ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಹರ: ಬತ್ತಿದ ಸೂಳೆಕೆರೆ ಹಳ್ಳ– ರೈತರ ಸಂಕಷ್ಟ

ಹರಿಹರ: ಸಾವಿರಾರು ಎಕರೆ ಜಮೀನುಗಳ ಬೆಳೆಗಿಲ್ಲ ನೀರು
Published 20 ಮಾರ್ಚ್ 2024, 9:15 IST
Last Updated 20 ಮಾರ್ಚ್ 2024, 9:15 IST
ಅಕ್ಷರ ಗಾತ್ರ

ಹರಿಹರ: ತಾಲ್ಲೂಕಿನ ಜಲಪಾತ್ರೆಗಳಲ್ಲಿ ದೇವರಬೆಳೆಕೆರೆ (ಡಿ.ಬಿ.ಕೆರೆ) ಪಿಕ್‌ಅಪ್ ಮತ್ತು ಸಂಗ್ರಹಾಗಾರ ಪ್ರಮುಖವಾಗಿದೆ. ಭದ್ರಾ ಕಾಲುವೆಗಳ ಜಾಲ ಮತ್ತು ತುಂಗಭದ್ರಾ ನದಿಯ ಜೊತೆಗೆ ಈ ಪಿಕ್‌ಅಪ್ ಕೂಡ ಸಹಸ್ರಾರು ರೈತರ ಬದುಕಿಗೆ ಆಧಾರವಾಗಿದೆ.

ಮಳೆ ಕೊರತೆಯಿಂದಾಗಿ ಪಿಕ್‌ಅಪ್‌ನಲ್ಲಿ ನೀರು ಸಂಗ್ರಹ ಕನಿಷ್ಠ ಮಟ್ಟಕ್ಕೆ ಇಳಿದಿದೆ. ಪರಿಣಾಮ ಪಿಕ್ಅಪ್‌ನಿಂದ ನೀರು ಸಾಗಿಸುವ ಸೂಳೆಕೆರೆ ಹಳ್ಳವು ಸಂಪೂರ್ಣವಾಗಿ ಬತ್ತಿಹೋಗಿದೆ. ಆ ಮೂಲಕ ಈ ಹಳ್ಳದ ಅಚ್ಚುಕಟ್ಟು ಪ್ರದೇಶದ ಜಮೀನು, ತೋಟಗಳಿಗೆ ನೀರಿನ ಹಾಹಾಕಾರ ಎದುರಾಗಿದೆ.

ಡಿ.ಬಿ.ಕೆರೆ ಪಿಕ್‌ಅಪ್‌ನಿಂದ ಹೆಚ್ಚುವರಿಯಾದ ನೀರು ಸೂಳೆಕೆರೆ ಹಳ್ಳಕ್ಕೆ ಹರಿಯುತ್ತದೆ. ಆ ನೀರನ್ನು ಆಧರಿಸಿ ತಾಲ್ಲೂಕಿನ ಹತ್ತಾರು ಗ್ರಾಮಗಳ 3,000ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿ ವಿವಿಧ ತೋಟಗಾರಿಕೆ, ಬೆಳೆಗಳನ್ನು ಬೆಳೆಯಲಾಗುತ್ತದೆ. 15 ದಿನಗಳಿಂದ ಈ ಹಳ್ಳದಲ್ಲಿ ನೀರು ಹರಿಯುವುದು ನಿಂತಿದೆ. ನೀರಿನ ಹರಿವು ನಿಂತ ನಂತರ ರೈತರು ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹಳ್ಳದಲ್ಲಿ ಗುಂಡಿ ತೋಡಿ ಬಸಿ ನೀರನ್ನು ಪಂಪ್‌ಸೆಟ್ ಮೂಲಕ ಜಮೀನುಗಳಿಗೆ ಕೆಲ ದಿನ ಹರಿಸಿದ್ದಾರೆ. ಆದರೆ, ಆ ಗುಂಡಿಗಳೂ ಈಗ ಬರಿದಾಗಿದ್ದು, ರೈತರು ತಲೆ ಮೇಲೆ ಕೈಹೊತ್ತು ಕೂರುವಂತೆ ಮಾಡಿದೆ.

ಹಳ್ಳದ ಇಕ್ಕೆಲಗಳಲ್ಲಿ ಬೆಳ್ಳೂಡಿ, ಹನಗವಾಡಿ, ಭಾನುವಳ್ಳಿ, ಬ್ಯಾಲದಹಳ್ಳಿ, ಹರಗನಹಳ್ಳಿ, ನಾಗೇನಹಳ್ಳಿ ಸೇರಿ ಹತ್ತಾರು ಗ್ರಾಮಗಳ ವ್ಯಾಪ್ತಿಯಲ್ಲಿ ಎಲೆಬಳ್ಳಿ, ಅಡಿಕೆ, ತೆಂಗು, ಭತ್ತ, ಕಬ್ಬು ಸೇರಿ ಹಲವಾರು ಬೆಳೆಗಳನ್ನು ಬೆಳೆಯಲಾಗುತ್ತದೆ. ಹಳ್ಳದ ನೀರನ್ನು ಬಿಟ್ಟರೆ ರೈತರು ಮುಖ ಮಾಡುವುದೇ ಕೊಳವೆಬಾವಿಗಳ ಕಡೆಗೆ. ಹಳ್ಳ ಹಾಗೂ ಭದ್ರಾ ಕಾಲುವೆಗಳಲ್ಲಿ ನೀರಿನ ಹರಿವು ನಿಂತ ನಂತರ ಕೊಳವೆಬಾವಿಗಳಲ್ಲಿ ನೀರು ಬರುವ ಪ್ರಮಾಣವೂ ಕಡಿಮೆಯಾಗಿದೆ.

ಇದೆಲ್ಲದರ ಪರಿಣಾಮ ಸೂಳೆಕೆರೆ ಹಳ್ಳ ವ್ಯಾಪ್ತಿಯ ರೈತರು ತಮ್ಮ ಬೆಳೆಗಳನ್ನು ರಕ್ಷಿಸುವುದು ಹೇಗೆಂದು ಚಿಂತಾಕ್ರಾಂತರಾಗಿದ್ದಾರೆ. ಮೂರ‍್ನಾಲ್ಕು ದಿನಗಳಲ್ಲಿ ಭದ್ರಾ ಕಾಲುವೆಗಳಲ್ಲಿ ನೀರು ಬಿಟ್ಟಾಗ ಆ ನೀರು ಕೊನೆ ಭಾಗದವರೆಗೂ ತಲುಪಿದರೆ ಈ ಭಾಗದ ಕೊಳವೆಬಾವಿಗಳು ಪುನಃಶ್ಚೇತನಗೊಳ್ಳಲಿವೆ. ಇಲ್ಲದಿದ್ದರೆ ಸೂಳೆಕೆರೆ ಹಳ್ಳದ ಅಚ್ಚುಕಟ್ಟು ಪ್ರದೇಶದ ರೈತರು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT