ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಸ್ಥಳಗಳಲ್ಲಿ ಮದ್ಯದ ಬಾಟಲಿ ಹಾವಳಿ: ಜನ, ಪ್ರಾಣಿ, ಪಕ್ಷಿಗಳಿಗೆ ಕಂಟಕ

ಪರಿಸರಕ್ಕೆ ಹೊಸ ಸವಾಲು l ಅಗತ್ಯ ಕ್ರಮಕ್ಕೆ ಆಗ್ರಹ
Published 20 ಏಪ್ರಿಲ್ 2024, 6:56 IST
Last Updated 20 ಏಪ್ರಿಲ್ 2024, 6:56 IST
ಅಕ್ಷರ ಗಾತ್ರ

ಹರಿಹರ: ‘ಕುಡಿದ ನಂತರ ಮದ್ಯದ ಬಾಟಲಿಗಳನ್ನು ಒಡೆದು ವಿಘ್ನಸಂತೋಷ ಪಡುವವರಿದ್ದಾರೆ. ಗಾಜುಗಳನ್ನು ಆಯುವುದೇ ನನ್ನ ಕೆಲಸವಾಗಿದೆ. ಗಾಜು ಕಾಲಿಗೆ ಚುಚ್ಚುವುದರಿಂದ ತೋಟದ ಕೆಲಸಕ್ಕೆ ಕೂಲಿ ಕಾರ್ಮಿಕರು ಬರಲು ಹಿಂದೇಟು ಹಾಕುತ್ತಾರೆ. ನಮ್ಮ ನೋವು ಯಾರಿಗೆ ಹೇಳಬೇಕು?’

ಹರಿಹರ ಸಮೀಪ‍ದ ಹನಗವಾಡಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತೋಟ ಹೊಂದಿರುವ ಅಡಿಕೆ ಬೆಳೆಗಾರ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರಸನ್ನ ಬಣಕಾರ್ ಅವರು ನೋವಿನಿಂದ ಕೇಳುವ ಪ‍್ರಶ್ನೆ ಇದು.

‘ಬೆಳಿಗ್ಗೆ ಶಾಲೆಗೆ ಬಂದರೆ ಮದ್ಯದ ಬಾಟಲಿಗಳನ್ನು ಆಯ್ದು ಕಸದ ತೊಟ್ಟಿಗೆ ಹಾಕಿಸಿ ನಂತರ ಕಸ ಹೊಡೆಸುವುದು ನಮ್ಮ ನಿತ್ಯದ ಕಾಯಕವಾಗಿದೆ’ ಎಂದು ನಗರದ ಡಿಆರ್‌ಎಂ ಸರ್ಕಾರಿ ಪ್ರೌಢಶಾಲೆ ಉಪಪ್ರಾಚಾರ್ಯ ಸಿದ್ಧರಾಮೇಶ್ವರ ವರೂ ಬಣಕಾರ್‌ ಅವರಂತೆಯೇ ನೋವು ತೋಡಿಕೊಂಡರು.

ಮದ್ಯದ ಬಾಟಲಿಯ ಸಮಸ್ಯೆ ಒಬ್ಬ ರೈತ, ಒಬ್ಬ ಶಾಲಾ ಮುಖ್ಯಸ್ಥರಿಗೆ ಸೀಮಿತವಾಗಿಲ್ಲ. ಬದಲಿಗೆ, ರಾಜ್ಯದ ಬಹುತೇಕ ಗ್ರಾಮ, ನಗರ, ಪಟ್ಟಣದ ಹೊರವಲಯದ ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳ ಆವರಣ, ಶ್ರದ್ಧಾ ಕೇಂದ್ರಗಳು, ಸೇತುವೆಯ ಕೆಳ ಭಾಗ, ನದಿ, ಕೆರೆ–ಕಟ್ಟೆ, ಉದ್ಯಾನ, ಅರಣ್ಯ, ಸಮುದ್ರ ಸೇರಿದಂತೆ ವಿವಿಧ ಪ್ರೇಕ್ಷಣೀಯ, ಐತಿಹಾಸಿಕ ಸ್ಥಳಗಳ ಆವರಣದ ನಿರ್ವಾಹಕರು ಎದುರಿಸುತ್ತಿರುವ ಸಮಸ್ಯೆಯಾಗಿದೆ.

ಜನರು ಸಂಚರಿಸುವ ಜಾಗದಲ್ಲಿ ಮದ್ಯದ ಬಾಟಲಿಗಳಿದ್ದರೆ ಯಾರಾದರೂ ಸುರಕ್ಷಿತವಾಗಿ ವಿಲೇವಾರಿ ಮಾಡುತ್ತಾರೆ. ಆದರೆ, ಸಮುದ್ರ, ನದಿ, ಕೆರೆ, ಕಟ್ಟೆಗಳ ಒಡಲನ್ನು ಗಾಜು ಸೇರುವುದರಿಂದ ಪ್ರಾಣಿ, ಪಕ್ಷಿ, ಕೀಟಗಳು ಎದುರಿಸುವ ಸಮಸ್ಯೆ ಹೇಳ ತೀರದು.

ಬಾರ್‌ಗಳಲ್ಲಿ ಪರಿಚಯದವರು ನೋಡಬಹುದೆಂಬ, ದುಬಾರಿ ದರ ತೆತ್ತಬೇಕು ಎಂಬ ಆತಂಕ ಅಥವಾ ಬಯಲಲ್ಲಿ ತಂಗಾಳಿ ಮಧ್ಯ ಗೆಳೆಯರೊಂದಿಗೆ ಹರಟುತ್ತಾ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಸೇವಿಸಬೇಕೆಂಬ ಪ್ರವೃತ್ತಿಯು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದು ರೈತರು ಸೇರಿ ಅನೇಕರು ಸಮಸ್ಯೆ ಎದುರಿಸುವಂತಾಗಿದೆ.

ದಶಕಗಳ ಹಿಂದೆ ವೈನು, ಬೀರ್‌ ಮತ್ತಿತರೆ ಯಾವುದೇ ಮದ್ಯ ಗಾಜಿನ ಬಾಟಲುಗಳಲ್ಲಿ ಮಾತ್ರ ಮಾರಾಟವಾಗುತ್ತಿತ್ತು. ಈಗ ಪರಿಸರಕ್ಕೆ ಹೆಚ್ಚು ಹಾನಿ ಮಾಡದ ಟೆಟ್ರಾ ಪ್ಯಾಕ್, ಟಿನ್ (ತಗಡಿನ ಡಬ್ಬಿ) ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಿಗುತ್ತಿದೆ. ಇವುಗಳ ಮೂಲಕವೇ ಮದ್ಯವನ್ನು ಮಾರಾಟ ಮಾಡಿದಲ್ಲಿ ಗಾಜಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಗಾಜಿನ ಬಾಟಲಿಯಲ್ಲಿಯೇ ಬೇಕು ಅಂದರೆ ಬಾಟಲಿಗಳನ್ನು ಪಾರ್ಸಲ್ ಕೊಡುವುದನ್ನು ನಿಷೇಧಿಸಬೇಕು. ಬಾರ್‌ಗಳಲ್ಲಿ ಮಾತ್ರ ಸರಬರಾಜಾಗುವಂತೆ ಅಬಕಾರಿ ಇಲಾಖೆ ನೀತಿ ರೂಪಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪರಿಸರಪ್ರಿಯರು ಆಗ್ರಹಿಸಿದ್ದಾರೆ.

ಹರಿಹರ: ಹರಿಹರ ತಾಲ್ಲೂಕಿನ ಪ್ರೇಕ್ಷಣಿಯ ಹಾಗೂ ಜೀವ ವೈವಿಧ್ಯ ಕ್ಷೇತ್ರವಾದ ಕೊಂಡಜ್ಜಿ ಗ್ರಾಮದ ಕೆರೆಯಂಗಳದಲ್ಲಿ ಕಂಡು ಬಂದ ಮದ್ಯದ ಗಾಜಿನ ಬಾಟಲುಗಳು.
ಹರಿಹರ: ಹರಿಹರ ತಾಲ್ಲೂಕಿನ ಪ್ರೇಕ್ಷಣಿಯ ಹಾಗೂ ಜೀವ ವೈವಿಧ್ಯ ಕ್ಷೇತ್ರವಾದ ಕೊಂಡಜ್ಜಿ ಗ್ರಾಮದ ಕೆರೆಯಂಗಳದಲ್ಲಿ ಕಂಡು ಬಂದ ಮದ್ಯದ ಗಾಜಿನ ಬಾಟಲುಗಳು.
ಹರಿಹರ: ಹರಿಹರ ಹೊರವಲಯದ ದಾವಣಗೆರೆ ರಸ್ತೆ ಬೀರೂರು-ಸಮ್ಮಸಗಿ ಹೆದ್ದಾರಇ ಪಕ್ಕದ ಜಮೀನೊಂದರಲ್ಲಿರುವ ಮದ್ಯದ ಬಾಟಲಿಗಳ ರಾಶಿ
ಹರಿಹರ: ಹರಿಹರ ಹೊರವಲಯದ ದಾವಣಗೆರೆ ರಸ್ತೆ ಬೀರೂರು-ಸಮ್ಮಸಗಿ ಹೆದ್ದಾರಇ ಪಕ್ಕದ ಜಮೀನೊಂದರಲ್ಲಿರುವ ಮದ್ಯದ ಬಾಟಲಿಗಳ ರಾಶಿ
ಹರಿಹರ: ಹರಿಹರದ ಶತಮಾನ ಕಂಡ ತುಂಗಭದ್ರ ಸೇತುವೆ ಮೇಲೆ ಇರುವ ಮದ್ಯದ ಬಾಟಲಿಗಳು
ಹರಿಹರ: ಹರಿಹರದ ಶತಮಾನ ಕಂಡ ತುಂಗಭದ್ರ ಸೇತುವೆ ಮೇಲೆ ಇರುವ ಮದ್ಯದ ಬಾಟಲಿಗಳು
ಹರಿಹರ: ಹರಿಹರದ ಶತಮಾನ ಕಂಡ ತುಂಗಭದ್ರ ಸೇತುವೆ ಮೇಲೆ ಇರುವ ಮದ್ಯದ ಬಾಟಲಿಗಳು
ಹರಿಹರ: ಹರಿಹರದ ಶತಮಾನ ಕಂಡ ತುಂಗಭದ್ರ ಸೇತುವೆ ಮೇಲೆ ಇರುವ ಮದ್ಯದ ಬಾಟಲಿಗಳು
ಸಾರ್ವಜನಿಕ ಸ್ಥಳಗಳಲ್ಲಿ ಮದ್ಯದ ಬಾಟಲಿಗಳನ್ನು ಒಡೆದು ಬಿಟ್ಟು ಹೋಗುತ್ತಿರುವ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಗಾಜುರಹಿತ ಮದ್ಯ ಮಾರಾಟ ವ್ಯವಸ್ಥೆ ಜಾರಿಯಾಗಲು ಸರ್ಕಾರದ ಮಟ್ಟದಲ್ಲಿ ನೀತಿ ನಿರೂಪಣೆ ಆಗಬೇಕು. ಈ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
ಅಶ್ವಿನಿ ಜಂಟಿ ಆಯುಕ್ತೆ ಅಬಕಾರಿ ಇಲಾಖೆ
ದಾವಣಗೆರೆ ವಿಭಾಗ ಎಲ್ಲಿ ನೋಡಿದರಲ್ಲಿ ಮದ್ಯದ ಬಾಟಲಿಗಳ ಹಾವಳಿ ಅತಿಯಾಗಿದೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಉಪಯೋಗಿಸಿದ ಬಾಟಲಿ ವಾಪಸ್ ಮದ್ಯದ ಅಂಗಡಿಗೆ ನೀಡಿದರೆ ₹ 10 ನೀಡುತ್ತಾರೆ. ಸಮಸ್ಯೆ ಪರಿಹಾರಕ್ಕೆ ಅಬಕಾರಿ ಇಲಾಖೆಯವರೇ ಪರಿಹಾರ ಹುಡಕಬೇಕು.
ರುದ್ರಗೌಡ ಪಿ. ವಕೀಲರ ಸಂಘದ ಮಾಜಿ ಅಧ್ಯಕ್ಷ ಹರಿಹರ
ಈ ಮುಂಚೆ ಉಪಯೋಗಿಸಿದ ಬೀರ್‌ ಮತ್ತಿತರೆ ಮದ್ಯದ ಬಾಟಲಿಗಳಿಗೆ ಉತ್ತಮ ಬೆಲೆ ಇತ್ತು. ಈಗ ಅದನ್ನು ಕೆ.ಜಿ.ಗೆ ₹ 5ಕ್ಕೆ ಖರೀದಿಸುತ್ತೇವೆ. ಈ ಕಾರಣಕ್ಕೆ ಆಯುವವರೂ ಭಾರವಾಗುತ್ತದೆ ಎಂದು ಮದ್ಯದ ಬಾಟಲಿ ಬಿಟ್ಟು ಪ್ಲಾಸ್ಟಿಕ್ ಬಾಟಲಿಗಳನ್ನು ಮಾತ್ರ ಆಯುತ್ತಿದ್ದಾರೆ.
ಬಿ.ನಿಸಾರ್ ಅಹಮದ್‌ ಗುಜರಿ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT