ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌, ಜೆಡಿಎಸ್‌ ಘೋಷಣೆ; ಬಿಜೆಪಿ ಅಭ್ಯರ್ಥಿ ಇನ್ನೂ ಇಲ್ಲ

ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ಘೋಷಣೆ; ಅ.28ಕ್ಕೆ ಮತದಾನ
Last Updated 30 ಸೆಪ್ಟೆಂಬರ್ 2020, 1:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಕಾರಣದಿಂದ ಮುಂದೂಡಿದ್ದ ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆಯು ಕೊರೊನಾ ಕಾಲದಲ್ಲಿಯೇ ಘೋಷಣೆಯಾಗಿದೆ. ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ತಮ್ಮ ಅಭ್ಯರ್ಥಿ ಹೆಸರು ಘೋಷಿಸಿದ್ದು, ಬಿಜೆಪಿ ಅಭ್ಯರ್ಥಿ ಆಯ್ಕೆ ಮಾತ್ರ ಕಗ್ಗಂಟಾಗಿದೆ.

ಕಳೆದ ಅವಧಿಗೆ ವಿಧಾನ ಪರಿಷತ್‌ ಸದಸ್ಯರಾಗಿದ್ದ ಎಸ್‌.ವಿ. ಸಂಕನೂರ ಅವರು, ಮತ್ತೆ ಸ್ಪರ್ಧಿಸಲು ಸಿದ್ಧವಾಗಿದ್ದಾರೆ. ಅವರ ಹೆಸರನ್ನು ಮಾತ್ರ ಹೈಕಮಾಂಡ್‌ಗೆ ಶಿಫಾರಸು ಮಾಡಲಾಗಿದೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತವೆ. ಆದರೆ, ಅಧಿಕೃತವಾಗಿ ಪಕ್ಷದಿಂದ ಮಾತ್ರ ಅಭ್ಯರ್ಥಿ ಹೆಸರು ಘೋಷಣೆಯಾಗಿಲ್ಲ.

ಜೂನ್‌ ತಿಂಗಳಿಗೆ ಈಗಿನ ಸದಸ್ಯರ ಅವಧಿ ಮುಗಿದಿದೆ. ಮೇ ತಿಂಗಳಿನಲ್ಲಿಯೇ ಚುನಾವಣೆ ನಡೆಯಬೇಕಿತ್ತು. ಆದರೆ, ಕೊರೊನಾ ಹರಡುವಿಕೆ ತೀವ್ರವಾದ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡಲಾಗಿತ್ತು. ಈಗ ಬಿಹಾರ ರಾಜ್ಯದ ವಿಧಾನಸಭೆ ಚುನಾವಣೆ ಸೇರಿದಂತೆ ವಿವಿಧೆಡೆ ಚುನಾವಣೆಗಳು ನಡೆಯುತ್ತಿರುವುದರಿಂದ ಈ ಕ್ಷೇತ್ರದ ಚುನಾವಣೆಯ ಮತದಾನವನ್ನೂ ಅ.28ಕ್ಕೆ ಚುನಾವಣಾ ಆಯೋಗ ನಿಗದಿ ಮಾಡಿದೆ.

2019 ಅಕ್ಟೋಬರ್‌ನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಹುಬ್ಬಳ್ಳಿಯಲ್ಲಿ ನಡೆದಿತ್ತು. ಅಲ್ಲಿ ಆಕಾಂಕ್ಷಿ ಅಭ್ಯರ್ಥಿಗಳು, ಮುಖಂಡರಿಂದ ಅಭಿಪ್ರಾಯ ಸಂಗ್ರಹ ಮಾಡಲಾಗಿತ್ತು. ಒಂದು ವಾರದಲ್ಲಿ ಅಭ್ಯರ್ಥಿ ಹೆಸರು ಅಂತಿಮಗೊಳಿಸಲಾಗುವುದು ಎಂದು ಹೇಳಲಾಗಿತ್ತು. ವರ್ಷ ಕಳೆಯುತ್ತ ಬಂದರೂ ಅಭ್ಯರ್ಥಿ ಆಯ್ಕೆಯ ಗೊಂದಲ ಇನ್ನೂ ಮುಂದುವರೆದಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ವಿಭಾಗದ ಸಂಘಟನಾ ಪ್ರಭಾರಿ ಲಿಂಗರಾಜ ಪಾಟೀಲ, ಶಿಕ್ಷಕರ ರಾಷ್ಟ್ರೀಯ ಸಂಘದ ಉಪಾಧ್ಯಕ್ಷ ಬಸವರಾಜ ಗುರಿಕಾರ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗರಾಜ ಅಂಗಡಿ, ವೀರೇಶ ಸಂಗಳದ, ಹಾವೇರಿ ಜಿಲ್ಲಾ ಬಿಜೆಪಿ ಮುಖಂಡ ಬೋಜರಾಜ ಕರೂದಿ ಸೇರಿದಂತೆ ಹಲವರು ಆಕಾಂಕ್ಷಿಯಾಗಿದ್ದಾರೆ.

ಕಾಂಗ್ರೆಸ್‌ ಈಗಾಗಲೇ ಆರ್.ಎಂ. ಕುಬೇರಪ್ಪ ಅವರನ್ನು ಪಕ್ಷದ ಅಭ್ಯರ್ಥಿಯೆಂದು ಘೋಷಿಸಿ ಎಂಟು ತಿಂಗಳ ಮೇಲಾಗಿದೆ. ಜೆಡಿಎಸ್‌ ಸಹ ಶಿವಶಂಕರ ಕಲ್ಲೂರ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ್ದು, ಕ್ಷೇತ್ರ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಹಾವೇರಿ ಹಾಗೂ ಗದಗ ಜಿಲ್ಲೆಗಳಲ್ಲಿ ಅವರಿಬ್ಬರೂ ಸಂಚರಿಸಿ ಪ್ರಚಾರ ಮಾಡುತ್ತಿದ್ದಾರೆ.

‘ಕ್ಷೇತ್ರ ನಾಲ್ಕು ಜಿಲ್ಲೆಗಳ ದೊಡ್ಡದಾದ ವ್ಯಾಪ್ತಿ ಹೊಂದಿದೆ. ಪದವೀಧರರು ಮಾತ್ರ ಮತದಾರರಾಗಿರುವುದರಿಂದ ಅವರೆನ್ನೆಲ್ಲ ಭೇಟಿ ಮಾಡಿ ಮತ ಕೇಳುವುದು ಕಷ್ಟವಾಗುತ್ತದೆ. ಈಗಾಗಲೇ ಪ್ರತಿಸ್ಪರ್ಧಿ ಪಕ್ಷಗಳ ಅಭ್ಯರ್ಥಿಗಳು ಪ್ರಚಾರದಲ್ಲಿ ತೊಡಗಿದ್ದಾರೆ. ಯಾರಿಗಾದರೂ ಟಿಕೆಟ್‌ ನೀಡಲಿ. ಕೂಡಲೇ ಹೆಸರು ಘೋಷಿಸಬೇಕು’ ಎಂದು ಟಿಕೆಟ್‌ ಆಕಾಂಕ್ಷಿಯೊಬ್ಬರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT