ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಸಾಹಿತ್ಯ ಸಮ್ಮೇಳನ: ಯಕ್ಷಗಾನದ ಅಸ್ಮಿತೆಗೆ ಜಾಲತಾಣದ ಹೊಡೆತ

ಕರಾವಳಿ ಸಾಹಿತ್ಯ ಪರಂಪರೆ ಅವಲೋಕನ ಗೋಷ್ಠಿಯಲ್ಲಿ ವಿಮರ್ಶಕ ಉಜಿರೆ ಅಶೋಕ ಭಟ್ ಬೇಸರ
Published 24 ಮಾರ್ಚ್ 2024, 7:36 IST
Last Updated 24 ಮಾರ್ಚ್ 2024, 7:36 IST
ಅಕ್ಷರ ಗಾತ್ರ

ಮಂಗಳೂರು: ಯಕ್ಷಗಾನವನ್ನು ಹೊರಗಿಟ್ಟು ಕರಾವಳಿಯ ಸಾಹಿತ್ಯ ಪ್ರಕಾರಗಳನ್ನು ಅವಲೋಕಿಸಲು ಸಾಧ್ಯವಿಲ್ಲ. ಆದರೆ ಕೊರೋನೋತ್ತರ ಕಾಲದಲ್ಲಿ ಯಕ್ಷಗಾನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುವವರಿಂದ ಹೊಡೆತ ಬಿದ್ದಿದೆ ಎಂದು ವಿಮರ್ಶಕ, ಉಜಿರೆ ಅಶೋಕ ಭಟ್ ಬೇಸರ ವ್ಯಕ್ತಪಡಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಪುರಭವನದಲ್ಲಿ ಆಯೋಜಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ಕರಾವಳಿಯ ಸಾಹಿತ್ಯ ಪರಂಪರೆ ಅವಲೋಕನ’ ಗೋಷ್ಠಿಯಲ್ಲಿ ಯಕ್ಷಗಾನ ಸಾಹಿತ್ಯದ ಕುರಿತು ಅವರು ಮಾತನಾಡಿದರು.

ಯಕ್ಷಗಾನದಲ್ಲಿ ಸ್ಥಿರ ಸಾಹಿತ್ಯ ಮತ್ತು ಚರ ಸಾಹಿತ್ಯ ಇದೆ. ಆದರೆ ಈಚೆಗೆ ಕೆಟ್ಟ ಸಾಹಿತ್ಯ ಸೇರಿಕೊಂಡು ವಿಕಾರಗಳು ಕಾಣಿಸಿಕೊಳ್ಳುತ್ತಿವೆ. ವಿಡಿಯೊ ಮಾಡಿ ಜಾಲತಾಣಕ್ಕೆ ಹಾಕುವವರು ತಾವು ಮಾಡಿದ್ದೆಲ್ಲವೂ ಯಕ್ಷಗಾನದ ಪ್ರಥಮ ಪ್ರಯೋಗ ಎನ್ನತೊಡಗಿದ್ದಾರೆ. ವಾಸ್ತವದಲ್ಲಿ ಯಕ್ಷಗಾನದಲ್ಲಿ ಎಲ್ಲ ಪ್ರಯೋಗಗಳೂ ಆಗಿರುವುದರಿಂದ ಸದ್ಯ ಯಾವುದನ್ನೂ ಮೊದಲು ಎನ್ನಲಾಗದು. ಸಾಮಾಜಿಕ  ಜಾಲತಾಣಗಳು ದಿಕ್ಕು ತಪ್ಪಿಸುತ್ತಿವೆ‌ ಎಂದು ಅವರು ಅಭಿಪ್ರಾಯಪಟ್ಟರು.

ಯಕ್ಷಗಾನಕ್ಕೆ 900 ವರ್ಷಗಳ ಇತಹಾಸವಿದೆ. ಲಿಖಿತ, ಮೌಖಿಕ ಅಥವಾ ಆಶು ಸಾಹಿತ್ಯದಿಂದ ಶ್ರೀಮಂತವಾಗಿರುವ ಈ ಕಲೆ ಕಾಸರಗೋಡಿನ ಹೊಸದುರ್ಗದಿಂದ ಕಾರವಾರದ ವರೆಗೆ ಹಬ್ಬಿಕೊಂಡಿದ್ದು ಶಿವಮೊಗ್ಗ, ಚಿಕ್ಕಮಗಳೂರು ಭಾಗದಲ್ಲೂ ಪ್ರಭಾವವಿದೆ.  ದಶಾವತಾರದ ಆಟ ಮತ್ತು ಕೂಟ ಆಗಿರುವ ಯಕ್ಷಗಾನ ಮಾತಿನ ಮಂಟಪವೂ ಹೌದು. ಕಾಶ್ಮೀರ ವಿವಾದ ಸೇರಿದಂತೆ ಎಲ್ಲ ಪ್ರಚಲಿತ ವಿದ್ಯಮಾನಗಳ ಬಗ್ಗೆ ಪ್ರಸಂಗಗಳು ಬಂದಿರುವುದು ಯಕ್ಷಗಾನದ ಹೆಗ್ಗಳಿಕೆ ಎಂದು ಅವರು ಹೇಳಿದರು.

ದಲಿತ ಸಾಹಿತ್ಯ ಯಾಕೆ ಕ್ಷೀಣ?

ದಕ್ಷಿಣ ಕನ್ನಡದ ಗದ್ಯ ಪರಂಪರೆ ಕುರಿತು ಮಾತನಾಡಿದ ಉಪನ್ಯಾಸಕಿ ಜ್ಯೋತಿ ಚೇಳಾಯ್ರು, ಗದ್ಯ ಸಾಹಿತ್ಯದ ಹೆಜ್ಜೆಗುರುತುಗಳು ಗಟ್ಟಿಯಾಗಿರುವ ದಕ್ಷಿಣ ಕನ್ನಡದಲ್ಲಿ ದಲಿತ ಸಾಹಿತ್ಯ ಪರಂಪರೆ ಕ್ಷೀಣವಾಗಿರುವುದು ಯಾಕೆ ಎಂಬುದರ ಬಗ್ಗೆ ಚಿಂತನೆ ಅಗತ್ಯವಿದೆ ಎಂದರು.

ಹಲವು ಬಗೆಯ ಪ್ರಭಾವದಿಂದ ಇಲ್ಲಿ ಗದ್ಯ ಪರಂಪರೆ ಸಮೃದ್ಧವಾಗಿದೆ. ವಲಸೆ ಬರುವವರ ಸಂಖ್ಯೆ ಹೆಚ್ಚು ಇದ್ದ ಕಾರಣದಿಂದ ಕನ್ನಡಿಗರಿಗೆ ಇಂಗ್ಲಿಷ್‌ ಭಾಷೆಯ ಪರಿಚಯ ಆದದ್ದು, ಮಿಷನರಿಗಳ ಕೆಲಸ ಕಾರ್ಯಗಳು ಮತ್ತು ಸಾಹಿತ್ಯಕ ಚಟುವಟಿಕೆಯಿಂದ ಇಲ್ಲಿ ಗದ್ಯ ಹುಟ್ಟಿತು. ಹೊಸ ಮಾದರಿಯ ಶಿಕ್ಷಣ, ಪಶ್ಚಿಮದ ಚಿಂತನೆಗಳು, ಅವುಗಳಿಗೆ ಸಂಬಂಧಪಟ್ಟ ಟೀಕೆಗಳು, ಬೈಬಲ್ ಅನುವಾದದ ಕಾರ್ಯಗಳು ಧಾರ್ಮಿಕ ಮತ್ತು ಕಥಾಸಾಹಿತ್ಯದ ಉಗಮಕ್ಕೆ ಕಾರಣವಾಯಿತು.

ಸಂಸ್ಕೃತ ಮತ್ತು ಕನ್ನಡದ ಪಂಡಿತರು, ಇಂಗ್ಲಿಷ್ ಓದಿನ ಹರವನ್ನು ಕನ್ನಡಕ್ಕೆ ಅನ್ವಯಿಸಿ ಸಾಮಾಜಿಕ ಚಿಂತನೆಗಳನ್ನು ಬಿಂಬಿಸಿದವರು, ಸೃಜನಶೀಲ ಚಿಂತಕರು, ಸ್ಥಳೀಯತೆಯ ಅರಿವು ಹೊಂದಿರುವವರು, ಯಕ್ಷಗಾನ ಪರಂಪರೆಯಿಂದ ಬಂದವರು ಮತ್ತು ಇಲ್ಲಿನ ಬಹುಭಾಷಿಕತೆಯು ಮೊದಲ ಸಣ್ಣಕಥೆಗಳ ಜೀವಾಳವಾದರು ಎಂದರು ಜ್ಯೋತಿ ಅಭಿಪ್ರಾಯಪಟ್ಟರು.

ಭೌಗೋಳಿಕ, ಬೌದ್ಧಿಕ ಅಸ್ಪೃಶ್ಯತೆ ನವ್ಯದ ಸಂದರ್ಭದಲ್ಲಿ ಅಡಿಗೋತ್ತರ ಕಾಲಘಟ್ಟದ ಕಾವ್ಯಕ್ಕೆ ದಕ್ಷಿಣ ಕನ್ನಡದಲ್ಲಿ ಸರಿಯಾದ ನ್ಯಾಯ ದೊರಕಲಿಲ್ಲ ಎಂದು ಅಭಿಪ್ರಾಯಪಟ್ಟ ವಿಮರ್ಶಕ ಟಿ.ಎ.ಎನ್ ಖಂಡಿಗೆ, ಭೌಗೋಳಿಕ ಮತ್ತು ಬೌದ್ಧಿಕ ಅಸ್ಪೃಶ್ಯತೆಯೇ ಇದಕ್ಕೆ ಕಾರಣ ಎಂದು ಹೇಳಿದರು.

ಕರಾವಳಿಯ ಕಾವ್ಯ ಪರಂಪರೆ ಬಗ್ಗೆ ಮಾತನಾಡಿದ ಅವರು ಕನ್ನಡ ಸಾಹಿತ್ಯ ಚರಿತ್ರೆ ಕಟ್ಟುವ ಮತ್ತು ವಿಮರ್ಶೆಯ ಸಂದರ್ಭದಲ್ಲಿ ನವೋದಯದ ಕಾಲದ ಕರಾವಳಿಯ ಕಾವ್ಯಕ್ಕೆ ನ್ಯಾಯ ದೊರೆತಿದೆ. ಅಡಿಗೋತ್ತರ ಕಾಲದ ಕಾವ್ಯಕ್ಕೂ ನ್ಯಾಯ ದೊರೆಯುವಂತಾಗಬೇಕು. ಇದರೊಂದಿಗೆ ಸತ್ಯಶೋಧನೆಯ ಹಿನ್ನೆಲೆ ಇರುವ ಉತ್ತಮ ಕಾವ್ಯ ರಚಿಸುವ ಪ್ರಯತ್ನಗಳು ಆಗಬೇಕು ಎಂದು ಆಶಿಸಿದರು.

ಕನ್ನಡ ಕಾವ್ಯಲೋಕದೊಳಗೆ ಪ್ರವೇಶಿಸಲು ಬಿಡಿ ಕವನಗಳು, ಖಂಡಕಾವ್ಯಗಳು ಮತ್ತು ನವ್ಯದ ಭಿನ್ನಮಾರ್ಗ ಎಂಬ ಒಳದಾರಿಗಳನ್ನು ಕರಾವಳಿಯ ಲೇಖಕರು ಸೃಜನಾತ್ಮಕವಾಗಿ ಕಂಡುಕೊಂಡಿದ್ದರು. ಕೊನೆಗೆ ಆ ಒಳದಾರಿಗಳೇ ರಾಜಮಾರ್ಗಗಳಾಗಿ ಪರಿವರ್ತನೆಗೊಂಡದ್ದು ಗಮನಾರ್ಹ ಅಂಶ ಎಂದು ಅವರು ಹೇಳಿದರು.

ಗೋಷ್ಠಿಯ ಸಮನ್ವಯಕಾರರಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಉಳ್ಳಾಲ ತಾಲ್ಲೂಕು ಘಟಕದ ಅಧ್ಯಕ್ಷ ಧನಂಜಯ ಕುಂಬ್ಳೆ, ಕರಾವಳಿಯ ಸಾಹಿತ್ಯ ತನ್ನಷ್ಟಕ್ಕೆ ತಾನೇ ಬೆಳೆದು ಬಂದಿಲ್ಲ. ಅದು ಚಳವಳಿಯ ರೂಪವನ್ನೂ ಪಡೆಯಲಿಲ್ಲ. ಇಲ್ಲಿಯ ಯಾವ ಸಾಹಿತ್ಯ ಪ್ರಕಾರವೂ ವೈಭವೀಕರಣಗೊಳ್ಳಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT