ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಯಲ್ಲಿ ಆಧುನಿಕ ಸೌಲಭ್ಯದ ಆಕರ್ಷಣೆ

ಹಿರಿಯೂರು ತಾಲ್ಲೂಕಿನ ಕಸವನಹಳ್ಳಿಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಸಿರು ಹೊದಿಕೆ
Last Updated 7 ಜನವರಿ 2016, 8:47 IST
ಅಕ್ಷರ ಗಾತ್ರ

ಹಿರಿಯೂರು: ಮುಖ್ಯದ್ವಾರವನ್ನು ದಾಟಿ ಒಳಹೋದರೆ ಗೊಂಚಲುಗಳ ಭಾರಕ್ಕೆ ತೂಗುತ್ತಿರುವ ತೆಂಗಿನ ಮರಗಳು. ಅಡಿಕೆ, ಬಾಳೆ, ಹುಣಸೆ, ಮಾವು, ಕಿತ್ತಳೆ, ನಿಂಬೆ, ನುಗ್ಗೆ, ಕರಿಬೇವು, ಅಲಂಕಾರಿಕ ಸಸ್ಯಗಳು, ತೇಗ, ಸಿಲ್ವರ್... ಇವು ಸಾಲದು ಎನ್ನುವಂತೆ ಅಕ್ಷರದಾಸೋಹ ಯೋಜನೆಗೆ ಬೇಕಿರುವ ವಿವಿಧ ತರಕಾರಿ. ಇಡೀ ಆವರಣ ಕ್ಷಣಹೊತ್ತು ದಟ್ಟ ಮಲೆನಾಡನ್ನು ಪ್ರವೇಶಿಸಿದಂತಹ ಅನುಭವ...!

– ಇಂತಹ ದೃಶ್ಯ ಕಣ್ಣಿಗೆ ಬೀಳುವುದು ಹಿರಿಯೂರಿನಿಂದ ಆಲೂರು ಮಾರ್ಗ ವಾಗಿ ಸುಮಾರು ಎಂಟು ಕಿ.ಮೀ. ಕ್ರಮಿಸಿದರೆ ರಸ್ತೆ ಬದಿಯಲ್ಲೇ ಕಾಣುವ ಕಸವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ.

ಬಿಇಒ ಡಿ.ಹನುಮಂತರಾಯಪ್ಪ ಅವರೊಂದಿಗೆ ಈಚೆಗೆ ಶಾಲೆಗೆ ಭೇಟಿ ನೀಡಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ರೇವಣಸಿದ್ದಪ್ಪ ತಮ್ಮ ಅಧೀನದಲ್ಲಿ ಬರುವ ಸರ್ಕಾರಿ ಶಾಲೆಯ ನೋಟವನ್ನು ಕಂಡು ಕ್ಷಣಕಾಲ ಬೆರಗಾದರು.

ಶಾಲೆಯ ಮುಖ್ಯ ಶಿಕ್ಷಕ ನಾಗರಾಜ್, ಸಹಶಿಕ್ಷಕರಾದ ಎಸ್.ರಮೇಶ್, ಆರ್.ಬಿ.ಭಾಗ್ಯಾ, ಕೆ.ಜಿ.ಮಮತಾ ಅವರ ಜತೆ ಶಾಲೆಯ ಮಕ್ಕಳು, ಶಾಲಾಭಿವೃದ್ಧಿ ಸಮಿತಿಯವರು ಕೈಜೋಡಿಸಿದ್ದಾರೆ. ಇದರ ಫಲವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲೂ ಕಾಣಸಿಗದ ಪರಿಸರ, ಸೌಲಭ್ಯ ಇಲ್ಲಿವೆ ಎಂದು ರೇವಣಸಿದ್ದಪ್ಪ ಸುದ್ದಿಗಾರರಿಗೆ ತಿಳಿಸಿದರು.

ಒಂದರಿಂದ ಆರನೇ ತರಗತಿವರೆಗೆ 53 ಮಕ್ಕಳು ಕಲಿಯುತ್ತಿದ್ದಾರೆ. ಕಲಿಕೆಯಲ್ಲಿ ಸಂಪೂರ್ಣ ತೊಡಗಿಸಿ ಕೊಳ್ಳಲು ಅಗತ್ಯವಿರುವ ಎಲ್ಲ ರೀತಿಯ ವ್ಯವಸ್ಥೆಯನ್ನು ಶಿಕ್ಷಕರು ಮಾಡಿದ್ದಾರೆ. ಬೋಧನೆಗೆ ಗುಣಮಟ್ಟದ ಪಾಠೋಪ ಕರಣಗಳ ಬಳಕೆ, ಶಾಲಾ ಮೈದಾನದಲ್ಲಿ ಉದ್ಯಾನ, ಅಲಂಕಾರಿಕ ಸಸಿಗಳನ್ನು ಒಳಗೊಂಡಿರುವ ನರ್ಸರಿ, ಸಾವಯವ ಗೊಬ್ಬರ ತಯಾರಿಕೆ, ಸ್ಮಾರ್ಟ್ ಕಲಿಕೆ ತರಗತಿ ನೋಡಿದ ಅಧಿಕಾರಿಗಳು ಸಂತಸಗೊಂಡರು. ಮಕ್ಕಳ ಬೌದ್ಧಿಕ ಮಟ್ಟವನ್ನು ಪರೀಕ್ಷಿಸಲು ಕೇಳಿದ ಪ್ರಶ್ನೆ ಗಳಿಗೆ ಬಂದ ಪಟಪಟ ಉತ್ತರಕ್ಕೆ ಮಾರು ಹೋಗಿ, ಶಾಲೆಯನ್ನು ತಾಲ್ಲೂಕಿನ ‘ಮಾದರಿ ಶಾಲೆ’ ಎಂದು ಘೋಷಿಸಿದರು.

ಶಾಲೆಯಲ್ಲಿನ ಸ್ವಚ್ಛತೆ, ಹಸಿರು ಪರಿಸರ, ಕಲಿಕೆಯ ವಿಧಾನ ಎಲ್ಲವೂ ಶಿಕ್ಷಣದ ಬಗ್ಗೆ ಆಸಕ್ತಿ ಇರುವ ಎಲ್ಲರಿಗೂ ಮಾದರಿಯಾಗಿವೆ. ಶಾಲೆಯ ಅಭಿವೃದ್ಧಿಗೆ ಸಹಕರಿಸುತ್ತಿರುವ ಗ್ರಾಮ ಪಂಚಾಯ್ತಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಗ್ರಾಮದ ಮುಖಂಡರು, ಪೋಷಕರು, ಮಕ್ಕಳು ಈ ಶಾಲೆ ‘ನಮ್ಮೆಲ್ಲರ ಶಾಲೆ’ ಎನ್ನುವಂತೆ ನಿರ್ವಹಿಸುತ್ತಿರುವುದು ನಿರಂತರ ಮುಂದುವರಿಯಲಿ ಎಂದು ರೇವಣಸಿದ್ದಪ್ಪ ಆಶಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT