ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಂದಗೋಳ: ದಶಕದಿಂದ ನೀಗದ ನೀರಿನ ಸಮಸ್ಯೆ

ಕುಂದಗೋಳ ತಾಲ್ಲೂಕು; ಬರಿದಾದ ಕೆರೆಗಳು, ಶುದ್ಧ ನೀರಿನ ಘಟಕಗಳು ಸ್ಥಗಿತ
ಬಸನಗೌಡ ಪಾಟೀಲ
Published 21 ಮೇ 2024, 4:46 IST
Last Updated 21 ಮೇ 2024, 4:46 IST
ಅಕ್ಷರ ಗಾತ್ರ

ಕುಂದಗೋಳ: ಜಿಲ್ಲೆಯಲ್ಲಿಯೇ ಕುಂದಗೋಳ ತಾಲ್ಲೂಕು ಅತ್ಯಂತ ಹಿಂದುಳಿದಿದ್ದು, ದಶಕದಿಂದ ಕುಡಿಯುವ ನೀರಿನ ಸಮಸ್ಯೆ ಜೀವಂತವಾಗಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ 27 ಗ್ರಾಮ ಪಂಚಾಯಿತಿಗಳಿದ್ದು, 58 ಗ್ರಾಮಗಳಿವೆ. ಕೆರೆ, ಕೊಳವೆಬಾವಿಗಳು, ಶುದ್ಧ ಕುಡಿಯುವ ನೀರಿನ ಘಟಕಗಳು ತಾಲ್ಲೂಕು ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿವೆ.

10 ಗ್ರಾಮಗಳಲ್ಲಿ ಕೆರೆ, 42 ಗ್ರಾಮಗಳಲ್ಲಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಅಲ್ಲದೆ, 15 ಗ್ರಾಮಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮೂಲಕ ನಾಲ್ಕು ದಿನಕ್ಕೊಮ್ಮೆ ನೀರು ಒದಗಿಸಲಾಗುತ್ತಿದೆ.

ತಾಲ್ಲೂಕು ವ್ಯಾಪ್ತಿಯಲ್ಲಿ 84 ಕೆರೆಗಳಿದ್ದು, 26 ಕೆರೆಗಳಲ್ಲಿ ನೀರು ಇಲ್ಲ. ತಾಲ್ಲೂಕಿನಾದ್ಯಂತ ನಿರ್ಮಿಸಿದ್ದ 87 ಶುದ್ಧ ಕುಡಿಯುವ ನೀರಿನ ಘಟಕಗಳ ಪೈಕಿ 21 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. ತಾಲ್ಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಒಟ್ಟು 373 ಕೊಳವೆಬಾವಿಗಳಿದ್ದು ಆ ಪೈಕಿ 103 ದುರಸ್ತಿ ಹಂತದಲ್ಲಿವೆ.

ಯರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಜನರು ಕುಡಿಯುವ ನೀರನ್ನು ಟ್ರ್ಯಾಕ್ಟರ್, ದನ-ಕರು ಮೈ ತೊಳೆಯಲು ಬಳಸುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಮೂಲಕ ಯರಗುಪ್ಪಿ, ಮುಳ್ಳೊಳ್ಳಿ ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿರುವ ನೀರನ್ನು ನಾಲ್ಕು ದಿನ ಶೇಖರಿಸಿ, ತಿಳಿಯಾದ ನಂತರ ಜನರು ಕುಡಿಯಲು ಬಳಸುತ್ತಿದ್ದಾರೆ. 

ತಾಲ್ಲೂಕು ವ್ಯಾಪ್ತಿಯಲ್ಲಿ ಬರಿದಾಗಿರುವ ಕೆರೆಗಳಿಗೆ, ಹೊಲಗಳಿಂದ ನೀರು ಹರಿದು ಬರುವ ಕಾಲುವೆಗಳ ಹೂಳೆತ್ತುವ ಕಾಮಗಾರಿಗಳು ಕುಂಟುತ್ತ ಸಾಗಿದೆ. ಚಿಕ್ಕನರ್ತಿ, ಬಾಗವಾಡ, ಯರಿನಾರಾಯಣಪುರ, ಬೆನಕನಹಳ್ಳಿ, ಗ್ರಾಮಗಳ ಕೆರೆಯಲ್ಲಿನ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಕುಂದಗೋಳ ಪಟ್ಟಣದ ಐತಿಹಾಸಿಕ ಹಿನ್ನೆಲೆಯ ಅಗಸಿಹೊಂಡದ ನೀರು ಸ್ಥಳೀಯರ ಬೇಜವಾಬ್ದಾರಿಯಿಂದ ಮಲಿನವಾಗಿದೆ.

ಹೀರೆ ಗುಂಜಳ ಮತ್ತು ಯಲಿವಾಳ ಗ್ರಾಮದಲ್ಲಿ ಖಾಸಗಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಪೂರೈಸಲಾಗುತ್ತಿದೆ. ಶಿರೂರು, ಕಮಡೊಳ್ಳಿ, ಬರದ್ವಾಡ ಗ್ರಾಮಗಳಲ್ಲಿ ನೀರಿನ ಕೊರತೆಯಿದೆ.

ನವಿಲು ತಿರ್ಥದಿಂದ ಕಿರೇಸೂರು ಕೆರೆಗೆ ನೀರು ತುಂಬಿಸುವ ಕಾರ್ಯ ನಡೆದಿದೆ. ತಾಲ್ಲೂಕಿನಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲಾಗುವುದು

–ಎಸ್.ಎಸ್.ಖಾದ್ರೋಳಿ ತಾಲ್ಲೂಕು ಪಂಚಾಯಿತಿ ಇಒ

ನಾಲ್ಕು ದಿನಕ್ಕೊಮ್ಮೆ ಬರುತ್ತದೆ. ಅದು ಕುಡಿಯಲು ಯೋಗ್ಯವಾಗಿರುವುದಿಲ್ಲ. ನಾಲ್ಕು ದಿನ ಸಂಗ್ರಹಿಸಿದ ನಂತರವಷ್ಟೇ ತಿಳಿಯಾಗುತ್ತದೆ

-ವಿರೇಶ್ ಸಾಸ್ವಿಹಳ್ಳಿ ಯರಗುಪ್ಪಿ ಗ್ರಾಮಸ್ಥ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT