ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ : ಸೊಳ್ಳೆ ನಿಯಂತ್ರಣಕ್ಕೆ ಗಪ್ಪಿ–ಗಂಬೂಸಿಯಾ

ನಾಗರಾಜ್‌ ಬಿ.ಎನ್‌.
Published 24 ಫೆಬ್ರುವರಿ 2024, 5:20 IST
Last Updated 24 ಫೆಬ್ರುವರಿ 2024, 5:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ ವಿವಿಧ ಬಡಾವಣೆಗಳಲ್ಲಿ ಸೊಳ್ಳೆಗಳ ಕಾಟ ಹೆಚ್ಚಿರುವ ಹಿನ್ನೆಲೆಯಲ್ಲಿ, ಅವುಗಳ ನಿಯಂತ್ರಣಕ್ಕೆ‌ ಪಾಲಿಕೆ ಮುಂದಾಗಿದೆ.‌ ಕೆರೆ, ಕಟ್ಟೆ, ರಾಜಕಾಲುವೆಗೆ ಹಾಗೂ ನೀರು ನಿಲ್ಲುವ ಪ್ರದೇಶಗಳಲ್ಲಿ ಗಪ್ಪಿ-ಗಂಬೂಸಿಯಾ ಮೀನಿನ ಮರಿಗಳನ್ನು ಬಿಡುತ್ತಿದೆ.

ಪಾಲಿಕೆ ಆರೋಗ್ಯ ವಿಭಾಗದ ಸಿಬ್ಬಂದಿ ಶುಕ್ರವಾರ ನಗರದ ತೋಳನಕೆರೆ ಹಾಗೂ ಶಿರೂರು ಪಾರ್ಕ್ ಬಳಿ ಹರಿಯುವ ರಾಜಕಾಲುವೆಯ ನೀರು ನಿಂತ ಸ್ಥಳದಲ್ಲಿ ಗಪ್ಪಿ-ಗಂಬೂಸಿಯಾ ಮೀನಿನ ಮರಿಗಳನ್ನು ಬಿಟ್ಟಿದ್ದಾರೆ. ಆ ಮೂಲಕ ಸೊಳ್ಳೆಗಳ ಉತ್ಪತ್ತಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. 20 ಸಾವಿರ ಮೀನಿನ ಮರಿಗಳನ್ನು ಬಿಟ್ಟಿದ್ದಾರೆ.

‘ಸೊಳ್ಳೆಗಳ ನಿಯಂತ್ರಣಕ್ಕೆ ಈಗಾಗಲೇ ನಾವು 2 ಲಕ್ಷ ಗಪ್ಪಿ-ಗಂಬೂಸಿಯಾ ಮೀನಿನ ಮರಿಗಳನ್ನು ಅಣ್ಣಿಗೇರಿಯಿಂದ ತಂದು ಸಂಗ್ರಹಿಸಿ ಇಟ್ಟುಕೊಂಡಿದ್ದೇವೆ. ಮೊದಲ ಹಂತದ ರೂಪದಲ್ಲಿ ರಾಜಕಾಲುವೆ ಹರಿಯುವ ಶಿರೂರು ಪಾರ್ಕ್‌ ಮತ್ತು ಬನಶಂಕರಿ ಬಡಾವಣೆ ಸುತ್ತಲಿನ ನೀರು ಸಂಗ್ರಹ ಪ್ರದೇಶಗಳಲ್ಲಿ ಮೀನಿನ ಮರಿಗಳನ್ನು ಬಿಟ್ಟಿದ್ದೇವೆ’ ಎಂದು ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಶ್ರೀಧರ ದಂಡಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೊಳ್ಳೆಯಿಂದ ಮಲೇರಿಯಾ, ಡೆಂಗೆ, ಚಿಕೂನ್‌ಗುನ್ಯಾ, ಮೆದುಳುಜ್ವರ ಹರಡುತ್ತವೆ. ಸೊಳ್ಳೆ ಕಡಿತ ಸಣ್ಣದಾದರೂ, ಪರಿಣಾಮ ಕೆಟ್ಟದಾಗಿರುತ್ತದೆ. ಈ ರೋಗಗಳಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಮೀನುಗಳನ್ನು ಕೆರೆ, ನೀರು ನಿಲ್ಲುವ ಪ್ರದೇಶಗಳಲ್ಲಿ ಬಿಡುವುದು ಪರಿಹಾರವಾಗಿದೆ. ಸೊಳ್ಳೆ ಲಾರ್ವಾ ಹಂತದಲ್ಲಿರುವಾಗಲೇ ಮೀನಿನ ಮರಿಗಳು ತಿನ್ನುವುದರಿಂದ ಸೊಳ್ಳೆ ನಿಯಂತ್ರಣ ಸಾಧ್ಯ’ ಎಂದರು.

‘ನೀರು ನಿಲ್ಲುವ ಹಾಗೂ ಸೊಳ್ಳೆಗಳ ಕಾಟ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಲಾಗುತ್ತಿದ್ದು, ಲಾರ್ವಾ ಸಮೀಕ್ಷೆ ನಡೆದಿದೆ. ಆರೋಗ್ಯ ಸಿಬ್ಬಂದಿ ಜೊತೆ 200ಕ್ಕೂ ಹೆಚ್ಚು ನರ್ಸಿಂಗ್‌ ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಮನೆಮನೆಗಳಿಗೆ ತೆರಳಿ, ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ನೀರಿನ ಟ್ಯಾಂಕ್‌, ಪ್ಲವರ್‌ ಪ್ಲಾಟ್‌, ಬಾಟಲಿ, ಟಾಯರ್‌ ಹಾಗೂ ಸುತ್ತಲಿನ ವಾತಾವರಣದಲ್ಲಿ ನೀರು ನಿಲ್ಲದಂತೆ ಜಾಗೃತಿ ವಹಿಸಲು ಸೂಚನೆ ನಿಡಲಾಗುತ್ತಿದೆ. ಜೊತೆಗೆ, ನಗರದ ಎಲ್ಲ ಬಡಾವಣೆಗಳಲ್ಲೂ ಫಾಗಿಂಗ್‌ ಮಾಡಲಾಗುತ್ತಿದೆ’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ತಿಳಿಸಿದರು.

‘ಮೊದಲು ರಾಜಕಾಲುವೆ ಶುಚಿಗೊಳಿಸಿ’

‘ಶಿರೂರು ಪಾರ್ಕ್‌ ಅಯ್ಯಪ್ಪಸ್ವಾಮಿ ಗುಡಿ ಬನಶಂಕರ ಬಡಾವಣೆ ದೇವಿನಗರ ಲಿಂಗರಾಜದ ಬಳಿ ರಾಜಕಾಲುವೆ ಹರಿಯುತ್ತಿದ್ದು 3 ಕಿ.ಮೀ. ವ್ಯಾಪ್ತಿಯಲ್ಲಿ ಸೊಳ್ಳೆಗಳು ಹೆಚ್ಚಳವಾಗಿದೆ. ಸ್ಮಾರ್ಟ್‌ಸಿಟಿ ಯೋಜನೆಯಡಿ ಗ್ರೀನ್‌ ಮೊಬಿಲಿಟಿ ಕಾರಿಡಾರ್‌ ಕಾಮಗಾರಿ ನಡೆಯುತ್ತಿದ್ದು ಒಳಚರಂಡಿ ಮತ್ತು ಚರಂಡಿ ಪೈಪ್‌ಲೈನ್‌ ಅಳವಡಿಸಲು ಅಲ್ಲಲ್ಲಿ ಕಾಲುವೆಯ ನೀರನ್ನು ತಡೆದು ನಿಲ್ಲಿಸಲಾಗಿದೆ. ನಿಂತ ನೀರಿನಲ್ಲಿ ಕೊಳಚೆ ಗಿಡಗಳು ಬೆಳೆದು ಸೊಳ್ಳೆಗಳು ಹೆಚ್ಚಾಗಿವೆ’ ಎನ್ನುವುದು ಸ್ಥಳೀಯರ ವಾದ. ‘ಮೂರು ವರ್ಷಗಳಿಂದ ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಇನ್ನೂ ಪೂರ್ಣವಾಗಿಲ್ಲ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಸಂಜೆ ವೇಳೆ ಮನೆಯಿಂದ ಹೊರಗೆ ಬಂದರೆ ಮುತ್ತಿಕ್ಕುತ್ತವೆ. ಜ್ವರ ಕೆಮ್ಮಿನಿಂದ ಬಳಲುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕಾಲುವೆ ಶುಚಿಪಡಿಸದೆ ಗಪ್ಪಿ–ಗಂಬೂಸಿಯಾ ಮೀನಿನ ಮರಿ ಬಿಟ್ಟರೆ ಪ್ರಯೋಜನವಿಲ್ಲ’ ಬನಶಂಕರಿ ಬಡಾವಣೆಯ ರೂಪಾ ಹಂಚಿನ ಹೇಳಿದರು.

ನೀರಿನಲ್ಲಿ ಕಂಡು ಬರುವ ಹುಳುಗಳನ್ನು ಬಾಲದ ಹುಳು ಎಂದು ತಪ್ಪಾಗಿ ಭಾವಿಸಲಾಗುತ್ತದೆ. ಅವು ಸೊಳ್ಳೆ ಮರಿಗಳಾಗಿದ್ದು ಅವುಗಳನ್ನು ನಿರ್ಮೂಲನ ಮಾಡಲು ಗಪ್ಪಿ–ಗಂಬೂಸಿಯಾ ಮೀನಿನ ಮರಿಗಳನ್ನು ಬಿಡುತ್ತಿದ್ದೇವೆ.
ಈಶ್ವರ ಉಳ್ಳಾಗಡ್ಡಿ, ಆಯುಕ್ತ, ಹು–ಧಾ ಮಹಾನಗರ ಪಾಲಿಕೆ
ಹುಬ್ಬಳ್ಳಿಯಲ್ಲಿ ಲಾರ್ವಾ ಸಮೀಕ್ಷೆ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿ
ಹುಬ್ಬಳ್ಳಿಯಲ್ಲಿ ಲಾರ್ವಾ ಸಮೀಕ್ಷೆ ನಡೆಸುತ್ತಿರುವ ಆರೋಗ್ಯ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT