ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆಯ ಮೇಲೆಯೇ ಫಸಲಿನ ರಾಶಿ; ಕಣ್ಮರೆಯಾದ ಸಾಂಪ್ರದಾಯಿಕ ಕಣಸುಗ್ಗಿ

Published 27 ಡಿಸೆಂಬರ್ 2023, 7:39 IST
Last Updated 27 ಡಿಸೆಂಬರ್ 2023, 7:39 IST
ಅಕ್ಷರ ಗಾತ್ರ

ಚನ್ನಗಿರಿ: ಹಿಂದಿನ ಕಾಲದ ಬಹುತೇಕ ಸಂಪ್ರದಾಯ, ಆಚರಣೆಗಳು ಕಣ್ಮರೆಯಾಗುತ್ತಿರುವ ಈ ಹೊತ್ತಿನಲ್ಲಿ ಇಂತಹ ಮಾದರಿ ಕೃಷಿ ಕ್ಷೇತ್ರಕ್ಕೂ ಕಾಲಿಟ್ಟಿದೆ. ಹಿಂದೆಲ್ಲಾ ಕಾಣಸಿಗುತ್ತಿದ್ದ ಸಾಂಪ್ರದಾಯಿಕ ‘ಕಣಸುಗ್ಗಿ’ ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿದೆ. ಕೃಷಿಕರು ಸುಗ್ಗಿಗೆ ಸದ್ಯ ರಸ್ತೆ ಬದಿಯ ಮೊರೆ ಹೋಗಿದ್ದಾರೆ.

ಹಿಂದೆ ರೈತರು ತಾವು ಬೆಳೆದ ಧಾನ್ಯಗಳನ್ನು ತೆನೆಯಿಂದ ಬೇರ್ಪಡಿಸಲು ನಿಗದಿಪಡಿಸಿದ ವಿಶಾಲವಾದ ಕಣದಲ್ಲಿ ಸುಗ್ಗಿ ಮಾಡುತ್ತಿದ್ದರು. ಕಣದಲ್ಲಿ ಹುಲ್ಲನ್ನು ಬೆಳಿಗ್ಗೆಯೇ ಹಾಕಿ ಸೂರ್ಯನ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆಯೇ ರೋಣಗಲ್ಲನ್ನು ಎತ್ತುಗಳಿಗೆ ಹೂಡಿ ಸುಗ್ಗಿ ಮಾಡುವುದು ನೋಡಲು ಚೆಂದ. ಅದೇ ಸಂಪ್ರದಾಯವಾಗಿತ್ತು. ರೋಣಗಲ್ಲನ್ನು ಹಾಯಿಸುವಾಗ ಸುಗ್ಗಿಯ ಹಾಡುಗಳನ್ನು ರೈತರು ಹಾಡುತ್ತಾ ಸಾಗುತ್ತಿದ್ದರು. ಸಂಜೆ ಬಿಸಿಲು ಕಡಿಮೆಯಾಗುತ್ತಿದ್ದಂತೆಯೇ ಒಣ ಹುಲ್ಲನ್ನು ತೆಗೆದು ಒಂದೆಡೆ ರಾಶಿ ಹಾಕುತ್ತಿದ್ದರು. ನಂತರ ತೆನೆಯಿಂದ ಬೇರ್ಪಟ್ಟ ಕಾಳುಗಳನ್ನು ರಾಶಿ ಮಾಡಿ ಬಿದಿರಿನ ಮೊರದಲ್ಲಿ ಹಾಕಿಕೊಂಡು ಗಾಳಿಗೆ ತೂರುವ ಮೂಲಕ ಕಾಳಿನಲ್ಲಿ ಸೇರಿಕೊಂಡಿರುವ ತ್ಯಾಜ್ಯವನ್ನು ಬೇರ್ಪಡಿಸುತ್ತಿದ್ದರು. ಹೀಗೇ ಐದಾರು ದಿನಗಳ ಕಾಲ ಕಣಸುಗ್ಗಿ ಮಾಡಿ ಸ್ವಚ್ಛಗೊಂಡ ತೆನೆಯನ್ನು ಒಂದೆಡೆ ರಾಶಿ ಹಾಕಿ ಪೂಜೆ ಮಾಡುವ ಮೂಲಕ ಕಣಸುಗ್ಗಿ ಮುಕ್ತಾಯಗೊಳಿಸುತ್ತಿದ್ದರು.

ದಿನ ಕಳೆದಂತೆ ರೈತರ ಕಣಸುಗ್ಗಿ ಕಾರ್ಯದಲ್ಲಿ ಬದಲಾವಣೆಯಾಗಿದೆ. 

ರಸ್ತೆಯ ಮಧ್ಯೆ ಹುಲ್ಲು ಹಾಕಿ ಕಣಸುಗ್ಗಿ ಮಾಡುತ್ತಿದ್ದು, ವಾಹನಗಳ ಸುಗಮ ಸಂಚಾರಕ್ಕೂ ಅಡ್ಡಿಯಾಗಿದೆ. ರೈತರಲ್ಲಿ ಈಗೀಗ ಕಣಸುಗ್ಗಿ ಮಾಡಲು ಅಗತ್ಯವಾಗಿ ಬೇಕಾದ ಎತ್ತುಗಳು ಇಲ್ಲ. ರಾಗಿ ಸೇರಿದಂತೆ ಇತರೆ ಬೆಳೆಯನ್ನು ರಸ್ತೆಯ ಮಧ್ಯೆ ಹಾಕಿ ವಾಹನಗಳು ಹುಲ್ಲಿನ ಮೇಲೆ ಸಾಗಿದಾಗ ತೆನೆಯಿಂದ ಕಾಳು ಬೇರ್ಪಟ್ಟ ನಂತರ ತೆನೆಯನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ. ತಾಲ್ಲೂಕಿನ ಗಾಣದಕಟ್ಟೆ- ಮಾವಿನಕಟ್ಟೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸದ್ಯ ರಾಗಿ ಸುಗ್ಗಿ ನಡೆಯುತ್ತಿದೆ. ತಾಲ್ಲೂಕಿನ ಬಹುತೇಕ ಕಡೆ ಇದೇ ರೀತಿಯಲ್ಲಿ ಈಗ ಕಣಸುಗ್ಗಿ ನಡೆಯುತ್ತಿದೆ.

ತಾಲ್ಲೂಕಿನಲ್ಲಿ 50 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗುತ್ತಿದೆ. ಕೆಲ ರೈತರು ರಾಗಿಯನ್ನು ಟ್ರ್ಯಾಕ್ಟರ್ ಮೂಲಕ ಕಣಸುಗ್ಗಿ ಮಾಡಿದರೆ ಬಹುತೇಕರು ರಸ್ತೆಯ ಮೇಲೆ ತೆನೆಯನ್ನು ಹಾಕಿ ಕಣಸುಗ್ಗಿ ಮಾಡುತ್ತಿದ್ದಾರೆ.

‘ರಸ್ತೆಯ ಮೇಲೆ ಕಣಸುಗ್ಗಿ ಮಾಡುತ್ತಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತದೆ. ಕಾಳುಗಳ ಮೇಲೆ ವಾಹನಗಳು ಹೋದಾಗ ಹಿಡಿತ ಸಿಗದೇ ಟೈರ್‌ಗಳು ಜಾರಿ, ಅಪಘಾತ ನಡೆಯುವ ಸಂಭವ ಹೆಚ್ಚಾಗಿದೆ. ರಸ್ತೆಗಳು ಕಿರಿದಾಗಿರುವುದರಿಂದ ಅನಿವಾರ್ಯವಾಗಿ ತೆನೆಯ ಮೆಲೆಯೇ ವಾಹನಗಳನ್ನು ಚಲಾಯಿಸಿಕೊಂಡು ಹೋಗಬೇಕಾಗಿದೆ. ರೈತರು ಈ ಬಗ್ಗೆ ಎಚ್ಚರ ವಹಿಸಬೇಕು’ ಎಂದು ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ಆರ್. ಪುನೀತ್ ಕುಮಾರ್ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT