ಹಾಲಿನ ಡೇರಿ ನಿರ್ದೇಶಕರ ಆಯ್ಕೆ ಚುನಾವಣೆ: ಕೋರ್ಟ್ ಮೆಟ್ಟಿಲೇರಿದ ಹಾಲು ಉತ್ಪಾದಕರು

7
ಕೊಳ್ಳಿಗನಹಳ್ಳಿ ಗ್ರಾಮ

ಹಾಲಿನ ಡೇರಿ ನಿರ್ದೇಶಕರ ಆಯ್ಕೆ ಚುನಾವಣೆ: ಕೋರ್ಟ್ ಮೆಟ್ಟಿಲೇರಿದ ಹಾಲು ಉತ್ಪಾದಕರು

Published:
Updated:
Deccan Herald

ಹಾರೋಹಳ್ಳಿ (ಕನಕಪುರ): ತಾಲ್ಲೂಕಿನ ಹಾರೋಹಳ್ಳಿ ಹೋಬಳಿ ಕೊಳ್ಳಿಗನಹಳ್ಳಿ ಗ್ರಾಮದ ಹಾಲಿನ ಡೇರಿ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆಸಿದರೂ ಮತ ಎಣಿಕೆ ಮಾಡದೆ ಕೋರ್ಟ್‌ ನಿರ್ದೇಶನದಂತೆ ಉಪ ಖಜಾನೆಯಲ್ಲಿ ಮತ ಪೆಟ್ಟಿಗೆಗಳನ್ನು ಭದ್ರವಾಗಿ ಇಡಲಾಗಿದೆ.

ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ನೀಡಲಿಲ್ಲ ಎಂದು ಹಾಲು ಉತ್ಪಾದಕರು ನ್ಯಾಯಾಲಯದ ಮೊರೆ ಹೋಗಿದ್ದರು. ಡೇರಿಗೆ 317ಮಂದಿ ಷೇರುದಾರರಿದ್ದು ಅವರಲ್ಲಿ ಮರಣ ಹೊಂದಿದ ಹಾಗೂ ಗ್ರಾಮ ತೊರೆದವರನ್ನು ಹೊರತುಪಡಿಸಿ 238 ಸದಸ್ಯರಿದ್ದಾರೆ. ಅವರಲ್ಲಿ ನಾಲ್ಕು ಭಾರಿ ನಡೆದ ಸರ್ವ ಸದಸ್ಯರ ಸಭೆಗೆ ಹಾಜರಾದ 61ಮಂದಿಗೆ ಮಾತ್ರ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶ ನೀಡಿದ್ದರಿಂದ ಇದನ್ನು ಪ್ರಶ್ನಿಸಿ 58ಮಂದಿ ಹೈಕೋರ್ಟ್‌ ಮೊರೆ ಹೋಗಿದ್ದರು.

ನ್ಯಾಯಾಲಯ ಅರ್ಜಿಯನ್ನು ಪರಿಗಣನೆಗೆ ತೆಗೆದುಕೊಂಡು 180 ದಿನ ಹಾಲು ಹಾಕಿರುವ 58 ಮಂದಿಗೂ ಮತದಾನ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸಿಕೊಟ್ಟು ನಿಗದಿತ ದಿನಾಂಕದಂದು ಚುನಾವಣೆ ನಡೆಸಿ ಮುಂದಿನ ಆದೇಶ ಬರುವ ತನಕ ಮತ ಎಣಿಕೆ ಮಾಡದಂತೆ ಆದೇಶ ನೀಡಿತ್ತು.

ಅದರಂತೆ ಚುನಾವಣಾಧಿಕಾರಿಯಾದ ಯು.ಎಸ್‌.ಶಿವರಾಜೇಗೌಡ ಗುರುವಾರ ಚುನಾವಣೆ ನಡೆಸಿದ್ದರು. 7 ಸಾಮಾನ್ಯ ಸ್ಥಾನಗಳಿಗೆ 18 ಮಂದಿ, 2 ಮಹಿಳಾ ಮೀಸಲು ಸ್ಥಾನಕ್ಕೆ 4 ಮಂದಿ, 2 ಹಿಂದುಳಿದ ಎ ವರ್ಗಕ್ಕೆ 3 ಮಂದಿ, 1 ಪರಿಶಿಷ್ಟ ಜಾತಿ ಮೀಸಲು ಸ್ಥಾನಕ್ಕೆ 2 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಪರಿಶಿಷ್ಟ ಪಂಗಡ ವರ್ಗದ ಮೀಸಲು ಸ್ಥಾನಕ್ಕೆ ಯಾರು ಅಭ್ಯರ್ಥಿ ಇಲ್ಲದರಿಂದ ಆ ಸ್ಥಾನಕ್ಕೆ ಚುನಾವಣೆ ನಡೆಯಲಿಲ್ಲ. 119 ಮತದಾರರಲ್ಲಿ 119 ಮತದಾರರು ಚುನಾವಣೆಯಲ್ಲಿ ಪಾಲ್ಗೊಂಡು ಮತದಾನ ಮಾಡಿದರು.

ಮೊದಲ ಪಟ್ಟಿಯಂತೆ 61 ಮಂದಿ ಮತದಾನಕ್ಕೆ ಪ್ರತ್ಯೇಕ ಮತಪೆಟ್ಟಿಗೆ, ನ್ಯಾಯಾಲಯದ ಅದೇಶದ ಮೇರೆಗೆ ಮತದಾನದ ಅವಕಾಶ ಪಡೆದ 58 ಮತದಾರರಿಗೆ ಪ್ರತ್ಯೇಕ ಮತಪೆಟ್ಟೆಗೆಯಲ್ಲಿ ಚುನಾವಣೆ ಮಾಡಲಾಯಿತು.

ಡೇರಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಎಲ್‌.ಲೋಕೇಶ್‌ ಮಾತನಾಡಿ, ರೈತರು ಹಾಲಿನ ಡೇರಿಗೆ 180 ದಿನ ಹಾಲು ಹಾಕಿದ್ದರೂ ವಾರ್ಷಿಕವಾಗಿ ನಡೆಯುವ 4 ಜಿ.ಬಿ.ಎಂಗಳಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಕನಿಷ್ಠ 500ಲೀಟರ್‌ ಹಾಲು ಹಾಕಿರಬೇಕು. ಅಂತಹ ಸದಸ್ಯರಿಗೆ ಮಾತ್ರ ಚುನಾವಣೆಯಲ್ಲಿ ಮತದಾನದ ಅವಕಾಶವಿದ್ದು ಅದರಂತೆ ಮೊದಲ ಪಟ್ಟಿಯಲ್ಲಿ 52 ಮಂದಿಗೆ ಮತದಾನದ ಅವಕಾಶ ನೀಡಿ ಎರಡನೇ ಪಟ್ಟಿಯಲ್ಲಿ 99ಮಂದಿಗೆ ಮತದಾನದ ಅವಕಾಶ ನೀಡಲಾಗಿತ್ತು. ಆದರೂ ಸದಸ್ಯರು ಕೋರ್ಟ್‌ ಮೊರೆ ಹೋಗಿದ್ದಾರೆ ಎಂದರು.

ಗ್ರಾಮದ ಮುಖಂಡ ಡೇರಿಯ ಸದಸ್ಯ ಶಿವಾನಂದ ಕೆ.ಎನ್‌. ಮಾತನಾಡಿ, ಡೇರಿಗೆ 119ಮಂದಿ 180 ದಿನ ಹಾಲು ಹಾಕಿದ್ದಾರೆ. ಆದರೆ, ಕಾರ್ಯದರ್ಶಿ 52, 99, 117 ಮಂದಿಯ ಮೂರು ಪಟ್ಟಿ ನೀಡಿದ್ದರು. 50 ಮಂದಿಗೆ ಮಾತ್ರ ಚುನಾವಣೆಯಲ್ಲಿ ಮತದಾನದ ಅವಕಾಶ ನೀಡಿದ್ದರಿಂದ ಅದನ್ನು ಪ್ರಶ್ನಿಸಿ 58ಮಂದಿ ನ್ಯಾಯಾಲಯಕ್ಕೆ ಹೋಗಿದ್ದು 119 ಮಂದಿಗೂ ಮತದಾನದ ಅವಕಾಶ ನ್ಯಾಯಾಲಯ ನೀಡಿದೆ. ನ್ಯಾಯಾಲಕ್ಕೆ ಹೋಗಲು ಕಾರ್ಯದರ್ಶಿ ಅವರ ತಪ್ಪು ಮಾಹಿತಿಯೇ ಕಾರಣ ಎಂದು ದೂರಿದರು.

ಚುನಾವಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಅತ್ಯಂತ ಶಾಂತಿಯುತವಾಗಿ ಚುನಾವಣೆ ನಡೆಯಿತು. ಚಿಕ್ಕರಾಜು.ಎಚ್‌.ಬಿ, ರವಿ.ಎಚ್‌.ಪಿ, ರವಿ.ಕೆ.ಪಿ, ರಾಜು.ಚಿ, ವೆಂಕಟೇಶ್‌, ದೀಪು.ಎಂ.ಆರ್‌ ಹಾಗೂ ಹಾಲಿನ ಡೈರಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಕೆ.ಎಲ್‌.ಲೋಕೇಶ್‌ ಚುನಾವಣೆಯಲ್ಲಿ ಸಹಾಯಕರಾಗಿ ಕಾರ್ಯ ನಿರ್ವಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !