ರಾಮನಗರ ನಗರಸಭೆ: ಅವಿಶ್ವಾಸ ನಿರ್ಣಯಕ್ಕೆ ಗೆಲುವು

7
30 ಸದಸ್ಯರಿಂದ ಅಧ್ಯಕ್ಷ ರವಿಕುಮಾರ್ ವಿರುದ್ಧ ಮತ ಚಲಾವಣೆ; ಕಾಂಗ್ರೆಸ್‌ ಬೆಂಬಲಕ್ಕೆ ನಿಂತ ಜೆಡಿಎಸ್‌

ರಾಮನಗರ ನಗರಸಭೆ: ಅವಿಶ್ವಾಸ ನಿರ್ಣಯಕ್ಕೆ ಗೆಲುವು

Published:
Updated:
Deccan Herald

ರಾಮನಗರ: ನಗರಸಭೆ ಅಧ್ಯಕ್ಷ ಪಿ. ರವಿಕುಮಾರ್ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಗೆಲುವುವಾಗಿದ್ದು, ಅವರು ಅಧಿಕಾರ ಕಳೆದುಕೊಂಡಿದ್ದಾರೆ.

ಸೋಮವಾರ ನಗರಸಭೆಯ ಪ್ರಶಸ್ತಿ ಸಭಾಂಗಣದಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅವಿಶ್ವಾಸದ ಪರವಾಗಿ ಮತ ಚಲಾಯಿಸಿದರು. ಒಟ್ಟು 31 ಸದಸ್ಯ ಬಲದ ನಗರಸಭೆಯಲ್ಲಿ ರವಿಕುಮಾರ್ ಹೊರತುಪಡಿಸಿ ಉಳಿದೆಲ್ಲ ಸದಸ್ಯರೂ ಸಭೆಗೆ ಹಾಜರಾಗಿದ್ದರು. ಅವೆರೆಲ್ಲ ಅವಿಶ್ವಾಸದ ಪರ ಕೈ ಎತ್ತಿದರು.

ನಿಗದಿಯಂತೆ ಮಧ್ಯಾಹ್ನ 2 ಗಂಟೆಗೆ ಸಭೆ ಆರಂಭಗೊಂಡಿತು. ಉಪಾಧ್ಯಕ್ಷೆ ಮಂಗಳಾ ಶಂಭುಗೌಡ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಯುಕ್ತೆ ಸುಮಾ ಮತದಾನ ಪ್ರಕ್ರಿಯೆ ನಡೆಸಿಕೊಟ್ಟರು.

ಸಭೆಯ ಮುಕ್ತಾಯದ ಬಳಿಕ ಕಾಂಗ್ರೆಸ್‌ ಸದಸ್ಯರೆಲ್ಲರೂ ಒಟ್ಟಾಗಿ ನಗರಸಭೆ ಕಟ್ಟಡದ ಎದುರು ವಿಜಯದ ಸಂಕೇತ ತೋರಿದರು.

‘ಸಭೆಯ ಮೂರನೇ ಎರಡು ಭಾಗಕ್ಕಿಂತ ಹೆಚ್ಚು ಸದಸ್ಯರು ಅವಿಶ್ವಾಸದ ಪರವಾಗಿ ಮತ ಚಲಾಯಿಸಿರುವುದರಿಂದ ನಿರ್ಣಯವು ಅಂಗೀಕಾರಗೊಂಡಿದೆ. ಹೀಗಾಗಿ ರವಿಕುಮಾರ್ ತತ್‌ಕ್ಷಣದಿಂದಲೇ ಅಧ್ಯಕ್ಷರು ಅಧಿಕಾರ ಕಳೆದುಕೊಂಡಿದ್ದಾರೆ. ಸಭೆಯ ನಿರ್ಣಯವನ್ನು ಅಂಗೀಕಾರಕ್ಕಾಗಿ ಇಂದೇ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು’ ಎಂದು ಸುಮಾ ಪತ್ರಕರ್ತರಿಗೆ ತಿಳಿಸಿದರು.

ಜೆಡಿಎಸ್ ಬೆಂಬಲ

ನಿರೀಕ್ಷೆಯಂತೆಯೇ ಜೆಡಿಎಸ್‌ನ 12 ಸದಸ್ಯರು ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಮತ ಚಲಾಯಿಸುವ ಮೂಲಕ ಕಾಂಗ್ರೆಸ್‌ ಬೆಂಬಲಕ್ಕೆ ನಿಂತರು. ಇವರೊಟ್ಟಿಗೆ ಬಿಜೆಪಿಯಿಂದ ಆಯ್ಕೆಗೊಂಡ ಇಬ್ಬರು ಸದಸ್ಯರು ಹಾಗೂ ಇಬ್ಬರು ಪಕ್ಷೇತರರೂ ಬೆಂಬಲ ಸೂಚಿಸಿದರು.

ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಕೋರಿ ಕಾಂಗ್ರೆಸ್ ಸದಸ್ಯರಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆಯಾಗುತ್ತಲೇ ರವಿಕುಮಾರ್ ಜೆಡಿಎಸ್ ಬಾಗಿಲು ತಟ್ಟಿದ್ದರು. ತಮಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು.

ಈ ಬಗ್ಗೆ ಅಳೆದು ತೂಗಿ ಲೆಕ್ಕಾಚಾರ ಮಾಡಿದ ಪಕ್ಷದ ಮುಖಂಡರು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಗಮನಕ್ಕೂ ತಂದಿದ್ದರು. ನಗರಸಭೆ ಸದಸ್ಯ ಮಂಜುನಾಥ್ ನಿವಾಸದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್‌ ಬೆಂಬಲಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿತ್ತು.

ಪತ್ರ ಕೊಟ್ಟು ಹೊರಟ ಅಧ್ಯಕ್ಷರು

 ಸಭೆಯ ಆರಂಭಕ್ಕೂ ಮುನ್ನ ರವಿಕುಮಾರ್ ನಗರಸಭೆಯ ಆಯುಕ್ತರಿಗೆ ಪತ್ರವೊಂದನ್ನು ನೀಡಿದರು. ಅವಿಶ್ವಾಸ ನಿರ್ಣಯದ ವಿರುದ್ಧವಾಗಿ ತಾವು ಹೈಕೋರ್ಟ್ ಮೊರೆ ಹೋಗಿದ್ದು, ನ್ಯಾಯಾಲಯದ ಆದೇಶದವರೆಗೆ ಸಭೆ ನಡೆಸಬಾರದು ಎಂದು ಆಗ್ರಹಿಸಿದರು.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆಯುಕ್ತೆ ಸುಮಾ ‘ಸಭೆಯ ಆರಂಭದ 24 ಗಂಟೆಗೆ ಮುನ್ನ ಪತ್ರ ನೀಡಿದ್ದಲ್ಲಿ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದೆ. ಆದರೆ ಸಭೆಯ ಸಂದರ್ಭದಲ್ಲಿ ಪತ್ರ ನೀಡಿರುವ ಕಾರಣ ಅದನ್ನು ಓದಲು ಆಗಿಲ್ಲ. ನಂತರ ಅದಕ್ಕೆ ಉತ್ತರ ನೀಡುತ್ತೇನೆ’ ಎಂದರು.

ಸಂಸದರು ಗೈರು

ಸಂಸದ ಡಿ.ಕೆ. ಸುರೇಶ್‌ ಅವರಿಗೂ ಮತ ಚಲಾವಣೆಯ ಹಕ್ಕು ಇತ್ತು. ಆದರೆ ಕಾಂಗ್ರೆಸ್–ಜೆಡಿಎಸ್ ಹೊಂದಾಣಿಕೆ ಖಾತ್ರಿಯಾದ ಕಾರಣ ಸುರೇಶ್ ಇಂದಿನ ಸಭೆಗೆ ಗೈರಾದರು.

ಉಚ್ಛಾಟನೆಗೆ ಸಿದ್ಧತೆ
ಪಕ್ಷದ ಹೈಕಮಾಂಡ್‌ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡ ಆರೋಪದ ಮೇಲೆ ರವಿಕುಮಾರ್ ಅವರನ್ನು ಕಾಂಗ್ರೆಸ್‌ನಿಂದ ಉಚ್ಛಾಟಿಸಲು ಸಿದ್ಧತೆ ನಡೆದಿದೆ.

ಅಧಿಕಾರ ಹಂಚಿಕೆಯ ಸೂತ್ರದಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಪಕ್ಷದ ಮುಖಂಡರು ರವಿಕುಮಾರ್‌ಗೆ ಸೂಚಿಸಿದ್ದರು. ಒಮ್ಮೆ ರಾಜೀನಾಮೆ ನೀಡಿದ್ದ ಅಧ್ಯಕ್ಷರು ಬಳಿಕ ಅದನ್ನು ವಾಪಸ್‌ ಪಡೆದಿದ್ದರು. ಹೀಗಾಗಿ ಸದಸ್ಯರೆಲ್ಲರೂ ಸೇರಿ ಅವರ ವಿರುದ್ಧ ಅವಿಶ್ವಾಸ ಮಂಡನೆಯ ನಿರ್ಧಾರಕ್ಕೆ ಬಂದಿದ್ದರು.

‘ರವಿಕುಮಾರ್‌ ವಿರುದ್ಧ ಶಿಸ್ತುಕ್ರಮಕ್ಕೆ ಕೋರಿ ಪಕ್ಷದ ಜಿಲ್ಲಾ ಅಧ್ಯಕ್ಷರಿಗೆ ಈಗಾಗಲೇ ಪತ್ರ ಬರೆಯಲಾಗಿದೆ. ಸದ್ಯದಲ್ಲಿಯೇ ಅವರನ್ನು ಪಕ್ಷದಿಂದ ಉಚ್ಛಾಟಿಸುವ ನಿರ್ಣಯ ಹೊರಬೀಳಲಿದೆ’ ಎಂದು ಬ್ಲಾಕ್‌ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎ.ಬಿ. ಚೇತನ್‌ಕುಮಾರ್ ತಿಳಿಸಿದರು.

ಎರಡನೇ ಬಾರಿ ಅವಿಶ್ವಾಸ

ರಾಮನಗರ ನಗರಸಭೆಯ ಇತಿಹಾಸದಲ್ಲಿ ಅಧ್ಯಕ್ಷರ ವಿರುದ್ಧವಾಗಿ ಅವಿಶ್ವಾಸ ಮಂಡನೆ ಆಗುತ್ತಿರುವುದು ಇದು ಎರಡನೇ ಬಾರಿ.
ಈ ಹಿಂದೆ 2008ರಲ್ಲಿ ಕೆ. ಶೇಷಾದ್ರಿ ಅಧ್ಯಕ್ಷರಾಗಿದ್ದ ಸಂದರ್ಭ ಸ್ವಪಕ್ಷೀಯರಾದ ಜೆಡಿಎಸ್ ಸದಸ್ಯರಿಂದಲೇ ಅವಿಶ್ವಾಸ ನಿರ್ಣಯ ಮಂಡನೆ ಆಗಿತ್ತು. 25 ಜೆಡಿಎಸ್ ಸದಸ್ಯರ ಪೈಕಿ ಏಳು ಮಂದಿ ಮಾತ್ರ ಶೇಷಾದ್ರಿ ಬೆಂಬಲಕ್ಕೆ ನಿಂತಿದ್ದರು. ಹೀಗಾಗಿ ಅವಿಶ್ವಾಸ ನಿರ್ಣಯಕ್ಕೆ ಜಯವಾಗಿ ಅಧ್ಯಕ್ಷರು ಅಧಿಕಾರ ಕಳೆದುಕೊಂಡಿದ್ದರು.

ನ್ಯಾಯಾಲಯದ ಮೊರೆ?
ರವಿಕುಮಾರ್ ತಮ್ಮ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ತಡೆ ಕೋರಿ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ನ್ಯಾಯಾಲಯವು ತಡೆಯಾಜ್ಞೆ ನೀಡಲಿದೆ ಎಂದು ಅವರು ವಿಶ್ವಾಸ ಹೊಂದಿದ್ದು, ಸಭೆ ಆರಂಭದವರೆಗೂ ಅಂತಹ ಯಾವುದೇ ಆದೇಶ ಹೊರಬಿದ್ದ ಪ್ರತಿ ನಗರಸಭೆ ಅಧಿಕಾರಿಗಳ ಕೈಸೇರಲಿಲ್ಲ.

* ಅವಿಶ್ವಾಸದ ಪರವಾಗಿ ಎಲ್ಲ ಸದಸ್ಯರೂ ಮತ ಚಲಾಯಿಸಿದ್ದು, ರವಿಕುಮಾರ್‌ ತತ್‌ಕ್ಷಣದಿಂದಲೇ ಅಧಿಕಾರ ಕಳೆದುಕೊಂಡಿದ್ದಾರೆ. ಸಭೆಯ ನಿರ್ಣಯವನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು
–ಸುಮಾ, ಆಯುಕ್ತೆ, ರಾಮನಗರ ನಗರಸಭೆ

 

 

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !