ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪೊಳಲಿ: ಕಲ್ಕುಟ ಕೆರೆಗೆ ಕಾಯಕಲ್ಪ ನೀಡಿದ ಕರಿಯಂಗಳ ಪಂಚಾಯಿತಿ

ಮೋಹನ್ ಕೆ.ಶ್ರೀಯಾನ್ ರಾಯಿ
Published 6 ಏಪ್ರಿಲ್ 2024, 7:33 IST
Last Updated 6 ಏಪ್ರಿಲ್ 2024, 7:33 IST
ಅಕ್ಷರ ಗಾತ್ರ

ಬಂಟ್ವಾಳ: ಇಲ್ಲಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನ ಸಮೀಪದಲ್ಲೇ ಪಾಳುಬಿದ್ದಿದ್ದ ವಿಶಾಲ ಕಲ್ಕುಟ ಕೆರೆಯನ್ನು ಕರಿಯಂಗಳ ಗ್ರಾಮ ಪಂಚಾಯಿತಿಯಿಂದ ಪುನಶ್ಚೇತನಗೊಳಿಸಲಾಗುತ್ತಿದೆ.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರರ ಸಂಪನ್ಮೂಲ ಬಳಸಿ ಕೆರೆಗೆ ಕಾಯಕಲ್ಪ ನೀಡಲಾಗುತ್ತಿದೆ. ಇಲ್ಲಿನ ಪುಂಚಮೆಯಿಂದ ಪೊಳಲಿ ದೇವಳ ರಸ್ತೆ ನಡುವೆ ಸುಮಾರು 5 ಎಕರೆ ಸರ್ಕಾರಿ ಜಮೀನಿನ ತಗ್ಗು ಪ್ರದೇಶದಲ್ಲಿ ಮಳೆ ನೀರು ಸಂಗ್ರಹಿಸಿ, ಪ್ರವಾಸೋದ್ಯಮ ಇಲಾಖೆಯಡಿ ಪುನಶ್ಚೇತನಗೊಳಿಸಿ ಹೊಸ ರೂಪ ನೀಡಲು ಮುಂದಾಗಿದೆ.

ಈಗಾಗಲೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ₹ 10 ಲಕ್ಷ ವೆಚ್ಚದಲ್ಲಿ ಸುಮಾರು 5 ಅಡಿ ತುಂಬಿದ್ದ ಹೂಳು ಮೇಲೆತ್ತಿ ಶುಚಿಗೊಳಿಸಿ ನೀರು ಸಂಗ್ರಹಗೊಂಡಿದೆ. ಇನ್ನೊಂದೆಡೆ ಎಂಆರ್‌ಪಿಎಲ್ ಸಂಸ್ಥೆಯ ಸಿಎಸ್ಆರ್ ನಿಧಿಯಡಿ ₹ 6.65ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣಗೊಳ್ಳುತ್ತಿದೆ. ಈ ಕರೆಯ ಸುತ್ತಲೂ ಕಲ್ಲು ಹಾಸಿ, ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ಉದ್ಯೋಗ ಖಾತರಿ ಯೋಜನೆಯಡಿ ಈಗಾಗಲೇ ₹ 39 ಲಕ್ಷ ಅನುದಾನ ವಿನಿಯೋಗಗೊಂಡಿದೆ. ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ ಇಲಾಖೆ ₹ 50 ಲಕ್ಷ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದ್ದು, ಬೋಟಿಂಗ್ ಸಹಿತ ಸುತ್ತ ಹಸಿರೀಕರಣಗೊಳಿಸಲು ನೀಲಿನಕಾಶೆ ಸಿದ್ಧಪಡಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ ತಿಳಿಸಿದ್ದಾರೆ.

ಕರಿಯಂಗಳ ಗ್ರಾಮ ಪಂಚಾಯಿತಿ ಜತೆಗೆ ಪೊಳಲಿ ರಾಮಕೃಷ್ಣ ತಪೋವನ, ರಾಷ್ಟ್ರೀಕೃತ ಬ್ಯಾಂಕ್‌ನ ಸಿಎಸ್ಆರ್ ಅನುದಾನ ನೀಡಲು ಮನವಿ ಸಲ್ಲಿಸಲಾಗಿದೆ. ಈ ಕರೆ ಬದಿಯಲ್ಲೇ ಹಾದು ಹೋಗಿರುವ ಸುಮಾರು ಒಂದು ಕಿ.ಮೀ. ರಸ್ತೆಯಲ್ಲಿ ಸಂಚರಿಸುತ್ತಿರುವ ಪೊಳಲಿ ಕ್ಷೇತ್ರದ ಭಕ್ತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಪ್ರಕೃತಿ ರಮಣೀಯ ಪ್ರದೇಶದಲ್ಲಿ ಈ ವಿಶಾಲವಾದ ಕೆರೆ ಅಭಿವೃದ್ಧಿಗೊಂಡಾಗ ಕೃಷಿಕರಿಗೂ ಅನುಕೂಲಕರವಾಗಲಿದೆ. ಇದೇ ಮಾದರಿಯಲ್ಲಿ ಇತರ ಗ್ರಾಮ ಪಂಚಾಯಿತಿಗಳೂ ಕಾರ್ಯನಿರ್ವಹಿಸಿದಾಗ ಅಲ್ಲಿನ ಪಾಳುಬಿದ್ದ ಸರ್ಕಾರಿ ಜಮೀನು ಅತಿಕ್ರಮಣಕ್ಕೂ ಕಡಿವಾಣ ಬೀಳಲಿದೆ ಎನ್ನುತ್ತಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT