ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಶೀರ್ ಚೊಕ್ಕಬೆಟ್ಟು ಮಾದರಿ‌ ಕಾರ್ಯ

ಪೊಲೀಸ್ ಸೇವೆಯೊಂದಿಗೆ ಅಂಗವಿಕಲರ ಸೇವಾ ಕೈಂಕರ್ಯಕ್ಕೆ ಸಾಥ್‌
Last Updated 3 ಡಿಸೆಂಬರ್ 2021, 4:57 IST
ಅಕ್ಷರ ಗಾತ್ರ

ಮುಡಿಪು: ವೃತ್ತಿಯಲ್ಲಿ ಪೊಲೀಸ್ ಸಿಬ್ಬಂದಿಯಾದರೂ ಅಂಗವಿಕಲರ ಬದುಕಿಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು ಅಸೈಗೋಳಿಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿ ಬಶೀರ್ ಚೊಕ್ಕಬೆಟ್ಟು.

ಸರ್ಕಾರವು ಅಂಗವಿಕಲರಿಗಾಗಿ ಹಲವಾರು ಸೌಲಭ್ಯ, ಯೋಜನೆಗಳನ್ನು ಜಾರಿಗೆ ತರುತ್ತಿವೆ. ಆದರೆ, ಅವು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪುವುದು ಕಡಿಮೆ. ಇಂತಹ ಸೌಲಭ್ಯಕ್ಕಾಗಿ ಹಲವಾರು ಬಾರಿ ಸರ್ಕಾರಿ ಕಚೇರಿಗಳಿಗೆ ಅಲೆದಾಟ ಮಾಡಬೇಕಾಗುತ್ತದೆ. ಅಂಗವಿಕಲರು ತಮಗೆ ಸಿಗಬೇಕಾದ ಸೌಲಭ್ಯ ಪಡೆಯಲು ಅನುಭವಿಸುತ್ತಿರುವ ನರಕಯಾತನೆಯನ್ನು ಹತ್ತಿರದಿಂದ ನೋಡಿದ್ದ ಬಶೀರ್ ಚೊಕ್ಕಬೆಟ್ಟು, ಅವರ ಬದುಕು ಹಸನುಗೊಳಿಸಲು ತಮ್ಮಿಂದಾಗುವ ಪ್ರಯತ್ನ ಮಾಡಲು ಪಣ ತೊಟ್ಟಿದ್ದರು.

ಬಾಲ್ಯದಲ್ಲಿಯೇ ಕಷ್ಟದಲ್ಲಿರುವವರಿಗೆ ನೆರವಾಗುವ ಮನೋಭಾವನೆಯನ್ನು ಬೆಳೆಸಿಕೊಂಡಿದ್ದ ಅವರು ಕೆಎಸ್ಆರ್‌ಪಿ ಪಡೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಬಿಡುವಿನ ಸಮಯವನ್ನು ಅಂಗವಿಕಲರ ಸೇವೆಗಾಗಿ ಮೀಸಲಿಟ್ಟಿದ್ದಾರೆ.

ಈಗಾಗಲೇ ಬಶೀರ್ ಅವರು ಬಹಳಷ್ಡು ಅಂಗವಿಕಲರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂಗವಿಕಲರ ಸೌಲಭ್ಯದ ಜೊತೆಗೆ ಇತರರಿಗೂ ವಿಧವಾ ವೇತನ, ವೃದ್ಯಾಪ್ಯ ವೇತನ ಸೇರಿದಂತೆ ಹಲವಾರು ಸೌಲಭ್ಯ ಒದಗಿಸಿಕೊಡುವ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ರಜಾ ದಿನ ಹಾಗೂ ಬಿಡುವಿನ ವೇಳೆಗಳಲ್ಲಿ ಆಶ್ರಮಗಳಿಗೂ ತೆರಳಿ ಹಿರಿಯರ ಸೇವೆ ಮಾಡುತ್ತಿದ್ದಾರೆ.

ಬಶೀರ್ ಅವರು ಪ್ರತಿ ವರ್ಷ ಅಂಗವಿಕಲರ ದಿನಾಚರಣೆಯನ್ನು ಅಂಗವಿಕಲರಿಗೆ ಹಣ್ಣುಹಂಪಲು ಹಾಗೂ ಮಕ್ಕಳಿಗೆ ಪುಸ್ತಕಗಳನ್ನು ಕೊಡುವ ಮೂಲಕ ವಿಶಿಷ್ಟವಾಗಿ ಆಚರಿಸುತ್ತಾರೆ.

ತಣ್ಣೀರು ಬಾವಿ ನಿವಾಸಿ ಅಬ್ದುಲ್ ಖಾದರ್– ಖತೀಜಮ್ಮ ದಂಪತಿಯ ಪುತ್ರ ಬಶೀರ್ ಚೊಕ್ಕಬೆಟ್ಟು, ಯಾವುದೇ ಫಲಾಪೇಕ್ಷೆ ಇಲ್ಲದೆ, ಪ್ರಚಾರದ ಹಂಗಿಲ್ಲದೆ, ಜಾತಿ ಮತ‌ ಬೇಧವಿಲ್ಲದೆ ಅಂಗವಿಕಲರ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬಡ ಕುಟುಂಬದಲ್ಲಿ
ಜನಿಸಿದ ಬಶೀರ್, ಬಾಲ್ಯದಲ್ಲಿ ಪತ್ರಿಕೆ ಮಾರಾಟ ಮಾಡಿ, ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ಪೂರೈಸಿದ್ದರು. ಬಳಿಕ ದಿನಸಿ ಅಂಗಡಿ, ಸೈಕಲ್ ಶಾಪ್‌ಗಳಲ್ಲಿಯೂ ದುಡಿಯುತ್ತಿದ್ದರು.

ಒಂದು ದಿನ ಪತ್ರಿಕೆಯಲ್ಲಿ ಕೆಎಸ್ಆರ್‌ಪಿಯಲ್ಲಿ ಖಾಲಿ ಇರುವ ಹುದ್ದೆಗೆ ಅರ್ಜಿ ಆಹ್ವಾನಿಸಿದ ವಿಷಯ ನೋಡಿ ಬಶೀರ್ ಅರ್ಜಿ ಹಾಕಿದ್ದರು. ಇದರಲ್ಲಿ ಅವರು ಆಯ್ಕೆಯಾಗಿ 2002 ರಲ್ಲಿ ಕೆಎಸ್‌ಆರ್‌ಪಿ ಅಸೈಗೋಳಿಯಲ್ಲಿ ಗ್ರೂಪ್ ಡಿ ನೌಕರನಾಗಿ (ಪೊಲೀಸ್ ಅನುಯಾಯಿ) ಕೆಲಸಕ್ಕೆ ಸೇರಿಕೊಂಡರು.

ಬೆಂಗಳೂರಿನ ಕನ್ನಡ ಅಭಿವೃದ್ಧಿ ಸಮಿತಿಯ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರಿನ ಜೂನಿಯರ್ ಚೇಂಬರ್ ವತಿಯಿಂದ ಉತ್ತಮ ಸಾಧಕ ಪ್ರಶಸ್ತಿ, ಜೆಸಿಐ ಯುವ ಸಾಧಕ ಪ್ರಶಸ್ತಿ, ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ ಸೇವಾ ರತ್ನ ಪ್ರಶಸ್ತಿ, ಗಡಿನಾಡ ದೋಣಿ ಪ್ರಶಸ್ತಿ, 2020 ರಲ್ಲಿ ಹೊರದೇಶದಲ್ಲಿ ನೆಲೆಸಿರುವ ಯುನೈಟೆಡ್ ಚೊಕ್ಕಬೆಟ್ಟು ಗ್ಲೋಬಲ್ ಫಾರಂ ವತಿಯಿಂದ ಹುಟ್ಟೂರ ಸನ್ಮಾನ ಮೊದಲಾದ ಪ್ರಶಸ್ತಿಗಳು ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT