ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚನ್ನಗಿರಿ | ಹಂದಿ, ನಾಯಿ, ಮಂಗಗಳ ಕಾಟ: ಸಾರ್ವಜನಿಕರು ತತ್ತರ

Published 6 ಫೆಬ್ರುವರಿ 2024, 6:17 IST
Last Updated 6 ಫೆಬ್ರುವರಿ 2024, 6:17 IST
ಅಕ್ಷರ ಗಾತ್ರ

ಚನ್ನಗಿರಿ: ಪಟ್ಟಣದಲ್ಲಿ ಬಹುದಿನಗಳಿಂದ ಹಂದಿ, ಮಂಗ, ನಾಯಿಗಳ ಕಾಟ ವಿಪರೀತವಾಗಿದ್ದು, ಇದರಿಂದ ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

300ಕ್ಕೂ ಹೆಚ್ಚು ಹಂದಿಗಳು, 50ಕ್ಕೂ ಹೆಚ್ಚು ಮಂಗಗಳು ಹಾಗೂ ಸಾವಿರಕ್ಕಿಂತ ಹೆಚ್ಚು ಬೀದಿ ನಾಯಿಗಳು ಪಟ್ಟಣದಲ್ಲಿವೆ. ಅದರಲ್ಲೂ ಹಂದಿಗಳು ಗುಂಪು ಗುಂಪಾಗಿ ಬಂದು ಮನೆಯ ಸುತ್ತಮುತ್ತ ತ್ಯಾಜ್ಯವನ್ನು ಕೆದರಿ ಹಾಕಿ ಪರಿಸರ ಹಾಳು ಮಾಡುತ್ತಿವೆ. ಯಾವುದೇ ಚರಂಡಿಯಲ್ಲೂ ನೋಡಿದರೂ ಹಂದಿಗಳನ್ನು ಕಾಣಬಹುದು. ಸಣ್ಣ ಮಕ್ಕಳು ಹಂದಿಗಳ ಕಾಟದಿಂದಾಗಿ ಭಯ ಬೀತರಾಗಿ ಓಡಾಡುವಂತಾಗಿದೆ. ಬೇಸಿಗೆ ಸಮೀಪಿಸುತ್ತಿದ್ದು ಹಂದಿಗಳ ಕಾಟದಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಬಗ್ಗೆ ಜನರಲ್ಲಿ ಆತಂಕ ಮನೆ ಮಾಡಿದೆ. 

ಮಂಗ ಹಾಗೂ ಮುಸಿಯಾಗಳೂ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿವೆ. ಮಂಗಗಳೂ ಸಹ ಗುಂಪಾಗಿ ಗೂಡಂಗಡಿಗಳಿಗೆ ನುಗ್ಗಿ, ತಿನ್ನುವ ಪದಾರ್ಥಗಳನ್ನು ತೆಗೆದುಕೊಂಡು ಹೋಗುತ್ತಿವೆ. ಹೆದರಿಸಲು ಹೋದವರ ಮೇಲೆಯೇ ಅವು ದಾಳಿ ಮಾಡಲು ಬರುತ್ತವೆ. ದಿನವೂ ಹೀಗೆಯೇ ಐದರಿಂದ ಹತ್ತು ಅಂಗಡಿಗಳ ಮೇಲೆ ದಾಳಿ ನಡೆಸುವುದು ಸಾಮಾನ್ಯವಾಗಿದೆ. ಕಿರಿಕಿರಿಯ ಜೊತೆಗೆ ಆರ್ಥಿಕ ನಷ್ಟವೂ ಆಗುತ್ತಿದೆ ಎಂದು ಅಂಗಡಿಯವರು ಹೇಳುತ್ತಾರೆ. 

ಪುರಸಭೆಯವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸುಮ್ಮನಿದ್ದಾರೆ. ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ.
ಕುಮಾರಪ್ಪ, ಪಟ್ಟಣದ 7ನೇ ವಾರ್ಡಿನ ವಾಸಿ 

ಜತೆಗೆ ಬೀದಿ ನಾಯಿಗಳ ಕಾಟವಂತೂ ವಿಪರೀತ ಎನಿಸುವಷ್ಟು ಹೆಚ್ಚಾಗಿದೆ. ಸಣ್ಣಪುಟ್ಟ ಮಕ್ಕಳನ್ನು ಹೆದರಿಸಿ, ಅವರ ಕೈಯಲ್ಲಿರುವ ತಿನಿಸುಗಳನ್ನು ಕಸಿದು ಒಯ್ಯುತ್ತವೆ ಎಂದು ಪಾಲಕರು ದೂರಿದ್ದಾರೆ. 

‘ವರಾಹ ಶಾಲೆ ಆರಂಭಕ್ಕೆ ಅನುದಾನ’

ಹಂದಿ ನಾಯಿ ಹಾಗೂ ಮಂಗಗಳ ನಿಯಂತ್ರಣಕ್ಕಾಗಿ ಈಗಾಗಲೇ ಪುರಸಭೆಯಲ್ಲಿ ಚರ್ಚೆ ಮಾಡಲಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ತಿಳಿಸಿದ್ದಾರೆ. ‘ಹಂದಿಗಳ ಮಾಲೀಕರಿಗೆ ಹಲವಾರು ಬಾರಿ ನೋಟೀಸ್ ಜಾರಿ ಮಾಡಲಾಗಿದೆ. ಆಡಳಿತಾಧಿಕಾರಿಯಾಗಿರುವ ಉಪ ವಿಭಾಗಾಧಿಕಾರಿ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಅವುಗಳ ನಿಯಂತ್ರಣಕ್ಕಾಗಿ ಹೊಸ ವರಾಹ ಶಾಲೆಯನ್ನು ಆರಂಭಿಸಲು ಈ ಬಾರಿಯ ಬಜೆಟ್‌ನಲ್ಲಿ ಅನುದಾನವನ್ನು ಮೀಸಲಿಟ್ಟಿದ್ದಾರೆ. ಜತೆಗೆ ಮಂಗಗಳನ್ನು ಸೆರೆ ಹಿಡಿದು ಕಾಡಿಗೆ ಬಿಡಲು ಹಾಗೂ ನಾಯಿಗಳಿಗೆ ಸಂತಾನಹರಣ ಚುಚ್ಚುಮದ್ದು ನೀಡುವಂತೆ ಆಡಳಿತಾಧಿಕಾರಿ ಸೂಚನೆ ನೀಡಿರುತ್ತಾರೆ. ಆದಷ್ಟು ಶೀಘ್ರದಲ್ಲಿ ಈ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT