ಹೊನ್ನಾಳಿಗೆ ನಾನೇ ಮುಖ್ಯಮಂತ್ರಿ: ಶಾಸಕ ಎಂ.ಪಿ.ರೇಣುಕಾಚಾರ್ಯ

7
ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ

ಹೊನ್ನಾಳಿಗೆ ನಾನೇ ಮುಖ್ಯಮಂತ್ರಿ: ಶಾಸಕ ಎಂ.ಪಿ.ರೇಣುಕಾಚಾರ್ಯ

Published:
Updated:
Deccan Herald

ಹೊನ್ನಾಳಿ: ‘ಮರಳು ಬೇಕಾದವರು ಎತ್ತಿನ ಬಂಡಿಗಳನ್ನು ಕಟ್ಟಿಕೊಂಡು ನದಿಗೆ ಇಳಿದು ತುಂಬಿಕೊಂಡು ಬನ್ನಿ, ನಿಮ್ಮನ್ನು ಡಿಸಿ, ಎಸಿ, ಎಸ್ಪಿ ಯಾರೂ ಏನೂ ಮಾಡಲಾರರು. ನಿಮ್ಮನ್ನು ಯಾರು ತಡೆಯುತ್ತಾರೋ ನಾನು ನೋಡುತ್ತೇನೆ. ಹೊನ್ನಾಳಿ ತಾಲ್ಲೂಕಿಗೆ ನಾನೇ ಮುಖ್ಯಮಂತ್ರಿ’ ಎಂದು ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಹಿರೇಕಲ್ಮಠದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಂಗ ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಮೂಹಿಕ ಸತ್ಯನಾರಾಯಣ ಪೂಜೆ, ಹಾಗೂ ಧರ್ಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನ ಬರ ವಿಚಾರ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿದ್ದೇನೆ ಎಂದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಜ್ಯೋತಿ ಅಕ್ಕ, ‘ಜಗತ್ತಿನಲ್ಲಿ ನಾವು ಸುಖ, ಶಾಂತಿ ನೆಮ್ಮದಿಯಿಂದ ಬದುಕಬೇಕಾದರೆ ಪ್ರಕೃತಿ ಮತ್ತು ಪರಮಾತ್ಮ ನಲ್ಲಿ ಬೇಡಿಕೊಳ್ಳಬೇಕು. ಅದಕ್ಕೆ ಪೂರಕವಾಗಿ ಇಂತಹ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗುತ್ತದೆ’ ಎಂದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಸೀತಾರಾಮ್ ಶೆಟ್ಟಿ, ‘ಧಾರ್ಮಿಕ ಸಭೆ, ಸಮಾರಂಭ, ಪೂಜಾ ವಿಧಿ ವಿಧಾನಗಳಲ್ಲಿ ಪಾಲ್ಗೊಂಡರೆ ಸಂಸ್ಕೃತಿ, ಸಂಸ್ಕಾರ ಬರುತ್ತದೆ’ ಎಂದರು.

ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್, ‘ಗ್ರಾಮಗಳ ಅಭಿವೃದ್ಧಿ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ತಿಳಿಯಬೇಡಿ, ದೇಶದಲ್ಲಿನ ಕೋಟ್ಯಂತರ ಸಂಘ ಸಂಸ್ಥೆಗಳು ತಮ್ಮದೇ ಆದ ಧ್ಯೇಯೋದ್ದೇಶಗಳನ್ನು ಇಟ್ಟುಕೊಂಡು ಗ್ರಾಮಗಳ ಅಭಿವೃದ್ಧಿಗೆ ಸತತವಾಗಿ ಪ್ರಯತ್ನಿಸುತ್ತಿವೆ. ಅದರಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಒಂದು’ ಎಂದರು.

ಸಾನ್ನಿಧ್ಯ ವಹಿಸಿದ್ದ ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.
ಸುರೇಶ್ ಹೊಸಕೇರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಆರ್. ಮಹೇಶ್, ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಶಾಂತರಾಜ್ ಪಾಟೀಲ್ ಮಾತನಾಡಿದರು.

ಜಿರ್ಜೀಂಬೆ ಚಲನಚಿತ್ರದಲ್ಲಿ ನಟಿಸಿ 4 ರಾಜ್ಯ ಪ್ರಶಸ್ತಿಗಳನ್ನು ಪಡೆದ ಹೊನ್ನಾಳಿಯ ಬಾಲನಟ ಮಾ. ವಿಶ್ವಾಸ್ ಅವರನ್ನು ಸನ್ಮಾನಿಸಲಾಯಿತು.

ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ ಇದ್ದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !