ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ರಂಗೇರಿದ ದೀಪಾವಳಿ ಸಂಭ್ರಮ

ಮನೆಗಳಲ್ಲಿ ಬೆಳಗಿದ ದೀಪಗಳು; ಅನುರಣಿಸಿದ ಪಟಾಕಿ ಶಬ್ದ
Last Updated 4 ನವೆಂಬರ್ 2021, 14:28 IST
ಅಕ್ಷರ ಗಾತ್ರ

ಹುಬ್ಬಳ್ಳಿ: ದೀಪಾವಳಿ ಹಬ್ಬದ ಸಂಭ್ರಮನಗರದಲ್ಲಿ ಗುರುವಾರ ಎಲ್ಲೆಲ್ಲೂ ಕಂಡುಬಂತು. ಮನೆಗಳ ಎದುರು ಸಾಲು ದೀಪಗಳು, ಆಕರ್ಷಕ ಆಕಾಶ ಬುಟ್ಟಿಗಳು ಕಣ್ಮನ ಸೆಳೆದವು. ಅಂಗಡಿಗಳು ಹಾಗೂ ಕಟ್ಟಡಗಳು ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದವು. ಸಂಜೆಯಾಗುತ್ತಿದ್ದಂತೆ ಜನರು ಮನೆ ಹಾಗೂ ಅಂಗಡಿ–ಮಳಿಗೆಗಳಲ್ಲಿ ಲಕ್ಷ್ಮಿ ಪೂಜೆ ಹಾಗೂ ವಾಹನಗಳ ಪೂಜೆ ಮಾಡಿದರು. ಮನೆ ಮಂದಿಯೆಲ್ಲಾ ಪಟಾಕಿ ಹಚ್ಚಿ ಸಂಭ್ರಮಪಟ್ಟರು. ಬೀದಿಗಳಲ್ಲೂ ಪಟಾಕಿ ಶಬ್ದ ಅನುರಣಿಸುತ್ತಿತ್ತು.

ಹಬ್ಬದ ಅಂಗವಾಗಿ ಹಳೇ ಹುಬ್ಬಳ್ಳಿಯ ದುರ್ಗದ ಬೈಲ್, ಜನತಾ ಬಜಾರ್, ಚನ್ನಮ್ಮನ ವೃತ್ತ, ಈದ್ಗಾ ಮೈದಾನ ಸೇರಿದಂತೆ ವಿವಿಧೆಡೆ ಇರುವ ಮಾರುಕಟ್ಟೆಗಳು ಗ್ರಾಹಕರಿಂದ ತುಂಬಿ ತುಳುಕುತ್ತಿದ್ದವು. ಪೂಜೆ ಸಾಮಗ್ರಿ, ಕಬ್ಬು, ಮಾವಿನ ಸೊಪ್ಪು, ಬಾಳೆ ದಿಂಡು, ಹಣ್ಣುಗಳು, ಹಣತೆ, ಆಕಾಶಬುಟ್ಟಿ ಸೇರಿದಂತೆ ವಿವಿಧ ಸಾಮಗ್ರಿಗಳನ್ನು ಜನ ಖರೀದಿಸಿದರು.

ದಾಜಿಬಾನ ಪೇಟೆ ಮುಖ್ಯರಸ್ತೆ, ಕೊಪ್ಪಿಕರ ರಸ್ತೆ, ಷಾ ಬಜಾರ್, ಸಿಬಿಟಿ, ಮಾಲ್‌ಗಳು ಸೇರಿದಂತೆ ವಿವಿಧೆಡೆಯ ಬಟ್ಟೆ ಮಳಿಗೆಗಳಲ್ಲೂ ಗ್ರಾಹಕರು ಕಿಕ್ಕಿರಿದು ಸೇರಿದ್ದರು. ಹಬ್ಬಕ್ಕಾಗಿ ಮನೆ ಮಂದಿಗೆಲ್ಲಾ ಬಟ್ಟೆಗಳನ್ನು ಖರೀದಿಸಿದರು. ಸಿಹಿ ತಿನಿಸುಗಳ ಅಂಗಡಿಗಳಲ್ಲೂ ಗ್ರಾಹಕರ ಭರಾಟೆ ಜೋರಾಗಿತ್ತು.ಪಟಾಕಿ ಮಳಿಗೆಗಳಲ್ಲಿಯೂ ಹೆಚ್ಚಿನ ಜನಸಂದಣಿ ಇತ್ತು. ದುರ್ಗದ ಬೈಲ್, ಕುಬಸದ ಗಲ್ಲಿಗಳಲ್ಲಿರುವ ಅಂಗಡಿಗಳಲ್ಲಿ ಜನ ಮುಗಿಬಿದ್ದು ಪಟಾಕಿ ಖರೀದಿಸಿದರು.

‘ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಹಬ್ಬದ ಸಂಭ್ರಮ ಅಷ್ಟಾಗಿಲ್ಲ. ಕೋವಿಡ್–19 ನಂತರದ ಸಂಕಷ್ಟ, ಆರ್ಥಿಕ ತೊಂದರೆ ಹಾಗೂ ಬೆಲೆ ಏರಿಕೆಯೂ ಇದಕ್ಕೆ ಕಾರಣ. ಹಾಗಾಗಿ, ಸರಳವಾಗಿ ಹಬ್ಬ ಆಚರಿಸುತ್ತಿದ್ದೇವೆ’ ಎಂದು ರಾಜನಗರದ ಗೋವಿಂದರಾವ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT