ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸ್ಯಸಾಹಿತ್ಯಕ್ಕೆ ಪ್ರತ್ಯೇಕ 'ವಿಮರ್ಶಾ ಶಾಖೆ’ ಬೇಕು

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ಹಾಸಭಾಸ–ನಗೆಸಮಯ’ದಲ್ಲಿ ಡುಂಡಿರಾಜ್ ಆಶಯ
Published 24 ಮಾರ್ಚ್ 2024, 7:34 IST
Last Updated 24 ಮಾರ್ಚ್ 2024, 7:34 IST
ಅಕ್ಷರ ಗಾತ್ರ

ಮಂಗಳೂರು: ಪ್ರಮುಖ ಸಾಹಿತ್ಯ ಕೃತಿಗಳಲ್ಲಿನ ಹಾಸ್ಯದ ತುಣುಕುಗಳನ್ನು ಗಂಭೀರವಾಗಿ ಪರಿಗಣಿಸುವ ವಿಮರ್ಶಕರು ಹಾಸ್ಯಸಾಹಿತ್ಯವನ್ನು ಎರಡನೇ ದರ್ಜೆಗೆ ತಳ್ಳುತ್ತಾರೆ. ಈ ಪ್ರವೃತ್ತಿ ಇಲ್ಲದಾಗಬೇಕಾದರೆ ಹಾಸ್ಯಸಾಹಿತ್ಯಕ್ಕೆಂದೇ ಪ್ರತ್ಯೇಕ ವಿಮರ್ಶಾ ಶಾಖೆ ರೂಪುಗೊಳ್ಳಬೇಕು ಎಂದು ಹನಿಗವಿತೆಗಳ ಮೂಲಕ ಖ್ಯಾತಿ ಗಳಿಸಿರುವ ಎಚ್‌.ಡುಂಡಿರಾಜ್ ಅಭಿಪ್ರಾಯಪಟ್ಟರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಪುರಭವನದಲ್ಲಿ ಆಯೋಜಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ಸಂಜೆ ನಡೆದ ‘ಹಾಸಭಾಸ–ನಗೆಸಮಯ’ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಅವರು ಮಾತನಾಡಿದರು.

ನಗೆ ಸಾಹಿತ್ಯವನ್ನು ವಿಮರ್ಶಕರು ಈಚೆಗೆ ಗಮನಿಸತೊಡಗಿದ್ದಾರೆ. ಆದರೆ ಅದರಲ್ಲಿ ಹಾಸ್ಯದ ಅಂಶಗಳನ್ನು ಬದಿಗೆ ಸರಿಸಿ ವಾಸ್ತವಿಕ ನೆಲೆಯಲ್ಲಿ ವಿಮರ್ಶೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಸಾಹಿತ್ಯ ಪ್ರಕಾರದ ವಿಮರ್ಶೆಗೆ ಪ್ರತ್ಯೇಕ ಮಾನದಂಡಗಳನ್ನು ಸಿದ್ಧಪಡಿಸಬೇಕಾಗಿದೆ ಎಂದು ಅವರು ಹೇಳಿದರು.

ಸಮ್ಮೇಳನದ ಅಧ್ಯಕ್ಷೆ ಭುವನೇಶ್ವರಿ ಹೆಗಡೆ ಅವರನ್ನು ಉದ್ದೇಶಿಸಿ ‘ಭುವನೇಶ್ವರಿಯವರೇ, ನಿಮ್ಮ ವಾಸ ಮಂಗಳೂರಿನ ಕದ್ರಿ; ನೀವು ವಿಶ್ವದಾದ್ಯಂತ ಎಲ್ಲರ ಮನಸ್ಸು ಕದ್ರಿ’ ಎಂಬ ಹನಿಗವಿತೆಯನ್ನು ಹೇಳುತ್ತ ಮಾತು ಆರಂಭಿಸಿದ ಅವರು ಭಾಷಣದುದ್ದಕ್ಕೂ ತಮ್ಮ ಪ್ರಸಿದ್ಧ ‘ಹನಿ’ಗಳನ್ನು ಉಲ್ಲೇಖಿಸುತ್ತ ಸಾಗಿದರು.

ಹಾಸ್ಯ ಸಾಹಿತ್ಯದ ಉದ್ದೇಶ ರಂಜನೆ ಮಾತ್ರವಲ್ಲ, ಹಾಸ್ಯವನ್ನು ಬಳಸಿಕೊಂಡು ವಿಕಟ, ಕಟು ವಾಸ್ತವದ ಚಿತ್ರಣ ನೀಡಲು ಪ್ರಯತ್ನಿಸಲಾಗುತ್ತದೆ. ಆದ್ದರಿಂದ ಗಂಭೀರ ಸತ್ಯಗಳನ್ನು ತಿಳಿಯಲು ಈ ಸಾಹಿತ್ಯ ಪ್ರಕಾರ ಬೇಕಾಗುತ್ತದೆ ಎಂದು ಡುಂಡಿರಾಜ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯ ಹಾಸ್ಯ ಸಾಹಿತ್ಯ ಎಂಬ ವಿಷಯದ ಬಗ್ಗೆ ಮಾತನಾಡಿದ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ನರಸಿಂಹಮೂರ್ತಿ ಆರ್‌ ‘ದಕ್ಷಿಣ ಕನ್ನಡ ಹಾಸ್ಯ ಸಾಹಿತ್ಯದಲ್ಲಿ ಹಿಂದುಳಿಯಲಿಲ್ಲ. ಅತ್ಯುತ್ತಮ ಹಾಸ್ಯ ಸಾಹಿತ್ಯ ಇಲ್ಲಿ ಸೃಷ್ಟಿಯಾಗಿದೆ. ಹಾಸ್ಯ ಸಾಹಿತ್ಯಕ್ಕೆಂದೇ ಕೆಲವು ಪತ್ರಿಗಳು ಇಲ್ಲಿ ಇದ್ದವು ಎಂದರು.

ಕನ್ನಡ ಸಾಹಿತ್ಯ ಮತ್ತು ಹಾಸ್ಯ ಎಂಬ ವಿಷಯದಲ್ಲಿ ಮಾತನಾಡಿದ ಕನ್ನಡ ಪ್ರಾಧ್ಯಾಪಕಿ ಜ್ಯೋತಿಪ್ರಿಯ ‘ಪಂಪ, ರನ್ನ, ನಾಗಚಂದ್ರನ ಕಾವ್ಯಗಳಲ್ಲಿ ಹಾಸ್ಯಕ್ಕೆ ಸಾಕಷ್ಟು ಉದಾಹರಣೆಗಳು ಇವೆ. ನಡುಗನ್ನಡದ ಸಾಹಿತ್ಯದಲ್ಲೂ ಹಾಸ್ಯ ಮೇಳೈಸಿದೆ. ಶಿವಶರಣರ ವಚನಗಳಲ್ಲಿ ವಿಡಂಬನೆಯ ರೂಪದಲ್ಲಿ ಹಾಸ್ಯವಿದೆ. ಹರಿಹರ, ಬಸವರಾಜ ದೇವರು, ನಂಬಿಯಣ್ಣನ ರಗಳೆಗಳಲ್ಲೂ ಹಾಸ್ಯವಿದೆ’ ಎಂದರು.

ಹಾಸ್ಯ ಪ್ರಸಂಗಗಳನ್ನು ಉಲ್ಲೇಖಿಸಿದ ಬಂಟ್ವಾಳದ ಅನಿತಾ ನರೇಶ್ ಮಂಚಿ ‘ಕಣ್ಣು–ಕಿವಿ ತೆರೆದಿಟ್ಟರೆ ನಿತ್ಯಜೀವನದಲ್ಲಿ ಹಾಸ್ಯವನ್ನು ಗುರುತಿಸಬಹುದು’ ಎಂದರು.

ಬಹುಭಾಷಾ ಕವಿ ಬಿ.ಎಸ್‌ ಅಮ್ಮೆಂಬಳ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲ್ಲೂಕು ಘಕಟದ ಅಧ್ಯಕ್ಷ ಡಿ.ಯದುಪತಿ ಗೌಡ ಇದ್ದರು. ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲ್ಲೂಕು ಘಕಟದ ಗೌರವ ಕಾರ್ಯದರ್ಶಿ ಎನ್‌.ಗಣೇಶ್ ಪ್ರಸಾದ್ ನಿರೂಪಿಸಿದರು.

ಹಾಸಭಾಸ–ನಗೆಸಮಯ ಗೋಷ್ಠಿಯಲ್ಲಿ ಭುವನೇಶ್ವರಿ ಹೆಗಡೆ ಮತ್ತು ನರಸಿಂಹಮೂರ್ತಿ ಮಾತುಕತೆಯಲ್ಲಿ ತೊಡಗಿದ್ದರು. ಎಚ್.ಡುಂಡಿರಾಜ್ ಪಾಲ್ಗೊಂಡಿದ್ದರು

ಹಾಸಭಾಸ–ನಗೆಸಮಯ ಗೋಷ್ಠಿಯಲ್ಲಿ ಭುವನೇಶ್ವರಿ ಹೆಗಡೆ ಮತ್ತು ನರಸಿಂಹಮೂರ್ತಿ ಮಾತುಕತೆಯಲ್ಲಿ ತೊಡಗಿದ್ದರು. ಎಚ್.ಡುಂಡಿರಾಜ್ ಪಾಲ್ಗೊಂಡಿದ್ದರು

–ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT