ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಅವಧಿಗೂ ಮುನ್ನವೇ ನೆತ್ತಿ ಸುಡುತ್ತಿದೆ ಬಿಸಿಲು

ಸೂರ್ಯನ ಪ್ರಖರತೆಗೆ ಜನ ಹೈರಾಣು, ತಂಪು ಪಾನೀಯಕ್ಕೆ ಮೊರೆ
ಕೆ.ಪಿ. ಓಂಕಾರ ಮೂರ್ತಿ
Published 23 ಫೆಬ್ರುವರಿ 2024, 5:12 IST
Last Updated 23 ಫೆಬ್ರುವರಿ 2024, 5:12 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಹತ್ತು ದಿನದಿಂದ ಬಿಸಿಲಿನ ಝಳ ತೀವ್ರವಾಗುತ್ತಿದ್ದು, ಜನರು ಹೈರಾಣಾಗಿದ್ದಾರೆ. ಬೆಳಿಗ್ಗೆ 8 ಗಂಟೆಗೇ ನಿಗಿನಿಗಿಯಾಗುವ ಸೂರ್ಯನ ಪ್ರಖರತೆ ಸಂಜೆ 6 ಗಂಟೆಯಾದರೂ ಇಳಿಮುಖವಾಗುತ್ತಿಲ್ಲ.

ಪ್ರಸಕ್ತ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ವಾಡಿಕೆಯಷ್ಟು ಮಳೆ ಸುರಿದಿರಲಿಲ್ಲ. ಚಳಿಗಾಲದಲ್ಲೂ ತಣ್ಣನೆಯ ವಾತಾವರಣ ಇರಲಿಲ್ಲ. ಪ್ರತಿ ವರ್ಷ ಯುಗಾದಿ ಬಳಿಕ ವಾತಾವರಣದಲ್ಲಿ ತಾಪಮಾನ ಏರಿಕೆ ಕಾಣುತ್ತಿತ್ತು. ಆದರೆ, ಈ ಬಾರಿ ತೇವಾಂಶದ ಕೊರತೆಯಾಗಿ ಫೆಬ್ರುವರಿ ಮಧ್ಯಭಾಗದಲ್ಲೇ ತಾಪಮಾನ ಹೆಚ್ಚಳವಾಗಿದೆ.

ಕಳೆದ ವರ್ಷ ಜಿಲ್ಲೆಯಲ್ಲಿ ಮಾರ್ಚ್‌ ಅಂತ್ಯಕ್ಕೆ ಸರಾಸರಿ ಗರಿಷ್ಠ ಉಷ್ಣಾಂಶ 36, ಏಪ್ರಿಲ್‌ನಲ್ಲಿ 38 ಡಿಗ್ರಿ ದಾಖಲಾಗಿತ್ತು. ಈ ವರ್ಷ ಫೆಬ್ರವರಿಯಲ್ಲೇ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್‌ ಇದೆ. ಮಧ್ಯಾಹ್ನ ಮನೆಯಿಂದ ಹೊರಬರಲು ಹಿಂದೇಟು ಹಾಕುವ ಸ್ಥಿತಿ ಎದುರಾಗಿದೆ. ರಾತ್ರಿ ಹಾಗೂ ಬೆಳಿಗ್ಗೆ ತಾಪಮಾನ ಕೊಂಚ ಇಳಿಕೆಯಾದರೂ ಮಧ್ಯಾಹ್ನದ ಬಿಸಿಲು ನೆತ್ತಿ ಸುಡುತ್ತಿದೆ.

ಫೆಬ್ರುವರಿಯಲ್ಲೇ ಪ್ರಖರ ಬಿಸಿಲು ಕಾಣಿಸಿಕೊಂಡಿದ್ದು, ಮಾರ್ಚ್‌, ಏಪ್ರಿಲ್‌ ಹಾಗೂ ಮೇನಲ್ಲಿ ಎದುರಾಗುವ ಪರಿಸ್ಥಿತಿ ನೆನೆದರೇ ಜನ ಬೆಚ್ಚಿಬೀಳುವಂತಾಗಿದೆ. ಈಗಾಗಲೇ ಬೀದಿಬದಿಯ ವ್ಯಾಪಾರಿಗಳು, ವೃದ್ಧರು ಸೇರಿ ಹಲವರಿಗೆ ಬೇಸಿಲಿನ ಬೇಗೆ ತಟ್ಟಿದೆ. ದಿಢೀರ್ ತಾಪಮಾನ ಏರಿಕೆಯಿಂದ ಜನರು ಫ್ಯಾನ್‌ ಹಾಗೂ ಹವಾನಿಯಂತ್ರಿತ (ಎ.ಸಿ) ವ್ಯವಸ್ಥೆ ಮೊರೆ ಹೋಗುವಂತಾಗಿದೆ.

ಕಾಂಕ್ರೀಟ್‌ ರಸ್ತೆಯ ಕಾವಿನ ಜೊತೆಗೆ ವಾತಾವರಣದಲ್ಲಿ ಆಗಿರುವ ಏರುಪೇರಿನಿಂದ ತಾಪಮಾನದಲ್ಲಿ ಏರಿಕೆಯಾಗಿದೆ. ಮೂರು ವರ್ಷಗಳ ಹಿಂದೆ ನಗರದ ಮುಖ್ಯ ರಸ್ತೆ ಸೇರಿ ಒಳಭಾಗದ ರಸ್ತೆಯಲ್ಲೂ ಮರಗಳ ಸಂಖ್ಯೆ ಅಧಿಕವಾಗಿತ್ತು. ಆದರೆ, ರಸ್ತೆ ವಿಸ್ತರಣೆ ನೆಪದಲ್ಲಿ ಮರಗಳನ್ನು ಕಡಿದ ಪರಿಣಾಮ ರಸ್ತೆಯಲ್ಲಿ ನೆರಳನ್ನು ಹುಡುಕುವಂತಾಗಿದೆ. ಇನ್ನೂ ಕೆಲವು ದಿನಗಳ ಕಾಲ ನಗರದಲ್ಲಿ ನಿರ್ಮಲ ಆಕಾಶ ಇರಲಿದ್ದು, ಉಷ್ಣಾಂಶದಲ್ಲಿ 2ರಿಂದ 3 ಡಿಗ್ರಿ ಏರಿಕೆಯಾಗಲಿದೆ ಎನ್ನುತ್ತಾರೆ ಹವಾಮಾನ ತಜ್ಞರು.

ತಾಪಮಾನದಿಂದ ಪಾರಾಗಲು ಜನರು ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಎಳನೀರು, ಮಜ್ಜಿಗೆ, ಹಣ್ಣಿನ ಜ್ಯೂಸ್‌ ಸೇವಿಸುತ್ತಿದ್ದಾರೆ. ನಗರದ ಪ್ರವಾಸಿ ಮಂದಿರ, ಜೆಸಿಆರ್‌ ಬಡಾವಣೆ, ಹೊಳಲ್ಕೆರೆ ರಸ್ತೆಯ ಐಸ್‌ಕ್ರಿಮ್‌ ಅಂಗಡಿ ಹಾಗೂ ಬೀದಿ ಬದಿಯ ಸ್ಟಾಲ್‌ಗಳಲ್ಲಿ ಐಸ್‌ಕ್ರಿಮ್‌ ಸೇವಿಸಲು ಜಮಾಯಿಸುತ್ತಿರುವುದು ಸಾಮಾನ್ಯವಾಗಿದೆ. ಕಲ್ಲಂಗಡಿ, ಕರಬೂಜದಂತಹ ನೀರಿನಂಶ ಹೆಚ್ಚಾಗಿರುವ ಹಣ್ಣುಗಳಿಗೆ ಬೇಡಿಕೆ ಬಂದಿದೆ. ಏಳನೀರು ಮಾರಾಟ ಹೆಚ್ಚಾಗಿದೆ.

ಹಿರಿಯರು, ಮಕ್ಕಳು ಬಿಸಿಲ ಆಘಾತಕ್ಕೆ ತಡೆದುಕೊಳ್ಳಲು ಆಗದೆ ಸುಸ್ತಾಗುತ್ತಿದ್ದಾರೆ. ಕಟ್ಟಡ ಕಾರ್ಮಿಕರು ಸೇರಿ ದುಡಿಯುವ ವರ್ಗ ಬಿಸಿಲಿನ ತಾಪಕ್ಕೆ ಹೈರಾಣಾಗಿದೆ. ಶಾಲೆಗೆ ಹೋಗುವವರನ್ನು ಬಿಸಿಲಿನಿಂದ ಕಾಪಾಡುವುದು ಪಾಲಕರಿಗೆ ಸವಾಲಾಗಿದೆ.

ದಿನ ಪೂರ್ತಿ ಬಿಸಿಲು ಹೆಚ್ಚಾದ ಕಾರಣ ಸಂಜೆ ವೇಳೆಗೆ ಬಿಸಿ ಗಾಳಿಯ ಅನುಭವ ಜನರಿಗೆ ಆಗುತ್ತಿದೆ. ಮಧ್ಯರಾತ್ರಿಯವರೆಗೂ ಧಗೆಯ ವಾತಾವರಣವಿದ್ದು, ಮನೆಗಳಲ್ಲಿ ಫ್ಯಾನ್‌ ಅನಿವಾರ್ಯವಾಗಿದೆ. ಆದರೆ ಬಿಸಿಲ ಅಬ್ಬರಕ್ಕೆ ತಂಗಾಳಿ ಮಾಯಾವಾಗಿದೆ.

ಎಂ.ಪಿ.ಅಕ್ಷಿತಾ
ಎಂ.ಪಿ.ಅಕ್ಷಿತಾ

ಈ ವರ್ಷ ಅವಧಿಗೂ ಮುನ್ನವೇ ಬಿಸಿಲಿನ ತೀವ್ರತೆ ಹೆಚ್ಚಾಗಿದೆ. ವಾತಾವರಣದಲ್ಲಿ ಗಾಳಿ ಸಹ ಕಡಿಮೆಯಾಗಿರುವುದರಿಂದ ಸೆಖೆ ಅತಿಯಾಗಿ ಕಾಡುತ್ತಿದೆ. ದಿನಪೂರ್ತಿ ಫ್ಯಾನ್‌ ಹಾಕುವುದರಿಂದ ರಾತ್ರಿಗೆ ಬಿಸಿ ಗಾಳಿ ಬೀಸುತ್ತವೆ.

– ಎಂ.ಪಿ.ಅಕ್ಷಿತಾ ಶಿಕ್ಷಕಿ

ಸವಾಲಾಗಲಿವೆ ಮುಂದಿನ ದಿನಗಳು

ದಿನದಂದ ದಿನಕ್ಕೆ ಏರಿಕೆಯಾಗುತ್ತಿರುವ ಬಿಸಿಲು ಮಾರ್ಚ್‌ ಮೊದಲ ವಾರದಲ್ಲಿ ಜನರಿಗೆ ಸವಾಲಾಗುವ ಸಾಧ್ಯತೆ ಸ್ಪಷ್ಟವಾಗುತ್ತಿವೆ. ವಾರಂತ್ಯದ ವೇಳೆಗೆ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್‌ ದಾಟಲಿದೆ. ಜತೆಗೆ ಮಾರ್ಚ್‌ ಮೊದಲ ವಾರದಲ್ಲೇ 38 ಡಿಗ್ರಿ ಸೆಲ್ಸಿಯಸ್‌ ದಾಖಲಾಗಲಿದ ಎಂಬ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜಿಲ್ಲೆಯ ಮೊಳಕಾಲ್ಮುರು ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡ ಭಾಗದಲ್ಲಿ ಬಿಸಿಲಿನ ಪ್ರಖರತೆ ಹೇಳ ತೀರದಾಗಿದೆ. ಒಟ್ಟಾರೆ ಮಾರ್ಚ್‌ ಏಪ್ರಿಲ್ ಮೇ ತಿಂಗಳು ಭಯಖಮರ ಅನುಭವ ನೀಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT