ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಾಪಟ್ಟಣ: ಕೋಕೋ ಬೆಳೆದು ಲಾಭ ಕಂಡ ರುದ್ರೇಶ್‌

ಚಾಕೊಲೇಟ್ ತಯಾರಿಕೆಗೆ ಬಹು ಬೇಡಿಕೆಯ ಕಚ್ಚಾವಸ್ತು
ಎನ್‌.ವಿ.ರಮೇಶ್‌
Published 1 ಮೇ 2024, 5:35 IST
Last Updated 1 ಮೇ 2024, 5:35 IST
ಅಕ್ಷರ ಗಾತ್ರ

ಬಸವಾಪಟ್ಟಣ: ಚಾಕೊಲೇಟ್‌ ತಯಾರಿಕೆಗೆ ಅತಿ ಮುಖ್ಯ ಕಚ್ಚಾವಸ್ತುವಾದ ಕೋಕೋ ಬೆಳೆಯನ್ನು ಬೆಳೆದು ಉತ್ತಮ ಲಾಭ ಕಾಣುತ್ತಿದ್ದಾರೆ ಸಮೀಪದ ಕಾರಿಗನೂರಿನ ರೈತ ಟಿ.ವಿ.ರುದ್ರೇಶ್‌.

ಈ ಭಾಗದ ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದಾದ ಕೋಕೋ ಫಸಲು ಕಡಿಮೆ ಖರ್ಚಿನಲ್ಲಿ ರೈತರಿಗೆ ಅಧಿಕ ಲಾಭ ನೀಡುತ್ತಿದೆ. ಪ್ರಪಂಚದಾದ್ಯಂತ ಚಾಕೊಲೇಟ್‌ಗೆ ಅತಿ ದೊಡ್ಡ ಮಾರುಕಟ್ಟೆ ಇರುವುದರಿಂದ ಕೋಕೋ ಬೀಜಗಳಿಗೆ ಭಾರೀ ಬೇಡಿಕೆ ಇದೆ. ಇದರಿಂದಾಗಿ ಖಚಿತವಾಗಿ ಲಾಭ ಪಡೆಯಬಹುದಾಗಿದೆ.

‘ನಮಗೆ ಎರಡು ಎಕರೆ ಅಡಿಕೆ ತೋಟವಿದ್ದು, ಎಂಟು ವರ್ಷಗಳ ಹಿಂದೆ ಖಾಸಗಿ ನರ್ಸರಿಯಿಂದ ತಲಾ ₹ 15ರಂತೆ 200 ಕೋಕೋ ಸಸಿಗಳನ್ನು ತಂದು ಮಿಶ್ರ ಬೆಳೆಯಾಗಿ ಬೆಳೆಸಿದ್ದೆ. ಅಡಿಕೆ ಗಿಡಗಳಿಗೆ ಹಾಯಿಸುವ ನೀರು ಇದಕ್ಕೆ ಸಾಕಾಗುತ್ತದೆ. ಕೋಕೋ ಬೆಳೆಗೆ ಹೆಚ್ಚಿನ ಗೊಬ್ಬರದ ಅವಶ್ಯಕತೆಯೂ ಇಲ್ಲ. ಕೋಕೋ ಗಿಡದಿಂದ ಉದುರುವ ಎಲೆಗಳಿಂದ ದೊರೆಯುವ ಗೊಬ್ಬರವೇ ಸಾಕಾಗುತ್ತದೆ. ಅದು ಅಡಿಕೆ ಗಿಡಕ್ಕೂ ಫಲವತ್ತಾದ ಗೊಬ್ಬರವಾಗುತ್ತದೆ’ ಎಂದು ರುದ್ರೇಶ್‌ ತಿಳಿಸಿದರು.

‘ಕೋಕೋ ಸಸಿಗಳನ್ನು ನಾಟಿ ಮಾಡಿದ ಮೂರನೇ ವರ್ಷದಿಂದ ಫಲ ಆರಂಭವಾಗುತ್ತದೆ. ಸೆಪ್ಟೆಂಬರ್‌ನಿಂದ ಜನವರಿವರೆಗೆ ಕೋಕೋ ಹಣ್ಣುಗಳನ್ನು ಬಿಡಿಸಿ ತಂದು ಒಳಗಿರುವ ಬೀಜಗಳನ್ನು ತೆಗೆದು ಎರಡು ದಿನ ಬಟ್ಟೆಯಲ್ಲಿ ಮುಚ್ಚಿಡುತ್ತೇವೆ. ನಂತರ ಆ ಬೀಜಗಳನ್ನು ಮೂರರಿಂದ ನಾಲ್ಕು ದಿನ ಪ್ರಖರವಾದ ಬಿಸಿಲಿನಲ್ಲಿ ಒಣಗಿಸಿದರೆ ಕೋಕೋ ಬೀಜಗಳು ಮಾರಾಟಕ್ಕೆ ಸಿದ್ಧವಾಗುತ್ತವೆ. ಪ್ರತಿ ಗಿಡ ವರ್ಷಕ್ಕೆ ಒಂದು ಕೆ.ಜಿ. ಕೋಕೋ ಬೀಜಗಳನ್ನು ನೀಡುತ್ತದೆ. ಎರಡು ಎಕರೆಯಲ್ಲಿ ನಾನು ಪ್ರತಿ ವರ್ಷ ಎರಡು ಕ್ವಿಂಟಲ್‌ ಕೋಕೋ ಬೀಜಗಳನ್ನು ಬೆಳೆಯುತ್ತಿದ್ದೇನೆ’ ಎಂದು ಅವರು ವಿವರಿಸಿದರು.

‘ಈ ವರ್ಷ ಕೋಕೋ ಬೀಜ ಕೆ.ಜಿ.ಗೆ ₹ 750 ದರ ಇದ್ದು, ದಾವಣಗೆರೆಯಲ್ಲಿರುವ ಕ್ಯಾಂಪ್ಕೋ ಕಂಪನಿಗೆ ಮಾರಾಟ ಮಾಡುತ್ತಿದ್ದೇನೆ. ಈಚಿನ ದಿನಗಳಲ್ಲಿ ಕ್ಯಾಡ್ಬರೀಸ್‌ ಕಂಪನಿಯವರು ಮನೆ ಬಾಗಿಲಿಗೆ ಬಂದು ಸೂಕ್ತ ದರ ನೀಡಿ ಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ ನನ್ನ ಹಲವು ಸ್ನೇಹಿತರು ತಮ್ಮ ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಕೋಕೋ ಬೆಳೆಯುತ್ತಿದ್ದಾರೆ’ ಎಂದರು.

ರೈತರು ಹೆಚ್ಚಿನ ಖರ್ಚಿಲ್ಲದೇ ಕೋಕೋ ಗಿಡಗಳನ್ನು ತಮ್ಮ ಅಡಿಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಬಹುದು. ಈ ಮೂಲಕ ಬೆಳೆ ನಷ್ಟದಿಂದ ಪಾರಾಗಬಹುದು.
ಶ್ರೀಕಾಂತ್‌, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಚನ್ನಗಿರಿ
ಬಸವಾಪಟ್ಟಣ ಸಮೀಪದ ಕಾರಿಗನೂರಿನ ರೈತ ಟಿ.ವಿ.ರುದ್ರೇಶ್ ಬೆಳೆದಿರುವ ಕೋಕೋ ಹಣ್ಣುಗಳು
ಬಸವಾಪಟ್ಟಣ ಸಮೀಪದ ಕಾರಿಗನೂರಿನ ರೈತ ಟಿ.ವಿ.ರುದ್ರೇಶ್ ಬೆಳೆದಿರುವ ಕೋಕೋ ಹಣ್ಣುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT