ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲಾ–ಕಾಲೇಜು ಆವರಣದೊಳಗೇ ಪಾರ್ಕಿಂಗ್

ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸೂಚನೆ
Published 8 ಜೂನ್ 2024, 7:38 IST
Last Updated 8 ಜೂನ್ 2024, 7:38 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕ ಮೋಟಾರು ವಾಹನ ನಿಯಮದ ಪ್ರಕಾರ ಮಕ್ಕಳನ್ನು ಕರೆದೊಯ್ಯುವ ವಾಹನಗಳ ಸ್ಥಿತಿಗತಿ ಸೇರಿದಂತೆ ಎಲ್ಲ ನಿಬಂಧನೆಗಳನ್ನು ಪಾಲಿಸುತ್ತಿರುವ ಬಗ್ಗೆ ಶಾಲಾ, ಕಾಲೇಜುಗಳ ಮುಖ್ಯಸ್ಥರು ಕಡ್ಡಾಯವಾಗಿ ಪಾಲನಾ ವರದಿ ನೀಡುವಂತೆ ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸೂಚಿಸಿದರು.

ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಶುಕ್ರವಾರ ಕರೆದಿದ್ದ ಶಾಲಾ– ಕಾಲೇಜುಗಳ ಮುಖ್ಯಸ್ಥರು, ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಶಾಲಾ ಮಕ್ಕಳ ಸುರಕ್ಷತಾ ಸಮಿತಿ ಸದಸ್ಯರು, ಶಾಲಾ ವಾಹನ ಚಾಲಕರ ಸಭೆಯಲ್ಲಿ ಅವರು ಮಾತನಾಡಿದರು.

ಶಾಲಾ –ಕಾಲೇಜುಗಳು ಪ್ರಾರಂಭವಾಗುವ ಹಾಗೂ ಮುಕ್ತಾಯಗೊಳ್ಳುವ ಸಮಯದಲ್ಲಿ ರಸ್ತೆಗಳಲ್ಲಿ ಆಗುವ ವಾಹನ ದಟ್ಟಣೆ ತಡೆಯಲು ಕ್ರಮ ಕೈಗೊಳ್ಳಬೇಕು. ಶಾಲೆ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ವಾಹನಗಳನ್ನು ನಿಲ್ಲಿಸಲು ಹಾಗೂ ವಿದ್ಯಾರ್ಥಿಗಳನ್ನು ಇಳಿಸಲು ಅಥವಾ ಹತ್ತಿಸಲು ಶಾಲಾ–ಕಾಲೇಜು ಆವರಣದೊಳಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಪಾರ್ಕಿಂಗ್ ಸ್ಥಳ ಇಲ್ಲದ ಶಿಕ್ಷಣ ಸಂಸ್ಥೆಗಳು ಶೀಘ್ರದಲ್ಲಿ ಈ ವ್ಯವಸ್ಥೆ ಮಾಡಿಕೊಳ್ಳಬೇಕು. ಮಕ್ಕಳನ್ನು ಶಾಲೆಗೆ ಕರೆತರುವ ಪೋಷಕರು ಸಂಚಾರ ನಿಯಮ ಪಾಲನೆ ಮಾಡಬೇಕು ಎಂದು ಪೊಲೀಸ್ ಕಮಿಷನರ್ ಹೇಳಿದರು.

ಶಾಲಾ ವಾಹನಗಳಲ್ಲಿ ಹಾಗೂ ವಿದ್ಯಾರ್ಥಿಗಳು ಬರುವ ಇತರ ವಾಹನಗಳಲ್ಲಿ ನಿಗದಿತ ಪ್ರಮಾಣಕ್ಕಿಂತ ಅಧಿಕ ಮಕ್ಕಳನ್ನು ಕರೆದೊಯ್ಯಬಾರದು. ವಾಹನಗಳಲ್ಲಿ ಕರ್ಕಶ ಹಾರನ್‌ಗಳನ್ನು ಬಳಸಬಾರದು. ನಿಯಮ ಮೀರಿದಲ್ಲಿ ಅಂತಹ ವಾಹನ ಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ವಿದ್ಯಾರ್ಥಿಗಳಿಗೆ ಪೋಕ್ಸೊ ಕಾಯ್ದೆಗೆ ಸಂಬಂಧಿಸಿ ಆಗಾಗ ತಿಳಿವಳಿಕೆ ನೀಡುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದ ಆಗಬೇಕು. ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅಡಚಣೆ ಆಗದಂತೆ ಶಾಲೆ– ಕಾಲೇಜು ಪ್ರಾರಂಭಿಸುವ ಹಾಗೂ ಅಂತ್ಯಗೊಳಿಸುವ ಸಮಯವನ್ನು ಬದಲಾಯಿಸಿಕೊಳ್ಳಬೇಕು. ವಿದ್ಯಾರ್ಥಿಗಳನ್ನು ಕರೆತರುವ ಶಾಲಾ ವಾಹನ ಸೇರಿದಂತೆ ಇತರ ಬಾಡಿಗೆ ವಾಹನಗಳಾದ ಆಟೊರಿಕ್ಷಾ, ಟ್ಯಾಕ್ಸಿ ಇತ್ಯಾದಿಗಳ ಚಾಲಕರ, ಸಹಾಯಕರ ಪೂರ್ವಾಪರ ಮಾಹಿತಿಯನ್ನು ಪೊಲೀಸ್ ಠಾಣೆಗಳ ಮುಖಾಂತರ ಪರಿಶೀಲಿಸಿ ವರದಿ ಪಡೆಯುವಂತೆ ಅನುಪಮ್ ಅಗರ್ವಾಲ್ ಸೂಚಿಸಿದರು.

ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ಬಿ.ಪಿ ದಿನೇಶ್ ಕುಮಾರ್, ಸಂಚಾರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ಷೆ ನಜ್ಮಾ ಫಾರೂಕಿ, ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌ಗಳಾದ ಕೃಷ್ಣಾನಂದ ಜಿ.ನಾಯ್ಕ, ಹುಲುಗಪ್ಪ ಡಿ, ಮತ್ತು ದೀಪಕ್ ಎಂ.ಕೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT