ಶುಕ್ರವಾರ, ಸೆಪ್ಟೆಂಬರ್ 30, 2022
26 °C
ಅತ್ಯಾಚಾರಿಗಳಿಗೆ ಕ್ಷಮಾದಾನ– ಜೀವಪರ ಮನಸುಗಳಿಗೆ ಆಘಾತ:ಸುಖಲಾಕ್ಷಿ ಸುವರ್ಣ

ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ಕಪ್ಪು ಉಡುಪು ಧರಿಸಿ ಮಹಿಳೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಗುಜರಾತ್ ಗಲಭೆಯ ವೇಳೆ ಗರ್ಭಿಣಿ ಮೇಲೆ ಅತ್ಯಾಚಾರ ನಡೆಸಿ ಆಕೆಯ ಕುಟುಂಬದ ಸದಸ್ಯರನ್ನು ಸಾಮೂಹಿಕವಾಗಿ ಹತ್ಯೆ ನಡೆಸಿದ ಕೃತ್ಯದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿಯನ್ನು ಗುಜರಾತ್ ಸರ್ಕಾರ ಬಿಡುಗಡೆ ಮಾಡಿದ್ದನ್ನು ಖಂಡಿಸಿ ಹಾಗೂ ಮುರುಘಾ ಮಠದ ಶಿವಮೂರ್ತಿ ಮುರುಘಾಶರಣರಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎನ್ನಲಾದ ಬಾಲಕಿಯರಿಗೆ ನ್ಯಾಯ ಕೋರಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ನೇತೃತ್ವದಲ್ಲಿ ವಿವಿಧ ಮಹಿಳಾ ಸಂಘಟನೆಗಳ ಸದಸ್ಯರು ಕಪ್ಪು ಉಡುಪು ಧರಿಸಿ ಮೌನಾಚರಣೆ ನಡೆಸುವ ಮೂಲಕ ಮಂಗಳವಾರ ಪ್ರತಿಭಟನೆ ನಡೆಸಿದರು. 

ವಿವಿಧ ಬೇಡಿಕೆಗಳನ್ನು ಒಳಗೊಂಡ ಮನವಿಯನ್ನು ಪ್ರತಿಭಟನಾಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಅವರಿಗೆ ಸಲ್ಲಿಸಿದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅಖಿಲ ಭಾರತ ಬಿಲ್ಲವ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಸುಖಲಾಕ್ಷಿ ಸುವರ್ಣ ಮಾತನಾಡಿ, ‘ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವು ಕ್ರೌರ್ಯದ ಪರಮಾವಧಿ. ಇದೊಂದು ಪಾಶವೀ ಕೃತ್ಯ. ಮನದಲ್ಲಿ ಕ್ರೌರ್ಯ ಮತ್ತು ಲೈಂಗಿಕ ತೃಷೆಯನ್ನು ತುಂಬಿಕೊಂಡವರು ಯಾವತ್ತೂ ಬದಲಾಗುವುದಿಲ್ಲ. ಇಂತಹ ಹೇಯ ಕೃತ್ಯ ನಡೆಸಿದವರಿಗೆ ಕ್ಷಮೆ ನೀಡಿರುವುದು ಎಲ್ಲ ಜೀವಪರ ಮನಸುಗಳಿಗೆ ಆಘಾತ ತಂದಿದೆ. ಮಹಿಳೆಯರೆಲ್ಲರೂ ಇದನ್ನು ಒಕ್ಕೊರಲಿನಿಂದ ಖಂಡಿಸಬೇಕಿದೆ’ ಎಂದರು.

‘ಮಠದ ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದ ಅಪ್ರಾಪ್ತ ದಲಿತ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಎದುರಿಸುತ್ತಿದ್ದ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ಮೇಲೆ ಪರಿಶೀಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಹಾಗೂ ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಸಂರಕ್ಷಣೆ (ಪೊಕ್ಸೊ) ಕಾಯ್ದೆಯಡಿ ತಕ್ಷಣವೇ ಬಂಧಿಸಬೇಕಿತ್ತು. ಆದರೆ ಹಾಗಾಗಲಿಲ್ಲ. ಸಂತ್ರಸ್ತ ಬಾಲಕಿಯರ ಪರ ನಿಲ್ಲಬೇಕಾದ ಸರ್ಕಾರ ಆರೋಪಿಗೆ ಬೆಂಬಲವಾಗಿ ನಿಂತಿದೆ. ಪೊಕ್ಸೊ ಕಾಯ್ದೆಯ ಮಹತ್ವವನ್ನೇ ನಾಶಮಾಡ ಹೊರಟಿದೆ’ ಎಂದು ಟೀಕಿಸಿದರು.

ಪ್ರಜ್ಞಾ ಆಪ್ತ ಸಲಹಾ ಕೇಂದ್ರದ ಪ್ರೊ. ಹಿಲ್ಡಾ ರಾಯಪ್ಪನ್‌ ಮಾತನಾಡಿದರು. ವಾಣಿ ಪೆರಿಯೋಡಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜ್ಞಾ ಸಲಹಾ ಕೇಂದ್ರ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ, ಸಹೋದಯ, ಬಿಲ್ಲವ ಮಹಿಳಾ ಮಂಡಲ, ಮಹಿಳಾ ಮಂಡಲಗಳ ಒಕ್ಕೂಟ ಮಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರ, ಫಾರ್ವರ್ಡ್‌ ಟ್ರಸ್ಟ್, ಡಿ.ಸಿ.ಸಿ.ಡಬ್ಲ್ಯು, ಯುವ ಮುನ್ನಡೆ ಮಂಗಳೂರು, ಸಂಚಲನ, ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ, ಭಾರತೀಯ ಮಹಿಳಾ ಒಕ್ಕೂಟ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ದಕ್ಷಿಣ ಕನ್ನಡ ಜಿಲ್ಲಾ ಘಟಕ, ಇಂಡಿಯನ್ ಕಮ್ಯುನಿಸ್ಟ್ ಆಕ್ಟಿವಿಸ್ಟ್ ನೆಟ್ ವರ್ಕ್, ನ್ಯಾಷನಲ್ ವಿಮೆನ್ಸ್ ಫ್ರಂಟ್‌ನ ಕರ್ನಾಟಕ ಘಟಕ, ಕರಾವಳಿ ಮಹಿಳಾ ಹಕ್ಕುಗಳ ರಕ್ಷಣಾ ವೇದಿಕೆ, ಜಮಾತೆ ಇಸ್ಲಾಮಿ ಹಿಂದ್‌ನ ಮಹಿಳಾ ವಿಭಾಗ, ವಿಮೆನ್ ಇಂಡಿಯಾ ಮೂವ್‌ಮೆಂಟ್, ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ, ಜೀವನ್‌ ಧಾರಾ ಮತ್ತು ತರಿಕಿಟ ಕಲಾ ಕಮ್ಮಟ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ಪ್ರಮುಖ ಬೇಡಿಕೆಗಳು

ಗುಜರಾತಿನಲ್ಲಿ ಗರ್ಭಿಣಿಯ ಅತ್ಯಾಚಾರ ಪ್ರಕರಣದಲ್ಲಿ ಕ್ಷಮಾದಾನ ಪಡೆದ 11 ಅಪರಾಧಿಗಳನ್ನು ಮತ್ತೆ ಜೈಲಿಗೆ ಅಟ್ಟಬೇಕು

ಮುರುಘಾ ಶರಣರ ಪ್ರಕರಣದಲ್ಲಿ ಸರ್ಕಾರಿ ವ್ಯವಸ್ಥೆ ಒತ್ತಡಕ್ಕೆ ಮಣಿಯದೆ ಕಾರ್ಯನಿರ್ವಹಿಸಬೇಕು.

ಸಂತ್ರಸ್ತರಿಗೆ ಸಿಗಬೇಕಾದ ಪರಿಹಾರಗಳನ್ನು ಸರ್ಕಾರ ತಕ್ಷಣ ಒದಗಿಸಬೇಕು 

ಪೊಕ್ಸೊ ಕಾಯ್ದೆ ಕುರಿತು ಸಾರ್ವಜನಿಕರಲ್ಲಿ, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು