ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರದುರ್ಗ: ಮಳೆಗಾಲಕ್ಕೆ ಪೂರ್ಣಗೊಳ್ಳದ ಸಿದ್ಧತೆ

ಜಿ.ಬಿ.ನಾಗರಾಜ್‌
Published 20 ಮೇ 2024, 7:44 IST
Last Updated 20 ಮೇ 2024, 7:44 IST
ಅಕ್ಷರ ಗಾತ್ರ

ಚಿತ್ರದುರ್ಗ: ಮುಂಗಾರುಪೂರ್ವ ಮಳೆ ಚುರುಕು ಪಡೆದಿದ್ದು, ವರುಣ ನಿತ್ಯ ಕೃಪೆ ತೋರುತ್ತಿದ್ದಾನೆ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಗರಿಗೆದರಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಆದರೆ, ನಗರದ ಜನರಿಗೆ ಮಳೆ ಶುರುವಾಗುತ್ತಿದ್ದಂತೆಯೇ ಮೈ ಕಂಪಿಸತೊಡಗಿದೆ. ನಗರ, ಪಟ್ಟಣಗಳನ್ನು ಮಳೆಗಾಲಕ್ಕೆ ಪರಿಪೂರ್ಣವಾಗಿ ಸಜ್ಜುಗೊಳಿಸದ ಪರಿಣಾಮ ವರ್ಷಧಾರೆ ಹರ್ಷ ಮೂಡಿಸುವ ಬದಲು ಭೀತಿ ಸೃಷ್ಟಿಸುತ್ತಿದೆ.

ಮುಂಗಾರಿನ ಅವಘಡ ಅರಿತಿರುವ ಜಿಲ್ಲಾಡಳಿತ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳಲು ಸೂಚನೆ ನೀಡಿದೆ. ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ಮೇ 9ರಂದು ಸಭೆ ನಡೆಸಿ ಸಂಭಾವ್ಯ ಪ್ರಕೃತಿ ವಿಕೋಪ ನಿರ್ವಹಣೆಗೆ ತಯಾರಾಗುವಂತೆ ನಗರ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಸಭೆ ನಡೆದು ಹತ್ತು ದಿನ ಕಳೆದರೂ ಸಿದ್ಧತೆಗಳು ಪೂರ್ಣಗೊಂಡಿಲ್ಲ.

ಸಣ್ಣ ಮಳೆ ಸುರಿದರೂ ನಗರ, ಪಟ್ಟಣ ವ್ಯಾಪ್ತಿಯ ಎಲ್ಲೆಂದರಲ್ಲಿ ನೀರು ನುಗ್ಗುತ್ತದೆ. ನೀರು ಸರಾಗವಾಗಿ ಹರಿದು ಹೋಗುವ ಕಾಲುವೆ, ಚರಂಡಿಗಳು ಮಳೆಗಾಲಕ್ಕೆ ಅಸ್ತವ್ಯಸ್ತಗೊಳ್ಳುತ್ತಿವೆ. ಮೇ ತಿಂಗಳಲ್ಲಿ ಮಳೆಗಾಲದ ಸಿದ್ಧತೆ ಕೈಗೊಳ್ಳಲು ನಗರ,  ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರ ನಿರ್ದೇಶನ ನೀಡಿದೆ. ಅಗತ್ಯ ಸೂಚನೆ ಬರುವವರೆಗೂ ಈ ಕಾರ್ಯಕ್ಕೆ ಅಧಿಕಾರಿಗಳು ಆಸಕ್ತಿ ತೋರುತ್ತಿಲ್ಲ. ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸಣ್ಣ ನೀರಾವರಿ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯ ಕಾರಣಕ್ಕೆ ಸಮಸ್ಯೆ ಸಕಾಲಕ್ಕೆ ಇತ್ಯರ್ಥವಾಗುತ್ತಿಲ್ಲ.

ಮಳೆ ನೀರು ಸಂರಕ್ಷಣೆಗೆ ಚಿತ್ರದುರ್ಗ ನಗರ ಮಾದರಿಯಾಗಿದೆ. ನಗರ ವ್ಯಾಪ್ತಿಯಲ್ಲಿ ಬಿದ್ದ ಮಳೆಯ ಹನಿ ನೀರು ವ್ಯರ್ಥ ಆಗದಂತಹ ವ್ಯವಸ್ಥೆಯನ್ನು ಈ ಹಿಂದೆ ಆಡಳಿತ ನಡೆಸಿರುವ ಪಾಳೆಗಾರರು ರೂಪಿಸಿದ್ದಾರೆ. ಮಳೆ ನೀರು ಸರಾಗವಾಗಿ ಹರಿದು ಹೊಂಡ, ಕೆರೆಯ ಒಡಲು ಸೇರುವಂತೆ ಕಾಲುವೆ ನಿರ್ಮಿಸಿದ್ದಾರೆ. ಆದರೆ, ಈ ಕಾಲುವೆಗಳ ರಕ್ಷಣೆಯಲ್ಲಿ ನಗರಸಭೆ ವಿಫಲವಾಗಿದೆ. ರಾಜಕಾಲುವೆಗಳು ಹಲವೆಡೆ ಒತ್ತುವರಿಯಾಗಿದ್ದು, ಮಳೆ ನೀರ ಚರಂಡಿಗಳ ಮೇಲೂ ಕಟ್ಟಡಗಳು ತಲೆ ಎತ್ತಿವೆ. ಇವುಗಳನ್ನು ತೆರವುಗೊಳಿಸುವ ಪ್ರಯತ್ನ ಇನ್ನೂ ಮುಗಿದಿಲ್ಲ.

ಚಂದ್ರವಳ್ಳಿ, ಕಲ್ಲಿನ ಕೋಟೆ, ಜೋಗಿಮಟ್ಟಿ ಅರಣ್ಯ ಪ್ರದೇಶದಲ್ಲಿ ಬಿದ್ದ ಮಳೆ ನೀರು ಹರಿದು ಹೋಗಲು ರಾಜಕಾಲುವೆಗಳಿವೆ. ಚಂದ್ರವಳ್ಳಿ ಭಾಗದಿಂದ ಹೊಳಲ್ಕೆರೆ ರಸ್ತೆ, ಕನಕ ವೃತ್ತದ ಮೂಲಕ ಹಾದು ಹೋಗುವ ರಾಜಕಾಲುವೆ ಕಣ್ಣಿಗೆ ಕಾಣಿಸುವ ಸ್ಥಿತಿಯಲ್ಲಿದೆ. ಜೋಗಿಮಟ್ಟಿ ರಸ್ತೆ, ಜಿಲ್ಲಾ ಆಸ್ಪತ್ರೆ ಸಮೀಪದಲ್ಲಿ ಹಾದು ಹೋಗುವ ರಾಜಕಾಲುವೆಯಲ್ಲಿ ಕೆಳಗೋಟೆ ಸಮೀಪ ಕಸ ತುಂಬಿದೆ. ಸರಸ್ವತಿಪುರಂ, ಮಾಳಪ್ಪನಹಟ್ಟಿ, ಎಂಪಿಎಂಸಿ, ದಾವಣಗೆರೆ ರಸ್ತೆ, ಗುಮಾಸ್ತರ ಕಾಲೊನಿ ಬಳಿ ರಾಜಕಾಲುವೆಗಳಿವೆ. ಅಮೃತ್‌ ನಗರ ಯೋಜನೆಯಡಿ ಪುನರುಜ್ಜೀವನಗೊಳಿಸುವ ಪ್ರಯತ್ನ ನಡೆದಿದೆಯಾದರೂ ಪರಿಪೂರ್ಣಗೊಂಡಿಲ್ಲ.

ಮಳೆ ನೀರು ಚರಂಡಿ, ರಾಜಕಾಲುವೆಗಳಲ್ಲಿ ಕಸ, ತ್ಯಾಜ್ಯ ಹೆಚ್ಚಾಗಿದೆ. ಬಡಾವಣೆಯ ನಿವಾಸಿಗಳು ಮನೆಯ ತ್ಯಾಜ್ಯವನ್ನು ಕಾಲುವೆ, ಚರಂಡಿಗಳಿಗೆ ಸುರಿಯುತ್ತಿರುವುದರಿಂದ ಪ್ರತಿ ಮಳೆಗಾಲದಲ್ಲಿ ಈ ಸಮಸ್ಯೆ ಎದುರಾಗುತ್ತಿದೆ. ಮಳೆ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ನೀರು ನುಗ್ಗುವಂತಾಗಿದೆ. ಕೆಳಗೋಟೆ, ಗುಮಾಸ್ತರ ಕಾಲೊನಿ, ಪಿ ಅಂಡ್‌ ಟಿ ಕ್ವಾಟ್ರಸ್‌, ಚನ್ನಕ್ಕಿಹೊಂಡ, ನೆಹರೂ ನಗರ ಸೇರಿ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ನುಗ್ಗುವ ಭೀತಿ ಇದೆ.

‘ಮಳೆ ನೀರು ಚರಂಡಿ ಹಾಗೂ ರಾಜಕಾಲುವೆ ಸ್ವಚ್ಛಗೊಳಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲವೇ ದಿನಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ. ಪ್ಲಾಸ್ಟಿಕ್‌ ತ್ಯಾಜ್ಯ, ಮನೆ ಬಳಕೆ ವಸ್ತುಗಳು ಹೆಚ್ಚಾಗಿ ಕಾಲುವೆಗಳಲ್ಲಿ ಸಿಕ್ಕಿವೆ. ಮನೆಯ ತ್ಯಾಜ್ಯವನ್ನು ಚರಂಡಿಗೆ ಎಸೆಯುವುದನ್ನು ಜನರು ಕೈಬಿಡಬೇಕು. ಪ್ರಜ್ಞಾವಂತರಾಗಿ ವರ್ತಿಸಿದರೆ ಈ ಸಮಸ್ಯೆ ಸೃಷ್ಟಿಯಾಗದು’ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದರು.

ಚಿತ್ರದುರ್ಗದ ಕೆಳಗೋಟೆಯ ರಾಜಕಾಲುವೆಯಲ್ಲಿ ಬಿದ್ದ ಪ್ಲಾಸ್ಟಿಕ್‌ ತ್ಯಾಜ್ಯ ಹಾಗೂ ಕಾಲುವೆ ಆವರಿಸಿಕೊಂಡ ಗಿಡಗಳು
ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಕೆಳಗೋಟೆಯ ರಾಜಕಾಲುವೆಯಲ್ಲಿ ಬಿದ್ದ ಪ್ಲಾಸ್ಟಿಕ್‌ ತ್ಯಾಜ್ಯ ಹಾಗೂ ಕಾಲುವೆ ಆವರಿಸಿಕೊಂಡ ಗಿಡಗಳು ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಎಪಿಎಂಸಿ ರಸ್ತೆಯ ಚರಂಡಿಯಲ್ಲಿ ತುಂಬಿಕೊಂಡ ತ್ಯಾಜ್ಯ
ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಿತ್ರದುರ್ಗದ ಎಪಿಎಂಸಿ ರಸ್ತೆಯ ಚರಂಡಿಯಲ್ಲಿ ತುಂಬಿಕೊಂಡ ತ್ಯಾಜ್ಯ ಪ್ರಜಾವಾಣಿ ಚಿತ್ರ– ವಿ.ಚಂದ್ರಪ್ಪ
ಚಳ್ಳಕೆರೆ ನಗರದ ರಾಜಕಾಲುವೆ ಜಾಲಿಮುಳ್ಳು ಗಿಡಗಳಿಂದ ಮುಚ್ಚಿಕೊಂಡಿದೆ
ಚಳ್ಳಕೆರೆ ನಗರದ ರಾಜಕಾಲುವೆ ಜಾಲಿಮುಳ್ಳು ಗಿಡಗಳಿಂದ ಮುಚ್ಚಿಕೊಂಡಿದೆ
ಈವರೆಗೆ ಮಳೆ ನೀರು ನುಗ್ಗಿ ಸಮಸ್ಯೆ ಆಗಿರುವ ಬಗ್ಗೆ ದೂರುಗಳು ಬಂದಿಲ್ಲ. ತಗ್ಗು ಪ್ರದೇಶಕ್ಕೆ ನೀರು ನುಗ್ಗದಂತೆ ಕ್ರಮ ಕೈಗೊಳ್ಳಲಾಗಿದೆ. ರಾಜಕಾಲುವೆ ಮಳೆ ನೀರು ಚರಂಡಿ ಸ್ವಚ್ಛತೆ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ.
ಎಂ.ರೇಣುಕಾ ಪೌರಾಯುಕ್ತೆ ಚಿತ್ರದುರ್ಗ
ಮಳೆಗಾಲದಲ್ಲಿ ಮಾತ್ರ ಕಾಲುವೆ ದುರಸ್ತಿ ಕಾರ್ಯ ಕೈಗೊಳ್ಳಲಾಗುತ್ತದೆ. ಕಾಲುವೆ ಸಂರಕ್ಷಣೆ ಕಾಳಜಿ ಇದ್ದರೆ ಬೇಸಿಗೆಯಲ್ಲಿ ಸ್ವಚ್ಛತೆ ಹಾಗೂ ದುರಸ್ತಿ ಮಾಡಿಸಬಹುದಿತ್ತು. ಇದರಿಂದ ಹಣ ವ್ಯಯ ತಪ್ಪುತ್ತದೆ.
ಕಾಂತಪ್ಪ ಚಳ್ಳಕೆರೆ
ರಾಜಕಾಲುವೆ ಹಂದಿಗಳ ತಾಣವಾಗಿ ಮಾರ್ಪಟ್ಟಿವೆ. ಸೊಳ್ಳೆಗಳ ಕಾಟ ಹೆಚ್ಚಿದ್ದು ರಾತ್ರಿ ಹೊತ್ತು ನಿದ್ದೆಯೇ ಬರುವುದಿಲ್ಲ. ಮಲೇರಿಯಾ ಕಲರಾದಂತಹ ರೋಗಗಳು ಹರಡುವ ಭಯ ಕಾಡುತ್ತಿದೆ. ಗಿರಿಜಮ್ಮ ಗೃಹಿಣಿ ಚಳ್ಳಕೆರೆ
ರಾಜಕಾಲುವೆ ಹಂದಿಗಳ ತಾಣವಾಗಿ ಮಾರ್ಪಟ್ಟಿವೆ. ಸೊಳ್ಳೆಗಳ ಕಾಟ ಹೆಚ್ಚಿದ್ದು ರಾತ್ರಿ ಹೊತ್ತು ನಿದ್ದೆಯೇ ಬರುವುದಿಲ್ಲ. ಮಲೇರಿಯಾ ಕಲರಾದಂತಹ ರೋಗಗಳು ಹರಡುವ ಭಯ ಕಾಡುತ್ತಿದೆ. ಗಿರಿಜಮ್ಮ ಗೃಹಿಣಿ ಚಳ್ಳಕೆರೆ
ಹಿರಿಯೂರು: ಎಚ್ಚೆತ್ತ ನಗರಸಭೆ
ಹಿರಿಯೂರು: ಪೂರ್ವ ಮುಂಗಾರು ಆರಂಭವಾಗುತ್ತಿದ್ದಂತೆ ನಗರಸಭೆ ಆಡಳಿತ ಎಚ್ಚೆತ್ತಿದ್ದು ರಾಜಕಾಲುವೆ ಒಳಗೊಂಡಂತೆ ನಗರದ ತಗ್ಗು ಪ್ರದೇಶಗಳಲ್ಲಿನ ಕಾಲುವೆಗಳ ಸ್ವಚ್ಛತೆಗೆ ಮುಂದಾಗಿದೆ. 2022 ಜೂನ್ 6 ರಂದು ಸುರಿದ ಮಳೆಗೆ ನಗರದ ಚಿಟುಗು ಮಲ್ಲೇಶ್ವರ ಬಡಾವಣೆ ಅಕ್ಷರಶಃ ಕೆರೆಯಂತಾಗಿ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿತ್ತು. 2013 ರಲ್ಲಿಯೂ ಅಂತಹದ್ದೇ ಮಳೆಯಾಗಿ ನಗರದ ಆಶ್ರಯ ಕಾಲೊನಿ ಡಿಸಿ ಕಾಲೊನಿಯ ನೂರಾರು ಮನೆಗಳಿಗೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಆಗ ಎಚ್ಚೆತ್ತುಕೊಂಡಿದ್ದ ತಾಲ್ಲೂಕು ಆಡಳಿತ ಅಲ್ಲಿ ರಾಜಕಾಲುವೆ ನಿರ್ಮಿಸಿತ್ತು. ತಾಹಾ ಕಲ್ಯಾಣ ಮಂಟಪ ರಾಷ್ಟ್ರೀಯ ಅಕಾಡೆಮಿ ಶಾಲೆಯ ಹಿಂಭಾಗ ಹೊಸ ಬಡಾವಣೆಗಳು ವಾಣಿವಿಲಾಸ ಬಲನಾಲೆಯ ಬಲಭಾಗದ ಬಡಾವಣೆಗಳು ಹಾಗೂ ಗಾರೆ ದಿಂಡಿನ ಸಮೀಪ ನಾಲೆಯಲ್ಲಿ ನಿಂತ ನೀರು ಹರಿದು ಹೋಗಲು ಸೂಕ್ತ ಸ್ಥಳಾವಕಾಶವಿಲ್ಲದ ಕಾರಣ ಸಿಎಂ ಬಡಾವಣೆಗೆ ನೀರು ನುಗ್ಗಿ ಇಡೀ ಬಡಾವಣೆ ಜಲಾವೃತವಾಗುತ್ತಿತ್ತು. ಎರಡು ವರ್ಷದ ಹಿಂದೆ ವಾಣಿವಿಲಾಸ ನಾಲೆಯ ಕೆಳಭಾಗದಲ್ಲಿ ರಾಜಕಾಲುವೆ ನಿರ್ಮಿಸಿರುವುದರಿಂದ ಮಳೆಯ ನೀರು ಸರಾಗವಾಗಿ ಹರಿದು ಹೋಗಿ ವೇದಾವತಿ ನದಿಗೆ ಸೇರುತ್ತಿದೆ ಎಂದು ಸಿಎಂ ಬಡಾವಣೆ ನಿವಾಸಿಗಳು ಹೇಳುತ್ತಾರೆ. ‘ಹಿರಿಯೂರು ನಗರದ ತಗ್ಗು ಪ್ರದೇಶದಲ್ಲಿನ ಕಾಲುವೆಗಳನ್ನು ಹಾಗೂ ರಾಜಕಾಲುವೆಗಳನ್ನು ಮುಂಜಾಗ್ರತಾ ಕ್ರಮವಾಗಿ ಸ್ವಚ್ಛಗೊಳಿಸುತ್ತಿದ್ದೇವೆ. 2013 ಮತ್ತು 2022 ರಲ್ಲಿ ಬಂದಂತಹ ಮಳೆ ಬಂದರೂ ನಗರವಾಸಿಗಳಿಗೆ ತೊಂದರೆಯಾಗದು. ಯಾವುದಾದರೂ ಬಡಾವಣೆಗಳಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಅಡ್ಡಿಯಾಗಿದ್ದಲ್ಲಿ ನಗರಸಭೆ ಗಮನಕ್ಕೆ ತರಬೇಕು’ ಎಂದು ಪೌರಾಯುಕ್ತ ಶ್ರೀನಾಥ್ ಜಾಧವ್ ಮನವಿ ಮಾಡಿದ್ದಾರೆ.
ನಾಗರಿಕರಿಗೆ ಮಳೆನೀರಿನ ಆತಂಕ
ಚಳ್ಳಕೆರೆ: ಮನೆಗಳಿಗೆ ನುಗ್ಗುವ ಮಳೆನೀರನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣ ಹೂಳು ಕಸ ಹಾಗೂ ಕಟ್ಟಡ ತ್ಯಾಜ್ಯಗಳಿಂದ ರಾಜಕಾಲುವೆಗಳು ತುಂಬಿ ಹೋಗಿದ್ದು ದುಃಸ್ಥಿತಿಗೆ ತಲುಪಿವೆ. ಕಾಲುವೆ ಸಂರಕ್ಷಣೆ ಹಾಗೂ ಅಭಿವೃದ್ಧಿಯ ಕಡೆಗೆ ಕಾಳಜಿವಹಿಸದ ನಗರಸಭೆ ಪ್ರತಿವರ್ಷ ಸಣ್ಣ ಚರಂಡಿ ಸ್ವಚ್ಛತೆಗೆ ಅಧಿಕ ಹಣ ವ್ಯಯ ಮಾಡುತ್ತಿದೆ. ಹೀಗಾಗಿ ವಾಲ್ಮೀಕಿನಗರ ರಹಿಂನಗರ ಚಳ್ಳಕೆರೆಮ್ಮ –ವೀರಭದ್ರಸ್ವಾಮಿ ದೇವಸ್ಥಾನ ಕಾಟಪ್ಪನಹಟ್ಟಿ ಹಾಗೂ ಪಾವಗಡ ರಸ್ತೆ ಮಾರ್ಗದ ರಾಜಕಾಲುವೆಯಲ್ಲಿ ಆಪಿನ ಹುಲ್ಲು ಗಜ್ಜುಗದ ಬಳ್ಳಿ ಜಾಲಿ ಮುಳ್ಳಿನ ಗಿಡಗಳು ದಟ್ಟವಾಗಿ ಬೆಳೆದಿವೆ. ಐದಾರು ಅಡಿ ಕೆಸರು ಕೊಚ್ಚೆ ತುಂಬಿದ ಕಾಲುವೆ ಸದಾ ಬೀರುತ್ತಿರುವ ದುರ್ವಾಸನೆ ನಾಗರಿಕರಲ್ಲಿ ಅಸಹ್ಯ ಹುಟ್ಟಿಸಿದೆ. ಬಿದ್ದ ಮಳೆ ನೀರು ಸರಾಗವಾಗಿ ಹರಿಯಲಿಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿ ಕಾಲುವೆಗಳು ಇವೆ. ನಗರದ ಮೇಲ್ಭಾಗದಿಂದ ಹರಿದು ಬರುವ ಅಜ್ಜನಗುಡಿ ಕೆರೆ ಮತ್ತು ಕರೆಕಲ್ ಕೆರೆಯ ನೀರು ನಗರಂಗೆರೆ ಕೆರೆಗೆ ಸರಾಗವಾಗಿ ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಕಾಲುವೆಯಲ್ಲಿ ತುಂಬಿದ ಕೆಸರು ಕೊಚ್ಚೆಯಿಂದ ಕಾಟಪ್ಪನಹಟ್ಟಿ ಹಳೆಟೌನ್ ರಹಿಂನಗರ ಹಾಗೂ ಪಾವಗಡ ರಸ್ತೆ ಜನವಸತಿ ಪ್ರದೇಶದಲ್ಲಿ ಹಂದಿ-ಸೊಳ್ಳೆಗಳು ಅಧಿಕವಾಗಿವೆ. ಸಾಧಾರಣ ಮಳೆ ಸುರಿದರೂ ನೀರು ನುಗ್ಗುವ ಭೀತಿ ಎದುರಾಗಿದೆ. ಕೊಳಚೆ ಹೊತ್ತು ತರುವ ನೀರು ಸಾಂಕ್ರಾಮಿಕ ರೋಗಗಳಿಗೂ ಕಾರಣವಾಗುವ ಆತಂಕ ಜನರನ್ನು ಕಾಡುತ್ತಿದೆ. ‘ರಾಜಕಾಲುವೆ ದುರಸ್ತಿಗೆ ರೈಲ್ವೆ ನಿಲ್ದಾಣದ ಬಳಿ ಇರುವ ಹಳಿಯಿಂದ ತುಂಬಾ ಸಮಸ್ಯೆಯಾಗುತ್ತಿತ್ತು. ಹಾಗಾಗಿ ಈ ಬಾರಿ ಪಾವಗಡ ರಸ್ತೆ ನಿಲ್ದಾಣದಿಂದ ಈಗಾಗಲೇ ರಾಜಕಾಲುವೆ ದುರಸ್ತಿ ಕಾರ್ಯ ಆರಂಭಿಸಲಾಗಿದೆ. ಕಾಟಪ್ಪನಹಟ್ಟಿ ಸೇರಿ ನಗರದ ನಾಲ್ಕು ರಾಜಕಾಲುವೆಗಳನ್ನು ಹಂತ ಹಂತವಾಗಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಪೌರಾಯುಕ್ತ ಜೀವನ್‍ ಕಟ್ಟಿಮನಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT