ಬುಧವಾರ, ನವೆಂಬರ್ 13, 2019
23 °C

ದಾವಣಗೆರೆ | ಅದ್ದೂರಿಗಿಂತ ಅರ್ಥಪೂರ್ಣ ಕಾರ್ಯಕ್ರಮ ಮುಖ್ಯ

Published:
Updated:
Prajavani

ದಾವಣಗೆರೆ: ಈಗ ಕಾಲೇಜು ವಿದ್ಯಾರ್ಥಿ ಸಂಘಗಳ ಕಾರ್ಯಕ್ರಮಗಳನ್ನು ಎಷ್ಟು ಅದ್ದೂರಿಯಾಗಿ ಮಾಡಲಾಗುತ್ತಿದೆ ಎಂಬುದು ಮುಖ್ಯವಾಗಿದೆ. ಅದರ ಬದಲು ಎಷ್ಟು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂಬುದು ಮುಖ್ಯವಾಗಬೇಕು ಎಂದು ಹೈಕೋರ್ಟ್‌ ನ್ಯಾಯಮೂರ್ತಿ ಡಾ. ಎಚ್‌.ಬಿ. ಪ್ರಭಾಕರ ಶಾಸ್ತ್ರಿ ಹೇಳಿದರು.

ಇಲ್ಲಿನ ಆರ್‌.ಎಲ್‌. ಕಾನೂನು ಕಾಲೇಜಿನ ವಿದ್ಯಾರ್ಥಿ ಪರಿಷತ್ತು ಮತ್ತು ಎನ್‌ಎಸ್‌ಎಸ್‌ ಚಟುವಟಿಕೆ ಉದ್ಘಾಟಿಸಿ ಶನಿವಾರ ಮಾತನಾಡಿದರು.

ವಿದ್ಯಾರ್ಥಿ ಸಂಘ ಇರುವುದು ಪ್ರತಿಭಟನೆ ನಡೆಸಲು ಅಲ್ಲ. ಉತ್ತಮ ಚಟುವಟಿಕೆಯನ್ನು ಹಮ್ಮಿಕೊಳ್ಳಲು ಇರುವುದು. ವ್ಯಾಸಂಗಕ್ಕೆ ಪೂರಕವಾಗಿ ವಿದ್ಯಾರ್ಥಿಗಳಲ್ಲಿ ಶ್ರದ್ಧೆ ಮತ್ತು ಆಸಕ್ತಿಯನ್ನು ಉದ್ದೀಪನಗೊಳಿಸುವ ಕೆಲಸ ವಿದ್ಯಾರ್ಥಿ ಸಂಘ ಮಾಡಬೇಕು. ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಬರುತ್ತಿದ್ದಾರೆ ಎಂದು ಜನ ಹೆದರಿಕೊಳ್ಳುವಂತೆ ಪದಾಧಿಕಾರಿಗಳು ಇರಬಾರದು. ಕಾಲೇಜಿಗೆ ಗೌರವ ತರುವಂತೆ ಇರಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳ ಬೇಕು–ಬೇಡಗಳನ್ನು, ಕುಂದು–ಕೊರತೆಗಳನ್ನು ಪ್ರಾಂಶುಪಾಲರ, ಆಡಳಿತ ಮಂಡಳಿಯ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಬೇಕು. ಹಾಗಂತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಮಾಡುವುದಲ್ಲ. ಗಾಯನ, ರಂಗಚಟುವಟಿಕೆ, ಕ್ರೀಡೆ ಹೀಗೆ ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಗಳನ್ನು ಗುರುತಿಸಿ ವೇದಿಕೆ ಒದಗಿಸಬೇಕು. ಇದೆಲ್ಲದರ ಜತೆಗೆ ಸಮಾಜಕ್ಕೆ ಏನು ಅಗತ್ಯ ಎಂದು ನೋಡಿ ಸೇವೆ ಮಾಡಲು ಮುಂದಾಗಬೇಕು ಎಂದು ತಿಳಿಸಿದರು.

ವಿದ್ಯಾರ್ಥಿ ಸಂಘ ಅಂದರೆ ಹಿಂದೆ ತಮ್ಮೊಳಗಿನ ಪ್ರತಿಭಾವಂತರನ್ನು ಆಯ್ಕೆ ಮಾಡಿ ಕಾಲೇಜಿನ, ವಿದ್ಯಾರ್ಥಿಗಳ ಹೊಣೆಗಾರಿಕೆ ನೀಡುವುದಾಗಿತ್ತು. ಚುನಾವಣೆ ಒಂದು ನೆಪವಷ್ಟೇ ಆಗಿತ್ತು. ಈಗ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.

ಸಮಾಜದ ಹತ್ತಿರಕ್ಕೆ ವಿದ್ಯಾರ್ಥಿಗಳನ್ನು ಒಯ್ಯಲು ಎನ್‌ಎಸ್‌ಎಸ್‌ ಸಹಕಾರಿ. ಪಠ್ಯೇತರ ಚಟುವಟಿಕೆ ಈಚೆಗೆ ಕಡಿಮೆಯಾಗಿದೆ. ಹಿಂದೆ ಪ್ರತಿ ವಾರದ ಕೊನೆಗೆ ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಚಟುವಟಿಕೆ ನಡೆಯುತ್ತಿದ್ದವು ಎಂದರು.

ಹುಬ್ಬಳ್ಳಿಯ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ. ಈಶ್ವರ ಭಟ್‌ ಮಾತನಾಡಿ, ಯಾವುದೇ ಪ್ರಕರಣದ ಹಿನ್ನೆಲೆಯನ್ನು ವಕೀಲರಾದವರು ಅರ್ಥ ಮಾಡಿಕೊಳ್ಳಬೇಕು. ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ನೈತಿಕ ಆಯಾಮಗಳು ಗೊತ್ತಾದರೆ ಅವುಗಳು ಸಮಾಜದ ಮೇಲೆ ಬೀರುವ ಪರಿಣಾಮ ಕೂಡ ತಿಳಿಯುತ್ತದೆ’ ಎಂದು ತಿಳಿಸಿದರು.

ಆರ್‌.ಎಲ್‌. ಕಾನೂನು ಕಾಲೇಜಿನ ಆಡಳಿತ ಸಮಿತಿ ಅಧ್ಯಕ್ಷ ಡಾ. ಆರ್.ಎಲ್‌. ಉಮಾಶಂಕರ್‌. ಮೈಸೂರು ಮಾನಸ ಗಂಗೋತ್ರಿಯ ಕಾನೂನು ಅಧ್ಯಯನ ಮತ್ತು ಸಂಶೋಧನ ವಿಭಾಗದ ಡಾ. ಟಿ.ಆರ್‌. ಮಾರುತಿ ಉಪಸ್ಥಿತರಿದ್ದರು. ಪ್ರಾಂಶುಪಾಲ ಡಾ. ಬಿ.ಎಸ್‌. ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು.

ಪ್ರಾಧ್ಯಾಪಕ ಜಿ.ಎಸ್‌. ಯತೀಶ್‌ ಸ್ವಾಗತಿಸಿದರು. ಎಂ. ಸೋಮಶೇಖರಪ್ಪ ವಂದಿಸಿದರು. ಶಾಂತಿಕ್‌ ಮುರ್ಡೇಶ್ವರಿ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಕ್ರಿಯಿಸಿ (+)