ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ, ಆರ್‌ಎಸ್‌ಎಸ್ ಮೀಸಲಾತಿ ವಿರೋಧಿಗಳು: ಸಿದ್ಧರಾಮಯ್ಯ

ಹರಿಹರ: ಸಿಎಂ ಸಿದ್ಧರಾಮಯ್ಯ ಆರೋಪ: ಸಂವಿಧಾನದ ಅಧ್ಯಯನ ಮಾಡಲು ಮೋದಿಗೆ ಸಲಹೆ
Published 6 ಮೇ 2024, 4:31 IST
Last Updated 6 ಮೇ 2024, 4:31 IST
ಅಕ್ಷರ ಗಾತ್ರ

ಹರಿಹರ: ಬಿಜೆಪಿ ಮತ್ತು ಆರ್‌ಎಸ್‌ಎಸ್ ಮೂಲತಹ ಮೀಸಲಾತಿ ವಿರೋಧಿ ಭಾವನೆಯನ್ನು ಹೊಂದಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ನಗರದ ಗಾಂಧಿ ಮೈದಾನದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಲೋಕಸಭಾ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಪರವಾಗಿ ಆಯೋಜಿಸಿದ್ದ ಪ್ರಜಾಧ್ವನಿ-2 ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

‘1990ರಲ್ಲಿ ದೇಶದ ಹಿಂದುಳಿದ ವರ್ಗಗಳ ಬಡ ಜನತೆಗೆ ಮೀಸಲಾತಿ ನೀಡುವ ಮಂಡಲ್ ವರದಿ ವಿರುದ್ಧ ದೇಶವ್ಯಾಪಿ ನಡೆದ ಪ್ರತಿಭಟನೆಯ ಹಿಂದೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕುಮ್ಮಕ್ಕಿತ್ತು. ಮಂಡಲ ವರದಿ ವಿರುದ್ಧ ಕಮಂಡಲ್ ಚಳವಳಿಯನ್ನು ಬಿಜೆಪಿ ಆಯೋಜಿಸಿದ್ದ ನೆನಪಿನ್ನೂ ಮಾಸಿಲ್ಲ’ ಎಂದರು.

‘1994ರ ಚಿನ್ನಪ್ಪರೆಡ್ಡಿ ವರದಿಯ ಶಿಫಾರಸಿನಂತೆ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಮುಸ್ಲಿಮರಿಗೆ ರಾಜ್ಯದಲ್ಲಿ ಶೇ 4ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಹಿಂದುಳಿದ ವರ್ಗಗಳು ಹಾಗೂ ಮುಸ್ಲಿಮರಿಗೆ ಸಂವಿಧಾನದ 15 ಮತ್ತು 16 ವಿಧಿಗಳ ಪ್ರಕಾರ ಮೀಸಲಾತಿ ನೀಡಿದೆ. ಅದರೆ ‘ಸಬ್ ಕಾ ಸಾಥ್, ಸಭ್ ಕಾ ವಿಕಾಸ್’ ಎಂದು ಬಾಯಲ್ಲಿ ಹೇಳುವ ಮೋದಿಯ ಮನಸ್ಸಿನ ತುಂಬ ವಿಷ ತುಂಬಿದೆ’ ಎಂದರು.

ಮೋದಿ ಸಂವಿಧಾನ ಓದಿಯೇ ಇಲ್ಲ, ಓದಿದ್ದರೆ ಅವರು ಹೀಗೆಲ್ಲಾ ಮಾತನಾಡುತ್ತಿರಲಿಲ್ಲ. ಸಂವಿಧಾನದ 15, 16ನೇ ವಿಧಿ ಅನ್ವಯ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರಿಗೆ ಮಾತ್ರ ಮೀಸಲಾತಿ ನೀಡಬೇಕೆಂದಿದೆ. ಇದಲ್ಲದೆ ಮೀಸಲಾತಿ ಶೇ 50ರ ಮಿತಿ ಮೀರಬಾರದು ಎಂದು ಇದ್ದಾಗಲೂ ಮೇಲ್ವರ್ಗದ ಶೇ 3ರಷ್ಟು ಜನರಿಗೆ ಶೇ 10ರಷ್ಟು ಮೀಸಲಾತಿ ನೀಡಿದರು ಎಂದರು.

73, 74ನೇ ವಿಧಿ ತಿದ್ದುಪಡಿ ಮಾಡಿ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನೀಡಿದಾಗ ಬಿಜೆಪಿಯ ಅಂದಿನ ರಾಜ್ಯ ಘಟಕದ ಉಪಾಧ್ಯಕ್ಷ, ರಾಜ್ಯಸಭೆ ಸದಸ್ಯ ರಾಮಾ ಜೋಯಿಸ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಸುಪ್ರಿಂ ಕೋರ್ಟ್ ಮೀಸಲಾತಿ ಪರ ತೀರ್ಪು ನೀಡಿತ್ತು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಪಂಚ ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಡಿ.ಬಸವರಾಜ, ಯು.ಟಿ.ಫರ್ಜಾನಾ, ಸಿಪಿಐ ರಾಜ್ಯ ಕಾರ್ಯದರ್ಶಿ ಸ್ವಾತಿ ಸುಂದರೇಶ್, ಮಾಜಿ ಶಾಸಕ ಎಸ್.ರಾಮಪ್ಪ, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಎಂ.ನಾಗೇಂದ್ರಪ್ಪ, ಬಿ.ಎಂ.ವಾಗೀಶ್ ಸ್ವಾಮಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಸೈಯದ್ ಏಜಾಜ್, ಬಿ.ಮೊಹಮ್ಮದ್ ಸಿಗ್ಬತ್‌ಉಲ್ಲಾ, ಎಂ.ಆರ್.ಮುಜಮ್ಮಿಲ್, ಎಬಿಎಂ ವಿಜಯಕುಮಾರ್, ಎಚ್.ಎಸ್.ನಾಗರಾಜ್, ಬಿ.ಕೆ.ಸೈಯದ್ ರಹಮಾನ್, ಬಿ.ಎಚ್.ಆನಂದ್ ಕುಮಾರ್, ಶಂಕರ್ ಖಟಾವ್‌ಕರ್, ಹಬೀಬ್ ಉಲ್ಲಾ ಮೊಹ್ಮದ್ ಫೈರೋಜ್ ಇದ್ದರು.

ಹರಿಹರದ ಗಾಂಧಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಜಾಧ್ವನಿ-2 ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು
ಹರಿಹರದ ಗಾಂಧಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಜಾಧ್ವನಿ-2 ಸಮಾವೇಶವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು
ಹರಿಹರ: ಹರಿಹರದ ಗಾಂಧಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಜಾಧ್ವನಿ-2 ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಹರಿಹರ: ಹರಿಹರದ ಗಾಂಧಿ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರಜಾಧ್ವನಿ-2 ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಅವರೇ ಬಾಯಿ ಬಿಟ್ಟು ಮಾತನಾಡದಿದ್ದಾಗ ಇನ್ನು ಅಡುಗೆ ಮಾಡಿಕೊಂಡಿದ್ದ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಮಾತನಾಡಲು ಸಾಧ್ಯವೇ?
-ಸಿದ್ದರಾಮಯ್ಯ ಮುಖ್ಯಮಂತ್ರಿ

ನನೆಗುದಿಗೆ ಬಿದ್ದಿರುವ ಬೇಡಿಕೆ ಈಡೇರಿಕೆ

ಬೈರನಪಾದ ಏತನೀರಾವರಿ ಯೋಜನೆ ಸೇರಿದಂತೆ ಹರಿಹರ ತಾಲ್ಲೂಕಿನ ನನೆಗುದಿಗೆ ಬಿದ್ದಿರುವ ಬೇಡಿಕೆಗಳನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಈಡೇರಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು. 

ತಾಲ್ಲೂಕಿನ 5,200 ಹೆಕ್ಟೇರ್ ಕೃಷಿ ಭೂಮಿಗೆ ನೀರೊದಗಿಸುವ ಬೈರನಪಾದ ಏತ ನೀರಾವರಿ ಯೋಜನೆ, ನಗರಕ್ಕೆ ಕುಡಿವ ನೀರಿಗಾಗಿ ನದಿಗೆ ಚೆಕ್ ಡ್ಯಾಂ ನಿರ್ಮಿಸುವುದು, ಕೊಂಡಜ್ಜಿ ಮತ್ತು ಅಗಸನಕಟ್ಟೆ ಕರೆ ಅಭಿವೃದ್ಧಿ ಸೇರಿದಂತೆ ತಾಲ್ಲೂಕಿನ ಮಹತ್ತರ ಯೋಜನೆಗಳಿಗೆ ಅನುದಾನ ನೀಡುವುದಾಗಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT