ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯವಿದ್ದರೆ ನೇಹಾ ಕುಟುಂಬಕ್ಕೆ ಭದ್ರತೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪೋಷಕರಿಗೆ ಸಾಂತ್ವನ ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Published 25 ಏಪ್ರಿಲ್ 2024, 15:58 IST
Last Updated 25 ಏಪ್ರಿಲ್ 2024, 15:58 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದಲ್ಲಿ ಈಚೆಗೆ ಹತ್ಯೆಗೀಡಾದ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರ ಬಿಡನಾಳದಲ್ಲಿರುವ ಮನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಭೇಟಿ ನೀಡಿ, ಪೋಷಕರಿಗೆ ಸಾಂತ್ವನ ಹೇಳಿದರು.

ನೇಹಾ ತಂದೆ, ಹು–ಧಾ ಮಹಾನಗರ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಅವರಿಗೆ ಧೈರ್ಯ ತುಂಬಿ, ಉಭಯಕುಶಲೋಪರಿ ವಿಚಾರಿಸಿದರು. ‘ಇಂತಹ ಅಮಾನುಷ ಘಟನೆ ನಡೆಯಬಾರದಿತ್ತು’ ಎಂದು ಬೇಸರ ವ್ಯಕ್ತಪಡಿಸಿದರು. 

ನೇಹಾ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇದೊಂದು ದುರದೃಷ್ಟಕರ ಘಟನೆ. ಇದನ್ನು ತೀವ್ರವಾಗಿ ಖಂಡಿಸುತ್ತೇನೆ. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದ್ದು, ವಿಶೇಷ ನ್ಯಾಯಾಲಯವನ್ನೂ ಸ್ಥಾಪಿಸಲಾಗಿದೆ. ಕೊಲೆ ಮಾಡಿದವನಿಗೆ ಆದಷ್ಟು ಬೇಗ ಶಿಕ್ಷೆ ಆಗಲಿದೆ’ ಎಂದರು.

‘ನೇಹಾ ಕುಟುಂಬದೊಂದಿಗೆ ನಾವಿದ್ದೇವೆ. ಅವರಿಗೆ ರಕ್ಷಣೆ ಅಗತ್ಯವಿದ್ದರೆ ಒದಗಿಸಲಾಗುತ್ತದೆ. ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾದ್ದರೆ ಆ ನಿಟ್ಟಿನಲ್ಲೂ ತನಿಖೆ ನಡೆಸಲು ಸೂಚಿಸಲಾಗಿದೆ. ಸಿಐಡಿ ಅಧಿಕಾರಿಗಳು ದೋಷಾರೋಪ ಪಟ್ಟಿ ಸಲ್ಲಿಸಿದ ಬಳಿಕ ನ್ಯಾಯಾಲಯ ವಿಚಾರಣೆ ನಡೆಸಲಿದೆ’ ಎಂದು ಹೇಳಿದರು.

‘ಈ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಅವರು ಅಧಿಕಾರದಲ್ಲಿದ್ದಾಗ ಯಾವೊಂದೂ ಪ್ರಕರಣವನ್ನು ಸಿಬಿಐಗೆ ಕೊಟ್ಟಿಲ್ಲ. ನಾನು ಈ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ’ ಎಂದು ಹೇಳಿದರು.

ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ. ಪಾಟೀಲ, ಕಾರ್ಮಿಕ ಸಚಿವ ಸಂತೋಷ ಲಾಡ್‌, ಶಾಸಕ ಪ್ರಸಾದ ಅಬ್ಬಯ್ಯ, ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನೋದ ಅಸೂಟಿ, ಅಂಜುಮನ್ ಸಂಸ್ಥೆ ಅಧ್ಯಕ್ಷ ಎ.ಎಂ.ಹಿಂಡಸಗೇರಿ ಇದ್ದರು.

ಮನೆಗೆ ಭದ್ರತೆ:

‘ತಮ್ಮ ಜೀವಕ್ಕೆ ಅಪಾಯವಿದೆ’ ಎಂದು ಹೇಳಿರುವ ನಿರಂಜನಯ್ಯ  ಅವರ ನಿವಾಸಕ್ಕೆ ಪೊಲೀಸರು ಭದ್ರತೆ ಒದಗಿಸಿದ್ದಾರೆ. ‘ಅವರ ನಿವಾಸದ ಸುತ್ತ ಮೂವರು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅವರ ಮನೆ ಸುತ್ತ ಓಡಾಡುವ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾ ಇಡಲಾಗುವುದು’ ಎಂದು ಹುಬ್ಬಳ್ಳಿ –ಧಾರವಾಡ ಪೊಲೀಸ್ ಕಮಿಷನರ್‌ ರೇಣುಕಾ ಸುಕುಮಾರ್ ಹೇಳಿದರು.

 ಮಾಹಿತಿ ಕಲೆ ಹಾಕಿದ ಸಿಐಡಿ ತಂಡ:

ಇಲ್ಲಿನ ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಪ್ರಕರಣದ ತನಿಖೆ ಗುರುವಾರವೂ ಮುಂದುವರಿಯಿತು. ಸಿಐಡಿ ಅಧಿಕಾರಿಗಳು ಇಲ್ಲಿನ ಬಿಡನಾಳದಲ್ಲಿರುವ ಅವರ ಮನೆಗೆ  ಭೇಟಿ ನೀಡಿ ಮಾಹಿತಿ ಕಲೆ ಹಾಕಿದರು.

ಸಿಐಡಿ ಎಸ್ಪಿ ವೆಂಕಟೇಶ ನೇತೃತ್ವದ ತಂಡ ನೇಹಾ ಅವರ ತಂದೆ ನಿರಂಜನಯ್ಯ ಹಿರೇಮಠ‌ ಮತ್ತು ತಾಯಿ ಗೀತಾ ಅವರೊಂದಿಗೆ ಒಂದೂವರೆ ಗಂಟೆ ಚರ್ಚಿಸಿ, ಮಾಹಿತಿ ಸಂಗ್ರಹಿಸಿತು.

ನಿರಂಜನಯ್ಯ ಹಿರೇಮಠ ಪ್ರತಿಕ್ರಿಯಿಸಿ, ‘ಸಿಐಡಿ ಅಧಿಕಾರಿಗಳು ಪ್ರಕರಣದ ಕುರಿತು ಕೆಲ ಮಾಹಿತಿ ಕೇಳಿದರು. ಅವರೂ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ’ ಎಂದು ಹೇಳಿದರು.

‘ಗಲ್ಲಿಗೇರಿಸುವ ದಿನಕ್ಕಾಗಿ ಕಾಯುತ್ತಿರುವೆ’

‘ದೇಶದಾದ್ಯಂತ ಪಕ್ಷಾತೀತವಾಗಿ ಎಲ್ಲರೂ  ಹೋರಾಟ ಮಾಡಿ ನಮಗೆ ಶಕ್ತಿ ತುಂಬಿದ್ದಾರೆ. ನಮ್ಮ ಬೇಡಿಕೆಗಳಿಗೆ ರಾಜ್ಯ ಸರ್ಕಾರ ಶೀಘ್ರ ಸ್ಪಂದಿಸಿದೆ. ಸುರ್ಜೇವಾಲ ಅವರು ಭೇಟಿ ನೀಡಿದಾಗ 90ರಿಂದ 120 ದಿನಗಳಲ್ಲಿ ಶಿಕ್ಷೆ ಪ್ರಕಟವಾಗುವ ಭರವಸೆ ನೀಡಿದ್ದಾರೆ. ಹಂತಕನಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಗಲ್ಲಿಗೇರಿಸುವ ದಿನಕ್ಕಾಗಿ ಕಾಯುತ್ತಿದ್ದೇನೆ’ ಎಂದು ನೇಹಾ ತಂದೆ ನಿರಂಜನಯ್ಯ ಹಿರೇಮಠ ಹೇಳಿದರು.

‘ಮಗಳನ್ನು ಕಳೆದುಕೊಂಡ ದುಃಖದಲ್ಲಿ ಸರ್ಕಾರಕ್ಕೆ ಮುಜುಗರ ತರುವಂತಹ ಹೇಳಿಕೆ ನೀಡಿದ್ದರೆ  ಕ್ಷಮೆ ಇರಲಿ. ಅನ್ಯತಾ ಭಾವಿಸಬಾರದು. ನಮಗೆ ಭದ್ರತೆ ಕೊಡಿ ನ್ಯಾಯ ಸಿಗುವವರಿಗೆ ಬೆಂಬಲ ನೀಡಬೇಕು’ ಎಂದು ಮನವಿ ಮಾಡಿದರು.

ನನ್ನ ಜೀವಕ್ಕೂ ಅಪಾಯ:

‘ನನ್ನ ಜೀವಕ್ಕೆ ಅಪಾಯವಿರುವ ಮುನ್ಸೂಚನೆ ಸಿಗುತ್ತಿದ್ದು ನನ್ನ ಕುಟುಂಬಕ್ಕೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು’ ಎಂದು ಹಿರೇಮಠ ಆಗ್ರಹಿಸಿದರು.

‘ನೇಹಾ ಕೊಲೆ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿರುವುದರಿಂದ ಹಲವರು ಸಾಂತ್ವನ ಹೇಳಲು ಮನೆಗೆ ಬರುತ್ತಿದ್ದಾರೆ. ಈ ವೇಳೆ ಸಂಶಯಾಸ್ಪದ ವ್ಯಕ್ತಿಗಳೂ ಕಂಡು ಬರುತ್ತಿದ್ದಾರೆ. ಶಂಕಾಸ್ಪದ ವ್ಯಕ್ತಿಗಳಿಂದ ನನ್ನ ಜೀವಕ್ಕೆ ಅಪಾಯವಿರುವ ಮನ್ಸೂಚನೆ ಇದೆ. ಸೂಕ್ತ ಭದ್ರತೆ ಒದಗಿಸಲು ಮುಖ್ಯಮಂತ್ರಿ ಅವರಿಗೆ ಮನವಿ ಮಾಡಲಾಗಿದೆ’ ಎಂದರು.

‘ನೇಹಾ ಹತ್ಯೆ ಮಾಡುವ ಮುನ್ನ ಫಯಾಜ್ ತನ್ನ ಸ್ನೇಹಿತರೊಂದಿಗೆ ನಮ್ಮ ಮನೆಯ ಬಳಿ ಸುತ್ತಾಡಿದ್ದ. ನೇಹಾಗೆ ಕರೆ ಮಾಡಿ ಜೀವ ಬೆದರಿಕೆಯನ್ನೂ ಹಾಕಿದ್ದ. ಈ ಹಿಂದೆ ಅಪಹರಿಸಲು ಸಹ ಯತ್ನಿಸಿದ್ದ. ಇದೊಂದು ವ್ಯವಸ್ಥಿತ ಕೃತ್ಯವಾಗಿದೆ’ ಎಂದರು. 

ಪ್ರಕರಣ ಸಿಬಿಐಗೆ ವಹಿಸಲಿ: ಮಾಳವಿಕ ಅವಿನಾಶ್ 

‘ನೇಹಾ ಕೊಲೆ ಪ್ರಕರಣವನ್ನು ಸಿಐಡಿ ತನಿಖೆ ನಡೆಸಿದರೆ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಒತ್ತಾಯಿಸಿದರು.  ನೇಹಾ ಹಿರೇಮಠ ಅವರ ಮನೆಗೆ ಗುರುವಾರ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಅವರು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT