ಗುರುವಾರ , ಮಾರ್ಚ್ 30, 2023
24 °C
ಚನ್ನಗಿರಿ ತಹಶೀಲ್ದಾರ್‌ ಪಟ್ಟರಾಜಗೌಡ ಹೇಳಿಕೆ

ಕೋವಿಡ್ ಕೇಂದ್ರ: ಮಾದರಿಯಾದ ಕಾರಿಗನೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಸವಾಪಟ್ಟಣ: ಕೋವಿಡ್‌ ರೋಗಿಗಳ ಶುಶ್ರೂಷೆಯಲ್ಲಿ ಸರ್ಕಾರಕ್ಕೆ ಪರ್ಯಾಯವಾಗಿ ನಿಂತು, ಸಂಪೂರ್ಣ ಗುಣಮುಖರಾಗಲು ಶ್ರಮಿಸಿದ ಕಾರಿಗನೂರಿನ ಜನರು ಸಮಾಜಕ್ಕೆ ಮಾದರಿ ಎಂದು ಚನ್ನಗಿರಿ ತಹಶೀಲ್ದಾರ್‌ ಪಟ್ಟರಾಜಗೌಡ ಹೇಳಿದರು.

ಬುಧವಾರ ಕಾರಿಗನೂರಿನ ಕೋವಿಡ್‌ ಕೇಂದ್ರದಲ್ಲಿ 45 ದಿನಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸಿ ಮಾತನಾಡಿದರು.

ರೈತ ಮುಖಂಡ ತೇಜಸ್ವಿ ಪಟೇಲ್‌ ಅವರ ಚಿಂತನೆಯ ಫಲವಾಗಿ ಸರ್ಕಾರದ ಯಾವ ಸಹಾಯವೂ ಇಲ್ಲದೇ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಮತ್ತು ಜೆ.ಎಚ್‌.ಪಟೇಲ್‌ ವಿವಿಧೋದ್ದೇಶ ಸಹಕಾರ ಸಂಘದ ಕೊಡುಗೆಯಿಂದ ಈ ಕೇಂದ್ರವು ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದೆ ಎಂದು ಪಟ್ಟರಾಜಗೌಡ ಶ್ಲಾಘಿಸಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಭು, ‘ಇಲ್ಲಿಯ ಕೇಂದ್ರದಲ್ಲಿ ಒಟ್ಟು ನೂರು ಜನ ಕೋವಿಡ್‌ ರೋಗಿಗಳಿದ್ದರು. ಅವರಿಗೆ ಉತ್ತಮವಾದ ಚಿಕಿತ್ಸೆಯೊಂದಿಗೆ ಆತ್ಮವಿಶ್ವಾಸ ಮೂಡಿಸಿದ ಫಲವಾಗಿ ಎಲ್ಲರೂ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಜನರು ಕಡ್ಡಾಯವಾಗಿ ಕೋವಿಡ್‌ ನಿರೋಧಕ ಲಸಿಕೆಯನ್ನು ಪಡೆದು ಈ ಮಾರಕ ರೋಗವನ್ನು ಹಿಮ್ಮೆಟ್ಟಿಸಬೇಕು’ ಎಂದು ಮನವಿ ಮಾಡಿದರು.

‘ಇಲ್ಲಿ ಕೋವಿಡ್‌ ಕೇಂದ್ರ ತೆರೆದು ಸೇವೆ ಸಲ್ಲಿಸಲು ನಮ್ಮ ಗ್ರಾಮಸ್ಥರು, ಜನ ಪ್ರತಿನಿಧಿಗಳು, ಆರೋಗ್ಯ ಇಲಾಖೆ ಬಹುವಾಗಿ ಶ್ರಮಿಸಿದೆ. ಗ್ರಾಮದ ಸಿದ್ಧಪ್ಪ ಎಂಬುವವರು ಕೇಂದ್ರದ ಸ್ವಚ್ಛತೆಯ ಜವಾಬ್ದಾರಿ ವಹಿಸಿಕೊಂಡು ನಿರಂತರ ಸೇವೆ ಸಲ್ಲಿಸಿದ್ದಾರೆ. ಅವರೊಂದಿಗೆ ರೋಗಿಗಳಿಗೆ ಆಹಾರ ಸಿದ್ಧಪಡಿಸಲು ಐದು ಜನ ಅಡುಗೆಯವರು ಶ್ರಮ ಪಟ್ಟಿದ್ದು, ಇಲ್ಲಿನ ಜೆ.ಎಚ್‌.ಪಟೇಲ್‌ ವಿವಿಧೋದ್ದೇಶ ಸಹಕಾರ ಸಂಘದಿಂದ ಸಿದ್ಧಪ್ಪನವರಿಗೆ ₹ 10 ಸಾವಿರ ಹಾಗೂ ಅಡುಗೆಯವರಿಗೆ ತಲಾ ₹ 5 ಸಾವಿರವನ್ನು ಪ್ರೋತ್ಸಾಹಧನವಾಗಿ ನೀಡಲಾಗಿದೆ’ ಎಂದು ತೇಜಸ್ವಿ ಪಟೇಲ್‌ ಹೇಳಿದರು.

ಆರೋಗ್ಯ ಇಲಾಖೆಯ ಡಾ.ಸಪನ್‌ಪಟೇಲ್‌, ಸಿಬ್ಬಂದಿ ಸರಸಮ್ಮ, ಮುಬೀನ, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯಿತಿ ಸದಸ್ಯರಾದ ಬಸವೇಶ್‌ ಪಟೇಲ್‌, ಕಿರಣ್‌, ಪ್ರವೀಣ್‌, ಮಂಜುಳ, ಅಂಬಿಕ, ಉಮಾ ಪ್ರಿಯಾಂಕ ಶರತ್‌, ಪಿ.ಡಿ.ಒ.ಗೋಪಾಲಕೃಷ್ಣ ಅವರೊಂದಿಗೆ ಗ್ರಾಮಸ್ಥರೂ ಕೇಂದ್ರದ ಯಶಸ್ಸಿಗೆ ಶ್ರಮಿಸಿದ್ದು, 32 ಜನರಿಗೆ ಕೋವಿಡ್‌ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೂರ್‌ಫಾತಿಮಾ ಅಧ್ಯಕ್ಷತೆ ವಹಿಸಿದ್ದರು. ಜಿ.ಎಂ.ತಿಪ್ಪೇಸ್ವಾಮಿ ಸ್ವಾಗತಿಸಿದರು. ಶಿಲ್ಪಾ ನಿರೂಪಿಸಿದರು. ವಿದ್ಯಾವತಿ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.