ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದ ಡಿ.ಕೆ.ಸುರೇಶ್ ವಿರುದ್ಧ ಕ್ರಮಕ್ಕೆ ಆಗ್ರಹ

ಕೆಪಿಎಸ್‌ಸಿ ಹಗರಣದಲ್ಲಿ ಭಾಗಿಯಾಗಿರುವ ಆರೋಪ
Last Updated 8 ಮೇ 2022, 3:20 IST
ಅಕ್ಷರ ಗಾತ್ರ

ಶಿವಮೊಗ್ಗ: ಕೆಪಿಎಸ್‌ಸಿ ಹಗರಣದಲ್ಲಿ ಭಾಗಿಯಾಗಿರುವ ಸಂಸದ ಡಿ.ಕೆ.ಸುರೇಶ್ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಆಗ್ರಹಿಸಿ ರಾಷ್ಟ್ರ ಭಕ್ತರ ಬಳಗ ಜಿಲ್ಲಾಧಿಕಾರಿ ಕಚೇರಿ ಎದುರು ಶನಿವಾರ ಪ್ರತಿಭಟನೆ ನಡೆಯಿತು.

ಕೆಪಿಎಸ್‌ಸಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಲಂಚವನ್ನು ಸಂಸದ ಡಿ.ಕೆ. ಸುರೇಶ್ ಪಡೆದಿದ್ದಾರೆ. ₹ 25 ಲಕ್ಷ ಪಡೆದಿರುವ ಬಗ್ಗೆ ಈಗಾಗಲೇ ಅಭ್ಯರ್ಥಿ ಟಿ.ಎಸ್. ಲೋಕೇಶ್ ಎಂಬುವವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಡಿ.ಕೆ. ಶಿವಕುಮಾರ್ ಸಹೋದರ ಡಿ.ಕೆ. ಸುರೇಶ್ ಅವರ ಭ್ರಷ್ಟಾಚಾರ ಕೆಪಿಸಿಸಿ ಕಚೇರಿಯಿಂದಲೇ ಆರಂಭಗೊಂಡಿದೆ ಎಂದು ಪ್ರತಿಭಟನಕಾರರು ದೂರಿದರು.

ಈ ಇಬ್ಬರು ಸಹೋದರರು ₹ 800 ಕೋಟಿಗೂ ಹೆಚ್ಚು ಬೇನಾಮಿ ಆಸ್ತಿ ಮಾಡಿದ್ದಾರೆ. ಐಟಿ ಮತ್ತು ಇಡಿ ದಾಳಿಯಲ್ಲಿ ₹ 200 ಕೋಟಿಗೂ ಹೆಚ್ಚು ಬೇನಾಮಿ ಆಸ್ತಿ ಪತ್ತೆಯಾಗಿದೆ ಎಂದು ದೂರಿದರು.

2017ರಲ್ಲಿ ಕೆಪಿಎಸ್‌ಸಿ ಜಿಲ್ಲಾ ಅಲ್ಪಸಂಖ್ಯಾತರ ಅಧಿಕಾರಿ ಉದ್ಯೋಗಕ್ಕೆ ಅರ್ಜಿ ಕರೆಯಲಾಗಿತ್ತು. 2018ರಲ್ಲಿ ಪರೀಕ್ಷೆ ಬರೆದು 2019ರಲ್ಲಿ ಸಂದರ್ಶನ ನಿಗದಿಯಾಗಿತ್ತು. ಈ ಎಲ್ಲಾ ಪ್ರಕ್ರಿಯೆಗಳಲ್ಲಿಯೂ ಡಿ.ಕೆ. ಸುರೇಶ್ ಭಾಗಿಯಾಗಿದ್ದಾರೆ. ಲೋಕೇಶ್ ಅವರಿಗೆ ಉದ್ಯೋಗ ನೀಡುವ ಭರವಸೆ ಕೂಡ ಕೊಡಲಾಗಿತ್ತು. ಡಿ.ಕೆ. ಸುರೇಶ್ ಅವರ ಈ ಅವ್ಯವಹಾರದ ಬಗ್ಗೆ ತನಿಖೆ ನಡೆಸಬೇಕು. ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ಮೋಹನ್ ರಾವ್ ಜಾಧವ್, ಚೇತನ್, ವಿಕ್ರಂ, ಇ. ವಿಶ್ವಾಸ್, ಮುರುಗೇಶ್, ರಾಧಾ ಗುರುದತ್ತ, ಸೋಮೇಶ್ ಶೇಟ್, ಪುರುಷೋತ್ತಮ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT