಂಭವಿಸುತ್ತಿವೆ. ಸಮರ್ಪಕ ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಬಡಾವಣೆಗಳಲ್ಲಿ ಕಳ್ಳತನ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

-ಸುನಂದಮ್ಮ ಬೀದಿಬದಿ ವ್ಯಾಪಾರಿ ಚಳ್ಳಕೆರೆ

24 ಗಂಟೆ ಕರ್ತವ್ಯ ನಿರ್ವಹಣೆ !

-ಶಿವಗಂಗಾ ಚಿತ್ತಯ್ಯ

ಚಳ್ಳಕೆರೆ: ತಾಲ್ಲೂಕಿನಲ್ಲಿ ಬೀದಿ ದೀಪಗಳು ನಿರ್ವಹಣೆ ಕೊರತೆ ಎದುರಿಸುತ್ತಿವೆ. ಬಹುತೇಕ ಕಡೆ ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿವೆ. ತಿಮ್ಮಣ್ಣಹಳ್ಳಿ ಓಬನಹಳ್ಳಿ ಕ್ಯಾತಗೊಂಡನಹಳ್ಳಿ ದೊಡ್ಡೇರಿ ದೇವರಮರಿಕುಂಟೆ ಕಸ್ತೂರಿ ತಿಮ್ಮಣ್ಣನಹಳ್ಳಿ ಜನ್ನೇನಹಳ್ಳಿ ರಾಮಜೋಗಿಹಳ್ಳಿ ಗಂಜಿಗುಂಟೆ ಲಂಬಾಣಿಹಟ್ಟಿ ಮುಂತಾದ 20ಕ್ಕೂ ಹೆಚ್ಚು ಗ್ರಾಮದಲ್ಲಿ ನಿರ್ವಹಣೆ ಕೊರತೆಯಿಂದ ಹಗಲು-ರಾತ್ರಿ ಉರಿಯುತ್ತಿವೆ. ಜಾತ್ರೆ ಉತ್ಸವ ಹಾಗೂ ನಾಟಕ ಪ್ರದರ್ಶನದ ಸಂದರ್ಭದಲ್ಲಿ ಗ್ರಾಮಗಳಲ್ಲಿ ವಿದ್ಯುತ್‌ ಲೈನ್‍ಗೆ ನೇರ ಸಂಪರ್ಕ ಕಲ್ಪಿಸುವುದು ಸಾಮಾನ್ಯವಾಗಿದೆ. ಇದರಿಂದ ವಿದ್ಯುತ್ ಸಾಕಾಷ್ಟು ಪೋಲಾಗುತ್ತಿದೆ. ದೊಡ್ಡಉಳ್ಳಾರ್ತಿ ಗ್ರಾಮದ ಗೌರಿದೇವಿ ಬಡಾವಣೆ ಸಿದ್ದಾಪುರ ಗ್ರಾಮದ ಶಾರದಾ ಬಡಾವಣೆ ಅನಂತ ಬಡಾವಣೆ ಬೆಳಗೆರೆ ಗ್ರಾಮದ ಇಂದಿರಾ ಬಡಾವಣೆ ಮತ್ತು ನಗರದ ಬಳ್ಳಾರಿ ರಸ್ತೆ ಅಭಿಷೇಕ ನಗರ ಚಿತ್ರದುರ್ಗ ರಸ್ತೆ ಜಾಫರ್‌ ಷರೀಫ್‌ ಲೇಔಟ್ ಅಜ್ಜನಗುಡಿ ರಸ್ತೆ ಮಟನ್‌ ಮಾರುಕಟ್ಟೆ ಪಾವಗಡ ರಸ್ತೆ ರೈಲ್ವೆ ನಿಲ್ದಾಣ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿ ಮಾರ್ಗಕ್ಕೆ ಬೀದಿ ದೀಪಗಳೇ ಅಳವಡಿಸಿಲ್ಲ. ಇದರಿಂದಾಗಿ ಇಲ್ಲಿನ ನಿವಾಸಿಗಳು ಕತ್ತಲ ರಾತ್ರಿ ಕಳೆಯುವಂತಾಗಿದೆ. ಸಮರ್ಪಕ ಬೆಳಕಿನ ವ್ಯವಸ್ಥೆಗಾಗಿ ನಗರದ ಎಲ್ಲಾ ಕಡೆ ಸ್ವಯಂ ಚಾಲಿತ ಬೀದಿ ದೀಪ ಅಳವಡಿಸಲಾಗಿದೆ. ಕೆಲವೆಡೆ ಮಾತ್ರ ನಿಯಂತ್ರಕ ಅಳವಡಿಸಲಾಗಿದೆ. ಎಲ್ಲಿಯೂ ಸಮಸ್ಯೆ ಇಲ್ಲ ಎನ್ನುತ್ತಾರೆ ನಗರಸಭೆ ಬೀದಿ ದೀಪಗಳ ನಿರ್ವಹಣೆ ಮೇಲ್ವಿಚಾರಕ ಚೇತನ್‌.

ವಿದ್ಯುತ್‌ ಕಂಬಗಳಿಗೆ ದೀಪಗಳಿಲ್ಲ

-ಶ್ವೇತಾ.ಜಿ

ಹೊಸದುರ್ಗ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಹಲವೆಡೆ ವಿದ್ಯುತ್ ಕಂಬಗಳಿವೆ. ಆದರೆ ಸುಮಾರು ಕಂಬಗಳಲ್ಲಿ ದೀಪಗಳೇ ಇಲ್ಲದಂತಾಗಿದೆ. ಇದರಿಂದಾಗಿ ಕತ್ತಲಾದರೆ ಜನರು ಹೊರ ಬರಲು ಭಯಪಡುವಂತಾಗಿದೆ. ಪಟ್ಟಣದ ಕೆಲ ಬಡಾವಣೆಗಳಲ್ಲಿ ಬೀದಿ ದೀಪಗಳೇ ಇಲ್ಲ. ಇನ್ನೂ ಹಲವೆಡೆ ಹಗಲು ರಾತ್ರಿಯೆನ್ನದೆ ನಿತ್ಯ ವಿದ್ಯುತ್ ಉರಿಸಲಾಗುತ್ತಿದೆ. ಪುರಸಭೆ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ‘ನಮ್ಮ ಬಡಾವಣೆಯಲ್ಲಿ ಬೀದಿ ದೀಪಗಳಿಲ್ಲದೆ ಸುಮಾರು ವರ್ಷಗಳೇ ಕಳೆದಿವೆ. ಪುರಸಭೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ನಾವೇ ಸ್ವಂತ ಖರ್ಚಿನಲ್ಲಿ ಬೀದಿ ದೀಪ ಖರೀದಿಸಿ ಮನೆ ಅಕ್ಕ ಪಕ್ಕ ಹಾಕಿಸಿದ್ದೆವು. ಇನ್ನೂ ಮೂರು ಬೀದಿ ದೀಪಗಳ ಅಗತ್ಯವಿದೆ. ಪಟ್ಟಣದಲ್ಲಿ ಮನೆಗಳ್ಳತನದ ಭಯವಿದೆ. ರಾತ್ರಿಯಾದರೆ ಹೊರ ಹೋಗಲು ಆಗುತ್ತಿಲ್ಲ. ಇದು ಮುಗಿಯಲಾರದ ಸಮಸ್ಯೆಯಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಭಗೀರಥ ಬಡಾವಣೆ ನಿವಾಸಿ ಆಶಾ. ‘ಪಟ್ಟಣದಲ್ಲಿ ಬೀದಿ ದೀಪಗಳ ಸಮಸ್ಯೆಯಿಲ್ಲ. ಎಲ್‌ಇಡಿ ವೃತ್ತಗಳಲ್ಲಿ ಹೈಮಾಸ್ಟ್‌ ದೀಪಗಳನ್ನು ಅಳವಡಿಸಲಾಗಿದೆ. ಮಳೆ ಗಾಳಿ ಇನ್ನಿತರ ಕಾರಣಗಳಿಂದ ಹಾಳಾದರೆ ಕೂಡಲೇ ದುರಸ್ತಿ ಕಾರ್ಯ ಮಾಡಲಾಗುತ್ತಿದೆ. ಕೆಲ ಅನಧಿಕೃತ ಬಡಾವಣೆಯಲ್ಲಿ ಮಾತ್ರ ಸಮಸ್ಯೆ ಎದುರಾಗಿದೆ. ಚುನಾವಣಾ ನಂತರ ಸಿಸಿಎಂಎಸ್‌ ಯೋಜನೆಯಡಿ ಪಟ್ಟಣದ ಎಲ್ಲಾ ಕಡೆ ಬೀದಿ ದೀಪಗಳನ್ನು ಅಳವಡಿಸಲಾಗುವುದು’ ಎನ್ನುತ್ತಾರೆ ಪುರಸಭೆ ಮುಖ್ಯಾಧಿಕಾರಿ ತಿಮ್ಮರಾಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT