ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಮಹಾನಗರ ಪಾಲಿಕೆ: ₹45 ಕೋಟಿ ವೆಚ್ಚದ ನೂತನ ಕಟ್ಟಡ

ಮಹಾನಗರ ಪಾಲಿಕೆ: ಶೀಘ್ರ ಭೂಮಿಪೂಜೆ; ಮೊದಲ ಹಂತದಲ್ಲಿ ₹5 ಕೋಟಿ ವೆಚ್ಚದ ಕಾಮಗಾರಿ
ನಾಗರಾಜ್‌ ಬಿ.ಎನ್‌.
Published 10 ಮಾರ್ಚ್ 2024, 5:26 IST
Last Updated 10 ಮಾರ್ಚ್ 2024, 5:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ನೂತನ ಸಭಾಭವನ ಕಟ್ಟಡ ನಿರ್ಮಾಣಕ್ಕೆ ಶೀಘ್ರ ಭೂಮಿಪೂಜೆ ನೆರವೇರಲಿದೆ. ಮೊದಲ ಹಂತದಲ್ಲಿ ₹5 ಕೋಟಿ ವೆಚ್ಚದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಜಿಲ್ಲಾಧಿಕಾರಿಯಿಂದ ಇತ್ತೀಚೆಗೆ ಟೆಂಡರ್‌ ಅನುಮೋದನೆ ದೊರೆತಿದೆ.

ಈಗಿದ್ದ ಹಳೆಯ ಕಟ್ಟಡ ಶಿಥಿಲವಾಗಿದ್ದಲ್ಲದೆ, ಅಲ್ಲಲ್ಲಿ ಒಂದೊಂದು ಕಚೇರಿ ಇರುವುದರಿಂದ ಸಮರ್ಪಕ ಆಡಳಿತ ನಿರ್ವಹಣೆಗೂ ಸಮಸ್ಯೆಯಾಗುತ್ತಿತ್ತು. ಮೇಯರ್‌ ಕಚೇರಿ ಮತ್ತು ಆಯುಕ್ತರ ಕಚೇರಿ ಸಹ ಒಂದೊಂದು ಕಟ್ಟಡದಲ್ಲಿದೆ. ಸಭಾಭವನ ತೀರಾ ಚಿಕ್ಕದಾಗಿರುವುದರಿಂದ 82 ಸದಸ್ಯರು ಸಾಮಾನ್ಯ ಸಭೆಯಲ್ಲಿ ಇಕ್ಕಟ್ಟಿನಿಂದ ಆಸೀನರಾಗುತ್ತಿದ್ದರು. ಇದೆಲ್ಲದಕ್ಕೂ ಪರಿಹಾರವೆಂದು, ಪಾಲಿಕೆ ₹45 ಕೋಟಿ ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದೆ.

16 ಸಾವಿರ ಚದರ ಅಡಿ ವಿಸ್ತೀರ್ಣದ ಬೃಹತ್‌ ಕಟ್ಟಡ ಇದಾಗಿದ್ದು, ನೆಲಮಾಳಿಗೆ ಜೊತೆಗೆ ನೆಲಮಹಡಿ ಸೇರಿ ಮೂರು ಅಂತಸ್ತು(ಜಿ+3) ಹೊಂದಿರಲಿದೆ. ನೆಲಮಾಳಿಗೆಯಲ್ಲಿ ಒಂದೇ ವೇಳೆ 80–100 ಕಾರು ಹಾಗೂ 200 ದ್ವಿಚಕ್ರ ವಾಹನಗಳನ್ನು ನಿಲ್ಲಿಸಬಹುದು.

ನೆಲಮಹಡಿಯಲ್ಲಿ ಮೇಯರ್‌, ಉಪ ಮೇಯರ್‌, ಸಭಾ ನಾಯಕ, ಪರಿಷತ್‌ ಕಾರ್ಯದರ್ಶಿ ಕಚೇರಿ, ನಾಲ್ಕು ಸ್ಥಾಯಿಸಮಿತಿ ಅಧ್ಯಕ್ಷರ ಕೊಠಡಿ, ಸಭಾ ಕೊಠಡಿಗಳು, 100 ಮಂದಿ ಸಭೆ ನಡೆಸಬಹುದಾದ ಸಭಾಭವನ, ಸಾರ್ವಜನಿಕರ ಲಾಬಿ, ಕಡತ ಸಂಗ್ರಹ ಕೊಠಡಿ ಇರಲಿದೆ. ಜೊತೆಗೆ, ಮಹಿಳಾ ಸದಸ್ಯರ ವಿಶ್ರಾಂತಿಗೆ ಪ್ರತ್ಯೇಕ ಎರಡು ಕೊಠಡಿ ನಿರ್ಮಾಣವಾಗಲಿದೆ. ಮೊದಲ ಮಹಡಿಯಲ್ಲಿ ಆಯುಕ್ತ, ಜಂಟಿ ಆಯುಕ್ತರ ಕಚೇರಿ, ವಿಡಿಯೋ ಕಾನ್ಫರೆನ್ಸ್‌ ಹಾಲ್‌, ಕಂದಾಯ, ಮಾರುಕಟ್ಟೆ, ತಾಂತ್ರಿಕ, ಎಂಜಿನಿಯರಿಂಗ್, ನಗರ ವಿಭಾಗ ಸೇರಿದಂತೆ ಆಡಳಿತಕ್ಕೆ ಸಂಬಂಧಿಸಿದ ಕಚೇರಿಗಳು ಇರಲಿವೆ.

ಎರಡನೇ ಮತ್ತು ಮೂರನೇ ಮಹಡಿ ಸೇರಿ 20 ಅಡಿ ಎತ್ತರವಿರಲಿದ್ದು, ಮಹಡಿಯ ಅರ್ಧಭಾಗದಲ್ಲಿ ಸಭಾಭವನ ನಿರ್ಮಾಣವಾಗಲಿದೆ. ಮೂರನೇ ಮಹಡಿಯ ಗ್ಯಾಲರಿಯಲ್ಲಿ ಸಾರ್ವಜನಿಕರು, ಮಾಧ್ಯಮದವರು ಸೇರಿ 300 ಮಂದಿಗೆ ಆಸನದ ವ್ಯವಸ್ಥೆ ಇರಲಿದೆ. ಎರಡೂ ಮಹಡಿಯ ಇನ್ನರ್ಧ ಭಾಗ ಊಟ–ಉಪಹಾರ ವಿಭಾಗ ಹಾಗೂ ವಿರೋಧ ಪಕ್ಷದ ನಾಯಕರ ಕಚೇರಿಗೆ ಮೀಸಲಿಡಲಾಗಿದೆ.

‘ಪಾಲಿಕೆ ಆವರಣದಲ್ಲಿ ಬೃಹತ್‌ ಕಟ್ಟಡ ನಿರ್ಮಾಣವಾಗಲಿದ್ದು, ಉದ್ದೇಶಿತ ಸ್ಥಳದಲ್ಲಿದ್ದ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಅಗತ್ಯವಿದ್ದರೆ ಈಗಿರುವ ಜಂಟಿ ಆಯುಕ್ತರ ಕಚೇರಿಯ ಕಟ್ಟಡಗಳನ್ನು ಸಹ ತೆರವು ಮಾಡುತ್ತೇವೆ’ ಎಂದು ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ವಿಜಯಕುಮಾರ ಹೇಳಿದರು.

‘ಒಟ್ಟು ₹45 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಮೊದಲ ಹಂತದ ಕಾಮಗಾರಿಗೆ ಪಾಲಿಕೆಯ ಅನುದಾನ ಬಳಸಿಕೊಳ್ಳಲಾಗುತ್ತಿದೆ. ಎರಡನೇ ಹಂತದಲ್ಲಿ ₹40 ಕೋಟಿ ವೆಚ್ಚದ ಕಾಮಗಾರಿಗೆ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ಕ್ರಿಯಾಯೋಜನೆ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು. ಸರ್ಕಾರದಿಂದ ಅನುದಾನ ದೊರೆತರೆ, ಎರಡು ವರ್ಷದಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಬರದಿದ್ದರೆ, ಪಾಲಿಕೆಯಲ್ಲಿನ ಹಣಕಾಸಿನ ಲಭ್ಯತೆ ನೋಡಿಕೊಂಡು ಹಂತಹಂತವಾಗಿ ಕಾಮಗಾರಿ ನಡೆಸಲಾಗುವುದು’ ಎಂದು ತಿಳಿಸಿದರು.

ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಕಟ್ಟಡದ ಹಿಂಭಾಗ ಶಿಥಿಲವಾಗಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಕಟ್ಟಡದ ಹಿಂಭಾಗ ಶಿಥಿಲವಾಗಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ
ಈಶ್ವರ ಉಳ್ಳಾಗಡ್ಡಿ ಆಯುಕ್ತ
ಈಶ್ವರ ಉಳ್ಳಾಗಡ್ಡಿ ಆಯುಕ್ತ

ಪಾಲಿಕೆಯ ನೂತನ ಕಟ್ಟಡಕ್ಕೆ ಜಿಲ್ಲಾಧಿಕಾರಿಯಿಂದ ಟೆಂಡರ್‌ ಅನುಮೋದನೆ ದೊರೆತಿದ್ದು ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲಾಗುವುದು. ಚುನಾವಣೆ ನೀತಿ ಸಂಹಿತೆ ಮೊದಲು ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು- ಈಶ್ವರ ಉಳ್ಳಾಗಡ್ಡಿ ಆಯುಕ್ತ ಹುಬ್ಬಳ್ಳಿ–ಧಾರವಾಡ

ಶಿಥಿಲವಾದ ಕಟ್ಟಡ ಆತಂಕದಲ್ಲಿ ಸಿಬ್ಬಂದಿ ‘ಈಗಿರುವ ಪಾಲಿಕೆ ಕಟ್ಟಡದ ಹಿಂಭಾಗ ಶಿಥಿಲವಾಗಿದ್ದು ಯಾವಾಗ ಕುಸಿದು ಬೀಳತ್ತದೆಯೋ ಎನ್ನುವ ಭಯ ಆರಂಭವಾಗಿದೆ’ ಎಂದು ಪಾಲಿಕೆ ಸಿಬ್ಬಂದಿಯೊಬ್ಬರು ಆತಂಕ ವ್ಯಕ್ತಪಡಿಸಿದರು. ‘ಕಟ್ಟಡದ ಗೋಡೆಯ ಪ್ಲಾಸ್ಟರ್‌ ಕಿತ್ತುಹೋಗಿದ್ದು ಇಟ್ಟಿಗೆ ಸರಳುಗಳು ಹೊರಗೆ ಬಂದಿವೆ. ಕೆಲವೆಡೆ ಗೋಡೆಗಳು ಬಿರುಕು ಬಿಟ್ಟಿದ್ದು ಕುಸಿದು ಬೀಳುವ ಹಂತದಲ್ಲಿದೆ. ಗಿಡ–ಬಳ್ಳಿಗಳು ಬೆಳೆದುಕೊಂಡಿವೆ. ಮೇಯರ್‌ ಸಭಾ ನಾಯಕರ ಕೊಠಡಿ ಪರಿಷತ್‌ ಕಾರ್ಯದರ್ಶಿ ಕಚೇರಿ ವಿರೋಧ ಪಕ್ಷದ ನಾಯಕರ ಕಚೇರಿ ಘನತ್ಯಾಜ್ಯ ನಿರ್ವಹಣಾ ವಿಭಾಗ ನಲ್ಮ್‌ ಕಚೇರಿ ಊಟದ ಹಾಲ್‌ ಸಹ ಅಲ್ಲಿದೆ. ಅನಾಹುತ ಸಂಭವಿಸುವ ಮೊದಲು ಕಚೇರಿಗಳನ್ನು ಸ್ಥಳಾಂತರ ಮಾಡಬೇಕು’ ಎಂದರು. ‘ತಾಂತ್ರಿಕ ಸಿಬ್ಬಂದಿ ಜೊತೆ ಕಟ್ಟಡ ಪರಿಶೀಲಿಸುತ್ತೇನೆ. ಅಲ್ಲಿರುವ ಕಚೇರಿಯನ್ನು ಬೇರಡೆ ಸ್ಥಳಾಂತರಿಸಲು ಚಿಂತಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದರು.

ಇಂದು ಶಂಕುಸ್ಥಾಪನೆ ಹುಬ್ಬಳ್ಳಿ: ಹುಬ್ಬಳ್ಳಿ– ಧಾರವಾಡ ಮಹಾನಗರ ಪಾಲಿಕೆ ಸಾಮಾನ್ಯ ನಿಧಿ ಅನುದಾನದಡಿಯಲ್ಲಿ ಹೊಸದಾಗಿ ನಿರ್ಮಿಸಲಾಗುತ್ತಿರುವ ಸಭಾಭವನ/ ಕೌನ್ಸಿಲ್‌ ಕಟ್ಟಡದ ಶಂಕು ಸ್ಥಾಪನೆ ಮಾರ್ಚ್‌ 10ರಂದು ಮಧ್ಯಾಹ್ನ 1.30ಕ್ಕೆ ಪಾಲಿಕೆಯ ಕೇಂದ್ರ ಕಚೇರಿ ಆವರಣದಲ್ಲಿ ನಡೆಯಲಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಾಗವಹಿಸಲಿದ್ದರೆ. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಶಂಕುಸ್ಥಾಪನೆ ನೆರವೇರಿಸುವರು. ಮೇಯರ್‌ ವೀಣಾ ಬರದ್ವಾಡ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರು ಗಣ್ಯರು ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT