ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಆಸ್ತಿ ಮಾಲೀಕರಿಗೆ ತೆರಿಗೆ ಭಾರ

ತೆರಿಗೆ ಪಾವತಿ ವಸೂಲಾತಿ ಕುಂಠಿತ lನಲ್ಲಿ, ವಾಣಿಜ್ಯ ತೆರಿಗೆ ಹಲವೆಡೆ ಯಥಾಸ್ಥಿತಿ ಮುಂದುವರಿಕೆ
Last Updated 26 ಜುಲೈ 2021, 3:33 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೋವಿಡ್ ಮೊದಲ ಅಲೆಗಿಂತಲೂ ಎರಡನೇ ಅಲೆಯಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿ ನಿತ್ಯ ಅನೇಕ ಸಮಸ್ಯೆ ಎದುರಿಸುತ್ತಿದ್ದಾರೆ. ಆದಾಯಕ್ಕೂ ಕುತ್ತು ಬಿದ್ದಿದೆ. ಈ ನಡುವೆಯೇ ಸ್ಥಳೀಯ ಸಂಸ್ಥೆಗಳು ಬಡಾವಣೆಗಳ ಅಭಿವೃದ್ಧಿ ಆಧರಿಸಿ ಆಸ್ತಿ ತೆರಿಗೆ ತುಸು ಹೆಚ್ಚಿಸಿವೆ. ಇದರಿಂದಾಗಿ ಜನರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ನಿಯಮಾನುಸಾರ ಸ್ವಯಂಘೋಷಿತ ಆಸ್ತಿ ತೆರಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಶೇ 15ರಿಂದ ಶೇ 30ರ ಮಿತಿಯೊಳಗೆ ಹೆಚ್ಚಿಸಲು ಈ ಹಿಂದೆ ಅವಕಾಶ ಇತ್ತು. ಆದರೆ, ಎರಡು–ಮೂರು ತಿಂಗಳ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಮನೆ, ಖಾಲಿ ನಿವೇಶನ ಹಾಗೂ ಇತರ ತೆರಿಗೆಯನ್ನು ಬಡಾವಣೆಗಳ ಪ್ರಗತಿ ಆಧರಿಸಿ ಇನ್ನೂ ಮುಂದೆ ಪ್ರತಿ ವರ್ಷ ನಿಗದಿಪಡಿಸಲು ಒಪ್ಪಿಗೆ ಸೂಚಿಸಿತ್ತು. ಅದರಂತೆ ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಯಲ್ಲಿ ಈ ಬಾರಿ ಒಂದೊಂದು ಕಡೆ ಒಂದೊಂದು ರೀತಿ ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ.

ತೆರಿಗೆದಾರರಿಗೆ ತೆರಿಗೆ ಹೆಚ್ಚಳದ ಚಲನ್ ನೀಡಲಾಗುತ್ತಿದೆ. ಆದರೆ, ಹಿಂದಿನ ವರ್ಷ ಪಾವತಿಸಿದಷ್ಟೇ ಇರಬಹುದು ಅಂದುಕೊಂಡು ಹಣ ತೆಗೆದುಕೊಂಡು ಹೋದವರು ಒಮ್ಮೆಗೆ ಗಾಬರಿಗೂ ಒಳಗಾಗಿದ್ದಾರೆ. ಮೊದಲು ಮನೆ ಕಂದಾಯ ಪಾವತಿಸಿ, ನಳ ಕಂದಾಯಕ್ಕಾಗಿ ಮತ್ತೊಮ್ಮೆ ನಗರಸಭೆಗಳಿಗೆ ಅಲೆದಾಡಿದವರೂ ಇದ್ದಾರೆ. ತೆರಿಗೆ ಪಾವತಿಸಲು ನಗರಸಭೆಯೊಳಗಿನ ಬ್ಯಾಂಕ್‌ ಬಳಿ ಗಂಟೆಗಟ್ಟಲೆ ಕಾದು ಕೆಲವರು ಹೈರಾಣಾಗಿದ್ದಾರೆ.

ಚಿತ್ರದುರ್ಗದಲ್ಲಿ 35 ವಾರ್ಡ್‌ಗಳಿವೆ. ನಗರ ವ್ಯಾಪ್ತಿಯಲ್ಲಿ 1,500 ಗಲ್ಲಿಗಳನ್ನು ಗುರುತಿಸಲಾಗಿದೆ. ಶರವೇಗದಲ್ಲಿ ಅಭಿವೃದ್ಧಿ ಆಗುತ್ತಿರುವ ಬೀದಿಗಳಲ್ಲಿ ತೆರಿಗೆ ತುಸು ಏರಿಕೆ ಆಗಿದೆ. ಅದೇ ರೀತಿ ಪ್ರಗತಿಯನ್ನೇ ಕಾಣದ ಕಡೆಗಳಲ್ಲಿ ಯಥಾಸ್ಥಿತಿ ಮುಂದುವರಿಸಲಾಗಿದೆ. ಒಟ್ಟಾರೆ ಮನೆ, ಖಾಲಿ ನಿವೇಶನಗಳ ಕಂದಾಯವನ್ನು ಅಂದಾಜಿನ ಪ್ರಕಾರ ಶೇ 10ರಿಂದ ಶೇ 20ರಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರ ಜೇಬಿಗೆ ಕತ್ತರಿ ಬಿದ್ದಿದೆ.

ಚಿತ್ರದುರ್ಗ ನಗರಸಭೆಯೂ 2021ರ ಹಣಕಾಸು ವರ್ಷದಲ್ಲಿ ₹ 12 ಕೋಟಿ ಹಾಗೂ ಹಿಂದಿನ ವರ್ಷದ ಬಾಕಿ ₹ 5.63 ಕೋಟಿ ಸೇರಿ ಸುಮಾರು₹ 17.63 ಕೋಟಿ ಆಸ್ತಿ ತೆರಿಗೆ ಸಂಗ್ರಹದ ಗುರಿ ಹೊಂದಿದೆ. ಏಪ್ರಿಲ್, ಮೇ, ಜೂನ್ ತಿಂಗಳಲ್ಲಿ ₹ 2.99 ಕೋಟಿ ಸಂಗ್ರಹವಾಗಿದೆ.

ಹಿಂದಿನ ಬಾಕಿ ₹ 3.65 ಕೋಟಿ ಸೇರಿ ಈ ಬಾರಿ ಒಟ್ಟು₹ 7.75 ಕೋಟಿ ನಳ ಕಂದಾಯದ ಗುರಿ ನಿಗದಿಪಡಿಸಲಾಗಿದೆ. ಅದರಲ್ಲಿ ಇದೇ ಅವಧಿಯಲ್ಲಿ ₹ 66 ಲಕ್ಷ ವಸೂಲಿಯಾಗಿದೆ. ವಾಣಿಜ್ಯ ಮಳಿಗೆ ಸಂಬಂಧ ಹಿಂದಿನ ₹ 10 ಲಕ್ಷ ಬಾಕಿ ಸೇರಿ ₹ 71 ಲಕ್ಷದ ಗುರಿಯಲ್ಲಿ ₹ 7 ಲಕ್ಷ ಸಂಗ್ರಹವಾಗಿದೆ. ವಿವಿಧ ತೆರಿಗೆಗಳ ಪೈಕಿ ಈವರೆಗೂ ಶೇ 20ರಷ್ಟು ಗುರಿ ಸಾಧಿಸಲು ಸಾಧ್ಯವಾಗಿಲ್ಲ. ಇದರಲ್ಲಿ ನಳ ಕಂದಾಯ ಮತ್ತು ಮಳಿಗೆಗಳ ಆದಾಯದಲ್ಲಿ ತೀವ್ರ ಕುಸಿತ ಕಂಡಿದೆ.

ಕೋವಿಡ್ ಕಾರಣಕ್ಕೆ ನಳ ಮತ್ತು ವಾಣಿಜ್ಯ ಮಳಿಗೆ ಕಂದಾಯ ಹೆಚ್ಚಿಸದಿರಲು ತೀರ್ಮಾನಿಸಲಾಗಿದ್ದು, ಬಾಕಿ ಉಳಿಸಿಕೊಂಡಿರುವ ಹಣ ಬಂದರೆ ಸಾಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಲಾಕ್‌ಡೌನ್‌ ವೇಳೆ ಇಲ್ಲಿಯ ಬಹುತೇಕ ಅಂಗಡಿಗಳು ಮುಚ್ಚಿದ್ದವು. ಎರಡು ತಿಂಗಳು ವ್ಯಾಪಾರ ಬಂದ್ ಅದ ಕಾರಣ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು ಎಂಬ ಆಗ್ರಹವೂ ಕೆಲ ವರ್ತಕರಿಂದ ಕೇಳಿಬರುತ್ತಿದೆ.

‘ಕಳೆದ ವರ್ಷ ಆಸ್ತಿ ತೆರಿಗೆ ₹ 15 ಸಾವಿರ ಕಟ್ಟಿದ್ದೆ. ಈ ವರ್ಷ ₹ 18,200 ಕಟ್ಟಿಸಿಕೊಂಡಿದ್ದಾರೆ. ಹಿಂದಿನ ವರ್ಷಕ್ಕಿಂತ ₹ 3,200 ಹೆಚ್ಚಳವಾಗಿದೆ. ಪ್ರತಿ ವರ್ಷದಂತೆ ಆಸ್ತಿ ತೆರಿಗೆ ಜೊತೆಯಲ್ಲೇ ಘನತ್ಯಾಜ್ಯ, ಭಿಕ್ಷುಕರ ಸೆಸ್, ಗ್ರಂಥಾಲಯ ಸೆಸ್‍ಗಳು ಸೇರಿಕೊಂಡಿವೆ. ಮೊದಲಿನಂತೆ ದುಡಿಮೆಯೇ ಇಲ್ಲದ ಸಂದರ್ಭದಲ್ಲಿ ಇಷ್ಟು ಪ್ರಮಾಣದಲ್ಲಿ ತೆರಿಗೆ ಭಾರ ಹೆಚ್ಚಿಸಿದ್ದಾರೆ. ಕಷ್ಟದ ದಿನಗಳಲ್ಲಿ ಈ ಕ್ರಮ ಸರಿಯೇ’ ಎಂದು ನಾಗರಿಕರೊಬ್ಬರು ಹಣ ಪಾವತಿಸಿದ ರಸೀದಿಯನ್ನು ತೋರಿಸಿ ಅಳಲು ತೋಡಿಕೊಂಡರು.

ಲಾಕ್‌ಡೌನ್‌ ನಂತರ ಜನಸಾಮಾನ್ಯರು ಆರ್ಥಿಕ ತೊಂದರೆಯಲ್ಲಿದ್ದಾರೆ. ಈ ಸಮಯದಲ್ಲಿ ಸ್ಥಳೀಯ ಸಂಸ್ಥೆಗಳು ಆಸ್ತಿ ತೆರಿಗೆ ಹೆಚ್ಚಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಹೆಚ್ಚಿಸಿದ ತೆರಿಗೆ ಹಿಂಪಡೆದು, ಹಿಂದಿನ ದರವನ್ನೇ ಜಾರಿಗೊಳಿಸಬೇಕು. ಆರ್ಥಿಕ ಸ್ಥಿತಿಯಿಂದ ತೊಂದರೆಗೊಳಗಾದ ನಾಗರಿಕರಿಗೆ ಆಸ್ತಿ ತೆರಿಗೆಯ ಹೆಚ್ಚುವರಿ ಹೊರೆಯಿಂದ ಪಾರು ಮಾಡಬೇಕು. ಅನೇಕರು ಈಗಾಗಲೇ ಪಾವತಿಸಿದ್ದಲ್ಲಿ ಮುಂದಿನ ವರ್ಷದ ಆಸ್ತಿ ತೆರಿಗೆಗೆ ಜಮಾ ಮಾಡಿಕೊಳ್ಳಬೇಕು ಎಂಬ ಒತ್ತಾಯವೂ ಕೆಲವೆಡೆ ನಾಗರಿಕರಿಂದ ಕೇಳಿ ಬಂದಿದ್ದು, ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಜುಲೈ 31ರವರೆಗೂ ಶೇ 5 ವಿನಾಯಿತಿ: ‘ಆಸ್ತಿ ತೆರಿಗೆ ಪಾವತಿಸಲು ಜನರನ್ನು ಪ್ರೋತ್ಸಾಹಿಸಲು ಜೂನ್‌ ತಿಂಗಳ 31ರವರೆಗೂ ಶೇ 5ರಷ್ಟು ವಿನಾಯಿತಿ ಮುಂದುವರಿಸಲಾಗಿತ್ತು. ಕೋವಿಡ್–ಲಾಕ್‌ಡೌನ್ ಕಾರಣಕ್ಕೆ ಅನೇಕರಿಗೆ ಪಾವತಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಈ ಕಾಲಾವಧಿಯನ್ನು ಸರ್ಕಾರ ಜುಲೈ 31ರವರೆಗೂ ವಿಸ್ತರಿಸಿದೆ. ಆಸ್ತಿ ತೆರಿಗೆ ಪಾವತಿ ವಿಳಂಬ ದಂಡ ಆ. 1ರಿಂದ ಜಾರಿಗೆ ಬರಲಿದೆ’ ಎಂದು ನಗರಸಭೆ ಕಂದಾಯಾಧಿಕಾರಿ ಚಂದ್ರಶೇಖರ್ ತಿಳಿಸಿದ್ದಾರೆ.

ಚಳ್ಳಕೆರೆ ನಗರಸಭೆಯ ನೂತನ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಹಳೆಯ ಕಟ್ಟಡವೂ ದುರಸ್ತಿಯಲ್ಲಿ ಇರುವ ಕಾರಣ ತೆರಿಗೆ ಪಾವತಿಸಲು ಬರುವವರಿಗೆ ನಿಲ್ಲುವುದಕ್ಕೂ ಜಾಗವಿಲ್ಲದಂತಹ ಪರಿಸ್ಥಿತಿ ಇದೆ. ಹೆಚ್ಚು ಜನ ಒಮ್ಮೆಗೆ ಬಂದರೆ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಲಿದೆ. ಕೋವಿಡ್ ಕಾರಣಕ್ಕೆ ಜನಸಂದಣಿ ಮಧ್ಯೆ ಕಂದಾಯ ಕಟ್ಟಲು ಕೆಲವರು ಹಿಂದೇಟು ಹಾಕುತ್ತಿದ್ದಾರೆ.

ಏಪ್ರಿಲ್, ಮೇ, ಜೂನ್ ಮೂರು ತಿಂಗಳಲ್ಲಿ ಶೇ 15ರಷ್ಟು ತೆರಿಗೆ ಮಾತ್ರ ವಸೂಲಿಯಾಗಿದೆ. ಮನೆ ಕಂದಾಯ ಶೇ 15ರಿಂದ 25ರವರೆಗೂ ಹೆಚ್ಚುವರಿ ಮಾಡಲಾಗಿದೆ. ಕೋವಿಡ್‌ ಕಾರಣಕ್ಕೆ ನಲ್ಲಿ, ವಾಣಿಜ್ಯ ಮಳಿಗೆ ಕಂದಾಯ ಹೆಚ್ಚಿಸಿಲ್ಲ. ಕಡಿಮೆ ಜನರಿರುವಾಗ ಕಟ್ಟಿದರಾಯಿತು ಎಂಬ ಭಾವನೆಯೂ ಹಲವರಲ್ಲಿದೆ. ಈ ಸಮಸ್ಯೆಗಳಿಂದಾಗಿ ವಸೂಲಾತಿ ಕುಂಠಿತವಾಗಿದೆ.

ಹೊರೆಯಾಗದಂತೆ ತೆರಿಗೆ ಮುಂದುವರಿಕೆ
ಹಿರಿಯೂರು:
ಲಾಕ್‌ಡೌನ್ ಕಾರಣದಿಂದ ಸಾರ್ವಜನಿಕರು ಸಂಕಷ್ಟದಲ್ಲಿದ್ದಾರೆ. ಇದರಿಂದ ನಗರಸಭೆ ಆಡಳಿತ 2021–22ನೇ ಸಾಲಿನ ಆಯವ್ಯಯದಲ್ಲಿ ಯಾವುದೇ ತೆರಿಗೆ ಹೆಚ್ಚಳ ಮಾಡದೆ, 2020–21ರ ತೆರಿಗೆಯನ್ನೇ ಮುಂದುವರಿಸಿದೆ.

ತೆರಿಗೆ ಸಂಗ್ರಹದಲ್ಲಿ ಭಾರಿ ಕುಸಿತ: ನಗರಸಭೆಗೆ ಸೇರಿದ 135 ವಾಣಿಜ್ಯ ಮಳಿಗೆಗಳಿವೆ. 2021–22ನೇ ಸಾಲಿಗೆ ₹ 35 ಲಕ್ಷ ಬೇಡಿಕೆ ಇದ್ದು, ಏಪ್ರಿಲ್‌ನಲ್ಲಿ ₹ 23 ಸಾವಿರ, ಮೇ ಮತ್ತು ಜೂನ್ ತಿಂಗಳಲ್ಲಿ ತಲಾ ಒಂದು ಸಾವಿರ ಮಾತ್ರ ಬಾಡಿಗೆ ವಸೂಲಿಯಾಗಿದೆ.

ನಗರದಲ್ಲಿ 5,293 ನಲ್ಲಿ ಸಂಪರ್ಕಗಳಿದ್ದು, ₹ 95.25 ಲಕ್ಷ ರೂಪಾಯಿ ಬೇಡಿಕೆ ಇದೆ. ಏಪ್ರಿಲ್ ತಿಂಗಳಲ್ಲಿ ₹ 10.94 ಲಕ್ಷ, ಮೇ ತಿಂಗಳಲ್ಲಿ ₹ 3.34 ಲಕ್ಷ ಹಾಗೂ ಜೂನ್ ತಿಂಗಳಲ್ಲಿ ₹ 4.05 ಲಕ್ಷ ತೆರಿಗೆ ಸಂಗ್ರಹವಾಗಿದೆ.

ನಗರದಲ್ಲಿ ಒಟ್ಟು 30,790 ಆಸ್ತಿಗಳಿದ್ದು, ₹ 3.60 ಕೋಟಿ ರೂಪಾಯಿ ಸಂಗ್ರಹ ಗುರಿ ಇದೆ. ಏಪ್ರಿಲ್ ತಿಂಗಳಲ್ಲಿ ₹ 43.18 ಲಕ್ಷ, ಮೇ ತಿಂಗಳಲ್ಲಿ ₹ 5.12 ಲಕ್ಷ ಹಾಗೂ ಜೂನ್ ತಿಂಗಳಲ್ಲಿ ₹ 23.43 ಲಕ್ಷ ಶುಲ್ಕ ಸಂಗ್ರಹವಾಗಿದೆ ಎಂದು ಪೌರಾಯುಕ್ತ ಉಮೇಶ್ ಮಾಹಿತಿ ನೀಡಿದ್ದಾರೆ.

‘ತೆರಿಗೆ ಸಂಗ್ರಹದಲ್ಲಿ ಹಿರಿಯೂರು ನಗರಸಭೆ ಮುಂಚೂಣಿಯಲ್ಲಿ ಇರುತ್ತಿತ್ತು. ಒಂದೂವರೆ ವರ್ಷದಿಂದ ವ್ಯಾಪಾರ–ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದೆ. ಕಲ್ಯಾಣ ಮಂಟಪ, ಚಿತ್ರಮಂದಿರ, ಖಾಸಗಿ ಶಿಕ್ಷಣ ಸಂಸ್ಥೆಗಳು, ನಗರಸಭೆ ವಾಣಿಜ್ಯ ಮಳಿಗೆಗಳು, ಹೋಟೆಲ್–ಜವಳಿ ಇತರ ವ್ಯಾಪಾರ ಕೇಂದ್ರಗಳಿಂದ ಶುಲ್ಕ ಸಂಗ್ರಹ ಆಗುತ್ತಿಲ್ಲ. ಶೇ 5ರ ರಿಯಾಯಿತಿಯನ್ನು ಜುಲೈ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಮುಂದಿನ ತಿಂಗಳು ಹೆಚ್ಚು ತೆರಿಗೆ ಸಂಗ್ರಹವಾಗುವ ವಿಶ್ವಾಸವಿದೆ’ ಎನ್ನುತ್ತಾರೆ ನಗರಸಭೆ ಅಧ್ಯಕ್ಷೆ ಷಂಶುನ್ನೀಸಾ.

ನಿವೇಶನ ತೆರಿಗೆಯಿಂದ ಪುರಸಭೆಗೆ ಆದಾಯ
ಹೊಳಲ್ಕೆರೆ:
ಒಂದು ಲಕ್ಷಕ್ಕೂ ಕಡಿಮೆ ಜನಸಂಖ್ಯೆ ಇರುವ ಪಟ್ಟಣಗಳಲ್ಲಿಯ ನಿವೇಶನಗಳಿಗೂ ತೆರಿಗೆ ನಿಗದಿ ಮಾಡಿರುವುದರಿಂದ ಇಲ್ಲಿಯ ಪುರಸಭೆಗೆ ಹೆಚ್ಚು ಆದಾಯ ನಿರೀಕ್ಷಿಸಲಾಗಿದೆ.

ಈ ಬಾರಿ ಖಾಲಿ ನಿವೇಶನಗಳಿಗೂ ತೆರಿಗೆ ವಸೂಲಿ ಮಾಡುತ್ತಿರುವುದರಿಂದ ಹೆಚ್ಚು ಆದಾಯ ಬರುವ ನಿರೀಕ್ಷೆ ಇದೆ. ನಿವೇಶನಗಳಿಗೆ ಪ್ರದೇಶವಾರು ತೆರಿಗೆ ನಿಗದಿ ಮಾಡಲಾಗಿದೆ. ಹೆಚ್ಚು ಮಾರುಕಟ್ಟೆ ಮೌಲ್ಯ ಹೊಂದಿರುವ ಪ್ರದೇಶಗಳಲ್ಲಿನ ನಿವೇಶನಗಳಿಗೆ ಹೆಚ್ಚು ತೆರಿಗೆ, ಬೇಡಿಕೆ ಕಡಿಮೆ ಇರುವ ಪ್ರದೇಶಗಳ ನಿವೇಶನಗಳಿಗೆ ಕಡಿಮೆ ತೆರಿಗೆ ವಿಧಿಸಲಾಗುತ್ತಿದೆ.

‘ಇದರಿಂದ ನಿವೇಶನ ಮಾಲೀಕರಿಗೂ ಅನುಕೂಲ ಆಗಲಿದೆ. ಹಿಂದೆ ಇಡೀ ಪಟ್ಟಣಕ್ಕೆ ಒಂದೇ ಮಾದರಿಯ ತೆರಿಗೆ ವಿಧಿಸಲಾಗುತ್ತಿತ್ತು. ಇದರಿಂದ ಕಡಿಮೆ ಮೌಲ್ಯ ಹೊಂದಿದ ನಿವೇಶನಗಳು ಹಾಗೂ ಹೆಚ್ಚು ಮೌಲ್ಯ ಇರುವ ನಿವೇಶನ ಮಾಲೀಕರು ಸಮಾನ ತೆರಿಗೆ ಕಟ್ಟುತ್ತಿದ್ದರು. ಕಡಿಮೆ ಬೆಲೆ ಇರುವ ನಿವೇಶನ ಮಾಲೀಕರಿಗೆ ಅನ್ಯಾಯ ಆಗುತ್ತಿತ್ತು. ಈಗ ಅಂತಹ ಸಮಸ್ಯೆ ಇಲ್ಲ. ಇದು ಜನಸ್ನೇಹಿ ತೆರಿಗೆ ಪದ್ಧತಿಯಾಗಿದೆ’ ಎಂದು ಪುರಸಭೆ ಮುಖ್ಯಾಧಿಕಾರಿ ವಾಸಿಂ ತಿಳಿಸಿದ್ದಾರೆ.

‘ಮಾರ್ಚ್ 3, 2021ರಂದು ಪುರಸಭೆ ಅಧ್ಯಕ್ಷ ಆರ್.ಎ.ಅಶೋಕ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ತೆರಿಗೆ ಹೆಚ್ಚಳದ ತೀರ್ಮಾನ ಕೈಗೊಳ್ಳಲಾಗಿತ್ತು. ಸಾರ್ವಜನಿಕರಿಗೆ ಹೊರೆಯಾಗದಂತೆ ಹಾಗೂ ಪುರಸಭೆಯ ಆದಾಯ ಹೆಚ್ಚುವಂತೆ ಕಡಿಮೆ ಪ್ರಮಾಣದಲ್ಲಿ ತೆರಿಗೆ ಹೆಚ್ಚಿಸಲು ತೀರ್ಮಾನಿಸಲಾಗಿತ್ತು. ವಾಸದ ಮನೆಗಳಿಗೆ ಶೇ 1, ಕೈಗಾರಿಕೆ, ವಾಣಿಜ್ಯ ಕಟ್ಟಡಗಳಿಗೆ ಶೇ 2 ತೆರಿಗೆ ವಿಧಿಸಲು ತೀರ್ಮಾನಿಸಲಾಗಿದೆ. 1,000 ಚದುರ ಅಡಿಗೂ ಕಡಿಮೆ ಇರುವ ನಿವೇಶನಗಳಿಗೆ ತೆರಿಗೆ ವಿಧಿಸಲಾಗುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT