ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀಟ್‌ ಪರೀಕ್ಷೆ ಸುಗಮ; ವಿದ್ಯಾರ್ಥಿಗಳು ನಿರಾಳ

2 ವರ್ಷಗಳಿಂದ ಕಠಿಣ ಅಭ್ಯಾಸ ನಡೆಸಿದ್ದ ವಿದ್ಯಾರ್ಥಿಗಳ ಚಿತ್ತ ಇದೀಗ ಫಲಿತಾಂಶದತ್ತ!
ರಾಮಮೂರ್ತಿ ಪಿ.
Published 6 ಮೇ 2024, 7:14 IST
Last Updated 6 ಮೇ 2024, 7:14 IST
ಅಕ್ಷರ ಗಾತ್ರ

ದಾವಣಗೆರೆ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯು (ನೀಟ್) ಜಿಲ್ಲೆಯಲ್ಲಿ ಭಾನುವಾರ ಸುಗಮವಾಗಿ ನಡೆಯಿತು. ಜಿಲ್ಲೆಯ ಎಲ್ಲ ಕೇಂದ್ರಗಳಲ್ಲೂ ಪರೀಕ್ಷೆಯು ಶಾಂತಿಯುತವಾಗಿ ಮುಕ್ತಾಯಗೊಂಡಿತು.

ಹಬ್ಬ, ಜಾತ್ರೆಗಳನ್ನೂ ಲೆಕ್ಕಿಸದೇ ಸತತ 2 ವರ್ಷಗಳಿಂದ ಪರೀಕ್ಷೆಗೆಂದು ಕಠಿಣ ಅಭ್ಯಾಸ ನಡೆಸಿದ್ದ ಸಾವಿರಾರು ವಿದ್ಯಾರ್ಥಿಗಳು, ಪರೀಕ್ಷೆ ಮುಗಿದ ಬಳಿಕ ನಿರಾಳವಾಗಿ ಪರೀಕ್ಷಾ ಕೇಂದ್ರದಿಂದ ಹೊರಬಂದರು. ನೆಮ್ಮದಿಯ ಭಾವ ಅವರ ಮುಖದಲ್ಲಿ ಕಂಡುಬಂತು.

ಹಲವು ವಿದ್ಯಾರ್ಥಿಗಳು ತಮ್ಮ ಕಾಲೇಜಿನಲ್ಲೇ ನೀಟ್‌ ವಿಶೇಷ ತರಗತಿಗಳಿಗೆ ಹಾಜರಾಗಿದ್ದರು. ಇನ್ನೂ ಕೆಲವರು ನೀಟ್‌ ತರಬೇತಿಗೆಂದು ಅಕಾಡೆಮಿಗಳ ಮೊರೆ ಹೋಗಿದ್ದರು. ಕೆಲವೇ ಕೆಲವರು ಮಾತ್ರ ಮನೆಗಳಲ್ಲೇ ನೀಟ್‌ ಪರೀಕ್ಷೆಗೆಂದು ಕಠಿಣ ಅಭ್ಯಾಸ ನಡೆಸಿದ್ದರು.

ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (ಎನ್‌ಟಿಎ) ನಡೆಸಿದ ನೀಟ್‌ ಪರೀಕ್ಷೆ ಮುಗಿದಿರುವುದರಿಂದ ಜೂನ್ 14ರಂದು ಪ್ರಕಟವಾಗಲಿರುವ ಫಲಿತಾಂಶದತ್ತ ವಿದ್ಯಾರ್ಥಿಗಳ ಚಿತ್ತ ನೆಟ್ಟಿದೆ. ವಿದ್ಯಾರ್ಥಿಗಳು ನೀಟ್‌ ಪರೀಕ್ಷೆಯಲ್ಲಿ ಗಳಿಸಿದ ರ‍್ಯಾಂಕ್‌ ಆಧರಿಸಿ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್‌ ಸೀಟು ದೊರಕಲಿವೆ.

ಪರೀಕ್ಷೆಯಲ್ಲಿ ತೃಪ್ತಿಕರವಾದ ರ್‍ಯಾಂಕ್‌ ಪಡೆಯದ ವಿದ್ಯಾರ್ಥಿಗಳು ಸಿ.ಇ.ಟಿ. ಮೂಲಕ ತಾವು ಪಡೆದ ರ‍್ಯಾಂಕ್ ಆಧರಿಸಿ ಎಂಜಿನಿಯರಿಂಗ್‌, ಆಯುರ್ವೇದ, ಪಶುವೈದ್ಯಕೀಯ, ಹೋಮಿಯೊಪಥಿ, ಯುನಾನಿ, ಫಿಸಿಯೊಥೆರಪಿ, ನ್ಯಾಚುರೊಪತಿ, ನರ್ಸಿಂಗ್‌, ಪ್ಯಾರಾಮೆಡಿಕಲ್ ಸೇರಿದಂತೆ ಇನ್ನಿತರ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಈ ಕೋರ್ಸ್‌ಗಳ ಹೊರತಾಗಿಯೂ ಕೆಲವು ವಿದ್ಯಾರ್ಥಿಗಳು ಬಿ.ಎಸ್ಸಿ. ಪದವಿಯತ್ತ ಮುಖ ಮಾಡಿದರೆ, ಹಲವು ವಿದ್ಯಾರ್ಥಿಗಳು ನೀಟ್‌ ದೀರ್ಘಾವಧಿ ತರಬೇತಿ ಪಡೆಯಲು ಮುಂದಾಗುತ್ತಾರೆ.

‘ಫಲಿತಾಂಶ ಪ್ರಕಟ, ಕೌನ್ಸಿಲಿಂಗ್‌, ಕಟ್‌ಆಫ್‌ ಪ್ರಕ್ರಿಯೆ, ಡಾಕ್ಯುಮೆಂಟೇಷನ್‌ ವೆರಿಫಿಕೇಷನ್‌ ಸೇರಿದಂತೆ ಎಲ್ಲ ಪ್ರಕ್ರಿಯೆ ಮುಗಿಯಲು ಆಗಸ್ಟ್‌ವರೆಗೂ ಸಮಯ ಹಿಡಿಯಬಹುದು. ಬಳಿಕ ಆಗಸ್ಟ್‌ ತಿಂಗಳಲ್ಲಿ ಅಡ್ಮಿಷನ್‌ ಶುರುವಾಗುವ ಸಾಧ್ಯತೆ ಇದೆ’ ಎಂದು ಉಪನ್ಯಾಸಕರೊಬ್ಬರು ಮಾಹಿತಿ ನೀಡಿದರು.

ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.20ರ ವರೆಗೆ ಪರೀಕ್ಷೆ ನಡೆಯಿತು. ಪರೀಕ್ಷಾ ಕೇಂದ್ರಗಳಲ್ಲಿ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ಅಭ್ಯರ್ಥಿಗಳು ನಿಗದಿತ ಸಮಯಕ್ಕಿಂತ 30 ನಿಮಿಷಗಳ ಮೊದಲು ಕೇಂದ್ರಗಳನ್ನು ತಲುಪಿದ್ದರು. ಅವರನ್ನು ತಪಾಸಣೆಗೊಳಪಡಿಸಿ ಬಳಿಕ ಪರೀಕ್ಷಾ ಕೇಂದ್ರದೊಳಗೆ ಕಳಿಸಲಾಯಿತು.

‘ಹಬ್ಬ– ಜಾತ್ರೆ ಎಂಬುದನ್ನು ಲೆಕ್ಕಿಸದೇ ಓದಿದ್ದರಿಂದ ಪರೀಕ್ಷೆ ಸುಲಭವಾಗಿತ್ತು. ಭೌತಶಾಸ್ತ್ರ ವಿಷಯವನ್ನು ಇನ್ನಷ್ಟು ಓದಬೇಕಿತ್ತು. ಕೆಟಗರಿ ಆಧಾರದ ಮೇಲೆ ವೈದ್ಯಕೀಯ ಸೀಟು ಸಿಗಲಿದೆ’ ಎಂದು ಪರೀಕ್ಷೆ ಮುಗಿಸಿ ಹೊರಬಂದ ವಿದ್ಯಾರ್ಥಿನಿ ದೇವಾಂಗ ಹಂಸ ಎಸ್‌. ವಿಶ್ವಾಸ ವ್ಯಕ್ತಪಡಿಸಿದರು.

‘ಕಾಲೇಜಿನಲ್ಲಿ ನಡೆಸಿದ ಕೋಚಿಂಗ್‌ ಕ್ಲಾಸ್‌ನಿಂದ ಪರೀಕ್ಷೆಯಲ್ಲಿ ಸಹಾಯವಾಯಿತು. ವೈದ್ಯಕೀಯ ಕೋರ್ಸ್‌ ಸೀಟಿನ ನಿರೀಕ್ಷೆ ಇದೆ. ಅದು ಸಿಗದಿದ್ದರೆ, ಸಿಇಟಿ ಮೂಲಕ ಪಶುವೈದ್ಯಕೀಯ ಕೋರ್ಸ್‌ ಮಾಡುವ ಆಸೆ ಇದೆ’ ಎಂದು ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿಯಿಂದ ಬಂದು ಪರೀಕ್ಷೆ ಎದುರಿಸಿದ ವಿದ್ಯಾರ್ಥಿನಿ ಅಮೂಲ್ಯ ಹಾಗೂ ಎಂ.ಸಂಜನಾ ತಿಳಿಸಿದರು.

ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಮಲಯಾಳ, ಮರಾಠಿ, ಒಡಿಯಾ, ತಮಿಳು, ತೆಲುಗು, ಉರ್ದು ಮತ್ತು ಪಂಜಾಬಿ ಸೇರಿ 13 ಭಾಷೆಗಳಲ್ಲಿ ‘ನೀಟ್‌’ ಬರೆಯಲು ಅವಕಾಶ ನೀಡಲಾಗಿತ್ತು.

ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿನಿಯರೊಂದಿಗೆ ಬಂದಿದ್ದ ಅವರ ಪಾಲಕರು ಪರೀಕ್ಷಾ ಕೇಂದ್ರಗಳ ಹೊರಗಡೆ ಕಾಯುತ್ತಿರುವುದು ಕಂಡುಬಂತು.

ಅರ್ಬಿಯಾ
ಅರ್ಬಿಯಾ
ಪ್ರೀತಂ
ಪ್ರೀತಂ
ರೇಖಾ
ರೇಖಾ

2 ವರ್ಷದಿಂದ ಅಭ್ಯಾಸ ನಡೆಸಿದ್ದರಿಂದ ಪರೀಕ್ಷೆ ತುಂಬಾ ಕಠಿಣ ಎಂದೆನಿಸಲಿಲ್ಲ. ನೀಟ್‌ ಪರೀಕ್ಷೆಗೆಂದು ಯಾವುದೇ ರೀತಿಯ ಕೋಚಿಂಗ್‌ ಕ್ಲಾಸ್‌ಗೆ ಹೋಗಿಲ್ಲ. ಉತ್ತಮ ಫಲಿತಾಂಶದ ನಿರೀಕ್ಷೆ

-ಇದೆ ಅರ್ಬಿಯಾ ದಾವಣಗೆರೆ

ಜೀವಶಾಸ್ತ್ರ ರಸಾಯನಶಾಸ್ತ್ರ ಸುಲಭವಾಗಿತ್ತು ಭೌತಶಾಸ್ತ್ರ ಸ್ವಲ್ಪ ಕಷ್ಟವಾಗಿತ್ತು. ಪಿ.ಯು. ಮೊದಲ ವರ್ಷದಿಂದಲೇ ಲೈನ್‌ ಟು ಲೈನ್‌ ಓದಿ ಅಭ್ಯಾಸ ನಡೆಸಿದ್ದೆ

- ಪ್ರೀತಂ ದಾವಣಗೆರೆ

ಕಾಲೇಜಿನಲ್ಲಿ ಆರಂಭದಿಂದಲೂ ಕೋಚಿಂಗ್‌ ಕ್ಲಾಸ್‌ ನಡೆಸಿದ್ದರಿಂದ ನೀಟ್ ಪರೀಕ್ಷೆಯನ್ನು ಸುಲಭವಾಗಿ ಎದುರಿಸಲು ಸಾಧ್ಯವಾಯಿತು. ಉತ್ತಮ ಫಲಿತಾಂಶದ ವಿಶ್ವಾಸದಲ್ಲಿದ್ದೇನೆ

- ರೇಖಾ ರಾಣೇಬೆನ್ನೂರು (ಹಾವೇರಿ ಜಿಲ್ಲೆ)

ದ್ವಿತೀಯ ಪಿಯುಸಿ ಸಿಲಬಸ್‌ ಮೇಲೆಯೇ ಹೆಚ್ಚಿನ ಪ್ರಶ್ನೆಗಳಿದ್ದವು. ಕೋಚಿಂಗ್‌ ಕ್ಲಾಸ್‌ಗೆ ಹೋಗಿಲ್ಲ. ಈ ಬಾರಿ ಉತ್ತಮ ಫಲಿತಾಂಶ ದೊರೆಯದಿದ್ದರೆ ಮುಂದಿನ ವರ್ಷ ಮತ್ತೊಮ್ಮೆ ಪರೀಕ್ಷೆ ಎದುರಿಸುವೆ

-ನಬೀನ್‌ ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT